ಮೈಸೂರು: ವೈವಿಧ್ಯಮ ಹಣ್ಣುಗಳ ಬೆಳೆ- ರೈತ ಮಹಿಳೆಗೆ ಹಣದ ಹೊಳೆ..!
ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಹನುಮಂತಪುರದ ವಸಂತ ಷಣ್ಮುಗಂ ಅವರೇ ಈ ಸಾಧಕಿ. ಸಾವಯವ ಗೊಬ್ಬರ ಮತ್ತು ಜೀವಾಮೃತ ಬಳಸಿ, ಕೃಷಿ ಮಾಡುವ ಮೂಲಕ ಉತ್ತಮ ಇಳುವರಿ ಹಾಗೂ ಆದಾಯ ಪಡೆಯುವ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ಅಂಶಿ ಪ್ರಸನ್ನಕುಮಾರ್
ಮೈಸೂರು(ಆ.05): ರಾಸಾಯನಿಕ ಗೊಬ್ಬರ, ಕೀಟ ಮತ್ತು ಕ್ರಿಮಿನಾಶಕ ಬಳಕೆಯಿಂದ ಬೇಸತ್ತ ರೈತ ಮಹಿಳೆಯೊಬ್ಬರು ಸುಭಾಷ್ ಪಾಳೇಕಾರ್ ಅವರ ಕೃಷಿ ಪದ್ಧತಿ ಅನುಸರಿಸಿ, ವೈವಿಧ್ಯಮಯ ಹಣ್ಣುಗಳನ್ನು ಬೆಳೆದು ವಾರ್ಷಿಕ 20 ಲಕ್ಷ ರು. ಆದಾಯ ಮಾಡುತ್ತಿದ್ದಾರೆ.
ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಹನುಮಂತಪುರದ ವಸಂತ ಷಣ್ಮುಗಂ ಅವರೇ ಈ ಸಾಧಕಿ. ಸಾವಯವ ಗೊಬ್ಬರ ಮತ್ತು ಜೀವಾಮೃತ ಬಳಸಿ, ಕೃಷಿ ಮಾಡುವ ಮೂಲಕ ಉತ್ತಮ ಇಳುವರಿ ಹಾಗೂ ಆದಾಯ ಪಡೆಯುವ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಎಚ್.ಡಿ.ಕೋಟೆ ತಾಲೂಕು ಬೀಚನಹಳ್ಳಿ ಬಳಿ ಕಬಿನಿ ಜಲಾಶಯ ನಿರ್ಮಾಣಕ್ಕೆ ತಮಿಳುನಾಡಿನಿಂದ ಬಂದು ನಂತರ ಇಲ್ಲಿಯೇ ಹಲವಾರು ಕುಟುಂಬಗಳು ಅವರಿವರ ಜಮೀನಿನಲ್ಲಿ ದುಡಿದು, ನಂತರ ಗುತ್ತಿಗೆ ಪಡೆದು ವ್ಯವಸಾಯ ಮಾಡಿ, ಅದರಿಂದ ಬಂದ ಹಣದಿಂದ ಸ್ವತಃ ಜಮೀನು ಖರೀದಿಸಿ ಬದುಕು ಕಟ್ಟಿಕೊಂಡಿವೆ. ಇಂತಹ ಕುಟುಂಬಗಳಲ್ಲಿ ಪಿ.ಕೆ.ರಾಮಸ್ವಾಮಿ ಹಾಗೂ ಚಿನ್ನಮ್ಮ ಅವರ ಕುಟುಂಬವೂ ಒಂದು. ರಾಮಸ್ವಾಮಿ ಅವರ ತಂದೆ ಕರಪ್ಪನ ಗೌಂಡರ್ ಕೂಡ ಕೃಷಿ ಮಾಡುತ್ತಿದ್ದರು. ರಾಮಸ್ವಾಮಿ ಹಾಗೂ ಚಿನ್ನಮ್ಮ ಅವರು ಚಿಕ್ಕಗಾಡಿಗನಹಳ್ಳಿ, ಮೈದನಹಳ್ಳಿ, ಇಲವಾಲ, ಗದ್ದಿಗೆ ಮೊದಲಾದ ಕಡೆ ಕೃಷಿ ಮಾಡುತ್ತಿದ್ದರು. ಅಪ್ಪಾಜಿಗೌಡ, ರಾಮೇಗೌಡ ಮೊದಲಾದವರು ಸಂಪೂರ್ಣ ಸಹಕಾರ ನೀಡುತ್ತಿದ್ದರು. ಈ ದಂಪತಿಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯವರು. ಈ ಪೈಕಿ ವಸಂತ ಒಬ್ಬರು. ಅವರನ್ನು ಕೃಷಿಕನಿಗೆ ವಿವಾಹ ಮಾಡಿಕೊಡಬೇಕು ಎಂದು ಷಣ್ಮುಗಂ ಅವರಿಗೆ 1986ರಲ್ಲಿ ಮದುವೆ ಮಾಡಿಕೊಟ್ಟರು.
ಕೃಷಿಗೆ ತೊಂದರೆಯಾಗದಂತೆ ಬಿತ್ತನೆ ಬೀಜ ಪೂರೈಕೆ: ಶಾಸಕ ದರ್ಶನ್ ಧ್ರುವನಾರಾಯಣ್
ವಸಂತ ಅವರಿಗೆ ಹನುಂತಪುರ ಹಾಗೂ ಚಾಮಲಾಪುರದಲ್ಲಿ 20 ಎಕರೆ ಜಮೀನು ಇದೆ. ಹಾರಂಗಿ ಬಲದಂಡೆ ನಾಲೆಯಿಂದ ನೀರಾವರಿ ಸೌಲಭ್ಯವೂ ಇದೆ. ಕೊಳವೆ ಬಾವಿಗಳು ಇವೆ. ಇಲ್ಲಿ ರಾಸಾಯನಿಕ ಮುಕ್ತ ಸಾವಯವ ಕೃಷಿ, ಸುಸ್ಥಿರ ಕೃಷಿ ಪದ್ದತಿಯಲ್ಲಿ ಅರಣ್ಯ ಕೃಷಿ, ಬಾಳೆ, ಆಡಕೆ, ತೆಂಗು, ಮೆಣಸು, ಭತ್ತ, ರಾಗಿ, ದ್ವಿದಳ ಧಾನ್ಯಗಳು ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆಯುವ ಮೂಲಕ ಸಮಗ್ರ ಕೃಷಿ ಪದ್ದತಿ ಮಾಡುತ್ತಿದ್ದಾರೆ. ಅಲ್ಲದೇ ಅರಣ್ಯ ಕೃಷಿಯನ್ನು ಮಾಡುತ್ತಿದ್ದಾರೆ.
ಅಡಕೆ- 5000, ತೆಂಗು- 450, ತಾಳೆ-90, ಮ್ಯಾಂಗ್‌ತೀಸ್-100 (ಒಂದು ಗಿಡಕ್ಕೆ 1,500 ರೂ. ತ್ರಿಸೂರ್‌ನಿಂದ ತರಿಸಿದ್ದು), ಖರ್ಜೂರ-28 (ಬಿತ್ತನೆಗೆ 1.15 ಲಕ್ಷ, ಧರ್ಮಪುರಿಯಿಂದ ತರಿಸಿದ್ದು), ಮೊಸಂಬಿ-10, ಕಿತ್ತಳೆ- 10, ನೇರಳೆ-3, ಹಲಸು- ಆರು ಬಗೆ, ಡ್ರ್ಯಾಗನ್‌ಪ್ರೂಟ್- 25, ರಂಬೂಟಾನ್- 15, ಬಟರ್ ಫä್ರಟ್- 10, ನುಗ್ಗೆ-5, ಊಟಿ ಸೇಬು- 2, ಅತ್ತಿ- 15, ಸಪೋಟ- 70, ಮಾವು- 10, ಮಿರಾಕಲ್ ಫä್ರಟ್-3, ಲಿಚ್ಚಿ-10, ಲಕ್ಷ್ಮಣಫಲ- 10, ರಾಮಫಲ-10, ಹಿರಳಿಕಾಯಿ- 8, ಚೆರ್ರಿ-1, ಜಾಯ್‌ಕಾಯ್-10, ಚಕ್ಕೆ-2, ನಿಂಬೆ- 10, ಬಿರ್ಯಾನಿ ಎಲೆ-1, ಇಂಗು-1, ಸೊಂಪು-2 ಬೆಳೆಸಿದ್ದಾರೆ. ಇದಲ್ಲದೇ ಸೀತಾಫಲ, ಪಪ್ಪಾಯ ಇವೆ. ಸಾವಯವ ಪದ್ಧತಿಯಲ್ಲಿ ಏಲಕ್ಕಿ, ಪಚ್ಚ ಬಾಳೆ ನೇಂದ್ರ ಬಾಳೆ ಬೆಳೆದಿದ್ದರು.
ಅರಣ್ಯ ಕೃಷಿಯಲ್ಲಿ ಸಿಲ್ವರ್- 500, ತೇರ- 200, ಶ್ರೀಗಂಧ- 200 ಮರಗಳಿವೆ. ಇಲ್ಲಿ ಕಾಳಮೆಣಸು- 300 ಬಳ್ಳಿಗಳನ್ನು ಹಬ್ಬಿಸಲಾಗಿದೆ. 100- ಹೆಬ್ಬೇವು ಮರಗಳನ್ನು ಕಟಾವು ಮಾಡಲಾಗಿದೆ. 130 ಶುಂಠಿ ಕೂಡ ಬೆಳೆದಿದ್ದರು.
ವಸಂತ ಅವರ ಬಳಿ ಮೊದಲು ನಾಟಿ ಹಸುಗಳಿದ್ದವು. ನಂತರ ಸೀಮೆ ಹಸು ಬಂದವು. ಇವುಗಳ ಸಂಖ್ಯೆ 50-60ಕ್ಕೆ ತಲುಪಿತ್ತು. ಈಗ 6 ಹಳ್ಳಿಕಾರ್ ತಳಿಯ ಹಸುಗಳು, 60 ಕೋಳಿ, ಎರಡು ಮೇಕೆಗಳನ್ನು ಸಾಕಿದ್ದಾರೆ. ಈ ಹಿಂದೆ ಎಮ್ಮೆ, ಕುರಿಗಳನ್ನು ಕೂಡ ಸಾಕಿದ್ದರು.
ವಸಂತ ಅವರು ಹುಣಸೂರಿನ ಬಸ್ ನಿಲ್ದಾಣ ಬಳಿ ಇರುವ ತಮ್ಮ ‘ಹೊಲ’ ಸಿರಿಧ್ಯಾನ್ಯ ಮಳಿಗೆಯಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಇಲ್ಲಿ ತರಕಾರಿ, ಜ್ಯೂಸ್ ಕೂಡ ಮಾರಾಟ ಮಾಡಲಾಗುತ್ತದೆ. ಅಲ್ಲದೇ ಮೈಸೂರಿನ ಹಿನ್ಕಲ್‌ನಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಯಲ್ಲಿ ಕೂಡ ಮಾರಾಟ ಮಾಡುತ್ತಾರೆ. ಇದರಿಂದಾಗಿ ಅವರಿಗೆ ವಾರ್ಷಿಕ 15-20 ಲಕ್ಷ ರೂ. ಆದಾಯ ಬರುತ್ತಿದೆ.
ವಸಂತ ಅವರಿಗೆ 2020-21ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ದೊರೆತಿದೆ. ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕ, ವಿ.ಸಿ. ಫಾರಂ ಮೊದಲಾದ ಕಡೆ ಸಂಪನ್ಮೂಲ ವ್ಯಕ್ತಿಯಾಗಿ ಇತರರಿಗೆ ತರಬೇತಿ ನೀಡುತ್ತಾರೆ. ಕರಿಮುದ್ದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿಯಾಗಿದ್ದಾರೆ. ಮೈಸೂರು ದಸರಾ ಮಹಿಳಾ ಮತ್ತು ಮಕ್ಕಳ ದಸರಾ ಸಮಿತಿ ಏರ್ಪಡಿಸಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲೂ ಭಾಗಿಯಾಗಿದ್ದಾರೆ.
ಸಂಪರ್ಕ ವಿಳಾಸಃ
ವಸಂತ ಕೋಂ ಷಣ್ಮುಗಂ
ಹನುಮಂತಪುರ,
ಬಿಳಿಕೆರೆ ಹೋಬಳಿ,
ಹುಣಸೂರು ತಾಲೂಕು
ಮೈಸೂರು ಜಿಲ್ಲೆ
ಮೊ.98808 87916
ಮೈಸೂರು ಅರಮನೆಗೆ ಎರಡು ದಿನ ಪ್ರವೇಶ ನಿಷೇಧ: ಪ್ರವಾಸಿಗರೇ ಗಮನಿಸಿ
ಪ್ರತಿಯೊಬ್ಬ ರೈತರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಬೇಕು. ನಾನು ಮೊದಲು ರಾಸಾಯನಿಕ ಬಳಸುತ್ತಿದ್ದೆ. ಸುತ್ತೂರಿನಲ್ಲಿ ಸುಭಾಷ್ ಪಾಳೇಕಾರ್ ಅವರು ನಡೆಸಿಕೊಟ್ಟಕಾರ್ಯಾಗಾರದಲ್ಲಿ ಪಾಲ್ಗೊಂಡ ನಂತರ ರಾಸಾಯನಿಕ ಗೊಬ್ಬರ ಹಾಕಿ ಭೂಮಿಯ ಪಲವತ್ತತೆ ಹಾಳು ಮಾಡುತ್ತಿರುವುದು ಅರಿವಾಯಿತು. ಅಂದಿನಿಂದಲೂ ಸಾವಯವ ಕೃಷಿ ಪದ್ಧತಿ ಅನುಸರಿಸುತ್ತಾ ಬಂದಿದ್ದೇನೆ. ಈ ಪದ್ಧತಿ ಅನುಸರಿಸಿದಲ್ಲಿ ರೈತರು ಉತ್ತಮಯ ಆದಾಯ ಗಳಿಸಬಹುದು. ಅನಗತ್ಯವಾಗಿ ಸಾಲ-ಸೋಲ ಮಾಡಿ ಅನಾಹುತ ಮಾಡಿಕೊಳ್ಳುವ ಪ್ರಮೇಯ ಬಾರದು ಎಂದು ಹನುಮಂತಪುರ ವಸಂತ ತಿಳಿಸಿದ್ದಾರೆ.
ಪುತ್ರ ಸಾಫ್ಟ್‌ವೇರ್ ಎಂಜಿನಿಯರ್, ಪುತ್ರಿ ಬೈಜೂಸ್‌ನಲ್ಲಿ ಕೆಲಸ
ವಸಂತ ಹಾಗೂ ಷಣ್ಮುಗಂ ದಂಪತಿ ಪುತ್ರ ಶಬರೀನಾಥ್ ಹಾಗೂ ಪುತ್ರಿ ನಂದಿನಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಪುತ್ರ ಬೆಂಗಳೂರಿನ ಒರಾಕಲ್ ಕಂಪನಿಯಲ್ಲಿ ಸಾಫ್‌್ಟವೇರ್ ಎಂಜಿನಿಯರ್. ಪುತ್ರಿ ಎಂಸಿಎ ಮಾಡಿದ್ದು, ಎಸ್‌ಡಿಎಂ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು. ಕೊಯಮತ್ತೂರಿನವರಾದ ಅಳಿಯ ವಿಜಯಕುಮಾರ್ ಜೊತೆ ದುಬೈಗೆ ತೆರಳಿದ್ದರು. ಇದೀಗ ಅಳಿಯ ದೋಹಾದಲ್ಲಿದ್ದು, ಪುತ್ರಿ ಬೈಜೂಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೆ ಪತಿ ಜೊತೆಗೆ ವಿದೇಶಕ್ಕೆ ತೆರಳಲಿದ್ದಾರೆ.