ಮೈಸೂರು(ಡಿ.05): ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಈ ಬಾರಿ 2008 ರ ಸಾರ್ವತ್ರಿಕ ಚುನಾವಣೆಯಲ್ಲಿ ಆದಂತೆ ಗೆಲುವಿಗಾಗಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ನಡುವೆ ತ್ರಿಕೋನ ಹೋರಾಟ ಕಂಡುಬಂದಿದೆ.

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸರ ಮೂಲಕ ರಾಜಕೀಯಕ್ಕೆ ಬಂದು, ಸುದೀರ್ಘ ಕಾಲ ಕಾಂಗ್ರೆಸ್‌ನಲ್ಲಿದ್ದು, ನಂತರ ಜೆಡಿಎಸ್‌, ಇದೀಗ ಬಿಜೆಪಿಯಲ್ಲಿರುವ ಮಾಜಿ ಸಚಿವ ಎಚ್‌. ವಿಶ್ವನಾಥ್‌, ಸಿದ್ದರಾಮಯ್ಯ ಅವರ ಮೂಲಕ ರಾಜಕೀಯಕ್ಕೆ ಬಂದ ಮಾಜಿ ಶಾಸಕ ಎಚ್‌.ಪಿ. ಮಂಜುನಾಥ್‌ ನಡುವೆ ಗೆಲುವಿಗಾಗಿ ತೀವ್ರ ಹಣಾಹಣಿ ಇದೆ. ಆದರೆ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಮೇಲೆ ಗೆದ್ದು, ನಂತರ ರಾಜೀನಾಮೆ ನೀಡಿ, ಅನರ್ಹಗೊಂಡಿರುವ ಎಚ್‌. ವಿಶ್ವನಾಥ್‌ ಅವರಿಗೆ ಶತಾಯಗತಾಯ ಸೋಲಿನ ರುಚಿ ತೋರಿಸಬೇಕು ಎಂದು ಜೆಡಿಎಸ್‌ ಹೊಸಮುಖವಾದ ಉದ್ಯಮಿ ದೇವರಹಳ್ಳಿ ಸೋಮಶೇಖರ್‌ ಅವರನ್ನು ಕಣಕ್ಕಿಳಿಸಿ, ಹೋರಾಟಡುತ್ತಿದೆ.

ಮಾಂಸದ ಅಡುಗೆ ಸಿದ್ದಪಡಿಸುತ್ತಿದ್ದ ವ್ಯಕ್ತಿ ಅರೆಸ್ಟ್‌..!

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಬಗ್ಗೆ ಯಾವುದೇ ಗೊಂದಲ ಇರಲಿಲ್ಲ. ಮಾಜಿ ಶಾಸಕ ಎಚ್‌.ಪಿ. ಮಂಜುನಾಥ್‌ ಸಹಜ ಆಯ್ಕೆಯಾಗಿದ್ದರು. 2008 ರಲ್ಲಿ ಜಿ.ಟಿ. ದೇವೇಗೌಡ ಬಿಜೆಪಿ ಸೇರಿ ಅಭ್ಯರ್ಥಿಯಾಗಿದ್ದರು. ಜೆಡಿಎಸ್‌ನಿಂದ ಎಸ್‌. ಚಿಕ್ಕಮಾದು ಕಣದಲ್ಲಿದ್ದರು. ಇದರ ಲಾಭ ಪಡೆದ ಕಾಂಗ್ರೆಸ್‌ನ ಎಚ್‌.ಪಿ. ಮಂಜುನಾಥ್‌ ಗೆದ್ದರು.

2013 ರಲ್ಲಿ ಜಿ.ಟಿ. ದೇವೇಗೌಡ ಚಾಮುಂಡೇಶ್ವರಿಗೂ, ಚಿಕ್ಕಮಾದು ಎಚ್‌.ಡಿ. ಕೋಟೆಗೂ ವಲಸೆ ಹೋಗಿದ್ದರು. ಅಲ್ಲದೇ ಟಿಕೆಟ್‌ ಕುರುಬ ಜನಾಂಗದ ಕುಮಾರಸ್ವಾಮಿ ಅವರ ಪಾಲಾಗಿತ್ತು. ಜಿಪಂ ಸದಸ್ಯರಾಗಿದ್ದ ಸಿ.ಟಿ. ರಾಜಣ್ಣ ಕೂಡ ಬಂಡಾಯದವಾಗಿ ಸ್ಪರ್ಧಿಸಿದ್ದರು. ಇದರಿಂದಾಗಿ ಮಂಜುನಾಥ್‌ ಭಾರೀ ಅಂತರದಲ್ಲಿ ಜಯಭೇರಿ ಬಾರಿಸಿದರು. ಆದರೆ 2018 ರಲ್ಲಿ ಜೆಡಿಎಸ್‌ ಸಂಘಟಿತ ಹೋರಾಟ ನಡೆಸಿದ ಫಲ ಎಚ್‌.ಪಿ. ಮಂಜುನಾಥ್‌ ಸೋತು, ಎಚ್‌. ವಿಶ್ವನಾಥ್‌ ಗೆದ್ದರು. ಬಿಜೆಪಿ ಅಭ್ಯರ್ಥಿ ಜೆ.ಎಸ್‌. ರಮೇಶ್‌ಕುಮಾರ್‌ಗೆ ಠೇವಣಿ ಕೂಡ ಸಿಕ್ಕಿರಲಿಲ್ಲ.

ಮತಗಟ್ಟೆಯ ಮುಂದೆಯೇ ಹಣ ಹಂಚಿಕೆ..! ಕಣ್ಮುಚ್ಚಿ ಕುಳಿತ ಪೊಲೀಸರು

ಹುಣಸೂರಿನಲ್ಲಿ 1991 ರವರೆಗೂ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್‌ ಹಾಗೂ ಜನತಾ ಪರಿವಾರದ ನಡುವೆ ಹೋರಾಟ. ಬೇರೆ ಬೇರೆ ಕಾರಣಗಳಿಂದ 1994 ಹಾಗೂ 1999 ರಲ್ಲಿ ಇಲ್ಲಿ ಬಿಜೆಪಿ ಗೆದ್ದಿದೆ. ಎರಡು ದಶಕಗಳ ನಂತರ ಈ ಬಾರಿ ‘ಕಮಲ’ ಅರಳಿಸಲು ಹರಸಾಹಸ ಮಾಡಲಾಗುತ್ತಿದೆ.

1994ರ ಚುನಾವಣೆ ಎದುರಾದಾಗ ಮತ್ತೆ ಸಿ.ಎಚ್‌. ವಿಜಯಶಂಕರ್‌ ಬಿಜೆಪಿ ಅಭ್ಯರ್ಥಿಯಾಗಿ 35,973 ಮತಗಳನ್ನು ಪಡೆದು, ಗೆದ್ದು ಕ್ಷೇತ್ರದಲ್ಲಿ ಮೊದಲ ಬಾರಿಗೆ ‘ಕಮಲ’ ಅರಳಿಸಿದರು. 1999ರ ಸಾರ್ವತ್ರಿಕ ಚುನಾವಣೆ ಎದುರಾದಾಗ ವಿ. ಪಾಪಣ್ಣ ಬಿಜೆಪಿ ಸೇರಿ ಅಭ್ಯರ್ಥಿಯಾದರು. ಎರಡು ಬಾರಿ ಸೋಲಿನಿಂದ ಉಂಟಾಗಿದ್ದ ಅನುಕಂಪ, ಜನತಾಪಕ್ಷದ ಇಬ್ಭಾಗ, ಕಾಂಗ್ರೆಸ್‌ನಲ್ಲಿ ಎಸ್‌. ಚಿಕ್ಕಮಾದು ಅವರ ಬಂಡಾಯದ ಬಾವುಟದಿಂದಾಗಿ ಪಾಪಣ್ಣ- 35,046 ಮತಗಳನ್ನು ಪಡೆದು ವಿಜೇತರಾಗಿ. ಎರಡನೇ ಬಾರಿ ಕ್ಷೇತ್ರದಲ್ಲಿ ‘ಕಮಲ’ ಅರಳಿಸಿದರು.

2008ರ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡರೆ ಬಿಜೆಪಿ ಅಭ್ಯರ್ಥಿಯಾಗಿ, ಪ್ರಬಲ ಪೈಪೋಟಿ ನೀಡಿದ್ದರು. ಕಾಂಗ್ರೆಸ್‌ನ ಎಚ್‌.ಪಿ. ಮಂಜುನಾಥ್‌- 57,947 ಮತಗಳನ್ನು ಪಡೆದು ಗೆದ್ದರು. ಜೆಡಿಎಸ್‌ನ ಎಸ್‌. ಚಿಕ್ಕಮಾದು- 42,456 ಮತಗಳೊಂದಿಗೆ ಎರಡನೇ ಸ್ಥಾನ ಪಡೆದರು. ಜಿ.ಟಿ. ದೇವೇಗೌಡ- 36,004 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿದಿದ್ದರು.

2013 ಹಾಗೂ 2018 ರಲ್ಲಿ ಇಲ್ಲಿ ಬಿಜೆಪಿಗೆ ಠೇವಣಿಯೂ ಸಿಕ್ಕಿರಲಿಲ್ಲ. 2013 ರಲ್ಲಿ ಬಿಜೆಪಿಯ ಕೆ.ಎಸ್‌. ಅಣ್ಣಯ್ಯನಾಯಕ- 4,229, 2018 ರಲ್ಲಿ ಬಿಜೆಪಿಯ ಜೆ.ಎಸ್‌. ರಮೇಶ್‌ಕುಮಾರ್‌- 6,406 ಮತಗಳನ್ನು ಮಾತ್ರ ಗಳಿಸಿದ್ದರು.

ಸಾಯಿ ಮಂದಿರದಲ್ಲಿ ಕಾಂಗ್ರೆಸ್, BJP ಅಭ್ಯರ್ಥಿಗಳಿಂದ ಒಟ್ಟಿಗೆ ಪ್ರಾರ್ಥನೆ

ವಿಜಯಶಂಕರ್‌ ಸ್ಪರ್ಧಿಸಿದಾಗ ಒಮ್ಮೆ ಗೆಲವು, ಮತ್ತೊಮ್ಮೆ ಎರಡನೇ ಸ್ಥಾನ, ಪಾಪಣ್ಣ ಸ್ಪರ್ಧಿಸಿದಾಗ ಒಮ್ಮೆ ಗೆಲವು ಹೊರತುಪಡಿಸಿದರೆ ಸ್ವತಃ ಜಿ.ಟಿ. ದೇವೇಗೌಡ ಸ್ಪರ್ಧಿಸಿದಾಗಲೂ ಬಿಜೆಪಿಗೆ 3ನೇ ಸ್ತಾನ. ಅದರಲ್ಲೂ ಕಳೆದೆರಡು ಚುನಾವಣೆಗಳಲ್ಲಿ ಠೇವಣಿ ಕಳೆದುಕೊಂಡಿದೆ. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಎಚ್‌. ವಿಶ್ವನಾಥ್‌ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿರುವುದು ಹಾಗೂ ಗೆದ್ದಲ್ಲಿ ಮಂತ್ರಿಯಾಗುತ್ತಾರೆ ಎಂಬುದು, ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಇರುವುದು, ಹಿಂದೆ ಗೆದ್ದಿದ್ದ ಸಿ.ಎಚ್‌. ವಿಜಯಶಂಕರ್‌, ಸಂಸದ ಪ್ರತಾಪ್‌ ಸಿಂಹ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ ಸಾಥ್‌ ನೀಡಿರುವುದು, ಜನತಾ ಪರಿವಾರದಿಂದ ಎರಡು ಬಾರಿ ಗೆದ್ದು, ತಲಾ ಒಂದು ಬಾರಿ ಜೆಡಿಎಸ್‌ ಹಾಗೂ ಬಿಜೆಪಿಯಿಂದ ಸೋತಿರುವ ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಶಾಸಕ ಜಿ.ಟಿ. ದೇವೇಗೌಡರು ಜೆಡಿಎಸ್‌ನಿಂದ ದೂರವಾಗಿರುವುದರ ಲಾಭ ಪಡೆದು, ಮೂರನೇ ಬಾರಿ ‘ಕಮಲ’ ಅರಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಇದಕ್ಕಾಗಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಡಿಸಿಎಂಗಳಾದ ಗೋವಿಂದ ಎಂ. ಕಾರಜೋಳ, ಸಚಿವರಾದ ಬಿ. ಶ್ರೀರಾಮುಲು, ವಿ, ಸೋಮಣ್ಣ, ಸಿ.ಟಿ. ರವಿ, ಸಂಸದರಾದ ಪ್ರತಾಪ್‌ ಸಿಂಹ, ವಿ. ಶ್ರೀನಿವಾಸಪ್ರಸಾದ್‌, ಶೋಭಾ ಕರಂದ್ಲಾಜೆ. ಎ. ನಾರಾಯಣಸ್ವಾಮಿ ಮೊದಲಾದವರು ಪ್ರಚಾರ ಮಾಡಿದ್ದಾರೆ.

ಮಂಗಳೂರು: ಸತ್ತು 9 ತಿಂಗಳ ನಂತರ ಸೌದಿಯಿಂದ ಬಂತು ಮೃತದೇಹ..!

ಕಾಂಗ್ರೆಸ್‌ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ. ಕೇಂದ್ರದ ಮಾಜಿ ಸಚಿವರಾದ ಕೆ.ಎಚ್‌. ಮುನಿಯಪ್ಪ, ಎಂ. ವೀರಪ್ಪ ಮೊಯ್ಲಿ, ಎಐಸಿಸಿ ಕಾರ್ಯದರ್ಶಿ ವಿಷ್ಣುನಾದ್‌, ಮಾಜಿ ಸಚಿವ ಡಿ.ಕೆ. ಶಿವಕುಮಾರ್‌, ಡಾ.ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್‌, ಯು.ಟಿ. ಖಾದರ್‌, ಪ್ರಿಯಾಂಕ್‌ ಖರ್ಗೆ, ಮಾಜಿ ಸಂಸದ ಆರ್‌. ಧ್ರುವನಾರಾಯಣ ಮೊದಲಾದವರು ಪ್ರಚಾರ ಮಾಡಿದ್ದಾರೆ.

ಜೆಡಿಎಸ್‌ ಪರ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ, ಮಾಜಿ ಸಚಿವರಾದ ಎಚ್‌.ಡಿ. ರೇವಣ್ಣ, ಸಾ.ರಾ. ಮಹೇಶ್‌, ಸಂಸದ ಪ್ರಜ್ವಲ್‌ ರೇವಣ್ಣ ಮೊದಲಾದವರು ಪ್ರಚಾರ ಮಾಡಿದ್ದಾರೆ.

ಕಾಂಗ್ರೆಸ್‌ಗೆ ಸಿದ್ದರಾಮಯ್ಯಶ್ರೀರಕ್ಷೆ, ತನ್ನದೇ ಆದ ಸಾಂಪ್ರದಾಯಿಕ ಮತ ಬ್ಯಾಂಕ್‌ ಇದ್ದರೂ ಸಹ ಕಳೆದ ಬಾರಿ ಒಂದು ವರ್ಗದ ಜೊತೆಗೆ ಈ ಬಾರಿ ಮತ್ತೊಂದು ವರ್ಗ ಸಂಪೂರ್ಣ ಚದುರಿದಂತೆ ಕಂಡು ಬಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಟಸ್ಥ ಜಿ.ಟಿ. ದೇವೇಗೌಡರ ಬೆಂಬಲ ಪಡೆದು, ಮೇಲುಗೈ ಸಾಧಿಸಲು ಮುಂದಾಗಿದೆ. ಅಲ್ಲದೇ ತಂತ್ರಗಾರಿಕೆಯ ಮೂಲಕವೇ ತನ್ನ ಕಡುವಿರೋಧಿಗಳಿಗೆ ಮಣ್ಣು ಮುಕ್ಕಿಸಲು ಹೆಸರಾದ ಜೆಡಿಎಸ್‌ ಕೂಡ ವಿಶ್ವನಾಥ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಒಟ್ಟಾರೆ ‘ಕಮಲ’ ಪಾಳೆಯದ ಅಬ್ಬರದ ಪ್ರಚಾರದಿಂದಾಗಿ ‘ಕೈ’ ಮತ್ತು ‘ತೆನೆ’ ಪಾಳೆಯದಲ್ಲಿ ಆತಂಕ ಉಂಟಾಗಿರುವುದು ನಿಜ. ಯಾರ ‘ಕೈ’ಮೇಲಾಗುತ್ತದೆ ಎಂಬುದಕ್ಕೆ ಡಿ.9 ರವರೆಗೆ ಕಾಯಬೇಕಿದೆ.

-ಅಂಶಿ ಪ್ರಸನ್ನಕುಮಾರ್‌