Asianet Suvarna News Asianet Suvarna News

ಮತ್ತೆ ಎದ್ದಿದೆ ಅಸಹಿಷ್ಣುತಾ ಕೂಗು; ಮೋದಿ ಪರ -ವಿರೋಧಿ ಬಣದ ನಡುವೆ ಜಟಾಪಟಿ

ದೇಶದಲ್ಲಿ ಅಸಹಿಷ್ಣುತೆ, ಕೋಮು ಸಂಘರ್ಷಗಳು ಹೆಚ್ಚುತ್ತಿವೆ. ಇದರ ಬಗ್ಗೆ ಮೋದಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು 49 ಚಿಂತಕರ ಒಂದು ಗುಂಪು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರೆ, 62 ಜನರ ಇನ್ನೊಂದು ಚಿಂತಕರ ಗುಂಪು ಈ ಪತ್ರಕ್ಕೆ ತಿರುಗೇಟು ನೀಡಿದೆ. ಇದು ಒಂದು ರೀತಿಯ ಸ್ಟಾರ್‌ವಾರ್‌ಗೆ ಕಾರಣವಾಗಿದೆ.

62 Celebrities bats for PM Modi about intolerance war
Author
Bengaluru, First Published Jul 29, 2019, 2:18 PM IST
  • Facebook
  • Twitter
  • Whatsapp

ದೇಶದಲ್ಲಿ ಅಸಹಿಷ್ಣುತೆ, ಕೋಮು ಸಂಘರ್ಷಗಳು ಹೆಚ್ಚುತ್ತಿವೆ. ಇದರ ಬಗ್ಗೆ ಮೋದಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು 49 ಚಿಂತಕರ ಒಂದು ಗುಂಪು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರೆ, 62 ಜನರ ಇನ್ನೊಂದು ಚಿಂತಕರ ಗುಂಪು ಈ ಪತ್ರಕ್ಕೆ ತಿರುಗೇಟು ನೀಡಿದೆ. ಇದು ಒಂದು ರೀತಿಯ ಸ್ಟಾರ್‌ವಾರ್‌ಗೆ ಕಾರಣವಾಗಿದೆ.

49 ಸೆಲೆಬ್ರಿಟಿಗಳ ಪತ್ರದಲ್ಲಿ ಏನಿದೆ?

ದೇಶದಲ್ಲಿ ಅಮಾಯಕ ಜನರನ್ನು ಬಡಿದು ಹತ್ಯೆ ಮಾಡಲಾಗುತ್ತಿದೆ ಮತ್ತು ಧರ್ಮದ ಹೆಸರಿನಲ್ಲಿ ಗುಂಪು ಹಲ್ಲೆ ನಡೆಸಲಾಗುತ್ತಿದೆ ಎಂದು ಇತ್ತೀಚೆಗೆ ಅಡೂರು ಗೋಪಾಲಕೃಷ್ಣನ್‌, ಶ್ಯಾಮ್‌ ಬೆನಗಲ್‌, ಅನುರಾಗ್‌ ಕಶ್ಯಪ್‌ ಸೇರಿದಂತೆ 49 ಚಿತ್ರ ನಿರ್ಮಾಪಕರು, ಕಲಾವಿದರು, ಸಾಮಾಜಿಕ ಕಾರ‍್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

‘ಇತ್ತೀಚೆಗೆ ‘ಶ್ರೀರಾಮ್‌’ ಎನ್ನುವುದು ಯುದ್ಧದ ಕೂಗಾಗಿದೆ. ರಾಮ ಎನ್ನುವುದು ಅಲ್ಪಸಂಖ್ಯಾತರಲ್ಲಿ ನಡುಕ ಹುಟ್ಟಿಸಿದೆ. ಧರ್ಮದ ಹೆಸರಿನಲ್ಲಿ ಅತ್ಯಧಿಕ ಹಿಂಸಾಚಾರ ಸಂಭವಿಸುತ್ತಿರುವ ಬಗ್ಗೆ ನಮಗೆ ಆಘಾತವಾಗಿದೆ. ಇದು ಮಧ್ಯಕಾಲೀನ ಯುಗ ಅಲ್ಲ. ಭಾರತದ ಹಲವು ಸಮುದಾಯಗಳಿಗೆ ರಾಮನ ಹೆಸರು ಪವಿತ್ರ. ದೇಶದ ಪ್ರಧಾನಿಯಾಗಿರುವ ನೀವು ರಾಮನ ಹೆಸರನ್ನು ​ಅಪವಿತ್ರಗೊಳಿಸುವುದಕ್ಕೆ ಅಂತ್ಯ ಹಾಡಬೇಕು’ ಎಂದು ಪತ್ರದಲ್ಲಿ ಮನವಿ ಮಾಡಿದ್ದರು. ‘ಭಿನ್ನಾಭಿಪ್ರಾಯವಿಲ್ಲದೆ ಪ್ರಜಾಪ್ರಭುತ್ವದ ಅಸ್ತಿತ್ವವೇ ಇಲ್ಲ.

ಹಾಗಂತ ಸರ್ಕಾರದ ವಿರುದ್ಧ ಭಿನ್ನಾಭಿಪ್ರಾಯ ಹೊರಹಾಕಿದ ಕಾರಣಕ್ಕೆ ಜನರನ್ನು ದೇಶ ವಿರೋಧಿಗಳು ಅಥವಾ ನಗರ ನಕ್ಸಲರು ಎಂದು ಹಣೆಪಟ್ಟಿಕಟ್ಟಿಬಂಧಿಸುವುದು ಸರಿಯಲ್ಲ. ಮುಸ್ಲಿಮರು, ದಲಿತರು ಹಾಗೂ ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಗುಂಪು ಹಲ್ಲೆಯನ್ನು ಕೂಡಲೇ ನಿಲ್ಲಿಸಬೇಕು.

2016 ರಲ್ಲಿ ದಲಿತರ ಮೇಲೆ ಈ ರೀತಿಯ 840 ಕ್ಕೂ ಹೆಚ್ಚು ಹಲ್ಲೆಗಳು ನಡೆದಿವೆ. ನಂತರವೂ ನಡೆದಿವೆ. ಇಂತಹ ದ್ವೇಷದ ಹಲ್ಲೆ ಪ್ರಕರಣಗಳಲ್ಲಿ ಮುಸ್ಲಿಮರು 62%, ಕ್ರಿಶ್ಚಿಯನ್ನರು 1% ಸಂತ್ರಸ್ತರಾಗಿದ್ದಾರೆ. ಇಂತಹ ಪ್ರಕರಣಗಳನ್ನು ಮೋದಿ ಸಂಸತ್ತಿನಲ್ಲಿ ಖಂಡಿಸಿದ್ದಾರೆ. ಆದರೆ ಖಂಡಿಸಿದರಷ್ಟೇ ಸಾಲದು. ಈ ರೀತಿ ಹಲ್ಲೆ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಯಾವ ರೀತಿ ಕ್ರಮ ಕೈಗೊಂಡಿದ್ದೀರಿ’ ಎಂದು ಮೋದಿ ಅವರನ್ನು ಪ್ರಶ್ನಿಸಿದ್ದರು.

62 ಸೆಲೆಬ್ರಿಟಿಗಳ ಪ್ರತ್ಯುತ್ತರದಲ್ಲಿ ಏನಿದೆ?

ದೇಶದಲ್ಲಿ ಅಸಹಿಷ್ಣುತೆಯಿದೆ ಎಂದು ಮೋದಿಗೆ ಸೆಲೆಬ್ರಿಟಿಗಳು ಬರೆದ ಪತ್ರಕ್ಕೆ ಪ್ರತಿಯಾಗಿ ವಿವಿಧ ಕ್ಷೇತ್ರಗಳ 62 ಗಣ್ಯರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ 49 ಗಣ್ಯರು ಪ್ರಧಾನಿಗೆ ಬರೆದಿರುವ ಪತ್ರವು ಉದ್ದೇಶಪೂರಿತ ಹಾಗೂ ರಾಜಕೀಯ ತಾರತಮ್ಯದ ಪ್ರದರ್ಶನ ಎಂದು ತಿರುಗೇಟು ನೀಡಿದ್ದಾರೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಳಂಕ ಮೆತ್ತುವ ಮತ್ತು ನರೇಂದ್ರ ಮೋದಿ ಅವರ ಆಡಳಿತವನ್ನು ನಕಾರಾತ್ಮಕವಾಗಿ ಬಿಂಬಿಸಲು ಮಾಡಿದ ಪ್ರಯತ್ನ ಎಂತಲೂ ಜರಿದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಕಾರಾತ್ಮಕ ರಾಷ್ಟ್ರೀಯತೆ ಮತ್ತು ಮಾನವೀಯತೆ ಆಧಾರದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಪ್ರಧಾನಿ ಮೋದಿ ಅವರ ಶ್ರಮಕ್ಕೆ ಕಳಂಕ ತರುವುದು ಆ ಪತ್ರದ ಉದ್ದೇಶವಾಗಿದೆ.

ಶಾಲೆಗಳನ್ನು ಸುಟ್ಟು ಹಾಕುವುದಾಗಿ ಕಾಶ್ಮೀರಿ ಪ್ರತ್ಯೇಕತಾವಾದಿಗಳು ಬೆದರಿಕೆ ಹಾಕಿದಾಗ ಹಾಗೂ ದೇಶದ ಕೆಲವು ವಿಶ್ವವಿದ್ಯಾಲಯಗಳ ಕ್ಯಾಂಪಸ್‌ ಒಳಗೆ ಭಾರತವನ್ನು ವಿಭಜಿಸುವ ‘ತುಕಡೇ ತುಕಡೇ’ ಘೋಷಣೆಗಳು ಮೊಳಗಿದಾಗ ಸುಮ್ಮನಿದ್ದ ಈ ತಂಡದವರು ಈಗ ಧ್ವನಿ ಎತ್ತಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಭಾರತದ ಏಕತೆ ಮತ್ತು ಸಮಗ್ರತೆಯನ್ನಾದರೂ ಬಲಿ ಕೊಡಬಹುದು ಎಂದು ಇವರು ಭಾವಿಸಿದಂತಿದೆ. ಈ ತಂಡವು ಬಹುಸಂಖ್ಯಾತರ ಭಾವನೆಯನ್ನು ತಿರಸ್ಕರಿಸಿದೆ. ರಾಮನ ಭಕ್ತರನ್ನು ಅಪಹಾಸ್ಯ ಮಾಡುವುದೇ ಇವರ ಕೆಲಸ ಎಂದು ತೀಕ್ಷ$್ಣವಾಗಿ ಮಾರುತ್ತರ ನೀಡಿದ್ದಾರೆ.

ಗಣ್ಯರ ಈ ಜಟಾಪಟಿಗೆ ಏನು ಮಹತ್ವ?

ಗಣ್ಯ ವ್ಯಕ್ತಿಗಳು ಸಮಾಜದಲ್ಲಿ ಅಭಿಪ್ರಾಯಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅದರಲ್ಲೂ ಚಿತ್ರರಂಗ, ಕ್ರೀಡೆ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವವರಿಗೆ ಲಕ್ಷಾಂತರ ಅಭಿಮಾನಿಗಳಿರುತ್ತಾರೆ. ತಾವು ಆರಾಧಿಸುವ ಸೆಲೆಬ್ರಿಟಿಗಳು ಏನು ಹೇಳುತ್ತಾರೋ ಅದನ್ನವರು ಕುರುಡಾಗಿ ನಂಬಿಬಿಡುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಸೆಲೆಬ್ರಿಟಿಗಳು ನೀಡುವ ಹೇಳಿಕೆಗೆ ಬಹಳ ಮಹತ್ವವಿದೆ. ಅವರು ಹೇಳುವುದನ್ನು ಅವರ ಅಭಿಮಾನಿಗಳು ಪ್ರಚಾರ ಮಾಡುತ್ತಾ ಹೋಗುವುದರಿಂದ ಸಮಾಜದಲ್ಲಿ ಆ ಅಭಿಪ್ರಾಯ ನಿಧಾನವಾಗಿ ಬೇರೂರುತ್ತಾ ಹೋಗುತ್ತದೆ.

ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ‘ಅವಾರ್ಡ್‌ ವಾಪಸಿ’

2015ರ ಸೆಪ್ಟೆಂಬರ್‌ನಲ್ಲಿ ಉತ್ತರಪ್ರದೇಶದ ದಾದ್ರಿ ಗ್ರಾಮದಲ್ಲಿ ಗೋವು ಸಾಗಣೆ ಮಾಡುತ್ತಿದ್ದ ಸಂಶಯದ ಮೇಲೆ ಮೊಹಮ್ಮದ್‌ ಅಕ್ಲಾಖ್‌ ಎಂಬಾತನನ್ನು ಬಡಿದು ಹತ್ಯೆ ಮಾಡಲಾಗಿತ್ತು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದಾದ ಬಳಿಕ ಸರಣಿ ದಾಳಿ ಪ್ರಕರಣಗಳು ವರದಿಯಾಗಿದ್ದವು.

ಇಂತಹ ಅಸಹಿಷ್ಣುತೆ, ಗುಂಪು ದಾಳಿಯ ವಿರುದ್ಧ ಪ್ರಗತಿಪರರು, ಸಾಮಾಜಿಕ ಕಾರ‍್ಯಕರ್ತರು, ಕವಿಗಳು ಕೇಂದ್ರ ಸರ್ಕಾರ ಕೊಡುವ ಪ್ರಶಸ್ತಿಗಳನ್ನು ತಿರಸ್ಕರಿಸಿ ಕೇಂದ್ರದ ವಿರುದ್ಧ ‘ಅವಾರ್ಡ್‌ ವಾಪಸಿ’ ಚಳವಳಿಯನ್ನೇ ಆರಂಭಿಸಿದ್ದರು. ಮೋದಿ ನೇತೃತ್ವದ ಸರ್ಕಾರವು ಭಿನ್ನಮತವನ್ನು ಸಹಿಸುತ್ತಿಲ್ಲ, ಕೋಮು ಹತ್ಯೆಗೆ ಕಡಿವಾಣ ಹಾಕುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೇ ಕಾರಣಕ್ಕಾಗಿ 2015ರಲ್ಲಿ ಚಿಂತಕ ಎಂ.ಎಂ ಕಲಬುರ್ಗಿಯವರು ತಮ್ಮ ಪ್ರಶಸ್ತಿ ವಾಪಸ್‌ ಮಾಡಿದ್ದರು. ನಂತರ ನಯನತಾರಾ ಸೆಹಗಲ್‌, ಅಶೋಕ್‌ ವಾಜಪೇಯಿ ಸೇರಿದಂತೆ ಸುಮಾರು 40 ಜನರು ತಮಗೆ ನೀಡಲಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದರು.

ಇದು ಹೊಸ ಸಮರವಲ್ಲ

ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ದೇಶದ ಗಣ್ಯ ವ್ಯಕ್ತಿಗಳ ಎರಡು ಸಮೂಹಗಳು ಪರ ಹಾಗೂ ವಿರುದ್ಧದ ಪ್ರಚಾರದಲ್ಲಿ ಸಕ್ರಿಯವಾಗಿದೆ. ಅಡೂರ್‌ ಗೋಪಾಲಕೃಷ್ಣನ್‌, ಮಣಿರತ್ನಂ, ಅನುರಾಗ್‌ ಕಶ್ಯಪ್‌, ಅಪರ್ಣಾ ಸೇನ್‌ ಮುಂತಾದವರು ಆ ಸಮಯದಿಂದಲೂ ಮೋದಿ ನೀತಿಗಳನ್ನು ವಿರೋಧಿಸುತ್ತಾ ಬಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಮಧುರ್‌ ಭಂಡಾರ್ಕರ್‌, ಗುಲ್‌ ಪನಾಗ್‌, ಅನುಪಮ್‌ ಖೇರ್‌, ವಿವೇಕ್‌ ಅಗ್ನಿಹೋತ್ರಿ ಮುಂತಾದವರು ಮೋದಿ ನೀತಿಗಳನ್ನು ಸಮರ್ಥಿಸಿಕೊಳ್ಳುತ್ತಾ ಬಂದಿದ್ದಾರೆ. ಟ್ವೀಟರ್‌, ಫೇಸ್‌ಬುಕ್‌ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ನಿರಂತರವಾಗಿ ಜಟಾಪಟಿ ನಡೆಯುತ್ತಲೇ ಬಂದಿದೆ.

 

Follow Us:
Download App:
  • android
  • ios