ಬೆಂಗಳೂರು(ಅ.7): ನಾಳೆ ಭಾರತೀಯ ವಾಯುಸೇನೆಯ 86ನೇ ವರ್ಷಾಚರಣೆ. ಕಳೆದ 8 ದಶಕಗಳಿಗೂ ಹೆಚ್ಚು ಕಾಲ ದೇಶದ ವಾಯುಗಡಿಗಳನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ವಾಯುಸೇನೆ, ಈ ನಿಟ್ಟಿನಲ್ಲಿ ದೇಶಕ್ಕೆ ಸಲ್ಲಿಸಿದ ಸೇವೆ ಅತ್ಯಂತ ಅಮೂಲ್ಯ.

ಅದರಂತೆ ನಾಳಿನ ವಾಯುಸೇನೆ ವರ್ಷಾಚರಣೆ ವೇಳೆ, 1948ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧದಲ್ಲಿ ಕಾಶ್ಮೀರವನ್ನು ಪಾಕ್ ದಾಳಿಯಿಂದ ರಕ್ಷಿಸಿದ್ದ ಐತಿಹಾಸಿಕ ಡಕೋಟಾ DC3 Dakota #VP905 ಪರುಶರಾಮ ಯುದ್ಧ ವಿಮಾನ ಭಾಗವಹಿಸಲಿದೆ.

ಸಂಸದ ರಾಜೀವ್ ಚಂದ್ರಶೇಖರ್ ತಮ್ಮ ತಂದೆ ನಿವೃತ್ತ ಏರ್ ಕಮಾಂಡರ್ ಎಂ.ಕೆ. ಚಂದ್ರಶೇಖರ್ ಸೇನೆಯಲ್ಲಿ ಸಲ್ಲಿಸಿದ ಅಭೂತಪೂರ್ವ ಸೇವೆಯ ಗೌರವಾರ್ಥ, ಡಕೋಟಾ DC3 Dakota #VP905 ಪರುಶರಾಮ ಯುದ್ಧ ವಿಮಾನವನ್ನು ಸಂಪೂರ್ಣ ನವೀಕರಿಸಿದ್ದಾರೆ. ನಾಳಿನ ವಾಯುಸೇನೆ ವರ್ಷಾಚರಣೆ ಪರೇಡ್ ನಲ್ಲಿ ಈ ಯುದ್ಧ ವಿಮಾನದ ಕೀಯನ್ನು ರಾಜೀವ್ ಚಂದ್ರಶೇಖರ್ ಅವರು ವಾಯುಸೇನೆಯ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಅವರಿಗೆ ಹಸ್ತಾಂತರಿಸಲಿದ್ದಾರೆ.

1948 ರ ಭಾರತ-ಪಾಕ್ ಯುದ್ಧದ ನೆನಪುಗಳನ್ನು ಮೆಲುಕು ಹಾಕಿರುವ ನಿವೃತ್ತ ಏರ್ ಕಮಾಂಡರ್ ಎಂ.ಕೆ. ಚಂದ್ರಶೇಖರ್, ಡಕೋಟಾ DC3 Dakota #VP905 ಪರುಶರಾಮ ಭಾರತೀಯ ಸೇನೆಯ ಸೈನಿಕರನ್ನು ಹೊತ್ತು ಯುದ್ಧ ಭೂಮಿಯಲ್ಲಿ ಇಳಿಸಿದ ಮೊದಲ ವಾಯುಸೇನಾ ವಿಮಾನ ಎಂದು ಹೇಳಿದರು.

ಯುದ್ಧದ ಸಂದರ್ಭದಲ್ಲಿ ಅದಾಗಲೇ ಶ್ರೀನಗರಕ್ಕೆ ಕಾಲಿಟ್ಟಿದ್ದ ಪಾಕಿಸ್ತಾನಿ ಭಯೋತ್ಪಾದಕರಿಂದ ಸ್ಥಳಿಯರನ್ನು ರಕ್ಷಿಸುವಲ್ಲಿ ಡಕೋಟಾ DC3 Dakota #VP905 ಪರುಶರಾಮ ಯುದ್ಧ ವಿಮಾನ ಮಹತ್ವದ ಪಾತ್ರ ನಿರ್ವಹಿಸಿತ್ತು ಎಂದು ಎಂ.ಕೆ. ಚಂದ್ರಶೇಖರ್ ಆ ದಿನಗಳ ಮೆಲುಕು ಹಾಕಿದರು.

ಒಂದು ವೇಳೆ ಡಕೋಟಾ DC3 Dakota #VP905 ಪರುಶರಾಮ ಯುದ್ಧ ವಿಮಾನ ಇರದಿದ್ದರೆ 1948 ರ ಯುದ್ಧದಲ್ಲಿ ಪಾಕಿಸ್ತಾನದಿಂದ ಕಾಶ್ಮೀರವನ್ನು ರಕ್ಷಿಸುವುದು ಕಷ್ಟಕರವಾಗಿತ್ತು ಎಂದು ಎಂ.ಕೆ. ಚಂದ್ರಶೇಖರ್ ಹೇಳಿದರು.

ಇನ್ನು ಡಕೋಟಾ DC3 Dakota #VP905 ಪರುಶರಾಮ ಯುದ್ಧ ವಿಮಾನ ಕುರಿತು ಮಾಹಿತಿ ನೀಡಿದ ಸಂಸದ ರಾಜೀವ್ ಚಂದ್ರಶೇಖರ್, ಸತತ 6 ವರ್ಷಗಳ ಪರಿಶ್ರಮದಿಂದ ಈ ಯುದ್ಧ ವಿಮಾನವನ್ನು ನವೀಕರಿಸಲಾಗಿದ್ದು, ನಾಳಿನ ವಾಯುಸೇನೆ ವರ್ಷಾಚರಣೆ ವೇಳೆ ಗಾಜಿಯಾಬಾದ್‌ನ ಹಿಂದನ್ ವಾಯುನೆಲೆಯಲ್ಲಿ ಹಾರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

"