Asianet Suvarna News Asianet Suvarna News

ಮಂಡ್ಯ: ಪ್ರತಿ ಕ್ವಿಂಟಲ್‌ ಭತ್ತಕ್ಕೆ ಕನಿಷ್ಠ ದರ 1,815..!

ಕೃಷ್ಣರಾಜಸಾಗರ ಮತ್ತು ಹೇಮಾವತಿ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಮದ್ದೂರಿನ ಕೆಲ ಭಾಗಗಳಲ್ಲಿ ರೈತರು ಭತ್ತ ಬೆಳೆದು ಕಟಾವು ಮತ್ತು ಒಕ್ಕಣೆ ಕಾರ್ಯ ಆರಂಭಿಸಿದ್ದಾರೆ. ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

minimum support price fixed for rice in mandya
Author
Bangalore, First Published Dec 12, 2019, 2:20 PM IST

ಮಂಡ್ಯ(ಡಿ.12): ರೈತರು ಭಾರಿ ಪ್ರಮಾಣದಲ್ಲಿ ಬೆಳೆದಿರುವ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ ಬೆಂಬಲ 1815 ರು. ಬೆಲೆ ನಿಗದಿ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅದೇ ದರಕ್ಕೆ ಖರೀದಿ ಮಾಡಲು ಹಾಗೂ ಈ ವರ್ಷ ಸಮೃದ್ಧ ಮಳೆಯಾದ ಪರಿಣಾಮ ಯಥೇಚ್ಚವಾಗಿ ಭತ್ತ ಬೆಳೆದಿರುವ ರೈತನಿಗಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

ಕೃಷ್ಣರಾಜಸಾಗರ ಮತ್ತು ಹೇಮಾವತಿ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಮದ್ದೂರಿನ ಕೆಲ ಭಾಗಗಳಲ್ಲಿ ರೈತರು ಭತ್ತ ಬೆಳೆದು ಕಟಾವು ಮತ್ತು ಒಕ್ಕಣೆ ಕಾರ್ಯ ಆರಂಭಿಸಿದ್ದಾರೆ. ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಅಡಚಣೆಯಿಂದಾಗಿ ಭತ್ತ ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ಜಿಲ್ಲಾಡಳಿತಕ್ಕೂ ಕೂಡ ಸಾಧ್ಯವಾಗಿರಲಿಲ್ಲ.

ಕುಷ್ಟಗಿ: ಬರದ ನಾಡಲ್ಲೂ ಆಕಾಶದೆತ್ತರಕ್ಕೆ ಚಿಮ್ಮುತ್ತಿದೆ ಕೊಳೆವೆ ಬಾವಿ ನೀರು

ಈಗ ಚುನಾವಣೆ ಮುಗಿದಿದೆ. ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಭತ್ತ ಬೆಳೆಯುವ ತಾಲೂಕಿನ ತಹಸೀಲ್ದಾರ್‌ ಹಾಗೂ ಕೃಷಿ, ಆಹಾರ ಇಲಾಖೆ ಅಧಿಕಾರಿಗಳ ಜೊತೆ ಮೊದಲ ಸುತ್ತಿನ ಸಭೆ ನಡೆಸಿ ರೈತರ ನೆರವಿಗೆ ಧಾವಿಸಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಅಗತ್ಯವಾಗಿರುವ ಭತ್ತ ಖರೀದಿ ಕೇಂದ್ರಗಳು ಮತ್ತು ಅವುಗಳ ರೂಪುರೇಷಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಕೋರಿದ್ದಾರೆ. ಅಲ್ಲದೇ ಕಳೆದ ಬಾರಿ 28ಕ್ಕೂ ಅಧಿಕ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಈ ಬಾರಿ ಅಷ್ಟೆಕೇಂದ್ರಗಳ ಅಗತ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಲು ಸೂಚಿಸಿದ್ದಾರೆ.

1815 ರು. ಬೆಲೆ ನಿಗದಿ:

ರೈತರು ಬೆಳೆದ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ ಕನಿಷ್ಟಬೆಂಬಲ ಬೆಲೆಯಾಗಿ ಕೇಂದ್ರ ಸರ್ಕಾರ 1815 ರು.ಗಳನ್ನು ನಿಗದಿ ಮಾಡಿ ಆದೇಶ ಹೊರಡಿಸಿದೆ. ಈ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೆ ಕೋರಿ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ. ಈ ವರ್ಷ ಜಿಲ್ಲೆಯಲ್ಲಿ 52,890 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಭತ್ತ ಬೆಳೆದಿದ್ದಾರೆ. ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಮಳವಳ್ಳಿ, ಮದ್ದೂರಿನ ಕೆಲ ಭಾಗಗಳಲ್ಲಿ ಅತಿ ಹೆಚ್ಚಿನ ಭತ್ತ ಬೆಳೆದಿದ್ದಾರೆ. ಈ ವರ್ಷದ ಇಳುವರಿಯಂತೆ 39ಲಕ್ಷ ಮೆಟ್ರಿಕ್‌ ಟನ್‌ ಭತ್ತ ಉತ್ಪಾದನೆಯಾಗುವ ನಿರೀಕ್ಷೆಯನ್ನು ಕೃಷಿ ಇಲಾಖೆ ಹೊಂದಿದೆ.

 

ಈ ನಡುವೆ ಕೇಂದ್ರ ಆಹಾರ ನಿಗಮದ ಮೂಲಕ ರೈತರ ಭತ್ತವನ್ನು ಖರೀದಿ ಕೇಂದ್ರಗಳನ್ನು ಆಹಾರ ಇಲಾಖೆ ತೆರೆಯಲಿದೆ. ರೈತರಿಂದ ಖರೀದಿ ಮಾಡಿದ ಭತ್ತವನ್ನು ನೇರವಾಗಿ ಈಗಾಗಲೇ ಗುರುತಿಸಲಾದ ಅಕ್ಕಿ ಗಿರಣಿಗಳಿಗೆ ಸರಬರಾಜು ಮಾಡಲಾಗುವುದು. 1 ಕ್ವಿಂಟಾಲ್‌ ಭತ್ತಕ್ಕೆ ಕನಿಷ್ಠ 67 ಕೆ.ಜಿ ಅಕ್ಕಿಯನ್ನು ಗಿರಣಿ ಮಾಲೀಕರು ನೀಡುವ ಬಗ್ಗೆ ಸರ್ಕಾರ ಸೂಚಿಸಿದೆ. ಈ ಕುರಿತಂತೆ ಇನ್ನೂ ಮಾತುಕತೆಗಳು ಮುಂದುವರೆದಿವೆ. ಗಿರಣಿ ಮಾಲೀಕರು ಒಪ್ಪಿದ ತಕ್ಷಣ ಖರೀದಿ ಕೇಂದ್ರ ಆರಂಭಿಸಲು ಅಧಿಕಾರಿಗಳು ಸರ್ವರೀತಿಯಲ್ಲಿ ಸನ್ನದ್ಧರಾಗಿದ್ದಾರೆ.

ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಬೆಳೆದಿರುವ 39 ಲಕ್ಷ ಮೆಟ್ರಿಕ್‌ ಟನ್‌ ಭತ್ತವನ್ನು ಖರೀದಿಸಲು ಅನುದಾನ ನೀಡಬೇಕು. ರೈತರಿಂದ ಖರೀದಿಸಲಾದ ಭತ್ತದ ಮೂಲಕ ಅಕ್ಕಿಯನ್ನು ಪಡಿತರ ವಿತರಣೆಗೆ ಬಳಕೆ ಮಾಡಲು ಕೇಂದ್ರ ಸರ್ಕಾರ ಈಗಾಗಲೇ ಮಾರ್ಗದರ್ಶಿ ಸೂತ್ರಗಳನ್ನು ಸೂಚಿಸಿದೆ. ಅದರಂತೆ ರಾಜ್ಯ ಸರ್ಕಾರ ಈಗ ಅನುದಾನ ನೀಡಿದ ಕೂಡಲೇ ಖರೀದಿ ಕೇಂದ್ರ ಆರಂಭಿಸಲು ಅಧಿಕಾರಿಗಳು ಸನ್ನದ್ಧರಾಗಿದ್ದಾರೆ.

ದಲ್ಲಾಳಿಗಳ ಹಾವಳಿ ತಪ್ಪಿಸಿ:

ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಈ ತಕ್ಷಣವೇ ಆರಂಭಿಸದೇ ಹೋದರೆ ದಲ್ಲಾಳಿಗಳು ಪ್ರತಿ ಕ್ವಿಂಟಾಲ್‌ಗೆ 1100 ರಿಂದ 1200 ರು. ಕೊಟ್ಟು ಭತ್ತ ಖರೀದಿಸುತ್ತಾರೆ. ದಲ್ಲಾಳಿಗಳು ನೇರವಾಗಿ ರೈತರು, ಕಟಾವು ಮಾಡುವ ಹಾಗೂ ಒಕ್ಕಣೆ ಮಾಡುವ ಸ್ಥಳಕ್ಕೆ ಹೋಗಿ ಖರೀದಿ ಮಾಡುವುದರಿಂದ ಸ್ಥಳದಲ್ಲೇ ರೈತರಿಗೆ ಹಣವು ದೊರಕುತ್ತದೆ. ಇದರಿಂದ ರೈತರು ಸುಲಭವಾಗಿ ದಲ್ಲಾಳಿಗಳಿಗೆ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಆದರೆ, ಈ ರೀತಿ ರೈತರಿಂದ ಖರೀದಿಸಲಾದ ಭತ್ತವನ್ನು 2, 3 ತಿಂಗಳ ಕಾಲ ದಾಸ್ತಾನು ಮಾಡಿಕೊಂಡು ಅದೇ ರೈತರ ಆರ್‌ ಟಿಸಿ ಮೂಲಕ ಭತ್ತ ಖರೀದಿ ಕೇಂದ್ರಗಳಿಗೆ ದಲ್ಲಾಳಿಗಳು ಸರಬರಾಜು ಮಾಡಿ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ 500 ರಿಂದ 600 ರು. ಲಾಭ ಮಾಡಿಕೊಳ್ಳುತ್ತಾರೆ. ಇಂತಹ ಪದ್ಧತಿ ಕಳೆದ ಹಲವಾರು ವರ್ಷಗಳಿಂದ ಮುಂದುವರೆಸಿಕೊಂಡು ಬಂದಿರುವುದರಿಂದ ಜಿಲ್ಲಾಡಳಿತ ಈ ಬಗ್ಗೆ ಎಚ್ಚರಿಕೆ ಹೆಜ್ಜೆ ಇಡುವ ಅಗತ್ಯವಿದೆ. ಅಲ್ಲದೇ ರೈತರ ಹಿತ ರಕ್ಷಣೆ ಕಾಪಾಡುವ ಜವಾಬ್ದಾರಿಯೂ ಇದೆ.

 

CAB: ಕೇಂದ್ರ ಸಚಿವರ ಮನೆ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು!

ಜಿಲ್ಲೆಯಲ್ಲಿ ಈ ಬಾರಿ ಭಾರಿ ಪ್ರಮಾಣದಲ್ಲಿ ರೈತರು ಭತ್ತವನ್ನು ಬೆಳೆದಿದ್ದಾರೆ. ಖರೀದಿ ಕೇಂದ್ರ ಆರಂಭಿಸಲು ಒತ್ತಾಯ ಹೆಚ್ಚಾಗಿದೆ. ರೈತರ ಬೇಡಿಕೆಯಂತೆ ನಾವು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಸೂಚನೆ ಕೊಟ್ಟಿದ್ದೇವೆ. ಖರೀದಿ ಕೇಂದ್ರಗಳ ಆರಂಭಕ್ಕೂ ಹಾಗೂ ಬೆಂಬಲ ಬೆಲೆ ನಿಗದಿ, ಅನುದಾನಕ್ಕೆ ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆಹಾರ ಮತ್ತು ಕೃಷಿ ಅಧಿಕಾರಿಗಳ ಸಹಯೋಗದಲ್ಲಿ ರೈತರ ನೆರವಿಗೆ ಧಾವಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದ್ದಾರೆ.

ಈ ಬಾರಿ ಮಳೆ, ಬೆಳೆ ಎರಡು ಸಮೃದ್ಧವಾಗಿದೆ. ಜಿಲ್ಲೆಯಲ್ಲಿ ರೈತರು 52,890 ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 39 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಬೆಳೆದಿದ್ದಾರೆ. ಕಟಾವಿಗೆ ಬಂದಿದೆ. ಕೆಲವರು ಈಗಾಗಲೇ ಒಕ್ಕಣೆ ಮಾಡುತ್ತಿದ್ದಾರೆ. ಈ ಹಂತದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸುವ ಕುರಿತಂತೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಕೂಡ ಈ ಸಂಬಂಧ ಅಗತ್ಯ ಕ್ರಮ ಕೈಗೊಂಡಿಲ್ಲ ಮಂಡ್ಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್‌ ಹೆಳಿದ್ದಾರೆ.

-ಕೆ.ಎನ್‌ .ರವಿ

Follow Us:
Download App:
  • android
  • ios