ನವದೆಹಲಿ(ಜ.22): ಇವಿಎಂ ಮಶಿನ್ ಕುರಿತ ಗೊಂದಲ ಮುಂದುವರೆದಿರುವಂತೆಯೇ ಸೈಬರ್ ಎಕ್ಸಪರ್ಟ್ ಎಂದು ಹೇಳಿಕೊಂಡಿರುವ ಅಮೆರಿಕ ಮೂಲದ ಸೈಯ್ಯದ್ ಶುಜಾ ಅವರ ಹೇಳಿಕೆಯೊಂದು ದೇಶದ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಇವಿಎಂ ಮಶಿನ್ ಹ್ಯಾಕ್ ಮಾಡಲಾಗಿತ್ತು. ಅಲ್ಲದೇ ಈ ವಿಷಯ ಗೊತ್ತಿದ್ದ ಬಿಜೆಪಿ ಮುಖಂಡ ಗೋಪಿನಾಥ್ ಮುಂಡೆ ಅವರನ್ನು ಕೊಲೆ ಮಾಡಲಾಗಿತ್ತು ಎಂದು ಸೈಯ್ಯದ್ ಶುಜಾ ಬೆಚ್ಚಿ ಬೀಳಿಸುವ ಹೇಳಿಕೆ ನೀಡಿದ್ದಾರೆ.

ಲಂಡನ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಶುಜಾ, ಇವಿಎಂ ಮಶಿನ್ ಹೇಗೆ ಹ್ಯಾಕ್ ಮಾಡಬಹುದು ಎಂದು ಪ್ರಾತ್ಯಕ್ಷಿಕೆ ತೋರಿಸುವುದಾಗಿ ತಿಳಿಸಿದ್ದರು. ಆದರೆ ಇದರ ಬದಲು ಅವರು ಗೋಪಿನಾಥ್ ಮುಂಡೆ ಅವರನ್ನು ಇದೇ ಕಾರಣಕ್ಕಾಗಿ ಕೊಲೆ ಮಾಡಲಾಗಿತ್ತು ಎಂದು ಬಾಂಬ್ ಸಿಡಿಸಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಇವಿಎಂ ಮಶಿನ್ ಹ್ಯಾಕ್ ಮಾಡಲಾಗಿತ್ತು. ಈ ವಿಷಯ ಅರಿತಿದ್ದ ಗೋಪಿನಾಥ್ ಮುಂಡೆ, ಬಿಜೆಪಿಯ ಈ ಹುನ್ನಾರವನ್ನು ಬಯಲು ಮಾಡಲು ಮುಂದಾಗಿದ್ದರು. ಇದೇ ಕಾರಣಕ್ಕೆ ಮುಂಡೆ ಅವರನ್ನು ಕೊಲೆ ಮಾಡಲಾಯಿತು ಎಂದು ಶುಜಾ ಹೇಳಿದ್ದಾರೆ. ಗೋಪಿನಾಥ್ ಮುಂಡೆ ಜೂನ್ 3, 2014ರಂದು ರಂದು ನವದೆಹಲಿಯಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು.

ಬಕವಾಸ್ ಎಂದ ಬಿಜೆಪಿ:

ಇನ್ನು ಶುಜಾ ಹೇಳಿಕೆಯನ್ನು ಬಕವಾಸ್ ಎಂದು ಕರೆದಿರುವ ಬಿಜೆಪಿ, ಇದು ದೇಶದ ಮತದಾರರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದೆ. ಈ ಕುರಿತು ಮರನಾಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಶುಜಾ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಉಪಸ್ಥಿತಿಯನ್ನು ಪ್ರಶ್ನಿಸಿದ್ದಾರೆ.

ಶುಜಾ ಪತ್ರಿಕಾಗೋಷ್ಠಿಯಲ್ಲಿ ಕಪಿಲ್ ಸಿಬಲ್ ಉಪಸ್ಥಿತಿ ನೋಡಿದರೆ, ಸಂಪೂರ್ಣ ನಾಟಕವನ್ನು ಕಾಂಗ್ರೆಸ್ ಬರೆದಂತಿದೆ ಎಂದು ರವಿಶಂಕರ್ ಪ್ರಸಾದ್ ಹರಿಹಾಯ್ದಿದ್ದಾರೆ.

ಇನ್ನು ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಚುನಾವಣಾ ಆಯೋಗ ಇವಿಎಂ ಹ್ಯಾಕ್ ಆಗಿದೆ ಎಂಬುದು ಶುದ್ಧ ಸುಳ್ಳಾಗಿದ್ದು, ಇಂತಹ ಹೇಳಿಕೆ ನೀಡಿದ ಸೈಯ್ಯದ್ ಶುಜಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ದೆಹಲಿ ಪೊಲೀಸರಿಗೆ ಮನವಿ ಮಾಡಿದೆ.