ಅಣ್ಣ ಹೀಗೂ ನೆನಪಾಗಬಹುದು

First Published 17, Jun 2018, 12:57 PM IST
Poornachandra Tejaswi remembers his father on fathers day
Highlights

ಇಂದು ಅಪ್ಪಂದಿರ ದಿನ. ಇಂದಿನ ದಿನವಷ್ಟೇ ಅಲ್ಲದೇ ಅಪ್ಪ ಎಂದರೆ ಮಕ್ಕಳಿಗೆ ಆಕಾಶದಷ್ಟೇ ವಿಸ್ತಾರ. ಅಪ್ಪನ ಬಗ್ಗೆ ವರ್ಣನೆಗೆ ನಿಲುಕುವ ಪದಗಳೇ ಇಲ್ಲ. ಅಂತಹ ಅಪ್ಪ ಅಂತರಂಗದ ಒಂದು ಭಾಗವಾಗಿ ಬಾಲ್ಯದ ಅನುಭವವವಾಗಿ ದಕ್ಕಿದಾಗ ಇಂಥದ್ದು ಸಾಧ್ಯ, ಹೀಗಾಗಿ ಮೇರುಕವಿಯನ್ನು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರು ಕಂಡಿದ್ದ ಒಂದು ಬರಹ ಇಲ್ಲಿದೆ.

ಪೂರ್ಣಚಂದ್ರ ತೇಜಸ್ವಿ

ದಾಸಿ ನಮ್ಮಣ್ಣನ ಆಸ್ಥಾನ ಕ್ಷೌರಿಕ. ಮೈಸೂರು ಆಗ ರಾಜಧಾನಿ. ಆದ್ದರಿಂದ ಮೈಸೂರಿನಲ್ಲಿ ಆಸ್ಥಾನ ವಿದ್ವಾನ್ಗಳೂ, ಆಸ್ಥಾನ ವಿದೂಷಕರೂ, ಆಸ್ಥಾನ ವೈದ್ಯರೂ, ಆಸ್ಥಾನ ಗಾಯಕರೂ, ಆಸ್ಥಾನ ಪೈಲ್ವಾನ್ ಗಳೂತುಂಬಿ ತುಳುಕುತ್ತಿದ್ದ ಕಾಲ. ಹಾಗಾಗಿ ಮೈಸೂರಿನ ಪೌರರ ದಿನಚರಿಯೆಲ್ಲ ಅರಮನೆ ಯ ಆಚರಣೆಯನ್ನು ಅಪ್ರಜ್ಞಾಪೂರ್ವಕವಾಗೇ ಅನುಸರಿಸುತ್ತಿತ್ತೋ ಏನೋ! ನಾನು ದಾಸಿಯನ್ನು ನಮ್ಮಪ್ಪನ ಆಸ್ಥಾನ ಕ್ಷೌರಿಕ ಎಂದು ಕರೆದದ್ದೇಕೆಂದರೆ ದಾಸಿ ಬದುಕಿರುವವರೆಗೂ ಮತ್ತೊಬ್ಬರು ಅಣ್ಣನಿಗೆ ಕ್ಷೌರ ಮಾಡಿದ್ದು ನನಗೆ ನೆನಪಿಲ್ಲ. ಆಗ ಒಂಟಿಕೊಪ್ಪಲಿನಲ್ಲಿ ಕ್ಷೌರದ ಅಂಗಡಿಗಳಾಗಲೀ ಸೆಲೂನ್‌ಗಳಾಗಲೀ ಇರಲಿಲ್ಲ. ಕ್ಷೌರಿಕರು ಅವರಿಗೇ ವಿಶಿಷ್ಟವಾದ ಹಡಪದ ಡಬ್ಬಿಗಳನ್ನು ಹಿಡಿದುಕೊಂಡು ಪೋಸ್ಟಾಫೀಸ್ ಎದುರಿನ ಸರ್ಕಲ್‌ನಲ್ಲಿ ನಿಂತಿರುತ್ತಿದ್ದರು. ಆಗ ಟ್ಯಾಕ್ಸಿ ಸ್ಟಾಂಡ್, ಆಟೋ ಸ್ಟಾಂಡ್, ಬಸ್ ಸ್ಟಾಂಡ್‌ಗಳಿರುವಂತೆಯೇ ಆಗ ಕ್ಷೌರಿಕರ ಸ್ಟಾಂಡ್ ಇರುತ್ತಿದ್ದವು. ಕ್ಷೌರಿಕರು ಅಲ್ಲಿ ಹಡಪ ಹಿಡಿದುಕೊಂಡು ಬೆಳಗಿನಿಂದ ಸಂಜೆಯವರೆಗೆ ಗಿರಾಕಿಗಳಿಗೆ ಕಾಯಬೇಕಾಗಿತ್ತು. ನಾವು ಸ್ಕೂಲಿಗೆ ಹೋಗುವಾಗ ಅನೇಕ ವೇಳೆ ದಾಸಿಯೂ ಇತರ ಓರಗೆಯ ಕ್ಷೌರಿಕರ ಜೊತೆ ಹರಟುತ್ತಾ ಅಲ್ಲಿ ಗಿರಾಕಿಗಳಿಗೆ ಕುಳಿತು ಕಾಯುವುದನ್ನು ನೋಡುತ್ತಿದ್ದೆವು. ಆದರೆ ದಾಸಿಯನ್ನು ಯಾವತ್ತೂ ನಾವು ಅಲ್ಲಿಗೆ ಹೋಗಿ ಕರೆ ತಂದಿಲ್ಲ. ಅವನು ಆಸ್ಥಾನ ಕ್ಷೌರಿಕನಾದ್ದರಿಂದ ಅವನೇ ಆಗಾಗ ಭಾನುವಾರದ ದಿನಗಳಲ್ಲಿ ಮನೆಗೆ ಬಂದು ನಮ್ಮ ಕೂದಲು ಸಾಕಷ್ಟು ಬೆಳೆದಿದೆಯೇ ಪರೀಕ್ಷೆ ಮಾಡಿ ಹೋಗುತ್ತಿದ್ದ.


ನಮಗಂತೂ ಇವತ್ತು ಸ್ಕೂಲಿಲ್ಲ ಎಂದು ಖುಷಿಯಿಂದ ಏಳುತ್ತಿದ್ದಂತೆಯೇ ಬಾಗಿಲ ಹತ್ತಿರ ಅವನ ಮುಖ ದರ್ಶನವಾಗಿ ಭಾನುವಾರದ ಸಂತೋಷವೆಲ್ಲ ಹಾರಿಹೋಗುತ್ತಿತ್ತು. ಅವನನ್ನು ಕಂಡರೆ ಯಾಕೆ ನಮಗೆ ಅಷ್ಟೊಂದು ಸಿಟ್ಟು, ದ್ವೇಷ ಇತ್ತೋ ಆಶ್ಚರ್ಯವಾಗುತ್ತೆ. ಅಮ್ಮನಿಗೆ ಸ್ನಾನ ಮಾಡಿಸಲು ಕೊಡುತ್ತಿದ್ದಷ್ಟೇ ತೊಂದರೆ ತಾಪತ್ರಯ ಅವನಿಗೂ ಕೊಡುತ್ತಿದ್ದೆವು. ಅವನು ತನ್ನ ಕಟಿಂಗಿಗೆ ಅನುಕೂಲವಾಗುವ ರೀತಿಯಲ್ಲಿ ನಮ್ಮ ಕುತ್ತಿಗೆಯನ್ನು ಸೊಟ್ಟಂಪಟ್ಟ ತಿರುಗಿಸಿ ಗಂಟೆಗಟ್ಟಲೆ ಕೂರಿಸಿ ಕ್ಷೌರ ಮಾಡುತ್ತಿದ್ದ. ನಮ್ಮ ತಂದೆ ಕತ್ತಿ ಉಪಯೋಗಿಸಬಾರದು ಎಂದು ಅವನಿಗೆ ಹೇಳಿದ್ದರು. ಕ್ಷೌರದ ಕತ್ತಿ ಉಪಯೋಗಿಸಿದರೆ ಚರ್ಮ ರೋಗಗಳು ಒಬ್ಬರಿಂದ ಒಬ್ಬರಿಗೆ ದಾಟುತ್ತವೆಂದು ಅವರ ಅಭಿಪ್ರಾಯ. ಆದ್ದರಿಂದ ಕುತ್ತಿಗೆ ಬಳಿಯೆಲ್ಲಾ ಮೆಷೀನಿನಲ್ಲಿ ಕಟಕಟ ಮಾಡುತ್ತಾ ಉರಿಯಾಗುವಂತೆ ಕ್ಷೌರ ಮಾಡುತ್ತಿದ್ದ. ಅವನ ಆಸ್ಥಾನ ಕ್ಷೌರಿಕನ ಹುದ್ದೆ ತಪ್ಪಿಸಲು ನಮ್ಮ ತಂದೆಯವರ ಬಳಿ ನಾವು ಇನ್ನಿಲ್ಲದಷ್ಟು ಚಾಡಿ ಚುಚ್ಚಿದ್ದೇವೆ. ‘ಅವನ ಹತ್ತಿರ ಬೀಡಿ ವಾಸನೆ ನಮಗೆ ತಾಳಲಾಗುವುದಿಲ್ಲ. ಅವನ ಹತಾರುಗಳೆಲ್ಲ ಮೊಂಡ, ಕೂದಲು ಕಟ್ ಮಾಡುವುದರ ಬದಲು ಕೀಳುತ್ತವೆ.

ಅವನು ಹೇಳಿದ ಹಾಗೆ ಕುಳಿತುಕೊಂಡು ನಮ್ಮ ಕುತ್ತಿಗೆ ಉಳುಕಿ ಹೋಗಿದೆ’ ಎಂದೆಲ್ಲಾ ನೂರಾರು ತರದ ಚಾಡಿ ಹೇಳಿ ಕಣ್ಣೀರ್ಗರೆದರೂ ಅಣ್ಣ ಅದನ್ನು ಗಣನೆಗೆ ತಗೊಳ್ಳುತ್ತಿರಲಿಲ್ಲ. ಅಮ್ಮನ ಹತ್ತಿರ ತಲೆ ಬಾಚಿಸಿಕೊಳ್ಳಲು ಸಹ ನಿರಾಕರಿಸುತ್ತಿದ್ದ ನಮ್ಮ ಅನಾಗರೀಕ ಅಭಿರುಚಿಗಳನ್ನು ಅರಿತಿದ್ದ ಅವರು ದಾಸಿ ನಮಗೆ ಕೊಡುತ್ತಿದ್ದ ಶಿಕ್ಷೆಯನ್ನೆಲ್ಲಾ ಶಿಕ್ಷಣವೆಂದೇ ತಿಳಿದಿದ್ದರು.


ನಾವು ಸ್ಕೂಲಿಗೆ ಹೋಗಲು ಶುರು ಮಾಡಿದ ಮೇಲೆ ಮಿಕ್ಕ ಹುಡುಗರ ಕೂದಲೆಲ್ಲಾ ಸಾಕಷ್ಟು ಉದ್ದ ಇರುತ್ತಿದ್ದುದನ್ನು ಕಂಡು ದಾಸಿಯ ಮೇಲೆ ನಮಗೆ ಅಪಾರ ಕ್ರೋಧ! ಉದ್ದ ಕೂದಲು ಬಿಟ್ಟುಕೊಂಡು ಚಂದುಮಾಮದ ರಾಜಕುಮಾರನಂತೆ ಓಡಾಡಬೇಕೆಂದು ನಮ್ಮ ಇಷ್ಟ. ಕ್ಷೌರ ಮಾಡುತ್ತ ಉದ್ದ ಕೂದಲು ಬಿಡೋ ಎಂದು ನಾವು ಕಣ್ಣೀರು ಹಾಕುತ್ತಾ ಗೋಗರೆಯುವುದನ್ನು ನೋಡಿ ನೋಡಿ ಒಂದು ದಿನ ಉದಾರ ಮನಸ್ಸಿನಿಂದ ದಾಸಿ ಕೂದಲು ಕೊಂಚ ಉದ್ದ ಬಿಟ್ಟ. ಆದರೆ ಅಣ್ಣ ನಮ್ಮ ಕ್ರಾಪು ನೋಡಿ ‘ಏನೋ! ಹುಡುಗರ ತಲೆ ನೋಡಿದರೆ ಕ್ಷೌರ ಮಾಡಿದ ಹಾಗೇ ಕಾಣುವುದಿಲ್ಲವಲ್ಲೋ’ ಎಂದು ಜೋರು ಮಾಡಿ, ಎದ್ದು ಅಂಗಿ ಕೊಡವಿಕೊಳ್ಳುತ್ತಿದ್ದ ನಮ್ಮನ್ನು ಕರೆದು ಕೂರಿಸಿ ಮತ್ತೆ ಎರಡನೆ ಬಾರಿ ಕ್ಷೌರ ಮಾಡಿಸಿದರು. ಮನೆಯಲ್ಲೇ ಆಟ ಆಟಮಟ ಮಾಡಿಕೊಂಡಿದ್ದ ನಮಗೆ ಸ್ಕೂಲಿಗೆ ಹೋಗಲು ಶುರು ಮಾಡಿದ ಕೂಡಲೇ ತೆರೆದುಕೊಂಡ ಹೊರ ಪ್ರಪಂಚ ಅಣ್ಣ ಅಮ್ಮನ ಅಭಿರುಚಿಯ ಬಗ್ಗೆ ವಿಚಿತ್ರವಾದ ಅಸಮಾಧಾನಗಳನ್ನು ಸೃಷ್ಟಿಸಲಾರಂಭಿಸಿತು. ಇವುಗಳಲ್ಲಿ ನಮ್ಮ ಕ್ರಾಪು, ಹೇರ್ ಸ್ಟೈಲ್‌ಗಳು ಪ್ರಧಾನವಾದವು.


                                                                                                             ***

ದಾಸಿಯ ಮಗ ಮಿಡಲ್ ಸ್ಕೂಲ್‌ನಲ್ಲಿ ನಮ್ಮ ಜೊತೆ ಓದುತ್ತಾ ಇದ್ದ. ಅವನು ಅವನಪ್ಪನ ಕಸುಬನ್ನು ಮುಂದುವರಿಸಲೂ ಇಲ್ಲ. ಓದನ್ನೂ ಮುಂದುವರಿಸಲಿಲ್ಲ. ನಾವೆಲ್ಲಾ ಹೈಸ್ಕೂಲ್ ತಲುಪುವ ಹೊತ್ತಿಗೆ ಒಲಗದ ನರಸಿಂಹಯ್ಯ ಒಂಟಿಕೊಪ್ಪಲಿನಲ್ಲಿ ಹೇರ್ ಡ್ರೆಸ್ಸಿಂಗ್ ಸಲೂನ್ ತೆರೆದ. ನಾವು ಬೇರೆ ಕಡೆ ಕ್ಷೌರ ಮಾಡಿಸಿಕೊಳ್ಳುತ್ತಿದ್ದರೂ ಅಣ್ಣ ಮಾತ್ರ ದಾಸಿಯ ಕೊನೆಗಾಲದವರೆಗೂ ಅವನ ಬಳಿಯೇ ಕ್ಷೌರ ಮಾಡಿಸಿಕೊಳ್ಳುತ್ತಿದ್ದರು. ದಾಸಿಗೆ ಏನೋ ಕಾಯಿಲೆ ಬಂದು ಡಾಕ್ಟರು ಅವನ ಕಾಲಿನ ಹೆಬ್ಬೆರಳುಗಳನ್ನು ಕತ್ತರಿಸಿದರು. ಇದರಿಂದ ಅವನ ಕಸುಬಿಗೆ ನೇರವಾಗಿ ಏನೂ ತೊಂದರೆಯಾಗದಿದ್ದರೂ ಅವನ ಸಂಪಾದನೆ ಕಡಿಮೆಯಾಗುತ್ತಾ ಹೋಯ್ತು. ಕಾಲು ಬೆರಳುಗಳಿಲ್ಲದ ಅವನನ್ನು ಕುಷ್ಟ ರೋಗಿ ಇರಬಹುದೆಂದು ಶಂಕಿಸಿ ಅವನ ಬಳಿ ಕ್ಷೌರ ಮಾಡಿಸಿಕೊಳ್ಳಲು ಎಲ್ಲರೂ ಹಿಂದೆಗೆಯುತ್ತಿದ್ದರು. ಅಣ್ಣ ವೈಸ್ ಛಾನ್ಸಲರ್ ಆದ ಮೇಲೆ ದಾಸಿಯ ಕಷ್ಟ ಕಾರ್ಪಣ್ಯಗಳನ್ನು ಕೇಳಿ ಅವನ ಮಗನಿಗೆ ಯೂನಿವರ್ಸಿಟಿಯಲ್ಲಿ ಕೆಲಸ ಕೊಡಿಸಿದ್ದರು.


ಅಣ್ಣ ವೈಸ್‌ಛಾನ್ಸಲರ್ ಆಗಿದ್ದಾಗಲೂ ದಾಸಿಯೇ ಅಣ್ಣನಿಗೆ ಹೇರ್ ಕಟ್ ಮಾಡಲು ಬರುತ್ತಿದ್ದುದು. ಒಂದು ದಿನ ಅಣ್ಣ ಅವನಿಗೆ ಕ್ಷೌರಕ್ಕೆ ಎಷ್ಟು ದುಡ್ಡು ಕೊಡುತ್ತಾರೆ ತಿಳಿದುಕೊಳ್ಳಬೇಕೆಂದು ಕುತೂಹಲವಾಯ್ತು. ವಿಚಾರಿಸಿದೆ. ನೋಡಿದರೆ ಅವನು ಮನೆಗೆ ಬಂದು ಹೇರ್‌ಕಟ್ ಮಾಡುತ್ತಿದ್ದುದಕ್ಕೆ ಅಣ್ಣ ಕೊಡುತ್ತಿದ್ದದು ಕೇವಲ ಹನ್ನೆರಡೇ ಆಣೆ. ಬಹುಷಃ ದಾಸಿ ಹೆಚ್ಚಿಗೆ ಕೊಡಿ ಎಂದು ಕೇಳಲಿಲ್ಲವೆಂದು ಊಹಿಸಿ ದಾಸಿಗೆ ‘ಏನಯ್ಯ! ಸಲೂನಿನಲ್ಲಿ ಹಜಾಮತ್ ಮಾಡಿದರೇ ಮೂರು ರೂಪಾಯಿ ಕೊಡಬೇಕು. ಅಂಥದರಲ್ಲಿ ನೀನು ಮನೆಗೆ ಬಂದು ಕ್ಷೌರ ಮಾಡಿದ್ದಕ್ಕೆ ಹನ್ನೆರಡಾಣೆ ತಗೊಳ್ಳುತ್ತಿದ್ದೀಯಲ್ಲಾ?’ ಎಂದು ಕೇಳಿದೆ. ಅದಕ್ಕೆ ಅವನು ‘ಏನು ಮಾಡುವುದು! ಸ್ವಾಮಿಜಿ ಅವರಿಗೆ ಇಷ್ಟು ಕೊಡು ಅಂತ, ನನಗೆ ಇಷ್ಟು ತಗೋ ಅಂತ ತೀರ್ಮಾನ ಹೇಳಿದ್ದಾರೆ. ಅದರ ಮೇಲೆ ನಾವು ಮಾತಾಡಲಾಗುತ್ತಾ?’ ಎಂದ.


ಯಾವ ಸ್ವಾಮಿಜಿ! ಯಾಕೆ ಹೇಳಿದರು! ಎಲ್ಲಾ ಬಿಟ್ಟು ಸ್ವಾಮಿಗಳು ಹಜಾಮತ್ತಿಗೆ ಮೂಗು ಹಾಕಿದ್ದು ಹೇಗೆ? ನನಗೆ ಒಂದೂ ಅರ್ಥವಾಗಲಿಲ್ಲ. ಆಮೇಲೆ ಅಣ್ಣನ ಹತ್ತಿರ ದಾಸಿಗೆ ಕೊಡುತ್ತಿದ್ದ ದುಡ್ಡು ವಿಪರೀತ ಕಡಿಮೆ ಎಂದು ಹೇಳಿದೆ. ಅವರು ‘ದಾಸಿ ಎಷ್ಟು ಕೊಡಬೇಕೆಂದು ಕೇಳದಿದ್ದರೆ ನನಗೆ ಹೇಗೆ ಗೊತ್ತಾಗಬೇಕು?’ ಎಂದು ಪ್ರಶ್ನಿಸಿದರು. ಆಗ ‘‘ರೇಟು ಯಾರೋ ಸ್ವಾಮಿಜಿ ತೀರ್ಮಾನ ಮಾಡಿದ್ದಾರಂತಲ್ಲಾ!’’ ಎಂದು ದಾಸಿ ಧರ್ಮ ಸಂಕಟವನ್ನು ಹೇಳಿದೆ.


ಅಣ್ಣನಿಗೂ ಕೊಂಚ ಹೊತ್ತು ದಾಸಿ ಮಾತಿನ ಅರ್ಥ ಏನೆಂದು ಹೊಳೆಯಲಿಲ್ಲ. ಆಮೇಲೆ ದೊಡ್ಡದಾಗಿ ನಕ್ಕು ದಾಸಿ ಮಾತಿನ ಅರ್ಥ ಹೇಳಿದರು. ದಾಸಿ ಮೂವತ್ತು ವರ್ಷಗಳ ಹಿಂದೆ ರಾಮಕೃಷ್ಣಾಶ್ರಮಕ್ಕೆ ಕ್ಷೌರಕ್ಕೆ ಹೋಗಲು ಶುರು ಮಾಡಿದಾಗ ಸ್ವಾಮಿ ಸಿದ್ಧೇಶ್ವರಾನಂದರು ದಾಸಿ ಕ್ಷೌರಕ್ಕೆ ರೇಟು ಗೊತ್ತು ಮಾಡಿದ್ದರಂತೆ! ಅದನ್ನು ಸ್ವಾಮಿಗಳ ಹುಕುಂ ಎನ್ನುವಂತೆಯೇ ಭಾವಿಸಿ ದಾಸಿ ಮೂವತ್ತು ವರ್ಷಗಳ ಕಾಲಾವಧಿಯಲ್ಲಿ ಏರಿಸಿ ಎಂದು ಒಮ್ಮೆಯೂ ಕೇಳಲೇ ಇಲ್ಲ. ಇಬ್ಬರ ಪಾಲಿಗೂ ಪ್ರಪಂಚ ಬದಲಾವಣೆಯಾಗದೇ ನಿಂತೇ ಹೋಗಿತ್ತು.?

 

loader