ಕಿರಿಯರ ಮೇಲಿನ ಅತ್ಯಾಚಾರಕ್ಕೆ ಗಲ್ಲು

Centre to amend law for death penalty in child rape cases below 12 year of age
Highlights

ಉತ್ತರ ಪ್ರದೇಶದ ಉನ್ನಾವ್ ಮತ್ತು ಕಾಶ್ಮೀರದ ಕಠುವಾದಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಘಟನೆಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿರುವ ನಡುವೆಯೇ, 12 ವರ್ಷಕ್ಕಿಂತ ಕಿರಿಯ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ದೋಷಿಗಳಿಗೆ ಮರಣ ದಂಡನೆ ವಿಧಿಸುವ ಕಾನೂನು ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.

ನವದೆಹಲಿ: ಉತ್ತರ ಪ್ರದೇಶದ ಉನ್ನಾವ್ ಮತ್ತು ಕಾಶ್ಮೀರದ ಕಠುವಾದಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಘಟನೆಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿರುವ ನಡುವೆಯೇ, 12 ವರ್ಷಕ್ಕಿಂತ ಕಿರಿಯ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ದೋಷಿಗಳಿಗೆ ಮರಣ ದಂಡನೆ ವಿಧಿಸುವ ಕಾನೂನು ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಜೊತೆಗೆ ತ್ವರಿತವಾಗಿ ಕಾನೂನು ಜಾರಿಗೊಳಿಸುವ ನಿಟ್ಟಿನಲ್ಲಿ ಅದು ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ ಇದೆ.ಶನಿವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಪೋಕ್ಸೋ ಕಾಯ್ದೆಯ ಪ್ರಕಾರ, ಅತ್ಯಾಚಾರ ಪ್ರಕರಣದ ದೋಷಿಗಳಿಗೆ ಕನಿಷ್ಠ 7 ವರ್ಷ ಜೈಲು ಅಥವಾ ಗರಿಷ್ಠ ಜೀವಾವಧಿ ಜೈಲು ವಿಧಿಸಬಹುದಾಗಿದೆ. 2012ರ ಡಿಸೆಂಬರ್‌ನಲ್ಲಿ ನಿರ್ಭಯಾ ಪ್ರಕರಣದ ಬಳಿಕ, ಕಾನೂನಿಗೆ ತಿದ್ದುಪಡಿ ತಂದು, ಅತ್ಯಾಚಾರಕ್ಕೊಳಗಾಗಿ ಮಹಿಳೆ ಸಾವಿಗೀಡಾದರೆ ಮರಣ ದಂಡನೆ ವಿಧಿಸುವ ಅವಕಾಶ ತಿದ್ದುಪಡಿ ಮಾಡಲಾಗಿದೆ.

ಆದರೆ ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೀಗ 12 ವರ್ಷಕ್ಕಿಂತ ಕಿರಿಯ ವಯಸ್ಸಿನ ಬಾಲಕಿಯರ ಅತ್ಯಾಚಾರ ಪ್ರಕರಣದ ದೋಷಿಗಳಿಗೆ ಮರಣ ದಂಡನೆ ವಿಧಿಸುವ ಕಾನೂನು ತಿದ್ದುಪಡಿ ಬಗ್ಗೆ ಸರ್ಕಾರ ಸಕ್ರಿಯವಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಶುಕ್ರವಾರ ಕೇಂದ್ರ ತಿಳಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸುವುದೇ ಸೂಕ್ತ. ಕಾನೂನು ತಿದ್ದುಪಡಿ ಮಾಡಬೇಕಾದಲ್ಲಿ, ಮುಂದಿನ ಮುಂಗಾರು ಅಧಿವೇಶನದ ವರೆಗೆ ಕಾಯಬೇಕಾಗುತ್ತದೆ ಎಂದು ಕಾನೂನು ಸಚಿವಾಲಯ ಮೂಲಗಳು ತಿಳಿಸಿವೆ.

loader