ನವದೆಹಲಿ, [ಫೆ.18]: ಬಿಜೆಪಿ ಉಚ್ಚಾಟಿತ ಲೋಕಸಭಾ ಸದಸ್ಯ ಕೀರ್ತಿ ಅಜಾದ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಇಂದು [ಸೋಮವಾರ] ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಮಾಜಿ ಕ್ರಿಕೆಟ್ ಆಟಗಾರ ಹಾಗೂ ರಾಜಕಾರಣಿಯಾಗಿರುವ ಕೀರ್ತಿ ಅಜಾದ್ ಅವರು  ಬಿಹಾರದ ದರ್ಬಾಂಗಾ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. 2014ರಲ್ಲಿ  ಬಿಜೆಪಿಯಿಂದ ಗೆದ್ದಿದ್ದರು.

ಫೆಬ್ರವರಿ 15 ರಂದೇ ಅಜಾದ್ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಭ್ರಷ್ಟಾಚಾರ, ಅಕ್ರಮ ಕುರಿತಂತೆ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪ ಮಾಡಿದ್ದರಿಂದ ಕೀರ್ತಿ ಅಜಾದ್ ಅವರನ್ನು ಡಿಸೆಂಬರ್ 3, 2015ರಂದು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. 

1983ರಲ್ಲಿ ಟೀಂ ಇಂಡಿಯಾ ವಿಶ್ವ ಕಪ್ ಗೆದ್ದಾಗ ಕೀರ್ತಿ ಅಜಾದ್ ಕೂಡಾ ಭಾರತ ತಂಡದಲ್ಲಿದ್ದರು.