ಕಾಂಗ್ರೆಸ್ ಟಿಕೆಟ್ ಇಂದು ಘೋಷಣೆ: ಯಾರಿಗೆ ಯಾವ ಕ್ಷೇತ್ರ ಪಕ್ಕಾ?

Congress ticket to be announced today
Highlights

ಕಾಂಗ್ರೆಸ್‌ ಟಿಕೆಟ್‌ ಇಂದು ಘೋಷಣೆ?

130ರಿಂದ 150 ಅಭ್ಯರ್ಥಿಗಳ ಪಟ್ಟಿಪ್ರಕಟ ಸಾಧ್ಯತೆ

- ಇಂದು ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ

- 224 ಕ್ಷೇತ್ರಗಳ ಬಗ್ಗೆಯೂ ಚರ್ಚೆ

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕೇಂದ್ರೀಯ ಚುನಾವಣಾ ಸಮಿತಿಯ ಸಭೆ ಶುಕ್ರವಾರ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ಎಐಸಿಸಿ ಅಧ್ಯಕ್ಷ ರಾಹುಲ… ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯದ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಗೆ ಮೊಹರು ಬೀಳಲಿದ್ದು, ಶುಕ್ರವಾರ ಸಂಜೆ ಅಥವಾ ಶನಿವಾರ ಬಹಿರಂಗಗೊಳ್ಳುವ ಸಂಭವವಿದೆ.

ಚುನಾವಣಾ ಸಮಿತಿ ಸಭೆಯಲ್ಲಿ ಸೋನಿಯಾ ಗಾಂಧಿ, ಮನಮೋಹನ ಸಿಂಗ್‌, ಅಹ್ಮದ್‌ ಪಟೇಲ…, ಆಸ್ಕರ್‌ ಫರ್ನಾಂಡಿಸ್‌, ವೀರಪ್ಪ ಮೊಯ್ಲಿ, ಎ.ಕೆ.ಆ್ಯಂಟನಿ, ಅಂಬಿಕಾ ಸೋನಿ, ಮೊಹ್ಸಿನಾ ಕಿದ್ವಾಯಿ, ಅಶೋಕ್‌ ಗೆಹ್ಲೋಟ್‌, ಗಿರಿಜಾ ವ್ಯಾಸ್‌, ಜನಾರ್ದನ ದ್ವಿವೇದಿ, ಮುಕುಲ… ವಾಸ್ನಿಕ್‌ ಅವರು ಪಾಲ್ಗೊಳ್ಳಲಿದ್ದಾರೆ.

ಶುಕ್ರವಾರ ದಿನವಿಡೀ ಸಭೆ ನಡೆಯಲಿದ್ದು, ಬಹುತೇಕ 224 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಬಹುತೇಕ 130ರಿಂದ 150 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಶುಕ್ರವಾರ ತಡ ರಾತ್ರಿ ಅಥವಾ ಶನಿವಾರ ಪ್ರಕಟಗೊಳ್ಳುವ ಸಾಧ್ಯತೆಯಿದೆ.

ರಾಜ್ಯ ಕಾಂಗ್ರೆಸ್‌ನ ಹಿರಿಯ ರಾಜಕಾರಣಿಗಳ ಕುಟುಂಬ ಸದಸ್ಯರಿಗೆ ಟಿಕೆಟ್‌ ನೀಡುವುದು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಯಕೆಯ ಬಗ್ಗೆಯೂ ಚುನಾವಣಾ ಸಮಿತಿಯೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಗುರುವಾರ ಸಂಜೆ ಕಾಂಗ್ರೆಸ್‌ನ ವಾರ್‌ ರೂಮ… 15, ಜಿಆರ್‌ಜಿ ರಸ್ತೆಯಲ್ಲಿ ರಾಜ್ಯ ಕಾಂಗ್ರೆಸ್‌ನ ಸಭೆ ನಡೆದಿದೆ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ, ವೀರಪ್ಪ ಮೊಯ್ಲಿ, ರೆಹಮಾನ್‌ ಖಾನ್‌ ಮುಂತಾದವರು ತಮ್ಮ ತಮ್ಮ ಪಟ್ಟಿಗಳನ್ನು ಪರಿಶೀಲನಾ ಸಮಿತಿ ಮುಖ್ಯಸ್ಥರಾದ ಮಧುಸೂದನ್‌ ಮಿಸ್ತ್ರಿ ಅವರಿಗೆ ನೀಡಿದ್ದಾರೆ.

ಬೀದರ್‌ ದಕ್ಷಿಣದಿಂದ ಕೆಲ ದಿನಗಳ ಹಿಂದೆ ಪಕ್ಷ ಸೇರಿರುವ ಹಾಲಿ ಶಾಸಕ ಅಶೋಕ್‌ ಖೇಣಿ ಅವರಿಗೆ ಟಿಕೆಟ್‌ ನೀಡಬಾರದು, ಬದಲಾಗಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ಅಳಿಯ ಚಂದ್ರಸಿಂಗ್‌ ಅವರಿಗೆ ಟಿಕೆಟ್‌ ನೀಡಬೇಕು ಎಂದು ಖರ್ಗೆ ಪಟ್ಟು ಹಿಡಿದಿದ್ದಾರೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರು ಅಶೋಕ್‌ ಖೇಣಿ ಅವರಿಗೇ ಟಿಕೆಟ್‌ ನೀಡಬೇಕು ಎಂದು ಲಾಬಿ ನಡೆಸಿದ್ದಾರೆ.

ಮಧುಸೂದನ್‌ ಮಿಸ್ತ್ರಿ ಅವರ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಮಿತಿಯ ಸಭೆಯು ಗುರುವಾರ ತಡರಾತ್ರಿವರೆಗೂ ನಡೆದಿದ್ದು, ಎಐಸಿಸಿ ಸದಸ್ಯರಾದ ತಾಮ್ರಧ್ವಜ ಸಾಹು, ಗೌರವ್‌ ಗೋಗಾಯ…, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ…, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಭಾಗಿಯಾಗಿದ್ದರು.

loader