ದೇಶದ ಸಾಲ ಹೆಚ್ಚಿಸಿದ ಪ್ರಧಾನಿ ಮೋದಿ: ಶಾಸಕ ಹಿಟ್ನಾಳ
* ಸಾಲ ತೀರಿಸಲು ಸಿಲಿಂಡರ್ ಬೆಲೆ ಹೆಚ್ಚಳ ಹೇಳಿಕೆ ಹಾಸ್ಯಾಸ್ಪದ
* ಜನರಿಗೆ ಆಗಿರುವ ತೊಂದರೆ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು
* ಬಡವರು ಜೀವನ ನಿರ್ವಹಣೆ ಮಾಡುವುದೇ ದುಸ್ತರ
ಕೊಪ್ಪಳ(ಸೆ.03): ದೇಶದ ಸಾಲ ತೀರಿಸುವುದಕ್ಕೆ ಸಿಲಿಂಡರ್ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಾಲವನ್ನು ತೀರಿಸಿಲ್ಲ, ಮತ್ತಷ್ಟು ಹೆಚ್ಚು ಮಾಡಿದ್ದಾರೆ. ಹೀಗಾಗಿ ಸಂಸದರ ಹೇಳಿಕೆ ಹಾಸ್ಯಾಸ್ಪದ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿರುಗೇಟು ನೀಡಿದ್ದಾರೆ.
ಸಂಸದರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಅವರು, ಸಂಸದ ಸಂಗಣ್ಣ ಕರಡಿ ಅವರು ಬಡವರ ಪರವಾಗಿ ವಾದ ಮಾಡಬೇಕಾಗಿತ್ತು. ಜನರಿಗೆ ಆಗಿರುವ ತೊಂದರೆ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಅದು ಬಿಟ್ಟು, ಸಿಲಿಂಡರ್ ಬೆಲೆ ಹೆಚ್ಚಳದ ಕುರಿತು ಪ್ರಶ್ನೆ ಮಾಡಿದ್ದಕ್ಕೆ ಪತ್ರಕರ್ತರ ಮೇಲೆ ಸಿಟ್ಟಾಗುವುದು ಯಾವ ನ್ಯಾಯ ಎಂದು ಕಿಡಿಕಾರಿದ್ದಾರೆ.
ಯುಪಿಎ ಸರ್ಕಾರ ಮಾಡಿದ ಸಾಲ ತೀರಿಸಲು ಸಿಲಿಂಡರ್ ಬೆಲೆ ಹೆಚ್ಚಳ: ಬಿಜೆಪಿ ಸಂಸದ ಕರಡಿ
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ 2014ರಲ್ಲಿ ದೇಶದ ಒಟ್ಟು ಸಾಲ 53.11 ಲಕ್ಷ ಕೋಟಿ ಇತ್ತು. ಈಗ ದೇಶದ ಸಾಲ 135.87 ಲಕ್ಷ ಕೋಟಿ ಇದೆ. ಅಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ 82.76 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ವಾಸ್ತವ ಹೀಗಿರುವಾಗ ಅವರು ಸಾಲ ತೀರಿಸಿದ್ದಾದರೂ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. ಇದು, ಕೇಂದ್ರ ಸರ್ಕಾರದ ಬಜೆಟ್ ಪುಸ್ತಕದಲ್ಲಿ ಇರುವ ಅಧಿಕೃತ ಮಾಹಿತಿಯಾಗಿದೆ. ಸಂಸದ ಸಂಗಣ್ಣ ಕರಡಿ ಅವರು ನೀಡಿದ ಮಾಹಿತಿ ಯಾವುದು? ಯಾವ ಆಧಾರದ ಮೇಲೆ ದೇಶದ ಸಾಲ ತೀರಿಸಿದ್ದಾರೆ ಎಂದು ಹೇಳಿದ್ದಾರೆ
ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿನೇ ದಿನೇ ಇಳಿಯುತ್ತಿದ್ದರೂ ದೇಶದಲ್ಲಿ ಮಾತ್ರ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಮಾತ್ರ ಏರಿಕೆಯಾಗುತ್ತಲೇ ಇದೆ. ಇದರಿಂದ ಬಡವರು ಜೀವನ ನಿರ್ವಹಣೆ ಮಾಡುವುದೇ ದುಸ್ತರವಾಗಿದೆ. ಕೋವಿಡ್ ಸಂಕಷ್ಟದಲ್ಲಿ ಇರುವ ಮತದಾರರು ಜೀವನ ನಡೆಸುವುದಕ್ಕಾಗಿ ಪರದಾಡುತ್ತಿದ್ದಾರೆ. ಈಗ ಬೆಲೆ ಏರಿಕೆಯಿಂದ ಅವರ ಜೀವನ ಮತ್ತಷ್ಟುಸಂಕಷ್ಟಕ್ಕೆ ಸಿಲುಕುತ್ತಿದೆ. ದೇಶದ ಸಾಲ ಹರಿಯುವ ನೆಪದಲ್ಲಿ ಜನರನ್ನು ಸಾಲದ ಕೂಪಕ್ಕೆ ನೀಡುವುದು ಯಾವ ಆಡಳಿತ ಎಂದು ಪ್ರಶ್ನೆ ಮಾಡಿದ್ದಾರೆ.