ನವದೆಹಲಿ :  ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಇಂಧನ ಬೆಲೆ ನಿಯಂತ್ರಿಸದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ದೇಶಾದ್ಯಂತ ಬಂದ್‌ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ. ಈ ಬಂದ್‌ ಬೆಂಬಲಿಸುವಂತೆ ಪ್ರತಿಪಕ್ಷಗಳು ಮತ್ತು ಎನ್‌ಜಿಒಗಳನ್ನೂ ಅದು ಒತ್ತಾಯಿಸಿದೆ.

‘11 ಲಕ್ಷ ಕೋಟಿ ರು. ಮೌಲ್ಯದ ಇಂಧನ ಲೂಟಿಯ ಬಗ್ಗೆ ಬೆಳಕು ಚೆಲ್ಲಲು ಮತ್ತು ತಕ್ಷಣವೇ ಕೇಂದ್ರ ಅಬಕಾರಿ ಸುಂಕ, ಹಾಗೂ ರಾಜ್ಯಗಳಲ್ಲಿ ಹೆಚ್ಚುವರಿ ವ್ಯಾಟ್‌ ಇಳಿಸುವಂತೆ ಒತ್ತಾಯಿಸಿ ಸೆ.10ರ ಸೋಮವಾರ ಭಾರತ ಬಂದ್‌ಗೆ ಕರೆ ನೀಡಲು ಕಾಂಗ್ರೆಸ್‌ ನಿರ್ಧರಿಸಿದೆ’ ಎಂದು ಪಕ್ಷದ ವಕ್ತಾರ ರಣದೀಪ್‌ ಸುರ್ಜೇವಾಲ ಗುರುವಾರ ಹೇಳಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವಂತೆ ಕಾಂಗ್ರೆಸ್‌ ಒತ್ತಾಯಲಿಸಲಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ತೀವ್ರ ಏರಿಕೆ ಕಂಡಿರುವುದರಿಂದ, ಕೇಂದ್ರದ ವಿರುದ್ಧ ಜನರಲ್ಲಿ ಮೂಡಿರುವ ಆಕ್ರೋಶ ಭಾವನೆಯ ಲಾಭ ಪಡೆಯಲು ಕಾಂಗ್ರೆಸ್‌ ಯತ್ನಿಸುವಂತಿದೆ.