Asianet Suvarna News Asianet Suvarna News

ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ಮಂಡ್ಯದಲ್ಲಿ ಸ್ಕ್ಯಾನಿಂಗ್‌ ಸೆಂಟರ್‌ಗೆ ಬೀಗ

ನಿಯಮ ಉಲ್ಲಂಘಿಸಿ ಸ್ಕ್ಯಾನಿಂಗ್‌ ಸೆಂಟರ್‌ ನಡೆಸುತ್ತಿದ್ದ ಕೆ.ಆರ್‌.ಪೇಟೆಯ ನಾವಿ ಸ್ಕ್ಯಾನಿಂಗ್‌ ಸೆಂಟರ್‌ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಬೀಗ ಜಡಿದಿರುವ ಸಂಗತಿ ಬೆಳಕಿಗೆ ಬಂದಿದೆ.

Lock of Scanning Center in Mandya grg
Author
First Published Dec 7, 2023, 1:32 PM IST

ಮಂಡ್ಯ(ಡಿ.07): ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬಯಲಾದ ಬೆನ್ನಹಿಂದೆಯೇ ಚುರುಕುಗೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳವಾರದಿಂದ ಕಾರ್ಯಾಚರಣೆ ಆರಂಭಿಸಿದ್ದು, ಕೆ.ಆರ್‌.ಪೇಟೆಯಲ್ಲಿ ನಿಯಮ ಉಲ್ಲಂಘಿಸಿದ ಸ್ಕ್ಯಾನಿಂಗ್‌ ಸೆಂಟರ್‌ಗೆ ಬೀಗ ಹಾಕಿಸಿದ್ದು, 13 ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ನೇತೃತ್ವದಲ್ಲಿ ತಜ್ಞ ವೈದ್ಯೆ ಡಾ. ದೇವಿಕಾ ನೇತೃತ್ವದಲ್ಲಿ ಪರಿಶೀಲನಾ ಕಾರ್ಯ ಕೈಗೊಂಡಿದ್ದಾರೆ. ಪರಿಶೀಲನೆ ವೇಳೆ ಆಯಾ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ನಿಗದಿಪಡಿಸಿರುವ ರೆಡಿಯಾಲಜಿಸ್ಟ್‌ಗಳೇ ಸ್ಕ್ಯಾನಿಂಗ್‌ ಮಾಡುತ್ತಿದ್ದಾರೆಯೇ. ರಿಜಿಸ್ಟರ್‌ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿದೆಯೇ, ಎಫ್‌-ಫಾರಂಗಳ ನಿರ್ವಹಣೆ ಹೇಗಿದೆ. ಸ್ಕ್ಯಾನಿಂಗ್‌ ಕೊಠಡಿಯೊಳಗೆ ವ್ಯವಸ್ಥೆ ಹೇಗಿದೆ, ಸೆಂಟರ್‌ಗಳ ಪರವಾನಗಿ ನವೀಕರಣವಾಗುತ್ತಿದೆಯೇ ಎಂಬೆಲ್ಲಾ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಜೊತೆಗೆ ಸ್ಕ್ಯಾನಿಂಗ್‌ ಇಮೇಜ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.

ಹೊರಗೆ ಆಲೆಮನೆ..ಒಳಗೆ ಭ್ರೂಣ ಪತ್ತೆ ದಂಧೆ: ಸಕ್ಕರೆ,ಬೆಲ್ಲ ತಯಾರಿಸೋ ಸ್ಥಳದಲ್ಲಿ ಪತ್ತೆಯಾಗ್ತಿತ್ತು ಭ್ರೂಣ..!

ಮಂಗಳವಾರ ಮತ್ತು ಬುಧವಾರ ಜಿಲ್ಲೆಯಲ್ಲಿ 13 ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಸ್ಕ್ಯಾನಿಂಗ್‌ ಸೆಂಟರ್‌ಗಳು ಕಟ್ಟುನಿಟ್ಟಾಗಿ ಕಾನೂನನ್ನು ಪಾಲಿಸಬೇಕು. ಇದರಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದರೂ ಬೀಗ ಹಾಕಲಾಗುವುದು ಎಂದು ಸ್ಕ್ಯಾನಿಂಗ್‌ ಸೆಂಟರ್‌ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇದೇ ಸಮಯದಲ್ಲಿ ಊರ ಹೊರವಲಯದಲ್ಲಿರುವ ಆಲೆಮನೆ, ಒಂಟಿ ಮನೆಗಳು, ಗರ್ಭಿಣಿಯರ ಮೇಲೂ ನಿಗಾ ವಹಿಸುವ ಕಾರ್ಯವನ್ನೂ ಪಂಚಾಯಿತಿ ಮಟ್ಟದ ಸಮಿತಿಗಳು ನಿರ್ವಹಿಸುತ್ತಿವೆ. ಗರ್ಭಿಣಿಯರ ನೋಂದಣಿ ಸಮರ್ಪಕವಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದನ್ನೂ ಪರಿಶೀಲಿಸಲಾಗುತ್ತಿದ್ದು, ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಫುಲ್‌ ಅಲರ್ಟ್‌ ಆಗಿರೋದಂತೂ ಸತ್ಯ.

ಕೆ.ಆರ್‌.ಪೇಟೆಯ ನಾವಿ ಸ್ಕ್ಯಾನಿಂಗ್‌ ಸೆಂಟರ್‌ಗೆ ಬೀಗ

ನಿಯಮ ಉಲ್ಲಂಘಿಸಿ ಸ್ಕ್ಯಾನಿಂಗ್‌ ಸೆಂಟರ್‌ ನಡೆಸುತ್ತಿದ್ದ ಕೆ.ಆರ್‌.ಪೇಟೆಯ ನಾವಿ ಸ್ಕ್ಯಾನಿಂಗ್‌ ಸೆಂಟರ್‌ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಬೀಗ ಜಡಿದಿರುವ ಸಂಗತಿ ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಜಿಲ್ಲೆಯ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿತ್ತು. ಅದರಂತೆ ಕೆ.ಆರ್‌.ಪೇಟೆಯ ನಾವಿ ಸ್ಕ್ಯಾನಿಂಗ್‌ ಸೆಂಟರ್‌ಗೂ ಆರೋಗ್ಯಾಧಿಕಾರಿಗಳ ತಂಡ ತೆರಳಿತ್ತು. ಕಳೆದ ನಾಲ್ಕೈದು ತಿಂಗಳ ಹಿಂದೆ ಆರಂಭಗೊಂಡಿದ್ದ ಸ್ಕ್ಯಾನಿಂಗ್‌ ಸೆಂಟರ್‌ ಪರವಾನಗಿಯನ್ನು ಹೊಂದಿತ್ತು. ಆದರೆ, ಸ್ಕ್ಯಾನಿಂಗ್ ಮಾಡುವುದಕ್ಕೆ ನಿಗದಿಪಡಿಸಿದ್ದ ರೆಡಿಯಾಲಜಿಸ್ಟ್‌ ಬದಲಿಗೆ ಬೇರೆಯವರು ಸ್ಕ್ಯಾನಿಂಗ್‌ ಮಾಡುತ್ತಿದ್ದರು. ಸ್ಕ್ಯಾನಿಂಗ್‌ ಮಾಡುವ ಕೊಠಡಿಯಲ್ಲಿ ಯಾವುದೇ ಫೋಟೋ ಇಡುವಂತಿಲ್ಲ. ಈ ಸೆಂಟರ್‌ನಲ್ಲಿ ದೇವರ ಫೋಟೋ ಇಡಲಾಗಿತ್ತು. ಎಫ್-ಫಾರಂಗಳನ್ನು ಇಟ್ಟುಕೊಂಡಿದ್ದರೂ ನೋಂದಣಿ ಪುಸ್ತಕದ ನಿರ್ವಹಣೆ ಸಮರ್ಪಕವಾಗಿರಲಿಲ್ಲ.

ಈ ರೀತಿ ಹಲವು ನಿಯಮಗಳನ್ನು ಉಲ್ಲಂಘಿಸಿ ಸ್ಕ್ಯಾನಿಂಗ್‌ ಸೆಂಟರ್‌ ನಡೆಸುತ್ತಿದ್ದರಿಂದ ಸೆಂಟರ್‌ ಬಾಗಿಲು ಮುಚ್ಚಿಸಿ ಬೀಗ ಹಾಕಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ ಕನ್ನಡಪ್ರಭಕ್ಕೆ ತಿಳಿಸಿದರು.

ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಆರೋಪಿ ಡಾ.ಸತೀಶ್ ಸಾವಿನಿಂದ ತನಿಖೆಗೆ ಹಿನ್ನಡೆ?

ನಾನೂ ಸೇರಿದಂತೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ತಜ್ಞ ವೈದ್ಯರೊಂದಿಗೆ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದೇವೆ. ನಿಯಮ ಉಲ್ಲಂಘಿಸಿ ನಡೆಸುತ್ತಿದ್ದ ಕೆ.ಆರ್‌.ಪೇಟೆಯ ಸ್ಕ್ಯಾನಿಂಗ್‌ ಸೆಂಟರ್‌ವೊಂದನ್ನು ಮುಚ್ಚಿಸಿದ್ದೇವೆ. ಇದುವರೆಗೆ ಜಿಲ್ಲೆಯಲ್ಲಿರುವ 55 ಸ್ಕ್ಯಾನಿಂಗ್‌ ಸೆಂಟರ್‌ಗಳ ಪೈಕಿ 13 ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಉಳಿದ 42 ಸ್ಕ್ಯಾನಿಂಗ್‌ ಸೆಂಟರ್‌ಗಳ ಪರಿಶೀಲನೆ ಈ ತಿಂಗಳೊಳಗೆ ಮುಗಿಸುತ್ತೇವೆ. ನಿಯಮಗಳನ್ನು ಉಲ್ಲಂಘಿಸಿದ ಸೆಂಟರ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ ಹೇಳಿದ್ದಾರೆ.  

ವರ್ಷದಲ್ಲಿ ಮೂರು ಬಾರಿ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಭ್ರೂಣ ಲಿಂಗ ಪತ್ತೆ ಪ್ರಕರಣ ಬೆಳಕಿಗೆ ಬಂದ ಬಳಿಕ ಸ್ಕ್ಯಾನಿಂಗ್ ಸೆಂಟರ್ ಪರಿಶೀಲನೆಗೆ ಜಿಲ್ಲಾಧಿಕಾರಿಗಳಿಂದ ಸೂಚನೆ ಬಂದಿದೆ. ಅದರಂತೆ ಮಂಡ್ಯ ಜಿಲ್ಲೆಯ 55 ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ನಿಯಮ ಮೀರಿ ಭ್ರೂಣ ಲಿಂಗ ಪತ್ತೆ ಮಾಡಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು. ಜನನಿಬಿಡ ಪ್ರದೇಶದಲ್ಲಿ ನಡೆಯುವ ಸ್ಕ್ಯಾನಿಂಗ್‌ಗಳ ಬಗ್ಗೆ ಸಣ್ಣ ಮಾಹಿತಿ ಸಿಕ್ಕಿದರೂ ಕಠಿಣ ಕ್ರಮ ವಹಿಸುತ್ತೇವೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ತಿಳಿಸಿದ್ದಾರೆ.  

Follow Us:
Download App:
  • android
  • ios