ಹುಬ್ಬಳ್ಳಿ :  ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ 14 ವರ್ಷದ ಬಾಲಕಿ ಮೇಲೆ ಚಹಾ ಮಾರುವ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯನ್ನು ಕಿಮ್ಸ್‌ನಲ್ಲಿ ವೈದ್ಯಕೀಯ ಚಿಕಿತ್ಸೆಗೊಳಪಡಿಸಿದರೆ, ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಬುದ್ಧಿಮಾಂದ್ಯ ಬಾಲಕಿಯೊಬ್ಬಳು ರೈಲ್ವೆ ನಿಲ್ದಾಣದಲ್ಲಿ ಕುಳಿತಿದ್ದಳು. ಈ ವೇಳೆ ಚಹಾ ಮಾರುವ ಮೆಹಬೂಬ್‌ ಎಂಬಾತ ಆಹಾರ ಹಾಗೂ ಹಣಕೊಡುವುದಾಗಿ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ.

ಬಳಿಕ ಬಾಲಕಿ ರೈಲ್ವೆ ನಿಲ್ದಾಣದಲ್ಲಿ ಒಬ್ಬಳೇ ಇರುವುದನ್ನು ನೋಡಿದ ರೈಲ್ವೆ ಚೈಲ್ಡ್‌ ಹೆಲ್ಪ್‌ಲೈನ್‌ ತಂಡ ಬಾಲಕಿಯನ್ನು ವಿಚಾರಿಸಿದೆ. ಈ ವೇಳೆ ತನ್ನ ಮೇಲೆ ಅತ್ಯಾಚಾರವಾಗಿದ್ದನ್ನು ಬಾಲಕಿ ಬಾಯಿಬಿಟ್ಟಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಬಾಲಕಿಯನ್ನು ಸದ್ಯ ಬಾಲಮಂದಿರದಲ್ಲಿ ಇಡಲಾಗಿದೆ. ಬಳಿಕ ಈ ಕುರಿತು ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ರೈಲ್ವೆ ಪೊಲೀಸ್‌ ಠಾಣೆಯ ಮೂಲಗಳು ತಿಳಿಸಿವೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಹಾಮಾರುವ ಮೆಹಬೂಬ್‌ ಎಂಬಾತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಬಾಲಕಿಯನ್ನು ಚೈಲ್ಡ್‌ ಹೆಲ್ಪ್‌ಲೈನ್‌ ಸದಸ್ಯರು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ವರದಿ ಬಳಿಕವೇ ನಿಜಾಂಶ ಗೊತ್ತಾಗಲಿದೆ ಎಂದು ಚೈಲ್ಡ್‌ ಹೆಲ್ಪ್‌ಲೈನ್‌ ಸದಸ್ಯೆ ಸುನೀತಾ ಮೋರ್ಗೋಡ್‌ ತಿಳಿಸಿದ್ದಾರೆ.