ಯೂಟ್ಯೂಬ್ ನೋಡಿ ಕಳ್ಳತನಕ್ಕಿಳಿದ ಖತರ್ನಾಕ್ ಕಳ್ಳರು..!
ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಪ್ರಯತ್ನಿಸಿದ ಇಬ್ಬರು ಕಳ್ಳರು ಪ್ರಥಮ ಪ್ರಯತ್ನದಲ್ಲೇ ಪೊಲೀಸರ ಅತಿಥಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಇಬ್ಬರನ್ನು ಪೊಲೀಸರು ಸಾರ್ವಜನಿಕರ ಸಹಕಾರದಿಂದ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೋಲಾರ(ಅ.06) : ಯೂಟ್ಯೂಬ್‌ನಲ್ಲಿ ರಸ್ತೆ ದರೋಡೆಗಳನ್ನು ಗಮನಿಸಿ ದರೋಡೆಗೆ ಇಳಿದ ಯುವಕರಿಬ್ಬರು ಪ್ರಥಮ ಪ್ರಯತ್ನದಲ್ಲೇ ಪೊಲೀಸರ ಅತಿಥಿಯಾದ ಘಟನೆ ಮಾಲೂರಿನ ಮಾರಸಂದ್ರ ಬಳಿ ಶನಿವಾರ ನಡೆದಿದೆ.
ರಸ್ತೆಯಲ್ಲಿ ಸಾಗುತ್ತಿದ್ದ ಮಹಿಳೆಯರಿಬ್ಬರಿಗೆ ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಇಬ್ಬರನ್ನು ಪೊಲೀಸರು ಸಾರ್ವಜನಿಕರ ಸಹಕಾರದಿಂದ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಹಿಳೆಯ ಅಡ್ಡಗಟ್ಟಿ ಚೈನ್ ಕಳವು:
ತಾಲೂಕಿನ ಮಾರಸಂದ್ರ ಗ್ರಾಮದ ಮರಿಯಮ್ಮ(62)ತನ್ನ ಗ್ರಾಮದ ರತ್ನಮ್ಮ ಜತೆಯಲ್ಲಿ ಪಟ್ಟಣದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಆಟೋದಲ್ಲಿ ಹುರಳಗೆರೆ ಗೇಟ್ ಬಳಿ ವರೆಗೂ ತೆರಳಿ ನಂತರ ಗ್ರಾಮದ ಕಡೆ ನಡೆದುಕೊಂಡು ಹೋಗುತ್ತಿದ್ದರು. ಆಗ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳಾದ ಮುಳಬಾಗಿಲಿನ ದುಗ್ಗಸಂದ್ರದ ವಿಜಯ ಕುಮಾರ್(24) ಮತ್ತು ಸುದೀಪ್(19) ಐಶ್ವರ್ಯ ಗಾರ್ಡ್‌ನ್ ಬಳಿ ಮರಿಯಮ್ಮನನ್ನು ಅಡ್ಡಗಟ್ಟಿಚಾಕು ತೋರಿಸಿ ಬಂಗಾರದ ಚೈನ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಪೊಲೀಸರಿಗೆ ಸಾರ್ವಜನಿಕರ ಮಾಹಿತಿ
ಅದೇ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಬಂದ ಮಾರಸಂದ್ರ ಗ್ರಾಮದ ಸಂದೀಪ್ ಹಾಗೂ ನಾರಾಯಣಮೂರ್ತಿ ಎಂಬುವರು ಆರೋಪಿಗಳನ್ನು ಹಿಂಬಾಲಿಸಿ ಹಿಡಿಯಲು ನಡೆಸಿದ ಯತ್ನ ವಿಫಲವಾಯಿತು. ಆದರೆ ಅವರು ಆರೋಪಿಗಳ ವಾಹನ ಸಂಖ್ಯೆಯನ್ನು (ಕೆ.ಎ.-51,ಹೆಚ್.ಇ.-5419)ಲಕ್ಕೂರು ಪೊಲೀಸರಿಗೆ ತಿಳಿಸಿದರು. ಪರಿಣಾಮ ಲಕ್ಕೂರು ಗೇಟ್ ಬಳಿ ಬಂದ ಆರೋಪಿಗಳನ್ನು ಲಕ್ಕೂರು ಪೊಲೀಸರು ಬಂಧಿಸಿ ದ್ವಿಚಕ್ರ ವಾಹನ ಸಮೇತ ಇಬ್ಬರನ್ನೂ ವಶಕ್ಕೆ ಪಡೆದರು.
ತಂತಿ ನಡಿಗೆ: ವಯಸ್ಸಾಗಿದೆ, ಜಾರಿ ಬಿದ್ದೀರಿ..! ಬಿಎಸ್‌ವೈಗೆ ಸಿದ್ದು ಟಾಂಗ್..!
ಆರೋಪಿಗಳಿಬ್ಬರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಗುತ್ತಿಗೆ ಅವಧಿ ಮುಗಿದ ಕಾರಣ ನಿರುದ್ಯೋಗಿಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಹಣಕ್ಕಾಗಿ ಈ ಕೃತ್ಯಕ್ಕೆ ಇಳಿದಿದ್ದಾರೆ. ಚೈನ್ ಕಸಿದು ಹೇಗೆ ಪರಾರಿಯಾಗಬೇಕು ಎಂಬುದನ್ನು ಯೂಟ್ಯೂಬ್‌ನಲ್ಲಿ ನೋಡಿದ್ದ ಆರೋಪಿಗಳು ಅದೇ ರೀತಿ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ