ಬೆಂಗಳೂರು [ಸೆ.01]:  ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಆ.30ರಂದು 4.58 ಲಕ್ಷ ಪ್ರಯಾಣಿಕರು ಮೆಟ್ರೋ ರೈಲಿನಲ್ಲಿ ಸಂಚರಿಸುವ ಮೂಲಕ ನೂತನ ದಾಖಲೆ ಸೃಷ್ಟಿಯಾಗಿದೆ.

ಪ್ರತಿ ದಿನ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ 3.80 ಲಕ್ಷ ಇದೆ. ಕೆಲವೊಮ್ಮೆ ನಾಲ್ಕು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಿದ ದಾಖಲೆ ಇದೆ. ಈ ಹಿಂದೆ 2019 ಏಪ್ರಿಲ್‌ 5ರಂದು 4.52 ಲಕ್ಷ ಮತ್ತು ಆ.14ರಂದು 4.53 ಲಕ್ಷ ಮಂದಿ ಪ್ರಯಾಣಿಕರು ಒಂದೇ ದಿನ ಪ್ರಯಾಣಿಸಿದ್ದು ದಾಖಲೆಯಾಗಿತ್ತು.

ಆ.30ರಂದು ಒಂದೇ ದಿನ ಯಲಚೇನಹಳ್ಳಿ- ನಾಗಸಂದ್ರ (ಹಸಿರು ಮಾರ್ಗ) ಮತ್ತು ಬೈಯ್ಯಪ್ಪನಹಳ್ಳಿ- ಮೈಸೂರು ರಸ್ತೆ (ನೇರಳೆ ಮಾರ್ಗ) ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರದಲ್ಲಿ 4,58,238 ಮಂದಿ ಪ್ರಯಾಣಿಕರು ಸಂಚರಿಸಿರುವುದು ನೂತನ ದಾಖಲೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್‌ಸಿಎಲ್‌) ತಿಳಿಸಿದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಪ್ರಸ್ತುತ ನೇರಳೆ ಮಾರ್ಗದಲ್ಲಿ ಆರು ಬೋಗಿಗಳ ಮೂರು ರೈಲು ಮತ್ತು ಹಸಿರು ಮಾರ್ಗದಲ್ಲಿ ಆರು ಬೋಗಿಯ ಒಂದು ರೈಲುಗಳು ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ಬೋಗಿಗಳ ರೈಲಿನಲ್ಲಿ ಒಂದು ಬಾರಿಗೆ ಅಂದಾಜು 750 ಪ್ರಯಾಣಿಕರು ಪ್ರಯಾಣಿಸಬಹುದು. ಆರು ಬೋಗಿಗಳ ರೈಲಿನಲ್ಲಿ ಒಂದು ಬಾರಿಗೆ 1900ರಿಂದ ಎರಡು ಸಾವಿರ ಮಂದಿ ಪ್ರಯಾಣಿಸ ಬಹುದಾದಷ್ಟುಸಾಮರ್ಥ್ಯ ಹೊಂದಿದೆ. ಅಕ್ಟೋಬರ್‌ ಅಂತ್ಯದೊಳಗೆ ಮತ್ತೊಂದು ಆರು ಬೋಗಿಯ ರೈಲನ್ನು ವಾಣಿಜ್ಯ ಸಂಚಾರಕ್ಕೆ ಬಿಡುವುದಾಗಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.