Mandya : ಪ್ರಸೂತಿ ಶಸ್ತ್ರಚಿಕಿತ್ಸಾ ವಿಭಾಗಕ್ಕೇ ಆಪರೇಷನ್‌...!

ಜಿಲ್ಲಾಸ್ಪತ್ರೆಯ ಪ್ರಸೂತಿ ಶಸ್ತ್ರಚಿಕಿತ್ಸಾ ವಿಭಾಗ ಅವ್ಯವಸ್ಥೆಯಿಂದ ತುಂಬಿದೆ. ಇಡೀ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಮಳೆ ಬಂದರೆ ಕಟ್ಟಡ ಸೋರುತ್ತದೆ. ಹೆರಿಟೇಜ್‌ ಕಟ್ಟಡವಾಗಿದ್ದರೂ ಸುಸ್ಥಿತಿಯಲ್ಲಿಡಲಾಗದಷ್ಟುನಿರ್ಲಕ್ಷ್ಯ ವಹಿಸಿರುವ ಮಿಮ್ಸ್‌ ವೈದ್ಯಾಧಿಕಾರಿಗಳು ಇದನ್ನು ಕೇವಲ ಹೆರಿಗೆಗಷ್ಟೇ ಸೀಮಿತಗೊಳಿಸಿದ್ದಾರೆ. ಪ್ರಸೂತಿ ಶಸ್ತ್ರಚಿಕಿತ್ಸಾ ವಾರ್ಡ್‌ನತ್ತ ಕಣ್ತೆರೆದು ನೋಡುವವರೇ ಇಲ್ಲದಂತಾಗಿದೆ.

Chaos in the Obstetric Surgery Department of the District Hospital mandya snr

 ಮಂಡ್ಯ ಮಂಜುನಾಥ

 ಮಂಡ್ಯ ( ನ.15):  ಜಿಲ್ಲಾಸ್ಪತ್ರೆಯ ಪ್ರಸೂತಿ ಶಸ್ತ್ರಚಿಕಿತ್ಸಾ ವಿಭಾಗ ಅವ್ಯವಸ್ಥೆಯಿಂದ ತುಂಬಿದೆ. ಇಡೀ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಮಳೆ ಬಂದರೆ ಕಟ್ಟಡ ಸೋರುತ್ತದೆ. ಹೆರಿಟೇಜ್‌ ಕಟ್ಟಡವಾಗಿದ್ದರೂ ಸುಸ್ಥಿತಿಯಲ್ಲಿಡಲಾಗದಷ್ಟುನಿರ್ಲಕ್ಷ್ಯ ವಹಿಸಿರುವ ಮಿಮ್ಸ್‌ (MIMS) ವೈದ್ಯಾಧಿಕಾರಿಗಳು ಇದನ್ನು ಕೇವಲ ಹೆರಿಗೆಗಷ್ಟೇ ಸೀಮಿತಗೊಳಿಸಿದ್ದಾರೆ. ಪ್ರಸೂತಿ ಶಸ್ತ್ರಚಿಕಿತ್ಸಾ ವಾರ್ಡ್‌ನತ್ತ ಕಣ್ತೆರೆದು ನೋಡುವವರೇ ಇಲ್ಲದಂತಾಗಿದೆ.

ಮೈಸೂರು (Mysuru)  ಮಹಾರಾಜರು ಕಟ್ಟಿಸಿದ ಮಿಮ್ಸ್‌ ಆಸ್ಪತ್ರೆಯ ಕಟ್ಟಡ ಹೊರಗಿನಿಂದ ನೋಡುವುದಕ್ಕೆ ಬಹಳ ಆಕರ್ಷಣೀಯವಾಗಿದೆ. ಒಳಗೆ ಹೋದಾಗಷ್ಟೇ ಅಲ್ಲಿರುವ ಕೊಳಕು ಅನಾವರಣಗೊಳ್ಳುತ್ತದೆ.ಅದರಲ್ಲೂ ಪ್ರಸೂತಿ ಶಸ್ತ್ರಚಿಕಿತ್ಸಾ ವಿಭಾಗದ ಕಟ್ಟಡವಂತೂ ನೋಡುವುದಕ್ಕೆ ಅಸಹ್ಯ ಹುಟ್ಟಿಸುವಂತಿದೆ. ಇಂತಹ ವಿಭಾಗದೊಳಗೆ ಶಸ್ತ್ರಚಿಕಿತ್ಸೆಗೆ ಒಳಗಾಗುರವ ರೋಗಿಗಳ ಪರಿಸ್ಥಿತಿ ದಯನೀಯವಾಗಿದ್ದರೂ ಕೇಳೋರೇ ದಿಕ್ಕಿಲ್ಲ.

ವರ್ಷದಿಂದ ಸೋರುತ್ತಿದೆ: ಜಿಲ್ಲಾಸ್ಪತ್ರೆಯ ಕಲ್ಲು ಕಟ್ಟಡ ಸಂಕೀರ್ಣ ಸಾಂಸ್ಕೃತಿಕ ಪರಂಪರೆಯ ಕಟ್ಟಡವೆಂದು ಹೆಸರುವಾಸಿಯಾಗಿದೆ. ಈ ಕಟ್ಟಡವನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಂಡು ಬರಬೇಕಿದ್ದ ಮಿಮ್ಸ್‌ ಅಧಿಕಾರಿಗಳು ದುರಸ್ತಿ ನೆಪದಲ್ಲಿ ಕೋಟ್ಯಂತರ ರು. ಕೊಳ್ಳೆ ಹೊಡೆಯುವುದಕ್ಕಷ್ಟೇ ಸೀಮಿತಗೊಳಿಸಿಕೊಂಡರು. ಈ ಕಟ್ಟಡ ದುರಸ್ತಿಗೆ ಎಷ್ಟುಕೋಟಿ ಹಣ ಹರಿದುಹೋಗಿದೆಯೋ ಯಾರಿಗೂ ಗೊತ್ತಿಲ್ಲ. ಆದರೆ, ಕಟ್ಟಡ ಮಾತ್ರ ಸುಸ್ಥಿತಿಗೆ ಬಂದಿಲ್ಲ. ಇಂದಿಗೂ ಕಟ್ಟಡ ಮಳೆ ನೀರಿನಿಂದ ಸೋರುವುದು, ಗೋಡೆಗಳು ಶೀತಮಯವಾಗಿ ಶಿಥಿಲಾವಸ್ಥೆಯಲ್ಲೇ ಉಳಿದಿರುವುದು ಗೋಚರಿಸುತ್ತದೆ.

ದುರಸ್ತಿ ನೆಪದಲ್ಲಿ ಕಟ್ಟಡದ ಮೇಲ್ಭಾಗದಲ್ಲಿ ಹಾಕಿದ್ದ ಚುರುಕಿ ಗಾರೆಯನ್ನು ಕಿತ್ತುಹಾಕಲಾಗಿದೆ. ಹೊಸದಾಗಿ ಚುರುಕಿ ಹಾಕಿಲ್ಲ. ಇದರ ಪರಿಣಾಮ ಸಣ್ಣ ಮಳೆ ಬಂದರೂ ಕಟ್ಟಡದೊಳಗೆ ನೇರವಾಗಿ ನೀರಿಳಿಯುವುದು ಸಾಮಾನ್ಯವಾಗಿದೆ. ಶಸ್ತ್ರಚಿಕಿತ್ಸಾ ವಿಭಾಗದೊಳಗೆ ನೀರು ತುಂಬಿಕೊಳ್ಳುತ್ತದೆ. ಇಂತಹ ಅವ್ಯವಸ್ಥೆಯೊಳಗೆ ಸ್ತ್ರೀರೋಗಿಗಳು ಶಸ್ತ್ರಚಿಕಿತ್ಸೆ ನಡೆಸಿಕೊಳ್ಳುವ ಭಾಗ್ಯವಂತರಾಗಿದ್ದಾರೆ.

ವರ್ಷವಾದರೂ ಕಟ್ಟಡದ ದುರಸ್ತಿಪಡಿಸುವ ಆಸಕ್ತಿ, ಇಚ್ಛಾಶಕ್ತಿ ಯಾರಲ್ಲೂ ಇಲ್ಲ. ಕಟ್ಟಡದ ಮೇಲ್ಭಾಗದ ಕಬ್ಬಿಣದ ಶೀಟ್‌ ಹಾಕುವ ಕಾಮಗಾರಿಯ ಅಂದಾಜುಪಟ್ಟಿಯನ್ನು ನಿರ್ಮಿತಿ ಕೇಂದ್ರದವರು ತಯಾರಿಸುತ್ತಿದ್ದು, ಅದನ್ನು ಸರ್ಕಾರಕ್ಕೆ ಕಳುಹಿಸಿ ಮಂಜೂರಾತಿ ದೊರಕಿಸಿಕೊಂಡ ಬಳಿಕ ಕಾಮಗಾರಿ ಶುರುವಾಗಲಿದೆ ಎಂದು ತಿಳಿದುಬಂದಿದೆ. ಅದು ಯಾವ ಕಾಲಕ್ಕೆ ನಡೆಯುವುದೋ ಗೊತ್ತಿಲ್ಲ.

ಹೆರಿಗೆಗಷ್ಟೇ ಸೀಮಿತ: ಮಿಮ್ಸ್‌ ಆಸ್ಪತ್ರೆ ಕೇವಲ ಹೆರಿಗೆಗೆ ಮಾತ್ರ ಸೀಮಿತವಾಗಿದೆ. ಸಿಜೇರಿಯನ್‌ ಮತ್ತು ಸಾಮಾನ್ಯ ಹೆರಿಗೆಗಳಷ್ಟೇ ಇಲ್ಲಿ ನಡೆಯುತ್ತಿವೆ. ಉಳಿದಂತೆ ಗರ್ಭಕೋಶ, ಹೊಟ್ಟೆಯಲ್ಲಿ ಬೆಳೆದಿರುವ ಗಡ್ಡೆ, ಅಂಡಾಶಯಗಳ ಮೇಲಿನ ಗುಳ್ಳೆಗಳು ಸೇರಿದಂತೆ ಇನ್ನಿತರ ಸ್ತ್ರೀಯರಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳು ಸಮರ್ಪಕವಾಗಿ ನಡೆಯುತ್ತಲೇ ಇಲ್ಲ. ಎಲ್ಲವೂ ಆಸ್ಪತ್ರೆಯ ಹೊರಗೇ ನಡೆಯುತ್ತಿವೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಆರೋಪವಾಗಿದೆ.

ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿರುವ ಲ್ಯಾಪ್ರೋಸ್ಕೋಪಿ ಸೇರಿದಂತೆ ಇನ್ನಿತರ ಉಪಕರಣಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಈ ಶಸ್ತ್ರಚಿಕಿತ್ಸಾ ವಿಭಾಗವನ್ನು ಸುಸ್ಥಿತಿಗೆ ತಂದರೆ ಶಸ್ತ್ರಚಿಕಿತ್ಸೆಗಳ ಸಂಖ್ಯೆಯನ್ನು ಈಗ ನಡೆಯುತ್ತಿರುವುದಕ್ಕಿಂತಲೂ ಮೂರುಪಟ್ಟು ಹೆಚ್ಚಿಸಬಹುದು. ಇದರಿಂದ ಬಡ ಸ್ತ್ರೀರೋಗಿಗಳಿಗೆ ಹೆಚ್ಚಿನ ಅನುಕೂಲವಾಗುವುದಾದರೂ ಯಾರಿಗೂ ಈ ವಿಭಾಗವನ್ನು ಸುಧಾರಣೆ ಮಾಡುವ ಆಸಕ್ತಿ, ಇಚ್ಛಾಶಕ್ತಿಯೇ ಇಲ್ಲದಂತಾಗಿದೆ.

ಈ ಕಾರಣದಿಂದ ಬಹಳಷ್ಟುರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಲು ಸಾಧ್ಯವಾಗದೆ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದುಪ್ಪಟ್ಟು ಹಣ ಕೊಟ್ಟು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ. ಎಬಿಆರ್‌ಕೆ ಆರೋಗ್ಯ ಕಾರ್ಡ್‌ ಇದ್ದರೂ ಅದರ ಉಪಯೋಗ ಪಡೆದುಕೊಳ್ಳುವುದಕ್ಕೆ ಅವರಿಂದ ಸಾಧ್ಯವಾಗುತ್ತಿಲ್ಲ. ಇಲ್ಲದಿದ್ದರೆ ಆಪರೇಷನ್‌ಗಾಗಿ ಸಾಕಷ್ಟುಸಮಯ ಕಾದು ಕೂರಬೇಕಾದ ಸನ್ನಿವೇಶ ಎದುರಾಗಿದೆ ಎಂಬ ಆರೋಪಗಳು ಆಸ್ಪತ್ರೆ ವಲಯದಿಂದಲೇ ಕೇಳಿಬರುತ್ತಿವೆ.

ಕೊರೋನಾ ನೆಪ: ಪ್ರಸೂತಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿಲ್ಲವೇಕೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳನ್ನು ಕೇಳಿದರೆ ಕೊರೋನಾ ನೆಪ ಹೇಳುತ್ತಾರೆ. ಕೊರೋನಾ ಸೋಂಕು ಹೆಚ್ಚಿದ್ದ ಕಾರಣ ಹೆರಿಗೆಯನ್ನು ಹೊರತುಪಡಿಸಿ ಉಳಿದ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿರಲಿಲ್ಲ ಎಂದು ಜಾರಿಕೆ ಉತ್ತರ ನೀಡುವರು. ಶಸ್ತ್ರಚಿಕಿತ್ಸಾ ವಿಭಾಗದೊಳಗಿನ ಕೊಳಕನ್ನು ಹೊರಗಿನ ಪ್ರಪಂಚದಿಂದ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ.

ವಾಸ್ತವದಲ್ಲಿ ಕೊರೋನಾ ಸೋಂಕು ದೂರವಾಗಿ ವರ್ಷವೇ ಸಮೀಪಿಸುತ್ತಿದೆ. ಆಸ್ಪತ್ರೆ ವೈದ್ಯಾಧಿಕಾರಿಗಳು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೊರೋನಾ ಕಾರಣವನ್ನು ಮುಂದಿಡುತ್ತಿದ್ದಾರೆ. ಇದು ಆಸ್ಪತ್ರೆಯ ಅದಕ್ಷ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಕಳೆದೆರಡು ವರ್ಷಗಳ ಹಿಂದೆ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಆಸ್ಪತ್ರೆ ಕಟ್ಟಡದ ದುರಸ್ತಿಗೆ 2 ಕೋಟಿ ರು. ಅನುದಾನ ಬಿಡುಗಡೆಯಾಗಿರುವುದಾಗಿ ಹೇಳಲಾಗಿದ್ದು, ಆ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ಕಟ್ಟಡದ ದುರಸ್ತಿಯನ್ನು ನೆನೆಗುದಿಗೆ ಬೀಳುವಂತೆ ಮಾಡಿದರು. ಈಗ ಹಣವೆಲ್ಲಾ ಖರ್ಚಾಗಿರುವುದರಿಂದ ಹೊಸದಾಗಿ ಅಂದಾಜುಪಟ್ಟಿಸಲ್ಲಿಸಿ ಸರ್ಕಾರದ ಅನುಮತಿ ಪಡೆಯುವುದಕ್ಕೆ ಈಗಿರುವ ಮಿಮ್ಸ್‌ ನಿರ್ದೇಶಕರು ಹರಸಾಹಸ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಬಡ ರೋಗಿಗಳಿಗೆ ಮೂಕರೋದನ: ಜಿಲ್ಲಾ ಆಸ್ಪತ್ರೆಯ ಕಡೆ ಸ್ಥಳೀಯ ಜನಪ್ರತಿನಿಧಿಗಳು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಯಾರೊಬ್ಬರೂ ಅತ್ತ ತಿರುಗಿ ನೋಡುವುದೇ ಇಲ್ಲ. ಹೀಗಾಗಿ ಬಡರೋಗಿಗಳು ಅನುಭವಿಸುತ್ತಿರುವ ಗೋಳನ್ನು ಕೇಳೋರೆ ದಿಕ್ಕಿಲ್ಲದಂತಾಗಿದೆ. ಅವರು ಆಸ್ಪತ್ರೆಯೊಳಗೆ ಮೂಕರೋಧನ ಅನುಭವಿಸುವಂತಾಗಿದೆ.

ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಹೆಚ್ಚಿಸಿ, ಕಟ್ಟಡಗಳನ್ನು ಸುಸ್ಥಿತಿಯಲ್ಲಿಟ್ಟು ಚಿಕಿತ್ಸೆಯಲ್ಲಿ ಸುಧಾರಣೆ ತರುವುದಕ್ಕಿಂತ ಹೆಚ್ಚಾಗಿ ಹಣ ಲೂಟಿ ಹೊಡೆಯುವುದಕ್ಕೆ ಹೆಚ್ಚಿನ ಆಸಕ್ತಿ, ಮುತುವರ್ಜಿ ತೋರಿಸುತ್ತಿದ್ದಾರೆ.

ಯಾರೊಬ್ಬರಿಗೂ ಬಡ ರೋಗಿಗಳ ಬಗ್ಗೆ ಚಿಂತೆಯೇ ಇಲ್ಲ. ಆಸ್ಪತ್ರೆಯೊಳಗಿರುವ ಅವ್ಯವಸ್ಥೆಯನ್ನು ಗುರುತಿಸಿ ಅಧಿಕಾರಿಗಳಿಗೆ ಬಿಸಿಮುಟ್ಟಿಸುವ ಕೆಲಸ ಯಾರೊಬ್ಬರಿಂದಲೂ ಆಗುತ್ತಿಲ್ಲ. ಆಸ್ಪತ್ರೆಯ ಅಧಿಕಾರಿಗಳ ಮೇಲೆ ಯಾರೊಬ್ಬರಿಗೂ ಹಿಡಿತವಿಲ್ಲದ ಕಾರಣ ವೈದ್ಯಾಧಿಕಾರಿಗಳೇ ಸುಪ್ರೀಂ ಆಗಿದ್ದಾರೆ. ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದರೂ ಯಾರೂ ಕೇಳುತ್ತಿಲ್ಲ. ವೈದ್ಯಾಧಿಕಾರಿಗಳ ದರ್ಬಾರ್‌ನಲ್ಲಿ ಇಡೀ ಆಸ್ಪತ್ರೆಯ ವ್ಯವಸ್ಥೆ ಹಳ್ಳ ಹಿಡಿದಿದೆ.

--------------------------

ಕೊರೋನಾ ಕಾರಣದಿಂದ ಪ್ರಸೂತಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಆಪರೇಷನ್‌ ನಡೆಸಲಾಗುತ್ತಿರಲಿಲ್ಲ. ಈಗಷ್ಟೇ ಆಪರೇಷನ್‌ಗಳನ್ನು ಪುನಾರಂಭಿಸಲಾಗಿದೆ. ಇಡೀ ವಿಭಾಗವನ್ನು ಉತ್ತಮ ಸ್ಥಿತಿಯಲ್ಲಿಡುವುದಕ್ಕೆ ಮಿಮ್ಸ್‌ ನಿರ್ದೇಶಕರು ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ.

ಡಾ.ವೆಂಕಟೇಶ್‌, ಮಿಮ್ಸ್‌ ಆಸ್ಪತ್ರೆ ಆರ್‌ಎಂಓ

-----------------------------

ಪ್ರಸೂತಿ ಶಸ್ತ್ರಚಿಕಿತ್ಸಾ ವಿಭಾಗದ ಕೊಠಡಿ ದುಸ್ಥಿತಿಯಲ್ಲಿರುವುದು ನಿಜ. ಆ ಕಟ್ಟಡಕ್ಕೆ ಕ್ಯಾನೋಪಿ ಅಳವಡಿಸಲು ನಿರ್ಮಿತಿ ಕೇಂದ್ರಕ್ಕೆ ಜವಾಬ್ದಾರಿ ನೀಡಲಾಗಿದೆ. ಅದರ ಅಂದಾಜುಪಟ್ಟಿಯನ್ನು ತಯಾರಿಸಲಾಗುತ್ತಿದ್ದು, ಅದನ್ನು ಸರ್ಕಾರದ ಮುಂದಿಟ್ಟು ಅನುಮತಿ ಪಡೆಯುವುದರೊಂದಿಗೆ ಶಸ್ತ್ರಚಿಕಿತ್ಸಾ ವಿಭಾಗವನ್ನು ಸುಸ್ಥಿತಿಗೆ ತರಲಾಗುವುದು.

-ಡಾ.ಬಿ.ಜೆ.ಮಹೇಂದ್ರ, ನಿರ್ದೇಶಕರು, ಮಿಮ್ಸ್‌

--------------

14ಕೆಎಂಎನ್‌ಡಿ-3

ಶಸ್ತ್ರಚಿಕಿತ್ಸಾ ವಿಭಾಗದೊಳಗಿನ ದುರವಸ್ಥೆ

14ಕೆಎಂಎನ್‌ಡಿ-4

ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಮಳೆಯಿಂದ ರಕ್ಷಿಸಲು ಪ್ಲಾಸ್ಟಿಕ್‌ ಕವರ್‌ ಸುತ್ತಿರುವ ದೃಶ್ಯ.

Latest Videos
Follow Us:
Download App:
  • android
  • ios