Raichur: ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದಿಂದ ಕಲ್ಯಾಣ ಕರ್ನಾಟಕಕ್ಕೆ ಮತ್ತೆ ಅನ್ಯಾಯ!
ರಾಜ್ಯದ ಹಿಂದುಳಿದ ಸುಮಾರು 114 ತಾಲೂಕುಗಳ ಅಭಿವೃದ್ಧಿಗಾಗಿ ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಅನುಷ್ಠಾನದ ವಿಶೇಷ ಅಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿ ಬಜೆಟ್ ನೀಡಲಾಗುತ್ತಿದೆ. ಅಭಿವೃದ್ಧಿ ಸೂಚ್ಯಂಕದ ಆಧಾರದಲ್ಲಿ ಅನುದಾನ ಮಾಡಲಾಗುತ್ತದೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ಜು.31): ರಾಜ್ಯ ಸರ್ಕಾರ ಒಂದಿಲ್ಲ ಒಂದು ರೀತಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲ್ಲೇ ಬರುತ್ತಿದೆ. ಕಲ್ಯಾಣ ಕರ್ನಾಟಕ ಮಂಡಳಿ ಸದಸ್ಯರ ನೇಮಕಾತಿಯಲ್ಲಿ ವಿಳಂಬದ ವಿಷಯವಾಗಲಿ, ಕಲ್ಯಾಣ ಕರ್ನಾಟಕ ಕೃಷಿ, ಸಾಂಸ್ಕೃತಿ, ಪ್ರದೇಶದ ಅಭಿವೃದ್ಧಿ ಮಂಡಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕಾತಿ ಮಾಡುವ ವಿಷಯವಾಗಲೀ, ಮಾನವ ಸಂಪನ್ಮೂಲ ಸಂಘ ಸ್ಥಾಪಿಸಿ ಕೆಕೆಆರ್‌ಡಿಐ ಅನುದಾನ ನೀಡುವ ವಿಷಯವಾಗಲೀ, ನೇಮಕಾತಿ ಸಂದರ್ಭದಲ್ಲಿ ಆರ್ಥಿಕ ಇಲಾಖೆಯ ಪೂರ್ವಾನುಮತಿಯ ವಿಷಯದಲ್ಲಿ ಆಗಲೀ, ನೇಮಕಾತಿ ಆಯ್ಕೆಯ ಹುದ್ದೆಗಳ ಭರ್ತಿಯ ಸಂದರ್ಭದಲ್ಲಾಗಲೀ, ಶಿಕ್ಷಣ ಮೀಸಲಾತಿ ಅನುಷ್ಠಾನದಲ್ಲಾಗಲೀ ಈ ಭಾಗದ ಜನರ ದಾರಿ ತಪ್ಪಿಸುವ, ವಂಚಿಸುವ, ಅಭಿವೃದ್ಧಿ ಹಿನ್ನೆಡೆಗೆ ಕಾರಣವಾಗುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಮುಖಂಡರು ರಾಯಚೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ 3000 ಕೋಟಿ ರೂಪಾಯಿ ಬಜೆಟ್‌ನಲ್ಲಿ ಮಂಡನೆ ಮಾಡಿದೆ. 3 ಸಾವಿರ ಕೋಟಿ ರೂಪಾಯಿ ಅನುದಾನದಲ್ಲಿ 1,500ಕೋಟಿ ರೂಪಾಯಿ ಅನುದಾನವನ್ನು ಮೈಕ್ರೋ ಯೋಜನೆಗೆ ಹಾಗೂ ಇನ್ನುಳಿದ 1500 ಕೋಟಿ ರೂಪಾಯಿ ಅನುದಾನವನ್ನು ಈ ಭಾಗದ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಬಳಸಲಾಗುವದು ಎಂದು ಹೇಳಲಾಗಿದೆ. ಇತ್ತ ಹಿಂದೂಳಿದ 114 ತಾಲೂಕುಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಅನುಷ್ಠಾನದ ವಿಶೇಷ ಅಭಿವೃದ್ಧಿ ಯೋಜನೆಗೆ 3,000 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.
ಏಷ್ಯಾನೆಟ್ ಸುವರ್ಣನ್ಯೂಸ್‌ನ ವರದಿಗಾರ ಹಾಗೂ ಕ್ಯಾಮೆರಾಮನ್‌ಗೆ ರಾಯಚೂರು ಗಿಲ್ಡ್ ಪ್ರಶಸ್ತಿ
ಆದ್ರೆ ಈಗ ಕರ್ನಾಟಕ ಸರಕಾರ ರಾಜ್ಯದ ಬಜೆಟ್‌ನಲ್ಲಿ ಮೀಸಲಿಟ್ಟಿರುವ 3 ಸಾವಿರ ಕೋಟಿ ಅನುದಾನವನ್ನು ವಲಯವಾರು ಹಂಚಿಕೆ ಮಾಡುವಾಗ ವಿಶೇಷ ಅಭಿವೃದ್ಧಿ ಯೋಜನೆಯ 1000 ಕೋಟಿ ರೂಪಾಯಿ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ವರ್ಗಾಯಿಸಿ, ಬಜೆಟ್‌ನಲ್ಲಿ ಹೇಳಿರುವಂತೆ ಮಂಡಳಿಗೆ 3000 ಕೋಟಿ ರೂಪಾಯಿ ಬದಲಾಗಿ ಕೇವಲ 2000 ಕೋಟಿ ರೂಪಾಯಿ ಅನುದಾನ ಮಾತ್ರ ಹಂಚಿಕೆ ಮಾಡಲಾಗಿದೆ. ಇದು ಕಲ್ಯಾಣ ಕರ್ನಾಟಕದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಯಾರಿಗೆ ಅನ್ವಯ ಆಗುತ್ತೆ!: ರಾಜ್ಯದ ಹಿಂದುಳಿದ ಸುಮಾರು 114 ತಾಲೂಕುಗಳ ಅಭಿವೃದ್ಧಿಗಾಗಿ ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಅನುಷ್ಠಾನದ ವಿಶೇಷ ಅಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿ ಬಜೆಟ್ ನೀಡಲಾಗುತ್ತಿದೆ. ಅಭಿವೃದ್ಧಿ ಸೂಚ್ಯಂಕದ ಆಧಾರದಲ್ಲಿ ಅನುದಾನ ಮಾಡಲಾಗುತ್ತದೆ. ಅದರಂತೆ ಕಲ್ಯಾಣ ಕರ್ನಾಟಕದ ಅಂದಿನ 31 ತಾಲ್ಲೂಕುಗಳಲ್ಲಿ 28 ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳಾಗಿರುವ ಕಾರಣ ಒಟ್ಟು ಅನುದಾನದ ಶೇ. 40ರಷ್ಟು ಅನುದಾನ ಕಲ್ಯಾಣ ಕರ್ನಾಟಕ ಭಾಗಕ್ಕೆ ಹಂಚಿಕೆ ಮಾಡಬೇಕು ಎಂದು ವರದಿಯಲ್ಲಿಯೇ ಉಲ್ಲೇಖವಿದೆ.
ಅದರಂತೆ ಕಳೆದ 15 ವರ್ಷಗಳಿಂದ ಅನುದಾನ ಹಂಚಿಕೆ ಮಾಡಲಾಗುತ್ತಿತ್ತು. ಆದ್ರೆ ಈ ವರ್ಷ ಮಾತ್ರ ಅದು ಕೈಬಿಟ್ಟಿದ್ದು ಇದೆ. ಒಂದು ನಿಯಮದ ಪ್ರಕಾರ 3ಸಾವಿರ ಕೋಟಿ ರೂಪಾಯಿ ಅನುದಾನ 114 ತಾಲೂಕುಗಳಿಗೆ ಬಂದ್ರೆ ಅದರಲ್ಲಿ ಕಲ್ಯಾಣ ಕರ್ನಾಟಕದ 41 ತಾಲೂಕುಗಳಿಗೆ ಸುಮಾರು 1200 ಸಾವಿರ ಕೋಟಿ ರೂಪಾಯಿ ಬರಬೇಕು. ಆದರೆ, ಸರಕಾರ ಡಾ.ನಂಜುಂಡಪ್ಪನವರ ವರದಿಯಂತೆ ಬರಬೇಕಾದ ಅನುದಾನವನ್ನು ಕೆಕೆಆರ್‌ಡಿಬಿಗೆ ವರ್ಗಾವಣೆ ಮಾಡಿರುವದರಿಂದ ಸರಕಾರ ಮಂಡಳಿಗೂ ವಂಚಿಸಿದೆ. ಅಲ್ಲದೇ ವಿಶೇಷ ಅಭಿವೃದ್ಧಿಯ ಯೋಜನೆಯ ಮೂಲ ಉದ್ದೇಶಕ್ಕೂ ಅನ್ಯಾಯವೆಸಗಿದೆ.
ಕೆಕೆಆರ್‌ಡಿಬಿಗೆ ಡಾ.ನಂಜುಂಡಪ್ಪನವರ ಅನುದಾನ ನೀಡಿದಕ್ಕೆ ಏನಾಗಿದೆ: ಸರ್ಕಾರ ನಿಯಮದಂತೆ ಡಾ.ನಂಜುಂಡಪ್ಪನವರ ವರದಿಯಂತೆ ಅಭಿವೃದ್ಧಿಗಾಗಿ 3 ಸಾವಿರ ಕೋಟಿ ರೂಪಾಯಿ ಮಂಜೂರು ಮಾಡಬೇಕು. ಆದ್ರೆ ಈಗ ಕೇವಲ 2 ಸಾವಿರ ಕೋಟಿ ರೂಪಾಯಿ ಮಾತ್ರ ಸರ್ಕಾರ ಡಾ.ನಂಜುಂಡಪ್ಪನವರ ವರದಿಯಂತೆ ಅನುದಾನ ರಿಲೀಸ್ ಮಾಡಿದೆ. ಇನ್ನುಳಿದ 1 ಸಾವಿರ ಕೋಟಿ ರೂಪಾಯಿ ಕೆಕೆಆರ್‌ಡಿಬಿಗೆ ಸೇರಿ 3 ಸಾವಿರ ಕಲ್ಯಾಣ ಕರ್ನಾಟಕಕ್ಕೆ ನೀಡಿದ್ದೇವೆ ಎಂದು ಹೇಳುತ್ತಿದೆ.
ರಾಯಚೂರು: ಕೋಳಿ ಕಳ್ಳನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು
ಇದರಿಂದಾಗಿ ಸರ್ಕಾರದ ವಿವಿಧ ಇಲಾಖೆಗಳಾದ ಲೋಕೋಪಯೋಗಿ, ಕೃಷಿ, ನೀರಾವರಿ, ತೋಟಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಗಳಿಗೆ ಅನುದಾನವೇ ಇಲ್ಲದಂತೆ ಆಗಿದೆ. ಇದರಿಂದಾಗಿ ಸರ್ಕಾರ ಡಾ.ನಂಜುಂಡಪ್ಪನವರ ವರದಿಯಂತೆ 114 ತಾಲೂಕುಗಳಿಗೆ 3 ಸಾವಿರ ಕೋಟಿ ರೂಪಾಯಿ ಮಂಜೂರು ಮಾಡಬೇಕು. ಅಲ್ಲದೇ ಕೆಕೆಆರ್‌ಡಿಬಿಗೆ ನೀಡಿದ 3 ಸಾವಿರ ಕೋಟಿ ರೂಪಾಯಿ ಅನುದಾನ ಸಮರ್ಪಕವಾಗಿ ಬಳಕೆ ಮಾಡಲು ಮುಂದಾಗಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಆಗ್ರಹಿಸಿದರು.