ವಿಜಯಪುರ ಮುಸುಕುಧಾರಿ ರಾಬರಿ ಗ್ಯಾಂಗ್ ಬಂಧನ; ಸಂತೋಷ ಕನ್ನೂರ್ ಹತ್ಯೆ ಆರೋಪಿಯೂ ಅರೆಸ್ಟ್!
ವಿಜಯಪುರ ನಗರದಲ್ಲಿ ಹಾವಳಿ ಇಟ್ಟಿದ್ದ ಮುಸುಕುಧಾರಿ ಗ್ಯಾಂಗ್ ಅನ್ನು ಗಾಂಧಿಚೌಕ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ. ದರೋಡೆ ವೇಳೆ ಚೂರಿ ಇರಿದು ಸಂತೋಷ ಕನ್ನೂರ್ ಸಾವಿಗೆ ಕಾರಣನಾದ ಕ್ರಿಮಿನಲ್ ಸಹ ಜೈಲಿಗಟ್ಟಿದ್ದಾರೆ.

ವರದಿ -ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಫೆ.06): ವಿಜಯಪುರದ ನಗರದಲ್ಲಿ ಹಾವಳಿ ಇಟ್ಟಿದ್ದ ಮುಸುಕುಧಾರಿ ಗ್ಯಾಂಗ್ ಕೊನೆಗು ಅಂದರ್ ಆಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ ನಡೆಸಿದ ಗಾಂಧಿಚೌಕ ಪೊಲೀಸರು ಮೂವರನ್ನ ಸೆರೆ ಹಿಡಿದಿದ್ದಾರೆ. ಪ್ರಮುಖ ವಿಚಾರ ಅಂದ್ರೆ ದರೋಡೆ ವೇಳೆ ಚೂರಿ ಇರಿದು ಸಂತೋಷ ಕನ್ನೂರ್ ಸಾವಿಗೆ ಕಾರಣನಾದ ಕ್ರಿಮಿನಲ್‌ಗೆ ಪೊಲೀಸರು ಜೈಲಿಗಟ್ಟಿದ್ದಾರೆ.
ವಿಜಯಪುರದಲ್ಲಿ ಹಾವಳಿ ಇಟ್ಟಿದ್ದ ಮುಸುಕುಧಾರಿ ಕೊನೆಗು ಗಾಂಧಿಚೌಕ ಪೊಲೀಸರ ಬಲೆಗೆ ಬಿದ್ದಿದೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿದ ಸಿಪಿಐ ಪ್ರದೀಪ ತಳಕೇರಿ ಹಾಗೂ ಇಡೀ ತಂಡ ಐವರ ಪೈಕಿ ಮೂವರನ್ನ ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಒಂದು ತಿಂಗಳಿನಿಂದ ಈ ಗ್ಯಾಂಗ್ ವಿಜಯಪುರ ನಗರದ ಹೊರಭಾಗಗಳಲ್ಲಿ ಹಾವಳಿ ಇಟ್ಟಿತ್ತು. ಮುಸುಕುಧರಿಸಿ ಮನೆಗಳಿಗೆ ನುಗ್ಗಿ ಜನರನ್ನ ಬೆದರಿಸಿ ಚಿನ್ನಾಭರಣ ಹಣ ಸುಲಿಗೆ ಮಾಡ್ತಿತ್ತು. ಈ ಗ್ಯಾಂಗ್ ಹಾವಳಿಗೆ ಇಡೀ ನಗರದ ಜನರೆ ಬೆಚ್ಚಿಬಿದ್ದಿದ್ದರು. ಹೀಗೆ ಹಾವಳಿ ಇಟ್ಟಿದ್ದ ಮಹಾರಾಷ್ಟ್ರ ಮೂಲದ ಐವರ ಪೈಕಿ ಮೂವರನ್ನ ಬಂಧಿಸಲಾಗಿದೆ. ವಿಠ್ಠಲ ಚೌಹಾನ್, ಸುರೇಶ್ ಚೌಹಾನ್, ಆಕಾಶ್ ಅಲಿಯಾಸ್ ಅಕ್ಷಯ್ ರಾವತ ಎಂಬುವರನ್ನ ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡೆಸಿದ್ದಾರೆ.
ಚೂರಿ ಇರಿದಿದ್ದ ಡೆಡ್ಲಿ ದರೋಡೆಕೋರನು ಅರೆಸ್ಟ್: ಕಳೆದ ಜನೇವರಿ 16 ರಂದು ಜೈನಾಪುರ ಲೇಔಟ್ ನಲ್ಲಿ ಹಾವಳಿ ಇಟ್ಟಿದ್ದ ಇದೆ ಮಹಾರಾಷ್ಟ್ರ ಮೂಲದ ದರೋಡೆಕೋರರ ಗ್ಯಾಂಗ್ ಅಲ್ಲಿ ಸಂತೋಷ ಕನ್ನೂರ ಎಂಬುವರ ಮನೆಯಲ್ಲಿ ದರೋಡೆಗೆ ನುಗ್ಗಿತ್ತು. ಆಗ ದರೋಡೆ ತಡೆಯಲು ಬಂದಿದ್ದ ಸಂತೋಷ ಕನ್ನೂರ್ ಹೊಟ್ಟೆಗೆ, ಬೆನ್ನಿಗೆ ಚೂರಿ ಇರಿದ ಗ್ಯಾಂಗ್ ಮೊದಲ ಮಹಡಿಯಿಂದ ಎತ್ತಿ ಬಿಸಾಕಿತ್ತು. ಬಳಿಕ ವಿಜಯಪುರ ಜಿಲ್ಲಾಸ್ಪತ್ರೆ, ಬಿಎಲ್ಡಿಇ, ಬೆಂಗಳೂರಿನ ಅಪೋಲೋ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಂತೋಷ ಕನ್ನೂರ್ ದಿನಾಂಕ ಫೆ.4 ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸಂತೋಷ ಕನ್ನೂರ್ ಹೊಟ್ಟೆಗೆ ಚೂರಿ ನುಗ್ಗಿಸಿದ ವಿಠ್ಠಲ ಮದುಕರ್ ಚೌಹಾನ್ ಕೂಡ ಸಿಕ್ಕಿಬಿದ್ದಿದ್ದಾನೆ. ಸಧ್ಯ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನ ಗಾಂಧೀ ಚೌಕ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆ ಮಕ್ಕಳಿಗೆ ವಿಮೆ ಭಾಗ್ಯ, ಸರ್ಕಾರಕ್ಕೆ ಯತ್ನಾಳ್ ಸೆಡ್ಡು! 4000ಕ್ಕೂ ಅಧಿಕ ಮುಸ್ಲಿಂ ಮಕ್ಕಳಿಗೂ ವಿಮೆ ಲಾಭ!
ಎರಡು ಗ್ಯಾಂಗ್‌ಗಳಿಗೆ ಪೊಲೀಸರ ಮೂಗುಧಾರ: ಸಂತೋಷ ಕನ್ನೂರ್ ಮೇಲೆ ದರೋಡೆಕೋರರು ನಡೆಸಿದ ಹಲ್ಲೆಯ ಬಳಿಕ ಪೊಲೀಸರು ದರೋಡೆಕೋರರ ಮೇಲೆ ಫೈರಿಂಗ್ ಮಾಡುವ ಮೂಲಕ ಮುಸುಕುಧಾರಿಗಳನ್ನ ಬೆಚ್ಚಿ ಬೀಳಿಸಿದ್ದರು. ಆದ್ರೆ ಅಂದು ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದ ಗ್ಯಾಂಗ್ ಮಧ್ಯಪ್ರದೇಶದ ಗ್ಯಾಂಗ್ ಆಗಿತ್ತು. ಆದ್ರೆ ಸಂತೋಷ ಕನ್ನೂರ್ ಮೇಲೆ ಹಲ್ಲೆ ನಡೆಸಿದ್ದ ಗ್ಯಾಂಗ್ ಪತ್ತೆ ಮಾಡಲು ಕಾರ್ಯಾಚರಣೆ ಮುಂದುವರೆಸಿದ ಗಾಂಧೀಚೌಕ ಪೊಲೀಸರು ಕೊನೆಗು ಮಹಾರಾಷ್ಟ್ರದಲ್ಲಿ ಡೆಡ್ಲಿ ದರೋಡೆಕೋರರ ಬಂಧನ ಮಾಡಿದ್ದಾರೆ. ಈ ಪೈಕಿ ಸಂತೋಷ ಸಾವಿಗೆ ಕಾರಣವಾದ ಕ್ರಿಮಿನಲ್ ಸಹ ಅರೆಸ್ಟ್ ಆಗಿದ್ದಾನೆ.
ಇದನ್ನೂ ಓದಿ: ವಿಜಯಪುರ: ಜಗಳ ಬಿಡಿಸಲು ಬಂದ ಅತ್ತೆ ಕೊಂದು ಚೀಲದಲ್ಲಿ ಶವ ಕಟ್ಟಿ ನಾಲೆಗೆಸೆದ ಅಳಿಯ!
ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ; ಎಸ್ಪಿ ಲಕ್ಷ್ಮಣ ನಿಂಬರಗಿ: ವಿಜಯಪುರ ನಗರ ಸೇರಿ ಜಿಲ್ಲೆಯ ಪ್ರಮುಖ ಪಟ್ಟಣಗಳ ನಿವಾಸಿಗಳು ಮನೆಯ ಬಳಿ ಸಿಸಿ ಕ್ಯಾಮರಾಗಳನ್ನ ಅಳವಡಿಸಿಕೊಳ್ಳಲು ಎಸ್ಪಿ ಲಕ್ಷ್ಮಣ ನಿಂಬರಗಿ ಮನವಿ ಮಾಡಿದ್ದಾರೆ. ದರೋಡೆಕೋರರ ಚಲನವಲನಗಳ ಮೇಲೆ ನಿಗಾ ಇಡಲು ಸಿಸಿ ಕ್ಯಾಮರಾಗಳು ಅನುಕೂಲವಾಗಲಿವೆ. ಮತ್ತು ವಯಕ್ತಿಕ ಸುರಕ್ಷತೆಗೆ ಜನರಿಗೆ ಸಿಸಿ ಕ್ಯಾಮರಾಗಳು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ.