ನನ್ನನ್ನೂ ಹತ್ಯೆ ಮಾಡಿ : ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
‘ನನ್ನನ್ನೂ ಹತ್ಯೆ ಮಾಡಿ’ ಎಂದು ಆಗ್ರಹಿಸಿ ಟಿಪ್ಪು ಸುಲ್ತಾನ್ ಹೊಡೆದು ಹಾಕಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್ ವಿರುದ್ಧ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟಿಸಿದರು.
ಮೈಸೂರು : ‘ನನ್ನನ್ನೂ ಹತ್ಯೆ ಮಾಡಿ’ ಎಂದು ಆಗ್ರಹಿಸಿ ಟಿಪ್ಪು ಸುಲ್ತಾನ್ ಹೊಡೆದು ಹಾಕಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್ ವಿರುದ್ಧ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟಿಸಿದರು.
ನಂತರ ಕಪ್ಪು ಪಟ್ಟಿಧರಿಸಿ ಕಾಂಗ್ರೆಸ್ ಕಚೇರಿಯಿಂದ ಕಾಲ್ಮಡಿಗೆಯಲ್ಲಿ ದೇವರಾಜ ಠಾಣೆಗೆ ತೆರಳಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವ ಅಶ್ವತ್ಥನಾರಾಯಣ ಅವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ವೇಳೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರ್‌ನಾಥ್ ಮಾತನಾಡಿ, ಕಾಂಗ್ರೆಸ್ ಕಟ್ಟುವ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಕೆಡುವೋ ಕೆಲಸ ಮಾಡುತ್ತಿದೆ. ಹೊಡಿ, ಬಡಿ, ಕೊಲ್ಲಿ ಎಂಬುದು ಬಿಜೆಪಿ ರಕ್ತದಲ್ಲಿದೆ. ಇದು ಅಶ್ವತ್ಥನಾರಾಯಣ್ ಒಬ್ಬರ ಹೇಳಿಕೆಯಲ್ಲ, ಇಡೀ ಬಿಜೆಪಿ ಹೇಳಿಕೆಯಾಗಿದೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರನ್ನು ಮುಟ್ಟುವುದಿರಲಿ ನಮ್ಮನ್ನು ಮುಟ್ಟಿನೋಡಿ. ಇಂತಹ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಉನ್ನತ ಶಿಕ್ಷಣ ಸಚಿವರಿಗೆ ಮೊದಲು ಪ್ರಾಥಮಿಕ ಶಿಕ್ಷಣದ ಅಗತ್ಯವಿದೆ. ಮುಖ್ಯಮಂತ್ರಿಯವರು ಈ ಕೂಡಲೇ ಇಂತಹ ವ್ಯಕ್ತಿಯನ್ನು ಸಂಪುಟದಿಂದ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾತನಾಡಿ, ಕೇಂದ್ರ ಸಚಿವ ಅಮಿತ್ ಶಾ ಬಂದು ಹೋದ ಮೇಲೆ ರಾಜ್ಯದಲ್ಲಿ ಅಶಾಂತಿ ಮೂಡಿಸಲು ಬಿಜೆಪಿಯಲ್ಲಿ ಮೂವರನ್ನು ನೇಮಿಸಲಾಗಿದೆ. ಸಿ.ಟಿ. ರವಿ, ಅಶ್ವತ್ಥನಾರಾಯಣ್ ಮತ್ತು ಕೆ.ಎಸ್. ಈಶ್ವರಪ್ಪ ಈ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಸಿದ್ದರಾಮಯ್ಯ ವಿರುದ್ಧ ಹೊಡಿ ಬಡಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಗೆ ಸಿದ್ದರಾಮಯ್ಯ ಅವರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಲೇ ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಮ್ಮನ್ನು ಕೊಲ್ಲಲಿ ಬಳಿಕ ಸಿದ್ದರಾಮಯ್ಯ ಬಳಿ ಹೋಗಲಿ. ಇಡಿ ಐಟಿ ಸಿದ್ದರಾಮಯ್ಯ ಬಳಿ ಹೋಗಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಅವರನ್ನು ಆಪರೇಷನ್ ಕಮಲ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಅಂತಿಮವಾಗಿ ಕೊಲ್ಲಿಸಲು ಈ ರೀತಿ ಮಾಡುತ್ತಿದ್ದಾರೆ. ಒಬ್ಬ ಉಪ ಮುಖ್ಯಮಂತ್ರಿ ಆಗಿದ್ದವರು ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ರೀತಿಯ ಚಟುವಟಿಕೆಗಳು ಇನ್ನು ಮುಂದೆ ಹೆಚ್ಚಾಗಲಿವೆ. ಜನರಲ್ಲಿ ಗೊಂದಲ ಮೂಡಿಸಲು ಬಿಜೆಪಿ ಯೋಜನೆ ಇದಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ಬಂದ್ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನಗರಾದ್ಯಕ್ಷ ಆರ್. ಮೂರ್ತಿ, ಜಿಲ್ಲಾದ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷರಾದ ಕೆ. ಮರಿಗೌಡ, ಬಿ.ಎಂ. ರಾಮು, ಲತಾ ಸಿದ್ದಶೆಟ್ಟಿ, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ಮುಖಂಡರಾದ ಕೆ.ಎಸ್. ಶಿವರಾಮು, ಹಿನಕಲ್ ಪ್ರಕಾಶ್, ಈಶ್ವರ್ ಚಕ್ಕಡಿ, ಕವಿತಾ, ಹಿನಕಲ್ ಉದಯ್, ವೆಂಕಟೇಶ್ ಮೊದಲಾದವರು ಇದ್ದರು.