Asianet Suvarna News Asianet Suvarna News

ಮೂರೂ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ : ನಾರಾಯಣ ಗೌಡ ಕ್ಷೇತ್ರದಲ್ಲಿ ಮುದುಡಿದ ಕಮಲ

ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಮೆರೆದಿದೆ. ಆದರೆ ಬಿಜೆಪಿ ಸಚಿವರು ಇರುವ ಕ್ಷೇತ್ರದಲ್ಲಿ ಪಕ್ಷವು ಮುದುಡಿದೆ

Mandya TAPCMS Election JDS won More Seats snr
Author
Bengaluru, First Published Oct 2, 2020, 2:09 PM IST

 ವರದಿ : ಮಂಡ್ಯ ಮಂಜುನಾಥ

 ಮಂಡ್ಯ (ಅ.02) ಜೆಡಿಎಸ್‌ ಭದ್ರ ಕೋಟೆ ಎನಿಸಿರುವ ಮಂಡ್ಯ ಜಿಲ್ಲೆಯ 6 ತಾಲೂಕು ರೈತರ ವ್ಯವಸಾಯೋತ್ಪನ್ನ ಮಾರುಕಟ್ಟೆಸಹಕಾರ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಷ್ಟೇ ಜೆಡಿಎಸ್‌ ಪ್ರಾಬಲ್ಯ ಮೆರೆಯಲು ಸಾಧ್ಯವಾಗಿದ್ದು, ಕಾಂಗ್ರೆಸ್‌ ಎರಡು ಕ್ಷೇತ್ರಗಳಲ್ಲಿ ತನ್ನ ಶಕ್ತಿಯನ್ನು ಉಳಿಸಿಕೊಂಡಿದ್ದರೆ, ಜೆಡಿಎಸ್‌-ಕಾಂಗ್ರೆಸ್‌ ಜಿದ್ದಾಜಿದ್ದಿನ ಪೈಪೋಟಿಯೊಳಗೆ ಒಂದು ಕ್ಷೇತ್ರದಲ್ಲೂ ಅಧಿಕಾರ ಹಿಡಿಯಲಾಗದೆ ಕಮಲ ಮುದುಡಿಕೊಂಡಿದೆ.

ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್‌.ಪೇಟೆ ಕ್ಷೇತ್ರಗಳಲ್ಲಿ ಜೆಡಿಎಸ್‌ ಜಯಭೇರಿ ಸಾಧಿಸುವುದರೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಂತೆಯೇ ಕಾಂಗ್ರೆಸ್‌ ಮಳವಳ್ಳಿ ಹಾಗೂ ನಾಗಮಂಗಲ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿದೆ. ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಸಮಬಲ ಸಾಧಿಸಿದ್ದು, ಯಾರಿಗೂ ಸ್ಪಷ್ಟಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ಸೃಷ್ಟಿಯಾಗಿದೆ.

ಶಿರಾ ಚುನಾವಣೆ : ಈ ಮುಖಂಡಗೆ ಬಿಜೆಪಿ ಟಿಕೆಟ್‌ ? ..

ಕೆ.ಆರ್‌.ಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಕೆ.ಸಿ.ನಾರಾಯಣಗೌಡರ ಮೂಲಕ ಮೊಟ್ಟಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿ ಹೊಸ ದಾಖಲೆ ನಿರ್ಮಿಸಿತ್ತು. ಕೆ.ಆರ್‌.ಪೇಟೆ ಬಿಜೆಪಿ ಭದ್ರಕೋಟೆ ಎಂಬಂತೆ ಮೇಲ್ನೋಟಕ್ಕೆ ಕಂಡುಬಂದಿತ್ತು. ಆದರೆ, ಇದೀಗ ನಡೆದ ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಕಮಲ ಪಡೆಯ ಬೆಂಬಲಿಗರಲ್ಲಿ ಒಬ್ಬರೂ ಗೆಲುವು ಸಾಧಿಸದಿರುವುದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಖಭಂಗ ಉಂಟುಮಾಡಿದೆ. ಅಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದು ದಳ ಇನ್ನೂ ಗಟ್ಟಿಯಾಗಿರುವುದನ್ನು ಸಾಬೀತುಪಡಿಸಿದೆ.

1. ಸಿ.ಎಸ್‌.ಪುಟ್ಟರಾಜು ಪ್ರಾಬಲ್ಯ:

ಪಾಂಡವಪುರ ಜೆಡಿಎಸ್‌ನ ಪ್ರಭಾವಿ ನಾಯಕ ಸಿ.ಎಸ್‌.ಪುಟ್ಟರಾಜು ಅವರ ಕ್ಷೇತ್ರ. ಇಲ್ಲಿನ ಟಿಎಪಿಸಿಎಂಎಸ್‌ನ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ 11, ಕಾಂಗ್ರೆಸ್‌ 2 ಹಾಗೂ ರೈತಸಂಘ 1 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಎರಡು ಸ್ಥಾನಗಳಿಗೆ ಜೆಡಿಎಸ್‌ನ ಇಬ್ಬರು ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರು. 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ 9 ಸ್ಥಾನಗಳಲ್ಲಿ ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟಿಎಪಿಸಿಎಂಎಸ್‌ನಲ್ಲಿ ಜೆಡಿಎಸ್‌ ಅಧಿಪತ್ಯ ಮುಂದುವರೆದಿದ್ದು, ಸತತವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಲೇ ಬಂದಿದೆ. ಶಾಸಕ ಸಿ.ಎಸ್‌.ಪುಟ್ಟರಾಜು ಕ್ಷೇತ್ರದೊಳಗೆ ಸಾಧಿಸಿರುವ ಪ್ರಬಲ ಹಿಡಿತಕ್ಕೆ ಸಾಕ್ಷಿಯಾಗಿದೆ.

2. ರವೀಂದ್ರ ಶ್ರೀಕಂಠಯ್ಯ ಯಶಸ್ಸು:

ಶ್ರೀರಂಗಪಟ್ಟಣ ಜೆಡಿಎಸ್‌ ಶಾಸಕರಾಗಿದ್ದ ರಮೇಶ್‌ ಬಂಡಿಸಿದ್ದೇಗೌಡ ಅವರು ಮೂರು ಸಾಲಿನಿಂದಲೂ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾ ಟಿಎಪಿಸಿಎಂಎಸ್‌ ಗದ್ದುಗೆ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಸೇರಿದ ರಮೇಶ್‌ ಬಂಡಿಸಿದ್ದೇಗೌಡರು ಟಿಎಪಿಸಿಎಂಎಸ್‌ನಲ್ಲಿ ಮತ್ತೆ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವರೆಂಬ ನಿರೀಕ್ಷೆ ಇತ್ತು. ಆದರೆ, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದರೊಂದಿಗೆ ಅಧಿಕಾರ ಜೆಡಿಎಸ್‌ನೊಳಗೆ ಉಳಿದುಕೊಂಡಿದ್ದರೆ ಅದರ ಯಶಸ್ಸು ಶಾಸಕ ರವೀಂದ್ರ ಶ್ರೀಕಂಠಯ್ಯ ಪಾಲಾಗಿದೆ.

ಬಿಜೆಪಿ ಅಭ್ಯರ್ಥಿಯಿಂದ ನಕಲಿ ಮತದಾರರ ನೋಂದಣಿ ಆರೋಪ .

ತಾಲೂಕು ಟಿಎಪಿಸಿಎಂಎಸ್‌ನ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು 8 ಸ್ಥಾನಗಳಲ್ಲಿ ವಿಜಯಶಾಲಿಯಾಗಿದ್ದರೆ, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು 4 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿದ್ದಾರೆ. ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡರು ಕಾಂಗ್ರೆಸ್‌ ಸೇರಿ ಪಕ್ಷದ ಶಕ್ತಿ ಹೆಚ್ಚಿಸುವರೆಂಬ ನಂಬಿಕೆ ಇತ್ತಾದರೂ ಅದು ಈಗ ಹುಸಿಯಾಗಿದೆ.

3. ಪಿ.ಎಂ.ನರೇಂದ್ರಸ್ವಾಮಿ ಅಧಿಪತ್ಯ

ಮಳವಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅಧಿಪತ್ಯ ಮೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸತತ ಎರಡನೇ ಬಾರಿಗೆ ಕಾಂಗ್ರೆಸ್‌ ಅಧಿಕಾರ ಹಿಡಿಯುವಂತೆ ಮಾಡುವುದರೊಂದಿಗೆ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.

ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧಿಸಿದ್ದ 10 ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಸಾಧಿಸಿದ್ದಾರೆ. ಈ ನಡುವೆ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಒಬ್ಬರಿಗೆ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್‌ ಬೆಂಬಲ ಕೊಟ್ಟು ಗೆಲ್ಲಿಸಿಕೊಳ್ಳುವುದರೊಂದಿಗೆ ಕಾಂಗ್ರೆಸ್‌ ತನ್ನ ಬಲವನ್ನು 11ಕ್ಕೆ ಹೆಚ್ಚಿಸಿಕೊಂಡಿದೆ. ಕ್ಷೇತ್ರದಲ್ಲಿ ಅಧಿಕಾರ ಹಿಡಿದಿರುವ ಜೆಡಿಎಸ್‌ ಶಾಸಕ ಡಾ.ಕೆ.ಅನ್ನದಾನಿ ತಮ್ಮ ಪಕ್ಷ ಬೆಂಬಲಿತ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಮಾತ್ರ ಸಫಲರಾಗಿದ್ದಾರೆ.

4.ಚಲುವರಾಯಸ್ವಾಮಿ ಆರ್ಭಟ:

ನಾಗಮಂಗಲದಲ್ಲಿ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಆರ್ಭಟಕ್ಕೆ ದಳ ಧೂಳೀಪಟವಾಗಿದೆ. ಟಿಎಪಿಸಿಎಂಎಸ್‌ನ 12 ಸ್ಥಾನಗಳಲ್ಲೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳೇ ಜಯ ಸಾಧಿಸಿದ್ದಾರೆ. ಚುನಾವಣೆಗೆ ಮೊದಲು ಕಾಂಗ್ರೆಸ್‌ ಬೆಂಬಲಿತ ನಾಲ್ವರು ಅವಿರೋಧ ಆಯ್ಕೆಯಾಗಿದ್ದರು. ನಂತರ 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನವರೇ ಮೇಲುಗೈ ಸಾಧಿಸುವುದರೊಂದಿಗೆ ಜೆಡಿಎಸ್‌ ಪಕ್ಷವನ್ನು ಧೂಳೀಪಟ ಮಾಡಿ ಟಿಎಪಿಸಿಎಂಎಸ್‌ನಲ್ಲಿ ಅಧಿಪತ್ಯ ಸ್ಥಾಪಿಸಿದೆ.

ಜೆಡಿಎಸ್‌ ಪಕ್ಷದೊಳಗಿನ ಒಗ್ಗಟ್ಟಿನ ಕೊರತೆಯೇ ಚುನಾವಣಾ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಶಾಸಕ ಸುರೇಶ್‌ಗೌಡ ಅವರು ವಿಧಾನಪರಿಷತ್‌ ಸದಸ್ಯ ಎನ್‌.ಅಪ್ಪಾಜಿಗೌಡ ಹಾಗೂ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯಲ್ಲಿ ತೊಡಗಿಸಿಕೊಳ್ಳಲಿಲ್ಲ. ಏಕಾಂಗಿಯಾಗಿ ಚುನಾವಣೆ ಎದುರಿಸುವ ಪ್ರಯತ್ನ ನಡೆಸಿದ್ದರಿಂದ ಉಳಿದ ನಾಯಕರು ಅವರ ಪರವಾಗಿ ನಿಲ್ಲಲಿಲ್ಲ. ಇದರ ಪರಿಣಾಮ ಕಾಂಗ್ರೆಸ್‌ ಗೆಲುವಿನ ಹಾದಿ ಸುಗಮವಾಯಿತು. ಜೆಡಿಎಸ್‌ ಪಕ್ಷದ ಇಬ್ಬರು ನಾಯಕರು ಅಧಿಕಾರದಲ್ಲಿರುವುದರಿಂದ ಶಿವರಾಮೇಗೌಡರ ಪ್ರಭಾವ ಕ್ಷೇತ್ರದ ಕೆಲವು ಭಾಗದಲ್ಲಿರುವುದರಿಂದ ಗೆಲುವಿನ ನಿರೀಕ್ಷೆಯೊಂದಿಗೆ ಹಲವರು ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಆದರೆ, ನಾಯಕರ ನಡುವಿನ ಭಿನ್ನಮತದ ಕಾರಣದಿಂದ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದವರು ಸೋಲನುಭವಿಸಿದರು.

5. ಕೆ.ಸಿ.ನಾರಾಯಣಗೌಡ ಕ್ಷೇತ್ರದಲ್ಲಿ ಮುದುಡಿದ ಕಮಲ

ಕೆ.ಆರ್‌.ಪೇಟೆ ವಿಧಾಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಮಂಡ್ಯ ರಾಜಕೀಯ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದ್ದ ಕೆ.ಸಿ.ನಾರಾಯಣಗೌಡರು ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಕಮಲ ಪಾಳಯದ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಾಗದೆ ಮುಖಭಂಗಕ್ಕೊಳಗಾಗಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದೊಂದಿಗೆ ಪೌರಾಡಳಿತ, ತೋಟಗಾರಿಕೆ, ರೇಷ್ಮೆ ಖಾತೆಯನ್ನು ನಿರ್ವಹಿಸುತ್ತಿರುವ ಕೆ.ಸಿ.ನಾರಾಯಣಗೌಡರು ಟಿಎಪಿಸಿಎಂಎಸ್‌ನಲ್ಲಿ ಕಮಲವನ್ನು ಅರಳಿಸಿ ಬಿಜೆಪಿ ಶಕ್ತಿಯನ್ನು ಹೆಚ್ಚಿಸುವರೆಂಬ ನಿರೀಕ್ಷೆ ಇತ್ತು. ಆದರೆ, ಚುನಾವಣಾ ಫಲಿತಾಂಶ ಹೊರಬಿದ್ದಾಗ ಅದೆಲ್ಲವೂ ಹುಸಿಯಾಗಿತ್ತು. 14 ಸ್ಥಾನಗಳಲ್ಲೂ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ದಿಗ್ವಿಜಯ ಸಾಧಿಸಿದ್ದರು.

6. ಮದ್ದೂರಿನಲ್ಲಿ ತ್ರಿವಳಿ ಪಕ್ಷಗಳು ಸಮಬಲ:

ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸ್ಪಷ್ಟಬಹುಮತದೊಂದಿಗೆ ಅಧಿಕಾರ ಹಿಡಿದಿದ್ದರೆ ಮದ್ದೂರು ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಸಮಬಲ ಸಾಧಿಸಿ ಅತಂತ್ರ ಸ್ಥಿತಿ ಸೃಷ್ಟಿಸಿದೆ.

12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌-4, ಜೆಡಿಎಸ್‌-4 ಹಾಗೂ ಬಿಜೆಪಿ-4 ಸ್ಥಾನಗಳನ್ನು ಹಂಚಿಕೊಂಡಿವೆ. ಯಾರು ಅಧಿಕಾರ ಹಿಡಿಯಲಿದ್ದಾರೆ ಎನ್ನುವುದು ಪ್ರಶ್ನೆಯಾಗಿದೆ. ಕ್ಷೇತ್ರದ ಶಾಸಕರಾಗಿರುವ ಡಿ.ಸಿ.ತಮ್ಮಣ್ಣನವರಿಗೆ ಚುನಾವಣಾ ಫಲಿತಾಂಶ ಇರಿಸು-ಮುರಿಸು ಉಂಟುಮಾಡಿದೆ.

ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ 3100ಕ್ಕೂ ಹೆಚ್ಚು ಮತಗಳಿದ್ದವಾದರೂ ಆರಂಭದಲ್ಲಿ ಕೇವಲ 423 ಷೇರುದಾರರು ಮಾತ್ರ ಮತಚಲಾವಣೆಯ ಹಕ್ಕು ಪಡೆದುಕೊಂಡಿದ್ದರು. ಸರ್ವ ಸದಸ್ಯರ ಸಭೆಗೆ ಗೈರು ಹಾಜರಾದ ಹಾಗೂ ಸಹಕಾರ ಸಂಘಗಳಲ್ಲಿ ಕನಿಷ್ಠ ವ್ಯವಹಾರ ನಡೆಸದ ಸುಮಾರು 2500ಕ್ಕೂ ಹೆಚ್ಚು ಷೇರುದಾರರ ಮತದಾನದ ಹಕ್ಕನ್ನು ಮೊಟಕುಗೊಳಿಸಲಾಗಿತ್ತು. ಈ ನಡುವೆ ಕಾಂಗ್ರೆಸ್‌ ಪಕ್ಷದವರು 400 ಜನರ ಮತಹಕ್ಕನ್ನು ಹೈಕೋರ್ಟ್‌ನಿಂದ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಉಳಿದ 2000ಕ್ಕೂ ಹೆಚ್ಚು ಷೇರುದಾರರು ಮತದಾನದಿಂದ ಹೊರಗುಳಿದ ಪರಿಣಾಮ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ನಿರೀಕ್ಷಿತ ಸ್ಥಾನಗಳಲ್ಲಿ ಗೆಲುವು ಸಾಧಿಸಲಾಗಲಿಲ್ಲವೆಂದು ಹೇಳಲಾಗುತ್ತಿದೆ.

Follow Us:
Download App:
  • android
  • ios