ಬೆಳಗಾವಿ(ಡಿ.11): ಉಪಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಸಿಎಲ್‌ಪಿ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‌ ಗುಂಡೂರಾವ್ ಮನನೊಂದು ರಾಜೀನಾಮೆ ಕೊಟ್ಟಿರಬಹುದು. ರಾಜೀನಾಮೆ ಹಿಂಪಡೆಯಲು ಅವರ ಮನವೊಲಿಸುತ್ತೇವೆ ಎಂದು ಮಾಜಿ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. 

ಜಿಲ್ಲೆಯ ಗೋಕಾಕ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಅವರು ಅನಿವಾರ್ಯ. ಅವರೇ ಮುಂದುವರಿಯುತ್ತಾರೆ. ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್ ಮನವೊಲಿಸುತ್ತೇವೆ. ಬಿಜೆಪಿ ಜೆಡಿಎಸ್ ರೀತಿ ಕಾಂಗ್ರೆಸ್‌ನಲ್ಲೂ ಒಂದು ಟೀಂ ಇದೆ. ರಾಜಕೀಯದಲ್ಲಿ ಈ ವಿಚಾರ ಸ್ವಾಭಾವಿಕ. ಮೂಲ ವಲಸಿಗರು ಅಂತಾ ಕಾಂಗ್ರೆಸ್‌ನಲ್ಲಿಲ್ಲ, ಗುಂಪು ಇದ್ದೇ ಇರುತ್ತದೆ. ಭಿನ್ನಾಭಿಪ್ರಾಯ ಕೂಡ ಇರುತ್ತದೆ ಎಂದರು. ಸಿದ್ದರಾಮಯ್ಯ ಏಕಾಂಗಿ ಆಗಿದ್ದಾರೆ ಎನ್ನುವ ಪ್ರಶ್ನೆಯೇ ಇಲ್ಲ. ಅವರ ಜೊತೆಗೆ ನಾವೆಲ್ಲರೂ ಇದ್ದೇವೆ. ಸಿದ್ದರಾಮಯ್ಯಗೆ ಬೆಂಬಲ ಇರುವುದರಿಂದಲೇ ಸಿಎಲ್‌ಪಿ ಲೀಡರ್ ಮಾಡಲಾಗಿದೆ. ಗೋಕಾಕ್‌ ಕಾಂಗ್ರೆಸ್ ಕಾರ್ಯಕರ್ತರ ಬೆನ್ನಿಗೆ ನಾವು ಇದ್ದೇವೆ. ಮತ್ತೆ ಪಕ್ಷ ಕಟ್ಟಲು ಕಾಂಗ್ರೆಸ್ ಕಾರ್ಯಕರ್ತರು ಪ್ರಯತ್ನಿಸುತ್ತಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೂಲ ಕಾಂಗ್ರೆಸ್ಸಿಗರು ಪ್ರಚಾರದಲ್ಲಿ ಭಾಗಿಯಾಗದಿರುವುದೇ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣವಾಯಿತೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷದ ವೋಟ್ ಮೇಲೆ ನಾವು ಗೆಲ್ಲುತ್ತೇವೆ ಹೊರತು ಪಕ್ಷದ ನಾಯಕರಿಂದ ಅಲ್ಲ. ಲೀಡರ್ ಬದಲಾಗುತ್ತಲೆ ಇರುತ್ತಾರೆ. ಪಕ್ಷದ ವೋಟ್ ಮೇಲೆ ನಾವು ಗೆಲ್ಲುತ್ತೇವೆ. ನಮ್ಮ ಪಕ್ಷದ ವೋಟ್ ಮೇಲೆ ನಾವು ಗೆಲ್ಲುತ್ತೇವೆ ಹೊರತು, ನಾಯಕರಿಂದ ಅಲ್ಲ. ನಮ್ಮ ಮತ ಎಷ್ಟಿದೆ ಅಷ್ಟು ತೆಗೆದುಕೊಂಡಿದ್ದೇವೆ. ಸ್ವಿಂಗ್ ಆಗಿದೆ ಅಷ್ಟೇ, ಈ ಸ್ವಿಂಗ್ ಯಾವಾಗಲೂ ಆಗುವುದಿಲ್ಲ. ಅಥಣಿ, ಕಾಗವಾಡ, ಗೋಕಾಕ್‌ನಲ್ಲಿ ನಮ್ಮ ಓಟ್ ಬ್ಯಾಂಕ್ ಎಷ್ಟಿತ್ತೋ ಅಷ್ಟೂ ಪಡೆದಿದ್ದೇವೆ ಎಂದು ಹೇಳಿದರು. 

ಗೋಕಾಕ್‌ ನಗರಸಭೆಯಲ್ಲಿಯ ಭ್ರಷ್ಟಾಚಾರ ಬಗ್ಗೆ ತನಿಖೆ ಮಾಡಲೇಬೇಕು. ರಮೇಶ ಜಾರಕಿಹೊಳಿ ಒಂದು ದಿವಸ ಎರಡು ದಿವಸ ಕ್ಷೇತ್ರಕ್ಕೆ ಬರುತ್ತಾರೆ. ಆಮೇಲೆ ಬೆಂಗಳೂರು, ಮುಂಬೈನಲ್ಲಿ ಇರುತ್ತಾರಷ್ಟೇ. ರಮೇಶ ಜಾರಕಿಹೊಳಿ ಮಂತ್ರಿಯಾಗುವುದರಿಂದ ಅವರ ಸ್ವಂತಕ್ಕೆ ಲಾಭವಾಗುತ್ತದೆ. ಇದರಿಂದ ನಮ್ಮ ಭಾಗಕ್ಕೆ, ನಮ್ಮ ಜಿಲ್ಲೆಗೆ ಏನೂ ಲಾಭವಾಗುವುದಿಲ್ಲ ಎಂದು ಅವರು ರಮೇಶ ವಿರುದ್ಧ ವಾಗ್ದಾಳಿ ನಡೆಸಿದರು. 

ತಾಲೂಕಿಗೊಬ್ಬ ಮಂತ್ರಿ ನೇಮಿಸಿ: 

ಬೆಳಗಾವಿ ಜಿಲ್ಲೆಗೆ ಆರು ಜನ ಮಂತ್ರಿಗಳನ್ನು ನೇಮಿಸುವ ಬದಲು ತಾಲೂಕಿಗೊಬ್ಬ ಮಂತ್ರಿ ನೇಮಿಸಬೇಕು. ಹೊರಗಿನವರು, ಒಳಗಿನವರು ಎಂದು ಬಿಜೆಪಿಯಲ್ಲಿಯೂ ಸಮಸ್ಯೆ ಶುರುವಾಗುತ್ತದೆ. 15 ಜನ ಓರಿಜಿನಲ್, 15 ಜನ ಹೊರಗಿನವರು ಮಂತ್ರಿ ಸ್ಥಾನ ಹೇಗೆ ನಿಭಾಯಿಸುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. 

ಉಪಚುನಾವಣೆ ಫಲಿತಾಂಶ ಧರ್ಮ, ಜಾತಿ ಆಧಾರದ ಮೇಲೆ ಆಗಿದೆ. ಮೆರಿಟ್ ಆಧಾರದ ಮೇಲಲ್ಲ ಎಂದ ಅವರು, ಸರ್ಕಾರ ಬೀಳಿಸುತ್ತೇವೆ ಎಂಬ ಸಿದ್ದರಾಮಯ್ಯನವರ ಹೇಳಿಕೆ ಎಫೆಕ್ಟ್ ಆಗಿರಬಹುದು. ಗೋಕಾಕ್‌ನಲ್ಲಿ ನಮ್ಮದೇ ಆದ ವೋಟ್ ಬ್ಯಾಂಕ್ ಮಾಡಿದ್ದೇವೆ. ಇಷ್ಟೆಲ್ಲ ಒತ್ತಡದ ನಡುವೆ ನಮ್ಮ ಬೆಂಬಲಕ್ಕೆ ಜನರಿದ್ದಾರೆ ಎಂದು ತೋರಿಸಿಕೊಟ್ಟಿದ್ದಾರೆ. ರಮೇಶ ಜಾರಕಿಹೊಳಿ ಅವರನ್ನು ವಿರೋಧಿಸುವವರೂ ಅವರ ಬೆನ್ನಿಗೆ ನಿಂತಿರುವುದರಿಂದ ಅವರ ಗೆಲುವಾಗಿದೆ ಎಂದು ಹೇಳಿದರು. 

ಸೋಲಿನ ಪರಾಮರ್ಶೆ: 

ಒಂದೆಡೆ ಗೋಕಾಕ್‌ ನಗರದ ರಮೇಶ ಜಾರಕಿಹೊಳಿ ಮನೆಯಲ್ಲಿ ಸಂಭ್ರಮಾಚರಣೆ ಇದ್ದರೆ, ಮತ್ತೊಂದೆಡೆ ಸಹೋದರ ಲಖನ್ ಗೆಲ್ಲಿಸಲು ಪಣತೊಟ್ಟಿದ್ದ ಸತೀಶ ಜಾರಕಿಹೊಳಿ ಮನೆಯಲ್ಲಿ ಸೋಲಿನ ಕುರಿತು ಪರಾಮರ್ಶೆ ಮಾಡಲಾಯಿತು. ಗೋಕಾಕ್‌ದ ಹಿಲ್ ಗಾರ್ಡನ್‌ನ ಸತೀಶ ಜಾರಕಿಹೊಳಿ ನಿವಾಸದಲ್ಲಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಸತೀಶ ಜಾರಕಿಹೊಳಿ ಚರ್ಚೆ ನಡೆಸಿದರು. ಯಾರಿಗೂ ಭಯ ಪಡದೇ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪಕ್ಷ ಬಲವರ್ಧನೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. 

ಮೂರು ದಿನ ಗೋಕಾಕ್‌ದಲ್ಲಿ ವಾಸ್ತವ್ಯ ಹೂಡಿ ಸಮಸ್ಯೆ ಆಲಿಸಲಾಗುವುದು. ಡಿ.15ರಂದು ಗೋಕಾಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಮುಖರ ಸಭೆ ಕರೆಯಲು ನಿರ್ಧರಿಸಲಾಯಿತು. ಮುಂದಿನ ದಿನಗಳಲ್ಲಿ ಗೋಕಾಕ್‌ದಲ್ಲಿ ಕಾಂಗ್ರೆಸ್ ಸಂಘಟನೆ ಬಲವರ್ಧನೆಗೆ ಸಭೆಯಲ್ಲಿ ಚರ್ಚೆ ನಡೆಯಿತು.