ಜಮೀನು ವಿವಾದ: ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಪಂ ಅಧ್ಯಕ್ಷನ ಬರ್ಬರ ಹತ್ಯೆ
ಜಮೀನಿನಲ್ಲಿ ಬೆಳೆದಿದ್ದ ಹುಲ್ಲು ಕೊಯ್ಯುವ ಸಲುವಾಗಿ ಆರಂಭವಾದ ಜಗಳ| ತಿಗಡಿ ಗ್ರಾಪಂ ಅಧ್ಯಕ್ಷ ಮುಕ್ತುಮ ಹುಸೇನ್ ಕೊಲೆ| ಹತ್ಯೆ ಮಾಡಿದ ಆರೋಪಿಗಳು ಪರಾರಿ| ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ನಡೆದ ಘಟನೆ|
ಬೈಲಹೊಂಗಲ(ಜ.04): ಜಮೀನಿನಲ್ಲಿ ಬೆಳೆದಿದ್ದ ಹುಲ್ಲು ಕೊಯ್ಯುವ ಸಲುವಾಗಿ ಆರಂಭವಾದ ಜಗಳ ವ್ಯಕ್ತಿಯೊಬ್ಬನ ಬರ್ಬರ ಹತ್ಯೆಯಲ್ಲಿ ಅಂತ್ಯ ಕಂಡಿರುವ ದಾರುಣ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ತಿಗಡಿ ಗ್ರಾಪಂ ಅಧ್ಯಕ್ಷ ಮುಕ್ತುಮ ಹುಸೇನ್ (ಮುನ್ನಾ) ಬಾದ್ರೂಶಿ (33) ಹತ್ಯೆಗೀಡಾದ ವ್ಯಕ್ತಿ. ಅದೇ ಗ್ರಾಮದ ಅರ್ಜುನ ಬಸವಣ್ಣೆಪ್ಪ ನೀಲಗುಂಡ (50), ಅದೃಶ್ಯ ಅರ್ಜುನ ನೀಲಗುಂಡ (27) ಎಂಬುವರ ಜಮೀನನ್ನು ಕೆಲವು ತಿಂಗಳುಗಳ ಹಿಂದೆ ಇವರು ಖರೀದಿ ಮಾಡಿದ್ದರು. ಆದರೆ ಜಮೀನು ಮಾರಾಟ ಮಾಡಿದ್ದ ನೀಲಗುಂಡ ಕುಟುಂಬದವರ ಸಹೋದರರಲ್ಲಿ ಜಮೀನು ಹಂಚಿಕೆ ವಿಷಯವಾಗಿ ವ್ಯಾಜ್ಯ ಇತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಹಿನ್ನೆಲೆಯಲ್ಲಿ ನೀಲಗುಂಡ ಸಹೋದರರಲ್ಲಿ ಮನಸ್ತಾಪ ಉಂಟಾಗಿತ್ತು. ಇದರ ನಡುವೆ ಜಮೀನು ಖರೀದಿ ಮಾಡಿದ್ದ ಗ್ರಾಪಂ ಅಧ್ಯಕ್ಷ ಬಾದ್ರೂಶಿ ಕುಟುಂಬವು ಜಮೀನನ್ನು ಪಾಲುದಾರಿಕೆ ಆಧಾರದಲ್ಲಿ ರೈತನೊಬ್ಬನಿಗೆ ಉಳುಮೆ ಮಾಡಲು ನೀಡಿದ್ದರು. ಅದರಂತೆ ಶುಕ್ರವಾರ ರೈತ ಜಮೀನಿನಲ್ಲಿ ಉಳುಮೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಹೊಲಕ್ಕೆ ಬಂದಿದ್ದಾನೆ. ಆಗ ಅದೃಶ್ಯ ಮತ್ತು ಅರ್ಜುನ ನೀಲಗುಂಡ ಅವರು ಇದೇ ಹೊಲದಲ್ಲಿ ಬೆಳೆದಿದ್ದ ಹುಲ್ಲನ್ನು ಕೊಯ್ಯುತ್ತಿದ್ದರು.
ಇದನ್ನು ಗಮನಿಸಿದ ರೈತ ಹುಲ್ಲು ಕೊಯ್ಯದಂತೆ ಇಬ್ಬರಿಗೂ ತಿಳಿಸಿದ್ದಾನೆ. ಆದರೆ, ಅದೃಶ್ಯ ಮತ್ತು ಅರ್ಜುನ ಇಬ್ಬರೂ ರೈತನೊಂದಿಗೆ ಈ ವಿಚಾರವಾಗಿ ತಕರಾರು ತೆಗೆದಿದ್ದಾರೆ. ನಂತರ ಉಳುಮೆ ಮಾಡಲು ಬಂದಿದ್ದ ರೈತ, ಈ ವಿಷಯವನ್ನು ಹುಸೇನ್ ಬಾದ್ರೂಶಿಗೆ ತಿಳಿಸಿದ್ದಾನೆ. ಈ ವಿಷಯ ತಿಳಿದ ಹುಸೇನ್ ತಕ್ಷಣ ಜಮೀನಿಗೆ ಬಂದಿದ್ದಾನೆ. ನಂತರ ಈ ಹೊಲವನ್ನು ತಾವು ಖರೀದಿಸಿದ್ದಾಗಿ ಅರ್ಜುನ ಮತ್ತು ಅದೃಶ್ಯ ನಿಗೆ ತಿಳಿಸಿದ್ದಾನೆ.
ಈ ವೇಳೆ ಜಮೀನಿನ ವ್ಯಾಪ್ತಿಯ ಬಗ್ಗೆ ಮಾಹಿತಿ ನೀಡಲು ಮುಂದಾಗುತ್ತಿದ್ದಂತೆ ವಾಗ್ವಾದ ನಡೆಸಿದ ಆರೋಪಿಗಳು, ಯಾವುದೇ ಕಾರಣಕ್ಕೂ ಹುಲ್ಲು ಕೊಯ್ಯಲು ಅವಕಾಶ ಕಲ್ಪಿಸುವುದಿಲ್ಲ ಎಂದು ತಿಳಿಸಿದ್ದಾನೆ. ಆಗ ಮಾತಿನ ಚಕಮಕಿ ನಡೆದಿದ್ದರಿಂದ ಆರೋಪಿಗಳು ಕೈಯಲ್ಲಿದ್ದ ಕುಡಗೋಲಿನಿಂದ ಮುಕ್ತುಮ ಹುಸೇನ್ ಬಾದ್ರೂಶಿಯ ಕುತ್ತಿಗೆ ಭಾಗಕ್ಕೆ ಹೊಡೆದಿದ್ದಾರೆ. ಕುಡಗೋಲಿನ ಏಟು ಬಲವಾಗಿ ಬಿದ್ದಿದರಿಂದ ಗ್ರಾಪಂ ಅಧ್ಯಕ್ಷ ಸ್ಥಳದಲ್ಲಿಯೇ ಅಸುನೀಗಿದ್ದಾನೆ ಎನ್ನಲಾಗುತ್ತಿದೆ. ನಂತರ ಕೊಲೆ ಮಾಡಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಬೈಲಹೊಂಗಲ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರುಗಿದ ಗ್ರಾಮಸ್ಥರು:
ಜಮೀನು ವಿವಾದದಲ್ಲಿ ಗ್ರಾಪಂ ಅಧ್ಯಕ್ಷ ಮುನ್ನಾ ಬಾದ್ರೂಶಿಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಸುದ್ದಿ ತಿಗಡಿ ಅಷ್ಟೇ ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು ಮರುಕ ಪಟ್ಟರು, ಚಿಕ್ಕವನಿಂದಲೇ ಬಾದ್ರೂಶಿ ಕುಟುಂಬದವರು ವ್ಯಾಪಾರ ಮಾಡುತ್ತಿರುವುದರಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿರಪರಿಚಿತರಾಗಿದ್ದನು. ಅಲ್ಲದೇ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದನು. ಈತನ ಹತ್ಯೆಯಿಂದಾಗಿ ತಿಗಡಿ ಗ್ರಾಮಸ್ಥರು ಆರೋಪಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.