ಕೃಷಿ ವಿಶ್ವವಿದ್ಯಾಲಯ ಧಾರವಾಡ: ರೈತರ ಜಾತ್ರೆ ಕೃಷಿ ಮೇಳಕ್ಕೆ ಅದ್ಧೂರಿ ತೆರೆ..!

ನಾಲ್ಕು ದಿನಗಳ ಕಾಲ 665 ಕ್ವಿಂಟಲ್‌ ಹಿಂಗಾರು ಬೀಜ ಮಾರಾಟ, 15ರಿಂದ 16 ಲಕ್ಷ ಜನ ಮೇಳಕ್ಕೆ ಭೇಟಿ

Grand Curtain to Four Days Agricultural Fair in Dharwad grg

ಬಸವರಾಜ ಹಿರೇಮಠ

ಧಾರವಾಡ(ಸೆ.21):  ಮಳೆಯ ಸಹಕಾರ, ರೈತರ, ಕೃಷಿ ಆಸಕ್ತರ ಅತ್ಯದ್ಭುತ ಸಹಭಾಗಿತ್ವ, ಕೃಷಿ ವಿಜ್ಞಾನಿಗಳ, ಅಧಿಕಾರಿಗಳ ಬದ್ಧತೆಯ ಕಾರ್ಯದ ಫಲವಾಗಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಸೆ. 17ರಿಂದ ಸೆ. 20ರ ವರೆಗೆ ಮೇಳ ಆಯೋಜಿಸಲು ದಿನಾಂಕ ನಿಗದಿಪಡಿಸಿದ್ದರೂ ಮಳೆಯ ಆತಂಕ ಸಾಕಷ್ಟಿತ್ತು. ಅದೃಷ್ಟವಶಾತ್‌ ಮೇಳದ ದಿನದಿಂದ ಧಾರವಾಡದಲ್ಲಿ ಒಂಚೂರು ಮಳೆಯಾಗದೇ ಅನುಕೂಲಕರ ವಾತಾವರಣದ ಹಿನ್ನೆಲೆಯಲ್ಲಿ ಲಕ್ಷಾಂತರ ರೈತರು, ಆಸಕ್ತರು ಮೇಳದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವಂತಾಯಿತು.

ಈ ಮೇಳವನ್ನು ಉದ್ಘಾಟಿಸುವ ಭಾಗ್ಯ ಈ ಬಾರಿ ಮುಖ್ಯಮಂತ್ರಿ, ಜಿಲ್ಲೆಯವರೇ ಆದ ಬಸವರಾಜ ಬೊಮ್ಮಾಯಿ ಅವರಿಗೆ ದೊರೆಯಲಿಲ್ಲ. ಬದಲಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ ಚಾಲನೆ ನೀಡಿ ರೈತರು ಅಜ್ಜ ಹಾಕಿದ ಹಳೆಯ ಸಂಪ್ರದಾಯ ಬಿಟ್ಟು ವೈಜ್ಞಾನಿಕವಾಗಿ ಚಿಂತನೆ ಮಾಡಿ. ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಮಾಡಿ ಆದಾಯ ದ್ವಿಗುಣ ಮಾಡಿಕೊಳ್ಳಿ. ಇದಕ್ಕೆ ಬೇಕಾದ ಪೂರಕ ಸಹಕಾರ ಕೇಂದ್ರ, ರಾಜ್ಯ ಸರ್ಕಾರಗಳು ಒದಗಿಸಲಿವೆ ಎಂಬ ಸಲಹೆ ನೀಡಿದರು. ಇದರೊಂದಿಗೆ ಮುಖ್ಯ ವೇದಿಕೆಯಲ್ಲಿ ನಾಲ್ಕು ದಿನಗಳ ಕಾಲ ರೈತರಿಂದ ರೈತರಿಗಾಗಿ ಕಾರ‍್ಯಕ್ರಮ, ನೈಸರ್ಗಿಕ ಕೃಷಿ ಗೋಷ್ಠಿ, ಕೃಷಿಯಲ್ಲಿ ಸಾಧನೆ ಮಾಡಿದ ಏಳು ಜಿಲ್ಲೆಗಳ ಶ್ರೇಷ್ಠ ಕೃಷಿಕರು, ಶ್ರೇಷ್ಠ ಕೃಷಿಕ ಮಹಿಳೆಯರಿಗೆ ಪ್ರಶಸ್ತಿ ನೀಡಲಾಯಿತು.

ರೈತರೇ ಆಧುನಿಕ, ವೈಜ್ಞಾನಿಕ ಕೃಷಿಯತ್ತ ಚಿತ್ತ ಹರಿಸಿ: ಸಚಿವ ಬಿ.ಸಿ.ಪಾಟೀಲ್‌

ಕನ್ನಡ ಕೃಷಿಗೋಷ್ಠಿ:

ಕೃಷಿ ಮೇಳದಲ್ಲಿ ಕೃಷಿಗೆ ಸಂಬಂಧಿಸಿದ ಗೋಷ್ಠಿಗಳೇ ಇರುತ್ತವೆ. ಆದರೆ, ಈ ಬಾರಿ ಮೇಳದ ವಿಶೇಷ ಏನೆಂದರೆ, ಕನ್ನಡ ಕೃಷಿ ಗೋಷ್ಠಿ. ಕೃಷಿ ಕುರಿತು ಅತ್ಯುದ್ಭುತ ಕನ್ನಡದ ಲೇಖಕರಿಗೆ ಡಾ. ಚೆನ್ನವೀರ ಕಣವಿ ಹೆಸರಿನಲ್ಲಿ ಪ್ರಶಸ್ತಿ ನೀಡುವ ಸಂಪ್ರದಾಯ ಶುರು ಮಾಡಲಾಯಿತು. ಈ ಬಾರಿ ಮೇಳವನ್ನು ‘ರೈತರ ಆದಾಯ ದ್ವಿಗುಣಗೊಳಿಸಲು ಕೃಷಿತಾಂತ್ರಿಕತೆಗಳು ಘೋಷವಾಕ್ಯ’ ಹೊರಡಿಸಲಾಗಿದ್ದು, ಅಂತೆಯೇ ಇಡೀ ಮೇಳದ ತುಂಬ ನಾಲ್ಕು ದಿನ ಯಂತ್ರೋಪಕರಣಗಳ ಸದ್ದು. ದೊಡ್ಡ ದೊಡ್ಡ ಯಂತ್ರಗಳಿಗಾಗಿಯೇ ಪ್ರತ್ಯೇಕ ಮಳಿಗೆ ಹಾಕಿದ್ದರೆ, ಸಣ್ಣ ರೈತರಿಗಾಗಿಯೇ ಎರಡೂ ಭಾಗವಾಗಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕೃಷಿ ಕೂಲಿ ಕಾರ್ಮಿಕರ ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ರೈತರು ಹಾಗೂ ಕೃಷಿ ಯಂತ್ರೋಪಕರಣ ಸಂಸ್ಥೆಗಳು ಆವಿಷ್ಕಾರ ಮಾಡಿದ ಯಂತ್ರಗಳು ರೈತರ ಗಮನ ಸೆಳೆದವು. ಜತೆಗೆ ಆದಾಯ ಹೆಚ್ಚಿಸಿಕೊಂಡ ರೈತರು ತಮ್ಮ ತಾಂತ್ರಿಕ ಸಲಹೆಯೊಂದಿಗೆ ಮೇಳದಲ್ಲಿ ಪಾಲ್ಗೊಂಡ ರೈತರಿಗೆ ಸಲಹೆ ನೀಡಿದರು. ಕೃಷಿ ವಿವಿ ಸೇರಿದಂತೆ ಏಳು ಜಿಲ್ಲೆಗಳ ಕೃಷಿ ವಿಜ್ಞಾನ ಕೇಂದ್ರಗಳ ಸಂಶೋಧನೆ, ತಾಂತ್ರಿಕತೆ, ಸಮಗ್ರ ಬೇಸಾಯ ಒಟ್ಟಾರೆ ಕೃಷಿ ಮಾಹಿತಿ ಮೇಳದಲ್ಲಿ ರೈತರಿಗೆ ಹಾಗೂ ಆಸಕ್ತರಿಗೆ ದೊರೆಯಿತು.

ಭರ್ಜರಿ ವ್ಯಾಪಾರ:

ಇನ್ನು, ಮೇಳ ಬರೀ ರೈತರಿಗೆ ಮಾತ್ರವಲ್ಲದೇ ನಗರದ ಜನರಿಗೂ ಅನುಕೂಲ ಆಯಿತು. ಫಲಪುಷ್ಪ ಪ್ರದರ್ಶನವಂತೂ ಮಕ್ಕಳು, ಮಹಿಳೆಯನ್ನು ಆಕರ್ಷಿಸಿತು. ನೂರೆಂಟು ಹೂಗುಚ್ಛ, ತಾರಸಿ ತೋಟ, ಲಂಬ ಕೃಷಿ, ಕೀಟಗಳ ಪ್ರಪಂಚ, ಗಡ್ಡೆ-ಗೆಣಸು ಪ್ರದರ್ಶನ ನಗರದ ಜನತೆಯನ್ನು ಸೆಳೆಯಿತು. ಇದರೊಂದಿಗೆ ಶ್ವಾನ ಪ್ರದರ್ಶನಕ್ಕೂ ಲಕ್ಷಾಂತರ ಜನ ಭೇಟಿ ನೀಡಿದರು. ಆದರೆ, ಈ ಬಾರಿ ಚರ್ಮ ರೋಗದ ಕಾರಣದಿಂದ ಜಾನುವಾರ ಪ್ರದರ್ಶನ ಇಲ್ಲದೇ ಇರುವುದು ಜಾನುವಾರ ಪ್ರಿಯರಿಗೆ ತುಸು ಬೇಸರ ತರಿಸಿತು. ಮತ್ಸ್ಯ ಮೇಳವೂ ಮೀನು ಪ್ರಿಯರಿಗೆ ನಿರಾಸೆ ಮೂಡಿಸಿದ್ದು ನಿಜ. ಒಟ್ಟಾರೆ ಮೇಳದಲ್ಲಿ 660 ಮಳಿಗೆ ಹಾಕಲಾಗಿದ್ದು ಈ ಪೈಕಿ ಕೃಷಿ, ಕೃಷಿಯೇತರ ವಸ್ತುಗಳ ಮಾರಾಟವೂ ಭರ್ಜರಿಯಾಗಿ ನಡೆಯಿತು.

ಮಕ್ಕಳಲ್ಲಿ ಗಣಿತದ ಆಸಕ್ತಿ ಮೂಡಿಸುವುದು ಅಗತ್ಯ; ಪ್ರಲ್ಹಾದ್ ಜೋಶಿ

ಕೃಷಿ ಮೇಳದ ನಾಲ್ಕು ದಿನಗಳ ಯಶಸ್ವಿ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಕುಲಪತಿ ಡಾ. ಆರ್‌. ಬಸವರಾಜಪ್ಪ, ನಿರೀಕ್ಷೆ ಮೀರಿ ಮೇಳವು ಯಶಸ್ವಿಯಾಗಿದೆ. ಮಳೆಯ ತೀವ್ರ ಆತಂಕದ ಮಧ್ಯೆ ಧೈರ್ಯ ಮಾಡಿ ಮೇಳ ಮಾಡಿದ್ದು ಕೌತುಕವೇ ಸರಿ. ಕೃಷಿಗೆ ಪೂರಕವಾಗಿ ಮೌಲ್ಯವರ್ಧನೆ, ಮಾರುಕಟ್ಟೆಕಲ್ಪಿಸುವ ಹಿನ್ನೆಲೆಯಲ್ಲಿ ರೈತರಿಗೆ ಮಾಹಿತಿ ಒದಗಿಸಲಾಗಿದೆ. ಈ ಮೂಲಕ ಘೋಷವಾಕ್ಯದಂತೆ ಆದಾಯ ದ್ವಿಗುಣಗೊಳಿಸಲು ಪ್ರಯತ್ನ ಮಾಡಲಾಗಿದೆ. ಹಿಂಗಾರು ಹಂಗಾಮಿಗೆ ರೈತರು ಬೀಜ ಸಹ ಖರೀದಿಸಿದ್ದಾರೆ. ಮೊದಲ ದಿನ ಎರಡು ಲಕ್ಷ, ಎರಡನೇ ದಿನ ಏಳು ಲಕ್ಷ, 3ನೇ ದಿನ 6.5 ಲಕ್ಷ, ನಾಲ್ಕನೇ ದಿನ 4.50 ಲಕ್ಷ ಸೇರಿದಂತೆ ಒಟ್ಟು 15-16 ಲಕ್ಷ ಜನರು ಮೇಳಕ್ಕೆ ಭೇಟಿ ನೀಡಿದ್ದು ಇತಿಹಾಸ ಎಂದು ಪ್ರತಿಕ್ರಯಿಸಿದರು.

665 ಕ್ವಿಂಟಲ್‌ ಬೀಜ ಮಾರಾಟ.

ಕೃಷಿ ಮೇಳದ ನಾಲ್ಕು ದಿನಗಳು ಸೇರಿ ಒಟ್ಟು ಬೀಜ ಘಟಕದಿಂದ 665.50 ಕ್ವಿಂಟಲ್‌ ( .54.25 ಲಕ್ಷ ಮೊತ್ತದ) ಹಿಂಗಾರಿ ಬೆಳೆಗಳ ಬೀಜಗಳನ್ನು ಮಾರಾಟ ಮಾಡಲಾಗಿದೆ. ಕೃಷಿ ತಂತ್ರಜ್ಞಾನ ಸಲಹಾ ಕೇಂದ್ರಕ್ಕೆ 2804 ರೈತರು ಭೇಟಿ ನೀಡಿ ಸಮಸ್ಯೆಗಳನ್ನು ವಿಜ್ಞಾನಿಗಳ ಜತೆಗೆ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದಾರೆ. ರೈತರು ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗು, ವಿಸ್ತರಣಾ ಕಾರ್ಯಕರ್ತರು, ಮಳಿಗೆಗಳ ಮಾಲೀಕರು, ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಸೇರಿ ಒಟ್ಟು . 15.37 ಲಕ್ಷ ಜನರು ಭಾಗವಹಿಸಿದ್ದರು ಎಂದು ವಿಸ್ತರಣಾ ಅಧಿಕಾರಿ ಡಾ. ಪಿ.ಎಸ್‌. ಹೂಗಾರ ಮಾಹಿತಿ ನೀಡಿದ್ದಾರೆ.
 

Latest Videos
Follow Us:
Download App:
  • android
  • ios