ನವದೆಹಲಿ(ಜ.20): ದೈಹಿಕವಾಗಿ ಹೆಣ್ಣು ಅಬಲೆ, ಆಕೆಯ ಸ್ಥಾನ ಏನಿದ್ದರೂ ಅಡುಗೆ ಮನೆ. ಗಂಡನ ಸೇವೆ, ಮಕ್ಕಳ ಲಾಲನೆ ಪಾಲನೆ ಮಾಡುವುದೇ ಆಕೆಯ ಕಾಯಕ. ಸಮಾಜ, ದೇಶ, ಅಷ್ಟೇ ಏನು ಇಡೀ ಭೂಮಂಡಲದ ರಕ್ಷಣೆ ಗಂಡಸಿನ ಕೆಲಸ.

ಹಿಂಗೆನಾದ್ರೂ ಬರೆದ್ರೆ, ಹಿಂಗೆನಾದ್ರೂ ಮಾತಾಡಿದ್ರೆ ಈ ದೇಶದ ಹಳ್ಳಿಯಿಂದ ದಿಲ್ಲಿಯವರೆಗೂ ಇರುವ ಮಹಿಳಾ ಮಣಿಗಳು ಗಹಗಹಿಸಿ ನಕ್ಕು ಬಿಡುತ್ತಾರೆ. ನಿಮ್ಮ ಸುತ್ತಮುತ್ತ ಏನಾಗುತ್ತಿದೆ ಅಂತಾ ಒಂಚೂರು ಕಣ್ತೆರೆದು ನೋಡ್ರಪ್ಪ ಅಂತಾ ಮುಖಕ್ಕೆ ಹೊಡೆದಂಗೆ ಹೇಳ್ತಾರೆ ಮಹಿಳೆಯರು.

ಅಂತೆಯೇ ನಮ್ಮ ಸುತ್ತಮುತ್ತ ಏನೆಲ್ಲಾ ನಡೆಯುತ್ತಿದೆ ಎಂಬುದಕ್ಕೆ ಭಾರತದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಜ್ವಲಂತ ಉದಾಹರಣೆಯಾಗಿದ್ದಾರೆ. ಭೂಮಿಯ ದಕ್ಷಿಣ ಧ್ರುವ ದಂಡಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ಹೌದು, ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್(ITBP)ಯ ಡಿಐಜಿಯಾಗಿರುವ ಐಪಿಎಸ್ ಅಧಿಕಾರಿ ಅಪರ್ಣಾ ಕುಮಾರ್ ದಕ್ಷಿಣ ಧ್ರುವದ ತುದಿಯನ್ನು ಯಶಶ್ವಿಯಾಗಿ ತಲುಪಿದ್ದಾರೆ.2002ರ ಉತ್ತರಪ್ರದೇಶ ಕೆಡರ್ ಐಪಿಎಸ್ ಅಧಿಕಾರಿಯಾಗಿರುವ ಅಪರ್ಣಾ ಸದ್ಯ IYBPಯ ಡೆಹ್ರಾಡೂನ್‌ನ ಉತ್ತರ ಫ್ರಾಂಟಿಯರ್ ಹೆಡ್‌ಕ್ವಾರ್ಟರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ದಕ್ಷಿಣ ಧ್ರುವದ ತುದಿ ತಲುಪಲು ಅಪರ್ಣಾ ಬರೋಬ್ಬರಿ 111 ಕಿ.ಮೀ. ಹಿಮದಲ್ಲಿ ನಡೆದಿದ್ದಾರೆ. ಅಲ್ಲದೇ ಈ ವೇಳೆ ಅಪರ್ಣಾ ಬರೋಬ್ಬರಿ 35 ಕೆಜಿ ಭಾರದ ಸಾಮಾನು ಸರಂಜಾಮನ್ನು ಹೊತ್ತು ನಡೆದಿದ್ದಾರೆ.

ಕಳೆದ ಜ.13 ರಂದು ಅಪರ್ಣಾ ದಕ್ಷಿಣ ಧ್ರುವ ತಲುಪಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಅಪರ್ಣಾ ಅವರಿಗೆ ಶುಭಾಶಯ ಕೋರಿದ್ದಾರೆ.