ಇವರ ಹೆಸರು ಡಾ. ಮೊಹಮ್ಮದ್ ಹನೀಫ್ ಖಾನ್ ಶಾಸ್ತ್ರಿ. ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಭಾಜನಾರಾದ ಮಹಾನ್ ಸಂಸ್ಕೃತದ ಪಂಡಿತ ಇವರು. ಅರೆ! ಖಾನ್ ಮತ್ತು ಶಾಸ್ತ್ರಿ ಒಂದೇ ಹೆಸರಲ್ಲಿ ಹೇಗೆ ಅಂತಾ ಆಶ್ಚರ್ಯವಾಗುತ್ತಿದೆಯಾ?. 

ಇವರ ಮೂಲ ಹೆಸರು ಮೊಹಮ್ಮದ್ ಹನೀಫ್ ಖಾನ್. ಹುಟ್ಟಿದ್ದು ಉತ್ತರಪ್ರದೇಶದ ಸೋನ್-ಭದ್ರಾ ಜಿಲ್ಲೆಯಲ್ಲಿ. ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ಹನೀಫ್ ಖಾನ್, ಕಷ್ಟಪಟ್ಟು ಪ್ರಾಥಮಿಕ ಶಿಕ್ಷಣ ಪೂರೈಸಿದವರು. ಹೆಸ್ಕೂಲ್ ಗೆ ಬಂದ ಮೇಲೆ ವಿದ್ಯೆ ತಲೆ ಹತ್ತದ ಕಾರಣ ಶಾಲೆ ಬಿಟ್ಟು ಎಲ್ಲಾದರೂ ಸಣ್ಣಪುಟ್ಟ ಕೆಲಸಕ್ಕೆ ಸೇರಲು ಹನೀಫ್ ಮುಂದಾಗಿದ್ದರು.

ಆದರೆ ಹನೀಫ್ ಅವರ ಶಿಕ್ಷಕ ಪಂಡಿತ್ ಲಖನ್ ಲಾಲ್ ಶಾಸ್ತ್ರಿ ಇವರಿಗೆ ಭಗವದ್ಗೀತೆಯ ಅಧ್ಯಾಯಗಳನ್ನು ಓದಲು ಪ್ರೆರೇಪಿಸಿದರು. ಅಂದರಂತೆ ಭಗವದ್ಗೀತೆ ಓದಲು ಪ್ರಾರಂಭಿಸಿದ ಮೊಹಮ್ಮದ್ ಹನೀಫ್, ಇದಕ್ಕಾಗಿ ಸಂಸ್ಕೃತ ಭಾಷೆಯನ್ನೂ ಕಲಿತರು. 

ಆದರೆ ಹನೀಫ್ ತಮ್ಮವರಿಂದಲೇ ತಿರಸ್ಕಾರಕ್ಕೊಳಪಟ್ಟರು. ಭಗವದ್ಗೀತೆ ಓದಲು ಪ್ರಾರಂಭಿಸಿದ್ದ ಹನೀಫ್ ಅವರಿಗೆ ಅವರ ಸಮುದಾಯವರೇ ಮೂದಲಿಸಲು ಪ್ರಾರಂಭಿಸಿದರು. ಆದರೆ ಹನೀಫ್ ಅವರ ನಿರ್ಧಾರ ದೃಡವಾಗಿತ್ತು. ಯಾರ ಮಾತಿಗೂ ಕಿವಿಗೊಡದೆ ಸಂಸ್ಕೃತ ಅಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಂಡರು.

ಮುಂದೆ ಹನೀಫ್ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದರು. ಬಳಿಕ ವಾರಣಾಸಿಯಲ್ಲಿ ಸಂಪೂರ್ಣಾನಂದ ಎಂಬುವವರ ಮಾರ್ಗದರ್ಶನದಲ್ಲಿ ಹಿಂದೂ ಪುರಾಣಗಳ ಅಧ್ಯಯನವನ್ನೂ ಮಾಡಿದರು. ತೌಲನಿಕ ಧಾರ್ಮಿಕಾಧ್ಯಯನದಲ್ಲಿ "ಆಚಾರ್ಯ" ಮತ್ತು "ಶಾಸ್ತಿ" ಉಪಾದಿಗಳನ್ನೂ ಪಡೆದು, ಮೊಹಮ್ಮದ್ ಹನೀಫ್ ಖಾನ್ ರಿಂದ ಮೊಹಮ್ಮದ್ ಹನೀಫ್ ಖಾನ್ ಶಾಸ್ತ್ರಿಯಾಗಿ ಬದಲಾದರು.

ಮುಂದೆ ಮೊಹಮ್ಮ್ ಹನೀಫ್ ತಮ್ಮ "Comparative analysis of Gayatri Mantra and Surah Fatiah, with reference to meaning and importance". ಸಂಶೋಧನಾ ಪ್ರಬಂಧ ಮಂಡಿಸಿದರು. ಇದಕ್ಕಾಗಿ ಹನೀಫ್ ಅವರಿಗೆ ಡಾಕ್ಟರೇಟ್ ಪದವಿಯೂ ದಕ್ಕಿತು.

ಆದರೆ ಮತ್ತೆ ಇವರ ದಾರಿಗೆ ಅಡ್ಡಬಂದ ಕೆಲವರು ಪವಿತ್ರ ಖುರಾನ್ ಜೊತೆ ಕಾಫಿರರ ಬರಹಗಳನ್ನು ಹೋಲಿಕೆ ಮಾಡಿದ್ದಕ್ಕೆ ಹನೀಫ್ ಜಹನ್ನುಮ್ ಗೆ ಹೋಗುತ್ತಾರೆ ಎಂದು ಹುಯಿಲೆಬ್ಬಿಸಿದರು. ಈ ವೇಳೆ ಹನೀಫ್ ಅವರಿಗೆ ಪ್ರಾಣ ಬೆದರಿಕೆ ಕರೆ ಕೂಡ ಬಂದವು.

ಆದರೆ ಇಂತಹ ಗೊಡ್ಡು ಬೆದರಿಕೆಗಳಿಗೆ ಬಗ್ಗದ ಹನೀಫ್, 'ಮೋಹನಗೀತಾ', 'ವೇದ ಮತ್ತು ಖುರಾನ್ ಗಳಲ್ಲಿ ಗಾಯಂತ್ರಿಮಂತ್ರ ಹಾಗೂ ಸುರಾಹ್-ಫತೀಹ', 'ವೇದಗಳಲ್ಲಿ ಮಾನವ ಹಕ್ಕು ಮತ್ತು ಅಧಿಕಾರ', 'ಗಾಯತ್ರೀ ಮಂತ್ರದ ಬೌದ್ಧಿಕ ಉಪಯೋಗಗಳು', 'ಶ್ರೀಮದ್ಭಗವದ್ಗೀತಾ ಮತ್ತು ಖುರಾನ್' ಮುಂತಾದ ಎಂಟಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರು.

ವೇದ, ಸಂಸ್ಕೃತ ಮತ್ತು ಇಸ್ಲಾಂ ವಿದ್ವಾಂಸ ಹನೀಫ್ ಖಾನ್ ಶಾಸ್ತ್ರಿಯವರು ಪ್ರಸ್ತುತ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2009ರ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪಡೆದ ಖಾನ್ ಶಾಸ್ತ್ರಿಯವರಿಗೆ ಇದೀಗ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿದೆ.

ವೈಯುಕ್ತಿಕವಾಗಿ ತಮ್ಮ ಮುಸ್ಲಿಂ ಅಸ್ಮಿತೆಯನ್ನು ಉಳಿಸಿಕೊಂಡಿರುವ ಹನೀಫ್ ಖಾನ್, ಸಂಸ್ಕೃತ ಭಾಷೆಯ ಕಲಿಕೆ ಹಾಗೂ ಉಳಿಕೆ ಮತ್ತು ಹಿಂದೂ ಧರ್ಮಗ್ರಂಥಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.