ನವದೆಹಲಿ ( ಜ.11): ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕುಡಿದು ವಾಹನ ಚಾಲನೆ ಮಾಡುತ್ತಾ ಫೇಸ್‌ಬುಕ್‌ ಲೈವ್‌ ಬಂದಿದ್ದರು ಎಂಬ ಸಂದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಕೇಜ್ರಿವಾಲ್‌ ತೊದಲುತ್ತಾ ನಿಧಾನವಾಗಿ ಮಾತನಾಡುವ ವಿಡಿಯೋದೊಂದಿಗೆ ‘ಅಮಲಿನಲ್ಲಿದ್ದಾರೆ ನಕಲಿ ರಾಷ್ಟ್ರೀಯವಾದಿ. ಭವಿಷ್ಯದಲ್ಲಿ ಮತ ಹಾಕುವ ಮುನ್ನ ಎಚ್ಚರದಲ್ಲಿರಿ’ ಎಂದು ಒಕ್ಕಣೆ ಬರೆದು ಶೇರ್‌ ಮಾಡಲಾಗುತ್ತಿದೆ.

ವಿಡಿಯೋದಲ್ಲಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ‘ಮುಂದಿನ ಲೋಕಸಭಾ ಚುನಾವಣೆ ನರೇಂದ್ರ ಮೋದಿಯವರ ಕೊನೆ ಚುನಾವಣೆ ’ ಎಂದು ಕೇಜ್ರೀವಾಲ್‌ ಹೇಳುತ್ತಿರುವಂತಿದೆ. ಸದ್ಯ ಈ ಪೋಸ್ಟ್‌ 1100 ಬಾರಿ ಶೇರ್‌ ಆಗಿದೆ. ಆದರೆ ನಿಜಕ್ಕೂ ಕೇಜ್ರಿವಾಲ್‌ ಮದ್ಯಪಾನ ಮಾಡಿ ಫೇಸ್‌ಬುಕ್‌ ಲೈವ್‌ ಬಂದಿದ್ದರೇ ಎಂದು ಪರಿಶೀಲಿಸಿದಾಗ, 2017ರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರೀವಾಲ್‌ ಫೇಸ್‌ಬುಕ್‌ ಲೈವ್‌ ಬಂದಿದ್ದ ವಿಡಿಯೋವನ್ನು ಅಮಲಿನಲ್ಲಿ ಮಾತನಾಡುವಂತೆ ಎಡಿಟ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

 

2017 ಫೆಬ್ರವರಿಯಲ್ಲಿ ಕೇಜ್ರಿವಾಲ್‌ ಪಂಜಾಬ್‌ ವಿಧಾನಸಭಾ ಚುನಾವಣೆ ಕುರಿತಂತೆ ಫೇಸ್‌ಬುಕ್‌ ಲೈವ್‌ ಬಂದಿದ್ದರು. ಮೂಲ ವಿಡಿಯೋಗೆ ನೀಡಿದ ಶೀರ್ಷಿಕೆ ಹೀಗಿದೆ; ‘ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಮತ್ತು ಪರ್‌ಕಾಶ್‌ ಸಿಂಗ್‌ ಬಾದಲ್‌ ಇದು ನಮ್ಮ ಕೊನೆ ಚುನಾವಣೆ ಎಂದು ಹೇಳುತ್ತಿದ್ದಾರೆ.

ಹೀಗೆ ಕೊನೆ ಚುನಾವಣೆ ಎಂದು ಹೇಳುವ ಅಭ್ಯರ್ಥಿಗಳಿಗೆ ಎಂದಿಗೂ ಮತ ಹಾಕಬೇಡಿ’ ಎಂದಿದೆ. ಆ ವಿಡಿಯೋ ಕೇಜ್ರಿವಾಲ್‌ ಫೇಸ್‌ಬುಕ್‌ಗಳಲ್ಲಿ ಈಗಲೂ ಕಾಣಸಿಗುತ್ತದೆ. ಸದ್ಯ ಅದೇ ವಿಡಿಯೋವನ್ನು ಬಳಸಿಕೊಂಡು ಮದ್ಯಪಾನ ಸೇವಿನ ಅಮಲಿನಲ್ಲಿರುವಂತೆ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡಲಾಗುತ್ತಿದೆ. 

-ವೈರಲ್ ಚೆಕ್