ತೈಪೆ[ಜ.23]: ಬಿಕಿನಿ ಉಡುಗೆಯಲ್ಲಿ ಪರ್ವತ ಶ್ರೇಣಿಯ ನೆತ್ತಿಯ ಮೇಲೆ ನಿಂತು ಸೆಲ್ಫೀ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹುಡುಗ-ಹುಡುಗಿಯರ ಗಮನ ಸೆಳೆಯುತ್ತಿದ್ದ ತೈವಾನ್‌ನ ಗಿಗಿ ವು ಶವವಾಗಿ ಪತ್ತೆಯಾಗಿದ್ದಾಳೆ.

ಪರ್ವತಾರೋಹಣ ಸಾಹಸ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಗಿಗಿ ವು ಅವರ ಮೃತದೇಹವು ತೈವಾನ್‌ನ ಯುಶಾನ್‌ ನ್ಯಾಷನಲ್‌ ಪಾರ್ಕ್ ವ್ಯಾಪ್ತಿಯಲ್ಲಿನ ಕಂದಕವೊಂದರಲ್ಲಿ ಎತ್ತರ ಪ್ರದೇಶದಿಂದ ಕೆಳಕ್ಕೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತೀವ್ರ ರಕ್ತಸ್ರಾವದಿಂದ ಸಾವಿಗೀಡಾಗಿರಬಹುದೆಂದು ಶಂಕಿಸಲಾಗಿದೆ. ಗಿಗಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಲು ಬೇಡಿಕೆ ಪಡೆದುಕೊಂಡಿದ್ದಳು.

ಬಿಕಿನಿಯಲ್ಲೇ ಪರ್ವತ ಪ್ರದೇಶಗಳಿಗೆ ತೆರಳಿ ಅತಿ ಎತ್ತರದ ಪ್ರದೇಶದಲ್ಲಿ ನಿಂತು ಗ್ಲಾಮರ್‌ ಭಂಗಿಯಲ್ಲಿ ಕಾಣಿಸಿಕೊಳ್ಳುವುದು, ಸೆಲ್ಫಿ ತೆಗೆದುಕೊಂಡು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟರ್‌ಗಳಲ್ಲಿ ಪೋಸ್ಟ್‌ ಮಾಡುವುದು, ಅಲ್ಲಿಂದಲೇ ಕೆಲ ಸಮಯ ಲೈವ್‌ನಲ್ಲಿ ಕಾಣಿಸಿಕೊಳ್ಳುವುದು ಈಕೆಯ ಖಯಾಲಿಯಾಗಿತ್ತು. ಕಳೆದ ವರ್ಷ ಟಿವಿ ಚಾನಲ್‌ಗೆ ನೀಡಿದ್ದ ಮಾಹಿತಿಯಂತೆ, ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ 100ಕ್ಕೂ ಹೆಚ್ಚು ಪರ್ವತಗಳನ್ನೇರಿದ್ದಾಳೆ.