Asianet Suvarna News Asianet Suvarna News

ರಾಹುಲ್ ಸಾಲ ಮನ್ನಾ ಅಸ್ತ್ರದಿಂದ ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಗುನ್ನಾ

ಛತ್ತೀಸ್‌ಗಢದಲ್ಲಿ ಬಿಜೆಪಿ ಧೂಳೀಪಟ | ರಾಹುಲ್ ಸಾಲ ಮನ್ನಾ ಅಸ್ತ್ರದಿಂದ ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಗುನ್ನಾ | ಸಮೀಕ್ಷೆಗಳ ಅಂದಾಜು ಮೀರಿ ಕಾಂಗ್ರೆಸಿಗೆ 3ನೇ 2 ಬಹುಮತ ಲಭ್ಯ

Chhattisgarh Assembly elections 2018: Congress to form govt, Raman Singh resigns
Author
Bengaluru, First Published Dec 12, 2018, 9:39 AM IST

ರಾಯಪುರ (ಡಿ. 12): ನಕ್ಸಲ್‌ಪೀಡಿತ ಛತ್ತೀಸ್‌ಗಢದಲ್ಲಿ ಡಾ| ರಮಣ್ ಸಿಂಗ್ ನೇತೃತ್ವದಲ್ಲಿ 15 ವರ್ಷಗಳಿಂದ ಆಳ್ವಿಕೆ ನಡೆಸುತ್ತಿದ್ದ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಧೂಳೀಪಟವಾಗಿದೆ. ಯಾರೂ ಊಹಿಸದ ರೀತಿಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಕಾಂಗ್ರೆಸ್ ಐತಿಹಾಸಿಕ ದಿಗ್ವಿಜಯ ಸಾಧಿಸಿದೆ.

ಇದರೊಂದಿಗೆ ಬಿಜೆಪಿ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದ ನಾಯಕ ಎಂಬ ದಾಖಲೆಯೊಂದಿಗೆ ರಮಣ್ ಸಿಂಗ್ ಅವರು ಅಧಿಕಾರದಿಂದ ನಿರ್ಗಮಿಸುವಂತಾಗಿದೆ.

2013 ರ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ಸಿನ ಮುಂಚೂಣಿ ನಾಯಕರು ನಕ್ಸಲ್ ದಾಳಿಗೆ ಬಲಿಯಾಗಿದ್ದರು. ಆ ಸಾವಿನ ಅನುಕಂಪ ತನಗೆ ಸಿಗಬಹುದು ಎಂದು ಭಾವಿಸಿದ್ದ ಕಾಂಗ್ರೆಸ್ಸಿಗೆ ಕೂದಲೆಳೆ ಅಂತರದ ಬಹುಮತದೊಂದಿಗೆ ರಮಣ್ ಸಿಂಗ್ ನಿರಾಶೆ ಮೂಡಿಸಿದ್ದರು. ಆದರೆ ಈ ಬಾರಿ ನರೇಂದ್ರ ಮೋದಿ ಪ್ರಭಾವ, ಅಮಿತ್ ಶಾ ತಂತ್ರಗಾರಿಕೆ ಹಾಗೂ ತಮಗೇ ಇದ್ದ ಅಪಾರ ಜನಪ್ರಿಯತೆಯನ್ನು ಬಳಸಿಕೊಂಡಿಯೂ ಅಧಿಕಾರ ಹಿಡಿಯುವಲ್ಲಿ ರಮಣ್ ಸಿಂಗ್ ವಿಫಲರಾಗಿದ್ದಾರೆ. ಹೀಗಾಗಿ ಹಿಂದಿ ಸೀಮೆಯಲ್ಲೇ ಬರುವ ಮತ್ತೊಂದು ರಾಜ್ಯ ಬಿಜೆಪಿ ತೆಕ್ಕೆಯಿಂದ ಕಾಂಗ್ರೆಸ್ಸಿಗೆ ಜಾರಿದಂತಾಗಿದೆ.

2000 ನೇ ಇಸ್ವಿಯಲ್ಲಿ ಸ್ಥಾಪನೆಯಾದ ಛತ್ತೀಸ್‌ಗಢಕ್ಕೆ ಈಗ 18 ರ ಹರೆಯ. ಈ ಪೈಕಿ 15 ವರ್ಷಗಳನ್ನು ರಮಣ್ ಸಿಂಗ್ ಅವರೊಬ್ಬರೇ ಆಳಿದ್ದಾರೆ. ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಅವರು, ಉಚಿತ ಅಕ್ಕಿ, ಮೊಬೈಲ್ ಯೋಜನೆಗಳಿಂದಾಗಿ ‘ಚಾವಲ್ ಬಾಬಾ’, ‘ಮೊಬೈಲ್ ಬಾಬಾ’ ಎಂದೇ ಪ್ರಸಿದ್ಧರಾಗಿದ್ದರು. ಛತ್ತೀಸ್‌ಗಢದಲ್ಲಿ ಮೋದಿ ಅವರಿಗಿಂತ ರಮಣ್ ಜನಪ್ರಿಯರಾಗಿದ್ದ ಹಿನ್ನೆಲೆಯಲ್ಲಿ ಕಟೌಟ್, ಹೋರ್ಡಿಂಗ್‌ಗಳಲ್ಲಿ ರಮಣ್ ಭಾವಚಿತ್ರಗಳೇ ಮೋದಿ ಅವರ ಫೋಟೋಗಿಂತ ದೊಡ್ಡದಾಗಿ ರಾರಾಜಿಸುತ್ತಿದ್ದವು. ಆದರೆ ಅವರ ವಿರುದ್ಧ ಕೇಳಿಬಂದ ಪಡಿತರ ಹಗರಣ, ಅವರ ಪುತ್ರನ ವಿರುದ್ಧದ ವಿದೇಶಿ ಬ್ಯಾಂಕ್ ಖಾತೆ, ಹೆಲಿಕಾಪ್ಟರ್ ಲಂಚ ಪ್ರಕರಣಗಳು ರಮಣ್ ಸಿಂಗ್ ಇಮೇಜ್‌ಗೆ ಘಾಸಿ ಉಂಟು ಮಾಡಿದ್ದವು.

ಎಲ್ಲಕ್ಕಿಂತ ಮುಖ್ಯವಾಗಿ 15 ವರ್ಷಗಳಿಂದ ಒಬ್ಬರೇ ಮುಖ್ಯಮಂತ್ರಿಯಾಗಿರುವುದು ಜನರಲ್ಲಿ ಬದಲಾವಣೆಯ ಭಾವನೆ ಬಲಗೊಳ್ಳಲು ಕಾರಣವಾಗಿತ್ತು. ಮತ್ತೊಂದೆಡೆ, ರೈತರ ಅನುಕೂಲಕ್ಕಾಗಿ ರಾಹುಲ್ ಗಾಂಧಿ ಅವರು ಮಾಡಿದ ಸಾಲ ಮನ್ನಾ ಘೋಷಣೆ ರಮಣ್ ಸಿಂಗ್ ಸರ್ಕಾರದ ಮೇಲೆ ಬ್ರಹ್ಮಾಸ್ತ್ರ ಪ್ರಯೋಗದಂತಾಯಿತು ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

ಕಾಂಗ್ರೆಸ್ಸಿನ ಗೆಲುವಿಗೆ ಮಾಯಾವತಿ- ಅಜಿತ್ ಜೋಗಿ ನೇತೃತ್ವದ ಮಿತ್ರಕೂಟ ಅಡ್ಡಿಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಬಿಜೆಪಿಗೆ ಪರ‌್ಯಾಯವಾಗಿ ಜನರು ಕಾಂಗ್ರೆಸ್ ಅನ್ನು ಆರಿಸಿಕೊಂಡಿದ್ದಾರೆ. ಕಾಂಗ್ರೆಸ್ಸಿನ ಸಂಘಟಿತ ಹೋರಾಟವೂ ಗೆಲುವಿಗೆ ಕಾರಣವಾಗಿದೆ. 

ಕಾಂಗ್ರೆಸ್ ಗೆಲುವಿಗೆ ಕಾರಣಗಳು

1. ನಿರಂತರ 15 ವರ್ಷಗಳಿಂದ ರಮಣ್ ಸಿಂಗ್ ಅಧಿಕಾರ ನಡೆಸಿದ್ದರಿಂದ ಜನರಲ್ಲಿ ಬದಲಾವಣೆಯ ಭಾವನೆ ಬೇರೂರಿತ್ತು. ಅದನ್ನು ಕಾಂಗ್ರೆಸ್ ಬಳಸಿಕೊಂಡಿತು.
2.  ರೈತರ ಸಮಸ್ಯೆಯನ್ನು ಗ್ರಹಿಸಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದು ಫಲ ನೀಡಿತು.
3.  ಪ್ರಾಮಾಣಿಕ ವ್ಯಕ್ತಿ ಎಂದೇ ಖ್ಯಾತರಾಗಿದ್ದ ರಮಣ್ ಸಿಂಗ್ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪಗಳು ಬಿಜೆಪಿಗೆ ದುಬಾರಿಯಾಯಿತು.
4. ದಲಿತರು, ಬುಡಕಟ್ಟು ಜನರ ಪ್ರಾಬಲ್ಯವಿರುವ ರಾಜ್ಯದಲ್ಲಿ ಆ ವರ್ಗದ ಮತಗಳನ್ನು ಕಾಂಗ್ರೆಸ್ ಸೆಳೆಯುವಲ್ಲಿ ಸಫಲವಾಯಿತು.
5.  ಕಾಂಗ್ರೆಸ್ ಒಗ್ಗೂಡಿ ಚುನಾವಣೆ ಎದುರಿಸಿದ್ದು ಲಾಭ ತಂದುಕೊಟ್ಟಿತು.

ಬಿಜೆಪಿ ಸೋತಿದ್ದೇಕೆ?

1. ರಮಣ್ ಸಿಂಗ್ ವಿರುದ್ಧ ಕಾಂಗ್ರೆಸ್ ಮಾಡಿದ್ದ 36,000 ಕೋಟಿ ರು. ಪಡಿತರ ಹಗರಣ ತನಿಖಾ ಹಂತಕ್ಕೆ ತಲುಪಿ, ಕಳಂಕ ಮೆತ್ತಿದ್ದು.
2. ಅಭಿವೃದ್ಧಿ ಯೋಜನೆಗಳನ್ನು ತಂದರೂ ನಕ್ಸಲರನ್ನು ಮಟ್ಟ ಹಾಕುವಲ್ಲಿ ರಮಣ್ ವಿಫಲರಾಗಿದ್ದರು.
3. ಮೂರು ಅವಧಿಯಿಂದ ಅದದೇ ಶಾಸಕರು ಹಾಜರಾಗುತ್ತಿದ್ದರು, ಅವರ ಕಾರ್ಯನಿರ್ವಹಣೆ ಬಗ್ಗೆ ಜನರಲ್ಲಿ ಅತೃಪ್ತಿ ಇತ್ತು.
4. ರಮಣ್ ಸಿಂಗ್ ಪುತ್ರನ ಹೆಸರು ಪನಾಮಾ ಪೇಪರ್ಸ್‌ನಲ್ಲಿ ಕೇಳಿಬಂದಿತ್ತು. ವಿದೇಶದಲ್ಲಿ ವ್ಯವಹಾರ ನಡೆಸಿದ ಆರೋಪ ಬಂದಿತ್ತು.
5. ಕಾಂಗ್ರೆಸ್ಸಿನ ಸಾಲ ಮನ್ನಾ ಯೋಜನೆಯನ್ನು ರಮಣ್ ಲಘುವಾಗಿ ಪರಿಗಣಿಸಿದರು. ಅದೊಂದು ಮನರಂಜನೆ ಎಂದು ಗ್ರಹಿಸಿದ್ದರು.

Follow Us:
Download App:
  • android
  • ios