ಬೆಂಗಳೂರು : ಗಂಗಾನದಿಯು ಭಾರತೀಯರಿಗೆ ಪವಿತ್ರ ನದಿ. ಆದರೆ ಆ ನದಿಯ ನೀರು ಬಳಸಲು ಬಾರದ ರೀತಿಯಲಿ ಮಲಿನವಾಗಿದೆ. ಗಂಗಾನದಿಯನ್ನು ಸ್ವಚ್ಛಗೊಳಿಸುವ ಅಭಿಯಾನ ಮೂರ್ನಾಲ್ಕು ದಶಕಗಳಿಂದಲೇ ನಡೆದು ಬಂದಿದೆ. ಆದರೆ ಅದರಲ್ಲಿ ಕಂಡ ಪ್ರಗತಿ ಮಾತ್ರ ತುಂಬ ಕಡಿಮೆ. ಕಳೆದ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಗಂಗಾಶುದ್ಧೀಕರಣ ಯೋಜನೆಯನ್ನು ಪ್ರಸ್ತಾಪಿಸಿತ್ತು.

ಅದಕ್ಕನುಗುಣವಾಗಿ ಈಗಿನ ಕೇಂದ್ರ ಸರ್ಕಾರ 2015 ರಲ್ಲಿ 20 ಸಾವಿರ ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿತ್ತು. ಆದರೆ ಇದರಲ್ಲಿ ಕಳೆದ ಮಾರ್ಚ್ ವರೆಗೆ ಶೇ.20 ರಷ್ಟು ಹಣವನ್ನು ಮಾತ್ರ ವೆಚ್ಚಮಾಡಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಗುರುವಾರ ಪತ್ರಿಕಾಗೋಷ್ಠಿಯನ್ನು ನಡೆಸಿ ಈ ಹಣಕಾಸು ವರ್ಷದಲ್ಲಿ ಎಂಟರಿಂದ ಹತ್ತುಸಾವಿರ ಕೋಟಿ ರುಪಾಯಿಗಳನ್ನು ಗಂಗಾಶುದ್ಧೀಕರಣಕ್ಕೆ ವೆಚ್ಚಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. 

ಅಲ್ಲದೆ 2019ರ ಮಾರ್ಚ್ ವೇಳೆಗೆ ಗಂಗಾ ನೀರನ್ನು ಶೇ.70ರಿಂದ 80ರಷ್ಟು ಶುದ್ಧಗೊಳಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ. ಗಂಗಾ ನದಿಯು ಉತ್ತರಪ್ರದೇಶ, ಬಿಹಾರ, ಜಾರ್ಖಂಡ, ಪಶ್ಚಿಮಬಂಗಾಳ, ಉತ್ತರಾಖಂಡ ರಾಜ್ಯಗಳಲ್ಲಿ ಹರಿಯುತ್ತಿದೆ. ಇದರ ವಿಸ್ತೀರ್ಣ ೪ ಲಕ್ಷ ಚದರ ಮೈಲುಗಳು. ಇದರ ದಂಡೆಯ ಮೇಲೆ ಒಂದು ಲಕ್ಷ ಜನಸಂಖ್ಯೆಗಿಂತ ಹೆಚ್ಚಿರುವ 29 ನಗರಗಳು, 50 ಸಾವಿರದಿಂದ 1 ಲಕ್ಷ ಜನಸಂಖ್ಯೆ ಇರುವ 23 ನಗರಗಳು ಹಾಗೂ ಇತರ 48 ಪಟ್ಟಣಗಳು ಬರುತ್ತವೆ. 

ಇಲ್ಲಿಯ ಮನೆಗಳಿಂದ ಬರುವ ತ್ಯಾಜ್ಯ ವಸ್ತುಗಳು, ಕಾರ್ಖಾನೆಗಳಿಂದ ಬರುವ ಅಸಂಸ್ಕರಿತ ನೀರು, ಧಾರ್ಮಿಕ ವಿಧಿ ಆಚರಣೆಯಿಂದ ಬರುವ ತ್ಯಾಜ್ಯ ಗಳೆಲ್ಲ ನದಿಗೆ ಸೇರು ತ್ತವೆ. ಪ್ರತಿದಿನ 1.7 ಶತಕೋಟಿ ಲೀಟರ್ ತ್ಯಾಜ್ಯ, 89 ದಶಲಕ್ಷ ಲೀಟರ್ ಚರಂಡಿ ನೀರೂ
ಗಂಗೆಯನ್ನು ಸೇರುತ್ತದೆ.

ಗಂಗೆಯನ್ನು ಶುದ್ಧೀಕರಿಸುವುದೆಂದರೆ ಭಗೀರಥ ಸಾಹಸವೇ ಸರಿ. ಗಂಗೆಯನ್ನು ವಾರಾಣಸಿಯಲ್ಲಿ ಶುದ್ಧೀಕರಿಸಲು 1986 ರಲ್ಲಿ ರಾಜೀವ ಗಾಂಧಿಯವರು 462 ಕೋಟಿ ರುಪಾಯಿಯ ಗಂಗಾಕ್ರಿಯಾ ಯೋಜನೆಯನ್ನು ಪ್ರಕಟಿಸಿದ್ದರು. ಇದು ಅಷ್ಟೊಂದು ಯಶಸ್ವಿಯಾಗದ
ಹಿನ್ನೆಲೆಯಲ್ಲಿ ಗಂಗಾಕ್ರಿಯಾ ಯೋಜನೆ ಭಾಗ ಎರಡನ್ನು 2000 ನೆ ಇಸ್ವಿಯಲ್ಲಿ ಪ್ರಕಟಿಸಲಾಯಿತು. 2014 ರ ವರೆಗೆ ಒಟ್ಟೂ 939  ಕೋಟಿ ರುಪಾಯಿಯನ್ನು ವೆಚ್ಚಮಾಡಲಾಯಿತು. 

ಈ ಯೋಜನೆಯಲ್ಲಿ ವಿವಿಧ 524 ಯೋಜನೆಗಳನ್ನು ರೂಪಿಸಲಾಗಿತ್ತು. ಗಂಗೆಯಲ್ಲಿಯ ಮಾಲಿನ್ಯವನ್ನು ದೂರ ಮಾಡುವುದಕ್ಕಾಗಿಯೋ ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ರಾಷ್ಟ್ರೀಯ ಗಂಗಾ ನದಿ ಕಣಿವೆ ಪ್ರಾಧಿಕಾರವನ್ನು ರಚಿಸಿದ್ದರು. ಇದಕ್ಕೆ 3,031 ಕೋಟಿ ರುಪಾಯಿ ಮಂಜೂರು ಮಾಡಿದ್ದರು. ಇದರ 56 ಯೋಜನೆಗಳು 44 ಪಟ್ಟಣಗಳಲ್ಲಿ ನಡೆದವು. ಗಂಗೆಯನ್ನು ಉಳಿಸಿ ಎಂಬ ಸಾಧುಸಂತರು, ಸಮಾಜ ವಿಜ್ಞಾನಿಗಳು, ಅವರ ಬೆಂಬಲಿಗರ ಗಾಂಧಿವಾದಿ ಅಹಿಂಸಾತ್ಮಕ ಚಳವಳಿ, ರಾಷ್ಟ್ರೀಯ ಮಹಿಳೆಯ ಸಂಘಟನೆಗಳೆಲ್ಲವೂ ಗಂಗೆಯ ಶುದ್ಧೀಕರಣಕ್ಕೆ ಕೆಲಸ ಮಾಡುತ್ತಿವೆ. 

ಗಂಗಾ ಶುದ್ಧೀಕರಣ ನಿಧಿಗೆ ದಾನಿಗಳಿಂದಲೂ ಹಣ ಹರಿದು ಬರುತ್ತಿದೆ. ಗಂಗಾ ನೀರು ಬಳಕೆಗೆ ಯೋಗ್ಯವೆಂದು ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಮಾಡಿರುವ ಪ್ರಮಾಣಕ್ಕಿಂತ 3000 ಪಟ್ಟು ಕಲುಷಿತವಾಗಿದೆ. ಹರಿದ್ವಾರದಲ್ಲಿಯ ಗಂಗೆಯ ನೀರಿನಲ್ಲಿ ಕಾಲಿಫಾರ್ಮ್ ಬ್ಯಾಕ್ಟೀರಿಯಾ 5,500 ಇದು ನಿಗದಿತ ಪ್ರಮಾಣಕ್ಕಿಂತ 100 ಪಟ್ಟು ಅಧಿಕ. ಗಡ್ಕರಿಯವರ ಹೇಳಿಕೆಯಂತೆ ಸದ್ಯ 20 ಸಾವಿರ ಕೋಟಿಗೂ ಅಧಿಕ ಮೊತ್ತದ 195 ಯೋಜನೆಗಳು ಗಂಗೆಯ ಶುದ್ಧೀಕರಣಕ್ಕಾಗಿ ನಡೆಯುತ್ತಿವೆ. 

ಗಂಗಾ ತೀರದ ಮಾಲಿನ್ಯಕಾರಕ 1,109 ಉದ್ಯಮಗಳಲ್ಲಿ 358 ಉದ್ಯಮಗಳನ್ನು ಶಾಶ್ವತವಾಗಿ ಮುಚ್ಚಿಸಲಾಗಿದೆ. ಈ ಸಂಬಂಧದಲ್ಲಿ ಸುಪ್ರೀಂ ಕೋರ್ಟ್ ಕೂಡ ಆದೇಶ ನೀಡಿತ್ತು. ಗಂಗೆಯು ಹೇಗೆ ಆಸ್ತಿಕರಿಗೆ ಪುಣ್ಯ ನದಿಯೋ ಹಾಗೆಯೇ ಜನಸಾಮಾನ್ಯರಿಗೆ, ಪ್ರಾಣಿ ಪಕ್ಷಿಗಳಿಗೆ ಜೀವನದಿ. ಅದನ್ನು ರಕ್ಷಿಸಿಕೊಳ್ಳಬೇಕಾಗಿರುವುದು ರಾಷ್ಟ್ರೀಯ ಕರ್ತವ್ಯ. ಈ ಸಂಬಂಧದ ಯೋಜನೆ ಜಾರಿಯಲ್ಲಿ ಮೀನ ಮೇಷ ಎಣಿಸದೆ ತಕ್ಷಣ ಕಾರ್ಯರೂಪಕ್ಕೆ ತರಬೇಕು.

[ಕನ್ನಡ ಪ್ರಭ ಸಂಪಾದಕೀಯ]