20 ರಾಜ್ಯಗಳನ್ನು ಕೇಳಿ ದಂಡ ಏರಿಸಿದ್ದೇವೆ: ನಿತಿನ್ ಗಡ್ಕರಿ
ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡ ಏರಿಕೆ ಮಾಡಿದ್ದರ ಬಗ್ಗೆ ನಾನಾ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಕಾಯ್ದೆಗೆ ತಿದ್ದುಪಡಿ ತಂದಿದ್ದೇಕೆ, ಈಗ ರಾಜ್ಯಗಳು ದಂಡ ಇಳಿಕೆ ಮಾಡುತ್ತಿರುವುದಕ್ಕೆ ಕೇಂದ್ರದ ನಿಲುವೇನು ಎಂಬ ಬಗ್ಗೆ ಸಾರಿಗೆ ಸಚಿವರು ಎನ್‌ಡಿಟೀವಿಗೆ ಸಂದರ್ಶನ ನೀಡಿದ್ದಾರೆ. ಆಯ್ದ ಭಾಗ ಇಲ್ಲಿದೆ.
* ಅಪಘಾತ ಕಡಿಮೆ ಮಾಡಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದ್ದೀರಿ. ಅದರಿಂದ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ. ದೇಶಾದ್ಯಂತ ವಿರೋಧ ಕೇಳಿಬರುತ್ತಿದೆ. ಹೇಗೆ ಸಮರ್ಥಿಸಿಕೊಳ್ಳುತ್ತೀರಿ?
ಏಕೆ ಈ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದೇವೆಂದು ಮೊದಲು ಅರ್ಥ ಮಾಡಿಕೊಳ್ಳಬೇಕು. ನಮ್ಮ ದೇಶದಲ್ಲಿ ಪ್ರತಿ ವರ್ಷ ಐದು ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಎರಡು ಲಕ್ಷ ಜನರು ಸಾವನ್ನಪ್ಪುತ್ತಾರೆ. ಮೂರು ಲಕ್ಷ ಜನರ ಕೈಕಾಲು ಮುರಿಯುತ್ತದೆ. ನಮ್ಮ ಜಿಡಿಪಿಗೆ ಈ ಅಪಘಾತಗಳಿಂದಲೇ ಶೇ.2ರಷ್ಟು ನಷ್ಟವಾಗುತ್ತಿದೆ.
ಜಗತ್ತಿನಲ್ಲಿ ಅಪಘಾತಗಳಿಂದ ಜನರು ಸಾಯುವುದು ನಮ್ಮ ದೇಶದಲ್ಲೇ ಅತಿ ಹೆಚ್ಚು. ಹೀಗೆ ಮರಣ ಹೊಂದುವವರಲ್ಲಿ ಯುವಕರ ಸಂಖ್ಯೆಯೇ ಅಧಿಕ. ಇದು ದೇಶಕ್ಕೆ ಹಾಗೂ ಅವರ ಕುಟುಂಬಕ್ಕೆ ನಷ್ಟವಲ್ಲವೇ? ಎರಡನೆಯದಾಗಿ ನಮ್ಮ ದೇಶದಲ್ಲಿ ಶೇ.30ರಷ್ಟು ಡ್ರೈವಿಂಗ್ ಲೈಸನ್ಸ್‌ಗಳು ನಕಲಿ. ಇನ್ನೊಂದಷ್ಟುಜನರು ಲೈಸನ್ಸ್ ಮಾಡಿಸುವುದೇ ಇಲ್ಲ. ಏಕೆಂದರೆ, ಜನರಿಗೆ ಕಾನೂನಿನ ಬಗ್ಗೆ ಗೌರವವೂ ಇಲ್ಲ ಭಯವೂ ಇಲ್ಲ. ಅವರಿಗೆ ವಿಧಿಸುವ 100 ರು. ದಂಡ 30 ವರ್ಷಗಳ ಹಿಂದೆ ನಿಗದಿಪಡಿಸಿದ್ದು. ಅದನ್ನು ಕಟ್ಟಿಹಾಯಾಗಿ ಹೋಗಿಬಿಡುತ್ತಾರೆ. ಈಗ ನಾವು ದಂಡ ಏರಿಕೆ ಮಾಡಿರುವುದು ಸರ್ಕಾರದ ಬೊಕ್ಕಸಕ್ಕೆ ಹಣ ತುಂಬಿಸುವುದಕ್ಕಲ್ಲ. ಜನರ ಪ್ರಾಣ ಉಳಿಯಲಿ ಎಂದು.
ಬೆಂಗಳೂರು: ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ 2 ಪಟ್ಟು ದಂಡ
* ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಂಡದ ಮೊತ್ತ ಏರಿಕೆ ಮಾಡಲು ಏನು ಕಾರಣ?
ಐದು ವರ್ಷದ ಹಿಂದೆ ನಾನು ಸಾರಿಗೆ ಸಚಿವನಾಗಿದ್ದಾಗ ನಮ್ಮ ದೇಶದಲ್ಲಿ ಅಪಘಾತದಲ್ಲಿ ಮರಣಹೊಂದುವವರ ಸಂಖ್ಯೆಯನ್ನು ಮುಂದಿನ ಐದು ವರ್ಷದಲ್ಲಿ ಶೇ.50ರಷ್ಟುಕಡಿಮೆ ಮಾಡಬೇಕೆಂದು ನಿರ್ಧರಿಸಿದ್ದೆ. ದುರದೃಷ್ಟವಶಾತ್ ಶೇ.4-5ರಷ್ಟುಮಾತ್ರ ಕಡಿಮೆ ಮಾಡಲು ಸಾಧ್ಯವಾಯಿತು. ಅದಕ್ಕೆ ರಸ್ತೆ ಎಂಜಿನಿಯರಿಂಗ್, ಆಟೋಮೊಬೈಲ್ ಎಂಜಿನಿಯರಿಂಗ್, ಜನರ ಬಳಿ ಡ್ರೈವಿಂಗ್ ಲೈಸನ್ಸ್ ಇಲ್ಲದಿರುವುದು, ರಸ್ತೆಗಳು ಸರಿಯಿಲ್ಲದಿರುವುದು ಹೀಗೆ ಸಾಕಷ್ಟುಕಾರಣಗಳಿವೆ. ನಿನ್ನೆ ಅಪಘಾತ ಎಸಗಿದ ಒಬ್ಬ ಟ್ರಕ್ ಡ್ರೈವರ್‌ನನ್ನು ಹಿಡಿದಾಗ ಅವನ ಬಳಿ ಲೈಸನ್ಸ್ ಹೋಗಲಿ ಎಲ್‌ಎಲ್‌ಆರ್ ಕೂಡ ಇರಲಿಲ್ಲ. ಮೇಲಾಗಿ ಕುಡಿದಿದ್ದ. ಟ್ರಕ್ ಓವರ್‌ಲೋಡ್ ಆಗಿತ್ತು.
ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇರಲಿಲ್ಲ. ಕೇವಲ ಒಬ್ಬನಿಂದ ನಾಲ್ಕೈದು ನಿಯಮಗಳ ಉಲ್ಲಂಘನೆ. ಅಂಥವನು ಟ್ರಕ್ ಹರಿಸಿ 20-30 ಜನರನ್ನು ಕೊಂದುಬಿಟ್ಟರೆ ಏನು ಗತಿ? ಜನರ ಜೀವ ಹಣಕ್ಕಿಂತ ದೊಡ್ಡದಲ್ಲವೇ? ಕಾನೂನು ಪಾಲಿಸಿಬಿಟ್ಟರೆ ದಂಡ ಕಟ್ಟುವ ಪ್ರಮೇಯವೇ ಇಲ್ಲವಲ್ಲ. ಹೀಗಾಗಿ ದಂಡದ ಪ್ರಮಾಣವನ್ನು ದುಬಾರಿಯಾಗಿಸಿದರೆ ಕಾನೂನಿಗೆ ಹೆದರದ ಅಲ್ಪಸ್ವಲ್ಪ ಜನರೂ ನಿಯಮ ಪಾಲಿಸುವಂತಾಗುತ್ತದೆ ಎಂದು ಈ ದಂಡ ನಿಗದಿಪಡಿಸಿದ್ದೇವೆ.
* ಆದರೆ, ಬಿಜೆಪಿ ಆಳ್ವಿಕೆಯ ರಾಜ್ಯಗಳೇ ನಿಮ್ಮ ಆಶಯಕ್ಕೆ ವಿರುದ್ಧವಾಗಿ ದಂಡದ ಪ್ರಮಾಣ ತಗ್ಗಿಸುತ್ತಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಇದನ್ನು ಜಾರಿಗೊಳಿಸುವುದೇ ಇಲ್ಲ ಎಂದಿದ್ದಾರೆ. ರಾಜ್ಯಗಳ ಜೊತೆಗೆ ಮಾತುಕತೆಯನ್ನೇ ನಡೆಸದೆ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಕಾಯ್ದೆ ತಿದ್ದುಪಡಿ ಮಾಡಿದ್ದರಿಂದ ಹೀಗಾಗುತ್ತಿದೆಯೇ?
ಈ ಕಾನೂನು ತಿದ್ದುಪಡಿಗೆ ಮುನ್ನ ರಚಿಸಲಾಗಿದ್ದ ಸಮಿತಿಯಲ್ಲಿ 20 ರಾಜ್ಯಗಳ ಸಾರಿಗೆ ಸಚಿವರಿದ್ದರು. ಅವರ ಜೊತೆ 12 ಸಭೆ ನಡೆಸಲಾಗಿದೆ. ಆ ಸಭೆಗಳಲ್ಲೇ ಕಾಯ್ದೆಯ ತಿದ್ದುಪಡಿ ಕರಡು ಸಿದ್ಧವಾಗಿ ನನ್ನ ಕೈಗೆ ಬಂತು. ನಾನದನ್ನು ಸಂಸತ್ತಿಗೆ ಒಯ್ದಾಗ ಜಂಟಿ ಸದನ ಸಮಿತಿಗೆ ಕರಡು ಒಪ್ಪಿಸಲಾಯಿತು. ಅದರಲ್ಲಿ ಎಲ್ಲಾ ಪಕ್ಷಗಳ ಸದಸ್ಯರೂ ಇದ್ದರು. ಅವರೆಲ್ಲ ಒಪ್ಪಿದರು. ಅಲ್ಲಿಂದ ರಾಜ್ಯಸಭೆಯ ಸ್ಥಾಯಿ ಸಮಿತಿಗೆ ಹೋಯಿತು. ನಂತರ ಜನರಿಂದ ಆಕ್ಷೇಪ ಆಹ್ವಾನಿಸಲಾಯಿತು. ಜೊತೆಗೆ ವಿಶ್ವಬ್ಯಾಂಕ್‌ನ ಸಹಯೋಗದಲ್ಲಿ ಬ್ರಿಟನ್, ಕೆನಡಾ, ಅರ್ಜೆಂಟೀನಾ ಮುಂತಾದ ಏಳೆಂಟು ದೇಶಗಳ ಕಾನೂನು ಅಧ್ಯಯನ ಮಾಡಿ ಕರಡು ಸಿದ್ಧಪಡಿಸಲಾಗಿತ್ತು.
ಭಾರೀ ದಂಡದ ಭೀತಿ: ಬೈಕ್ ಸಾಹಸ ತಡೆಯಲು ಮಗನ ಬಂಧಿಸಿಟ್ಟ ಅಪ್ಪ!
ಹೀಗೆ ಎಲ್ಲರ ಜೊತೆಗೆ ಚರ್ಚಿಸಿಯೇ ತಿದ್ದುಪಡಿ ಮಾಡಲಾಗಿದೆ. ಇನ್ನು, ನಮ್ಮದು ಒಕ್ಕೂಟ ವ್ಯವಸ್ಥೆ. ಸಾರಿಗೆ ವಿಷಯ ಸಮವರ್ತಿ ಪಟ್ಟಿಯಲ್ಲಿದೆ. ಹೀಗಾಗಿ ಇದರ ಮೇಲೆ ರಾಜ್ಯಗಳಿಗೂ ಅಧಿಕಾರವಿದೆ. ರಾಜ್ಯಗಳಿಗೆ ತಮ್ಮಲ್ಲಿ ಅಪಘಾತ ಕಡಿಮೆ ಮಾಡಬೇಕು, ಜನರ ಜೀವ ಉಳಿಸಬೇಕು, ಯುವಕರನ್ನು ರಕ್ಷಿಸಬೇಕು ಎಂಬ ಬಯಕೆಯಿದ್ದರೆ ದುಬಾರಿ ದಂಡ ವಿಧಿಸಬೇಕು. ಇಲ್ಲದಿದ್ದರೆ ಅಪಘಾತಗಳ ಹೊಣೆಯನ್ನು ರಾಜ್ಯಗಳೇ ಹೊರಬೇಕು. ನಾನು ರಾಜ್ಯಗಳ ನಿರ್ಧಾರವನ್ನೂ ಗೌರವಿಸುತ್ತೇನೆ.
* ಬಿಜೆಪಿ ಆಳ್ವಿಕೆಯಿರುವ ರಾಜ್ಯಗಳಲ್ಲೇ ದಂಡದ ಪ್ರಮಾಣ ಇಳಿಕೆ ಮಾಡುತ್ತಿರುವುದು ನಿಮಗೆ ಮುಜುಗರ ತಂದಿಲ್ಲವೇ?
ಇದರಲ್ಲಿ ರಾಜಕೀಯದ ಪ್ರಶ್ನೆ ಅಥವಾ ಪಕ್ಷದ ಪ್ರಶ್ನೆ ಬರುವುದಿಲ್ಲ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ತಮ್ಮ ರಾಜ್ಯಕ್ಕೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವ ಅಧಿಕಾರವಿದೆ. ಹಾಗೆಯೇ ಅದರ ಪರಿಣಾಮದ ಹೊಣೆಗಾರಿಕೆಯೂ ಅವರ ಮೇಲಿದೆ.
* ಕೆಲ ರಾಜ್ಯಗಳು ನಿಮ್ಮ ಕಾಯ್ದೆಯನ್ನು ಒಪ್ಪುತ್ತಿಲ್ಲವೆಂದು ನಿಮಗೆ ಬೇಸರವಾಗಿದೆಯೇ?
ಖಂಡಿತ ಇಲ್ಲ. ಇದರಲ್ಲಿ ನನ್ನ ಸ್ವಂತದ್ದೇನೂ ನಷ್ಟವಾಗುವುದಿಲ್ಲ. ಕಾಯ್ದೆ ತಿದ್ದುಪಡಿ ಮಾಡಿದ್ದು ಭಾರತ ಸರ್ಕಾರ. ಸಾರಿಗೆ ಸಚಿವನಾಗಿ ದೇಶದಲ್ಲಿ ಅಪಘಾತಗಳ ಪ್ರಮಾಣ ಇಳಿಕೆ ಮಾಡಲು ಕ್ರಮ ಕೈಗೊಳ್ಳುವುದು ನನ್ನ ಕರ್ತವ್ಯ. ನಾನದನ್ನು ನಿಭಾಯಿಸಿದ್ದೇನೆ. ಇನ್ನು, ಗುಜರಾತ್‌ನಲ್ಲಿ ಅಪಘಾತಗಳ ಸಂಖ್ಯೆ ಇಳಿಕೆ ಮಾಡುವುದು ನನ್ನ ಜವಾಬ್ದಾರಿಯೋ ಅಲ್ಲಿನ ಮುಖ್ಯಮಂತ್ರಿಯದೋ? ಎಲ್ಲ ಮುಖ್ಯಮಂತ್ರಿಗಳಿಗೂ ನನ್ನ ಮನವಿಯಿಷ್ಟೆ: ದಯವಿಟ್ಟು ಕಾಯ್ದೆಯನ್ನು ಸಂಪೂರ್ಣವಾಗಿ ಓದಿ, ಚರ್ಚೆ ನಡೆಸಿ, ನಂತರ ಜನಸಾಮಾನ್ಯರ ಹಿತ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಿ.
* ಕಾನೂನು ಬಿಗಿಯಾಗಬೇಕು, ಆದರೆ ದಂಡದ ಪ್ರಮಾಣ ಬಹಳ ಜಾಸ್ತಿಯಾಯಿತು ಎಂಬುದು ಅನೇಕ ರಾಜ್ಯಗಳ ದೂರು. ಅದನ್ನು ಒಪ್ಪುತ್ತೀರಾ?
30 ವರ್ಷಗಳ ಹಿಂದೆ 100 ರು. ಇದ್ದ ದಂಡ ಈಗ 500 ರು. ಆಗಿದೆ. ಆಗ 500 ಇದ್ದ ದಂಡ 1500 ಆಗಿದೆ. 30 ವರ್ಷದ ಹಿಂದೆ ರುಪಾಯಿ ಮೌಲ್ಯ ಎಷ್ಟಿತ್ತು? ಈಗ ಎಷ್ಟಿದೆ? 100 ರು. ದಂಡ ಹಾಕ್ತಾರಾ, ಕಟ್ಟಿದರಾಯ್ತು ಬಿಡು ಅಂತ ಜನರು ನಿರ್ಲಕ್ಷ್ಯ ಮಾಡುತ್ತಿರುವುದು ನಮಗೆಲ್ಲರಿಗೂ ಕಾಣಿಸುತ್ತಿದೆ. ಹೀಗಾಗಿ ದಂಡದ ಪ್ರಮಾಣ ಜಾಸ್ತಿಯೇನೂ ಅಲ್ಲ. ಸ್ವಲ್ಪ ಜಾಸ್ತಿಯೇ ಇದೆ ಅಂತ ಇಟ್ಟುಕೊಳ್ಳಿ, ಅದರಲ್ಲಿ ತಪ್ಪೇನಿಲ್ಲ.
ಅಮೆರಿಕ, ಬ್ರಿಟನ್, ಕೆನಡಾಕ್ಕೆ ಹೋಗಿ ಯಾರಾದರೂ ಭಾರತೀಯರು ಲೈಸನ್ಸ್ ಇಲ್ಲದೆ ವಾಹನ ಓಡಿಸುವ ಧೈರ್ಯ ಮಾಡುತ್ತಾರಾ? ಇಲ್ಲ. ಯಾಕೆಂದರೆ ಸಿಕ್ಕಿಬಿದ್ದರೆ ಯದ್ವಾತದ್ವಾ ದಂಡ ವಿಧಿಸುತ್ತಾರೆ. ಅಲ್ಲಿಗೆ ಹೋಗುವ ಭಾರತೀಯರು ಮೂರು-ಮೂರು ತಿಂಗಳು ಡ್ರೈವಿಂಗ್ ಸ್ಕೂಲ್‌ಗೆ ಹೋಗಿ ಲೈಸನ್ಸ್ ಮಾಡಿಸಿಕೊಳ್ಳುತ್ತಾರೆ. ಆದರೆ, ನಮ್ಮದೇ ದೇಶದಲ್ಲಿ ಡೋಂಟ್ ಕೇರ್ ಎನ್ನುತ್ತಾರೆ. ಇದು ನಿಲ್ಲಬೇಕು.
* ಹೊಸ ದಂಡ ಜಾರಿಗೆ ಬಂದಮೇಲೆ ಆರ್‌ಟಿಒ ಕಚೇರಿಗಳಿಗೆ ಲೈಸನ್ಸ್ ಮಾಡಿಸಲು ಬರುವವರ ಸಂಖ್ಯೆ ಹಾಗೂ ಮಾಲಿನ್ಯ ತಪಾಸಣೆ ಕೇಂದ್ರಗಳಿಗೆ ಸರ್ಟಿಫಿಕೇಟ್ ಪಡೆಯಲು ಬರುವವರ ಸಂಖ್ಯೆ ನಾಲ್ಕೈದು ಪಟ್ಟು ಹೆಚ್ಚಾಗಿದೆ. ಅದನ್ನು ಹೇಗೆ ನಿಭಾಯಿಸುತ್ತೀರಿ?
ಬೇಕಾದರೆ ವಿಶೇಷ ಕೇಂದ್ರಗಳನ್ನು ತೆರೆಯುತ್ತೇವೆ. ಖಾಸಗಿ ಸಂಸ್ಥೆಗಳು ಆಸಕ್ತಿ ವಹಿಸಿದರೆ ಅವರಿಗೂ ವಾಹನ ಚಾಲನಾ ಪರವಾನಗಿ ನೀಡುವ ಅಧಿಕಾರ ನೀಡುತ್ತೇವೆ. ದೇಶದಲ್ಲಿ 25 ಲಕ್ಷ ಚಾಲಕರ ಕೊರತೆಯಿದೆ. ಅವರನ್ನು ತರಬೇತುಗೊಳಿಸಬೇಕು ಅಂದರೆ 600 ಡ್ರೈವಿಂಗ್ ಸ್ಕೂಲ್ ತೆರೆಯಬೇಕು. ಸರ್ಕಾರದಿಂದಲೇ ಇದು ಸಾಧ್ಯವಿಲ್ಲ. ಖಾಸಗಿ ಕ್ಷೇತ್ರದ ಸಹಕಾರ ನಮಗೆ ಬೇಕೇ ಬೇಕು. ಟ್ರಕ್ ಡ್ರೈವರ್‌ಗಳಿಗೆ ನಮ್ಮ ದೇಶದಲ್ಲಿ ಸರಿಯಾದ ತರಬೇತಿಯೇ ಇರುವುದಿಲ್ಲ.
ಅಬ್ಬಾ ದಂಡ... ಒಂದೇ ವಾರದಲ್ಲಿ 1 ಕೋಟಿ ರು. ಸಂಗ್ರಹ
ಡ್ರೈವರ್ ಇಲ್ಲದ ಸಮಯ ನೋಡಿ ಕ್ಲೀನರ್‌ಗಳು ಆಗಾಗ ಟ್ರಕ್ ಓಡಿಸಿ ಅಡ್ಡಾದಿಡ್ಡಿ ಡ್ರೈವಿಂಗ್ ಕಲಿತುಬಿಡುತ್ತಾರೆ. ಅದರ ಮಧ್ಯೆ ಒಂದೆರಡು ಅಪಘಾತವನ್ನೂ ಮಾಡುತ್ತಾರೆ. ಟ್ರಾಫಿಕ್ ಪೊಲೀಸರು ಸೀಟಿ ಹೊಡೆಯುತ್ತಿದ್ದರೆ ನಮ್ಮ ದೇಶದಲ್ಲಿ ವಾಹನ ಸವಾರರು ಅವರ ಮುಂದೆಯೇ ನಗುತ್ತಾ ರೊಂಯ್ಯನೆ ಸಿಗ್ನಲ್ ಜಂಪ್ ಮಾಡಿ ಹೋಗುತ್ತಾರೆ. ಪೊಲೀಸರೇನು ಮಜಕ್ಕೆ ಸೀಟಿ ಹೊಡೆಯುತ್ತಾರೆಯೇ? ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ. ಜನರ ಜೀವ ಉಳಿಸುವುದು ದೊಡ್ಡ ಕೆಲಸ. ನನ್ನ ಕಳಕಳಿಯಿರುವುದು ಅದರ ಬಗ್ಗೆ. ಹೇಗೋ ಹಣ ಹೊಂದಿಸಿ ದಂಡ ಕಟ್ಟಬಹುದು. ಆದರೆ, ಅಪಘಾತದಲ್ಲಿ ಕೈಕಾಲು ಕಳೆದುಕೊಂಡು ಜೀವನವಿಡೀ ಕಷ್ಟಪಡುವವರಿಗೆ ಉತ್ತರಿಸುವವರು ಯಾರು? ರಾಜ್ಯಗಳು ಯೋಚಿಸಲಿ.