Asianet Suvarna News Asianet Suvarna News

ಮಳೆ ನೆರೆ ಹಾನಿಗೆ 3 ಸಾವಿರ ಕೋಟಿ

ಪ್ರವಾಹದಿಂದ ತತ್ತರಿಸಿದ ಕರ್ನಾಟಕದಲ್ಲಿ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ದುರಸ್ತಿಗೆ ಸುಮಾರು 3 ಸಾವಿರ ಕೋಟಿ ರು. ಅಗತ್ಯ ಇದ್ದು, ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಪರಿಹಾರದ ಮೊತ್ತವನ್ನು ಕೋರಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

CM Kumaraswamy Seeks 3000 Crore Assistance From centre
Author
Bengaluru, First Published Aug 28, 2018, 7:37 AM IST | Last Updated Sep 9, 2018, 9:49 PM IST

ಬೆಂಗಳೂರು :  ಪ್ರವಾಹ ತಲೆದೋರಿರುವ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಮೂರು ತಿಂಗಳಿನಿಂದ ಮಳೆಯಿಂದಾಗಿ ಉಂಟಾಗಿರುವ ನಷ್ಟಕ್ಕೆ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ. ಅಂದಾಜು 3 ಸಾವಿರ ಕೋಟಿ ರುಪಾಯಿ ನಷ್ಟದ ಅಂದಾಜು ಮಾಡಲಾಗಿದ್ದು, ಎರಡು ದಿನದಲ್ಲಿ ವಿವರವಾದ ಪ್ರಸ್ತಾವನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಂಬಂಧಪಟ್ಟಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸೋಮವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಳೆಯಿಂದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಮೈಸೂರು ಮತ್ತು ಇತರೆ ಜಿಲ್ಲೆಯಲ್ಲಾಗಿರುವ ಹಾನಿಯ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.

ಮುಖ್ಯಮಂತ್ರಿಗಳು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಧ್ಯಂತರ ಪರಿಹಾರ ಮೊತ್ತವಾಗಿ 2 ಸಾವಿರ ಕೋಟಿ ರು. ನೀಡುವಂತೆ ಇತ್ತೀಚೆಗಷ್ಟೇ ಪತ್ರ ಬರೆದಿದ್ದರು. ಇದೀಗ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ದುರಸ್ತಿಗೆ ಸುಮಾರು 3 ಸಾವಿರ ಕೋಟಿ ರು. ಅಗತ್ಯ ಇದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಹೀಗಾಗಿ ಕೇಂದ್ರದಿಂದ ಸಮಗ್ರ ಪರಿಹಾರ ಕೋರುವ ಸಂಬಂಧ ಎರಡು ದಿನದಲ್ಲಿ ವಿವರವಾದ ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚಿಸಿದರು.

ಪ್ರಸ್ತಾವನೆಯಲ್ಲಿ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ಹಾನಿಯ ಬಗ್ಗೆ ವಿಸ್ತೃತವಾದ ಮಾಹಿತಿ ಇರಬೇಕು ಮತ್ತು ಖಾಸಗಿ ಕಟ್ಟಡಗಳಿಗೆ ಮತ್ತು ಮನೆಗಳಿಗೆ ಆಗಿರುವ ಹಾನಿಯ ಅಂದಾಜು ವಿವರವನ್ನು ಉಲ್ಲೇಖ ಮಾಡಬೇಕು ಎಂದು ನಿರ್ದೇಶನ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಫಿ, ಅಡಿಕೆ, ಮೆಣಸು, ಭತ್ತ ಮುಂತಾದ ಬೆಳೆಗಳ ಹಾನಿಯ ಬಗ್ಗೆ ಪ್ರತ್ಯೇಕ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಹೇಳಿದರು.

ಮೂಲಸೌಕರ್ಯ ಮರುಸ್ಥಾಪಿಸಿ:  ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಕುರಿತು ಜನಾಭಿಪ್ರಾಯ ಸಂಗ್ರಹಿಸಬೇಕು. ಅವರ ಅಭಿಪ್ರಾಯಕ್ಕೆ ಅನುಗುಣವಾಗಿ ಮನೆ ನಿರ್ಮಾಣದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಪ್ರಾಕೃತಿಕ ವಿಕೋಪದಲ್ಲಿ ಮಡಿದವರ ಮತ್ತು ಗಾಯಗೊಂಡವರ ಕುಟುಂಬಗಳಿಗೆ ನೀಡಲಾಗಿರುವ ಪರಿಹಾರದ ವಿವರವನ್ನು ಲಗತ್ತಿಸಬೇಕು. ಹಾನಿಗೊಳಗಾದ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸಲು ನೀಲನಕ್ಷೆ ಸಿದ್ಧಪಡಿಸಬೇಕು. ಶುದ್ಧೀಕರಿಸಿದ ಕುಡಿಯುವ ನೀರನ್ನು ಮಾತ್ರ ಪೂರೈಕೆ ಮಾಡಬೇಕು. ಆದಷ್ಟೂಕುದಿಸಿದ ನೀರನ್ನೇ ಕುಡಿಯುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪಡಿತರ ವಿತರಣಾ ಕೇಂದ್ರಗಳ ಮೂಲಕ ಆಹಾರವನ್ನು ವಿತರಣೆ ಮಾಡಬೇಕು. ವಿದ್ಯುತ್‌ ಮತ್ತು ದೂರವಾಣಿ ಸಂಪರ್ಕವನ್ನು ಸುಸ್ಥಿತಿಗೆ ತರಲಾಗಿದ್ದರೂ ಕುಗ್ರಾಮಗಳಲ್ಲಿ ಈ ಸಂಪರ್ಕಗಳು ಇನ್ನೂ ಲಭ್ಯವಾಗಿಲ್ಲ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಪರ್ಕ ಕಳೆದುಕೊಂಡಿರುವ ಗ್ರಾಮೀಣ ರಸ್ತೆಗಳನ್ನು ಆದ್ಯತೆಯ ಮೇಲೆ ದುರಸ್ತಿಗೊಳಿಸಬೇಕು ಎಂದು ಸೂಚಿಸಿದರು.

ಹಾನಿ ಪ್ರಮಾಣ:  ಪ್ರವಾಹದಿಂದ ಸುಮಾರು 800 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಇತರೆ ಜಿಲ್ಲೆಗಳಲ್ಲಿಯೂ ಸಹ ಹಲವಾರು ಮನೆಗಳು ಹಾನಿಯಾಗಿವೆ ಎಂಬ ವಿಷಯವನ್ನು ಸಭೆಯ ಗಮನಕ್ಕೆ ತರಲಾಯಿತು. ಪ್ರಾಥಮಿಕ ಅಧ್ಯಯನ ಪ್ರಕಾರ ಒಟ್ಟಾರೆ 2225 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳು ಹಾನಿಗೊಳಗಾಗಿವೆ. 240 ಸೇತುವೆಗಳು ಕುಸಿದಿವೆ, 65 ಸರ್ಕಾರಿ ಕಟ್ಟಡಗಳು ಹಾನಿಯಾಗಿರುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಭೈರೇಗೌಡ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ವಸತಿ ಸಚಿವ ಯು.ಟಿ.ಖಾದರ್‌, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಸೇರಿದಂತೆ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios