Asianet Suvarna News Asianet Suvarna News

ಸಲಿಂಗ ಪರಿವಾರಕ್ಕಾಗಿ ಧ್ವನಿ ಎತ್ತಿದವರಿವರು

ಸಲಿಂಗಿಗಳ ನಡುವೆ ಸಮ್ಮತಿ ಲೈಂಗಿಕ ಕ್ರಿಯೆ ತಪ್ಪಲ್ಲವೆಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡುವ ಮೂಲಕ LGBT Communityಗೆ ಬಲ ನೀಡಿದೆ. ಕೆಲವು ಗಣ್ಯರೆನಿಸಿಕೊಂಡವರು ತಾವು ಈ ಸಮುದಾಯಕ್ಕೆ ಸೇರಿದವರು ಎಂದು ಮುಕ್ತವಾಗಿ ಹೇಳಿ ಕೊಳ್ಳುವ ಮೂಲಕ, ಈ ಹೋರಾಟಕ್ಕೆ ಬಲ ನೀಡಿದ್ದರು. ಅವರಲ್ಲಿ ಕೆಲವರು ಇವರು...

List of famous people who fight for homosexual rights
Author
Bengaluru, First Published Sep 8, 2018, 1:02 PM IST

ಬಹುಸಂಖ್ಯಾತರ ನಡುವೆ ಅಲ್ಪಸಂಖ್ಯಾತರು ಏನೇ ಮಾಡಿದರೂ ಅದು ತಪ್ಪೆಂದೇ ಎನಿಸಿಕೊಳ್ಳುತ್ತದೆ. ಸಲಿಂಗಕಾಮಿಗಳ ವಿಷಯದಲ್ಲೂ ಇದು ನಿಜ. ಹೆಣ್ಣು-ಗಂಡಿನ ಆಕರ್ಷಣೆ ಪ್ರಕೃತಿ ಸಹಜವಾದದ್ದು ಎಂದೇ ನಾವು ನಂಬಿದ್ದೇವೆ. ಇದೇ ನಂಬಿಕೆಯಲ್ಲೇ(ಮೌಢ್ಯ) ಸೆಕ್ಷನ್ 377ರಲ್ಲಿ ನೂರಾರು ವರ್ಷಗಳ ಕಾಲ ಸಲಿಂಗಕಾಮವನ್ನು ಕ್ರೈಮ್ ಎಂದೇ ಪರಿಗಣಿಸಲಾಗುತ್ತಿತ್ತು.

ಆದರೆ ನಮ್ಮ ರೂಪ, ದೇಹ, ಅದರೊಳಗಿನ ಹಾರ್ಮೋನ್‌ಗಳ ಹರಿವು ಯಾವುದೂ ನಮ್ಮ ಕೈಲಿಲ್ಲ. ಅಂದ ಮೇಲೆ ಕೆಲವರಲ್ಲಿ ಸಲಿಂಗಮೋಹ ಹುಟ್ಟುವುದು ಕೂಡಾ ಪ್ರಕೃತಿಸಹಜವೇ. ಎಲ್ಲ ಗಂಡಿನೊಳಗೆ ಹೆಣ್ಣಿನ ಮನಸ್ಸೂ, ಹೆಣ್ಣಿನೊಳಗೆ ಗಂಡಿನ ಮನಸ್ಸೂ ಇರುತ್ತದೆ. ಆದರೆ ಲಿಂಗಕ್ಕೆ ಸರಿಯಾಗಿ ಡಾಮಿನೆಂಟ್ ಗುಣಗಳು ಬರುತ್ತವೆ. ಕೆಲವೊಮ್ಮೆ ಇದು ಮನುಷ್ಯನ ಕೈಮೀರಿ ಏರುಪೇರಾದರೆ ಹೊಣೆ ದೇವರೇ ತಾನೆ? 

ಅವನದೇ ನಿರ್ಧಾರ ಎಂದ ಮೇಲೆ ಅದು ಸರಿಯಾದುದೇ ಆಗಿರಬೇಕು. ಹೀಗಿದ್ದರೂ ತಮ್ಮದಲ್ಲದ ಬದುಕನ್ನು ಬದುಕಲು ಹೇರುವುದು ಎಷ್ಟು ಸರಿ? ನಮ್ಮ ಮೌಢ್ಯಕ್ಕೆ ಅದೆಷ್ಟೋ ಸಲಿಂಗಕಾಮಿಗಳು ತಮ್ಮ ಜೀವನವನ್ನೇ ಶಾಪವನ್ನಾಗಿಸಿಕೊಂಡು ನರಳುತ್ತಾ ಬದುಕುತ್ತಿದ್ದಾರೆ. ಪ್ರತಿಷ್ಠಿತ ಆ್ಯಪಲ್‌ನ ಅಧ್ಯಕ್ಷ ಟಿಮ್ ಕುಕ್ ಸಹ ತನ್ನನ್ನು ಗೇ ಎಂದು ನಿರ್ಭಿಡೆಯಿಂದ ಹೇಳಿಕೊಂಡಿದ್ದರು.  ಇದು ಆ್ಯಪಲ್‌ನ ಲಾಭಕ್ಕೇನೂ ಕುಂದು ತರಲಿಲ್ಲ. ಇಷ್ಟಕ್ಕೂ ಸಮಾಜಕ್ಕೆ ಏನು ಮಾಡಿದ್ದಾರೆ ಎಂಬುದರ ಆಧಾರದ ಮೇಲೆ ವ್ಯಕ್ತಿಯನ್ನು ನೋಡಬೇಕೇ ಹೊರತು ಆತನ ತೀರಾ ವೈಯಕ್ತಿಕ ವಿಷಯಗಳನ್ನು ಕೆದಕುವುದರಿಂದಲ್ಲ.

ಕೆಲವರು ತಮ್ಮ ಬದುಕುವ ಹಕ್ಕನ್ನು, ಪ್ರೀತಿಸುವ ಹಕ್ಕನ್ನು ಪ್ರತಿಪಾದಿಸುವ, ಅದಕ್ಕಾಗಿ ಹೋರಾಡುವ, ತಾವು ತಾವಾಗಿಯೇ ಬದುಕುವ ಧೈರ್ಯ ತೋರುತ್ತಿರುವುದು ಭಾರತದಲ್ಲಂತೂ ತಾಕತ್ತಿನ ಪ್ರದರ್ಶನವೇ ಸರಿ. ಇಂಥ ಧೈರ್ಯವನ್ನು ಸಮಾಜದಲ್ಲಿ ಹೆಸರು ಗಳಿಸಿರುವಂಥ ಪತ್ರಕರ್ತರು, ಸಿನಿಮಾ ನಿರ್ದೇಶಕರು, ಸಮಾಜ ಸೇವಕರು ಮುಂತಾದ ವಿದ್ಯಾವಂತರು, ಉತ್ತಮ ಹುದ್ದೆಯಲ್ಲಿರುವವರು ತೋರುತ್ತಿದ್ದಾರೆ. ಆ ಮೂಲಕ ತಮ್ಮಂಥವರಲ್ಲಿ ಕೀಳರಿಮೆ ಬಿಡುವಂತೆ, ಹಕ್ಕಿನಂತೆ ಬದುಕುವಂತೆ ಕರೆ ನೀಡುತ್ತಿದ್ದಾರೆ. ಅವರಲ್ಲಿ ಪ್ರಮುಖರಿವರು.

ಶ್ರೀಧರ್ ರಂಗಾಯಣ: ಮಂಡ್ಯದ ಗಂಡು ಶ್ರೀಧರ್ ಚಲನಚಿತ್ರ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಚಿತ್ರಕತೆ ಬರಹಗಾರರಾಗಿ ಉತ್ತಮ ಹೆಸರು ಮಾಡಿದ್ದಾರೆ. ಅವರ ನಿರ್ಮಾಣದ ಪಿಂಕ್ ಮಿರರ್, ಯುವರ್ಸ್ ಎಮೋಷನಲಿ ಚಿತ್ರಗಳು ಸಲಿಂಗಕಾಮದ ಕುರಿತೇ ಆಗಿದೆ.

ಮಾನವೇಂದ್ರ ಸಿಂಗ್ ಗೋಹಿಲ್: ರಾಜಸ್ತಾನದ ಅಜ್ಮೆರ್‌ನ ಮಹಾರಾಜಾ ರಘುವೀರ್ ಸಿಂಗ್‌ಜೀ ರಾಜೇಂದ್ರಸಿಂಗ್ ಜೀ ಸಾಹಿಬ್ ಪುತ್ರ ಮಾನವೇಂದ್ರ ಸಿಂಗ್ ತನ್ನನ್ನು ಗೇ ಎಂದು ಹೇಳಿ ಕೊಂಡಾಗ, ಹೆಚ್ಚಿನ ಪ್ರಚಾರ ಸಿಕ್ಕಿತು. ಏಕೆಂದರೆ ಹೊರಜಗತ್ತಿಗೆ ತನ್ನ ಹೋಮೋಸೆಕ್ಷುಯಾಲಿಟಿ ಬಗ್ಗೆ ತಿಳಿಸಿದ ಏಕೈಕ ರಾಜಮನೆತನದ ಕುಡಿ ಈ ಸಿಂಗ್. ಈತ ಮಗುವೊಂದನ್ನುದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾನೆ.

ಅಶೋಕ್ ರಾವ್ ಕವಿ, ಮುಂಬೈ ಮೂಲದ ಪತ್ರಕರ್ತ: ಅಶೋಕ್, ಸಲಿಂಗಿಗಳ ಹೋರಾಟದಲ್ಲಿ ಮುಂಚೂಣಿ ಯಲ್ಲಿದ್ದವರು. ಭಾರತದಲ್ಲಿ ಸಲಿಂಗಿಗಳ ಚಳವಳಿಯ ತಂದೆ ಎಂದೇ ಗುರುತಿಸಿಕೊಂಡಿದ್ದಾರೆ.

ಋತ್ ವನಿತಾ: ಸಲಿಂಗಕಾಮದ ಕುರಿತು ಹೆಚ್ಚಿನ ಸಂಶೋಧನೆ, ಅಧ್ಯಯನ ನಡೆಸಿರುವ ಋತ್, ಇದೇ ವಿಷಯವನ್ನೊಲಗೊಂಡ ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.

ಪರ್ವೇಜ್ ಶಮಾ ಪತ್ರಕರ್ತ:  ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಸಿನಿಮೆಟೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ಪರ್ವೇಜ್ ಅವರ ಚಿತ್ರ ‘ಜಿಹಾದ್ ಫಾರ್ ಲವ್’ಗೆ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಇದು ಮುಸ್ಲಿಂ ಹುಡುಗರ ಸಲಿಂಗಕಾಮದ ಕತೆ.ವಿಶ್ವವನ್ನು ಬದಲಿಸಲಿರುವ 50 ಜನರಲ್ಲಿ ಒಬ್ಬರಾಗಿ ಯುಟಿಎನ್‌ಇ ರೀಡರ್ ಪತ್ರಿಕೆ ಗುರುತಿಸಿತ್ತು.

Follow Us:
Download App:
  • android
  • ios