ಬೆಂಗಳೂರು (ಸೆ.29):  ರಾಜ್ಯ ಸರ್ಕಾರದಲ್ಲಿ ಉದ್ಯೋಗ ಪಡೆದುಕೊಳ್ಳುವ ಅಭ್ಯರ್ಥಿಗಳು ಇನ್ನು ಮುಂದೆ ಅಂಕಪಟ್ಟಿಪರಿಶೀಲನಾ ಶುಲ್ಕವನ್ನೂ ಪಾವತಿಸಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್‌) ಸೂಚಿಸಿದೆ.

ನಕಲಿ ಅಂಕಪಟ್ಟಿಗಳ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದನ್ನು ತಡೆಯಲು ಆನ್‌ಲೈನ್‌ ಮೂಲಕ ಅಂಕಪಟ್ಟಿಗಳನ್ನು ವಿತರಿಸಲು ಮತ್ತು ದೃಢೀಕರಿಸಲು ತಗಲುವ ವೆಚ್ಚವನ್ನು ವಿದ್ಯಾರ್ಥಿಗಳೇ ಭರಿಸಬೇಕಾಗುತ್ತದೆ. ಇಷ್ಟುವರ್ಷಗಳ ಕಾಲ ನೇಮಕಾತಿ ಪ್ರಾಧಿಕಾರವೇ ಅಂಕಪಟ್ಟಿಗಳ ಪರಿಶೀಲನಾ ಶುಲ್ಕವನ್ನು ಪಾವತಿಸುತ್ತಿತ್ತು. ಇದೀಗ ಅಭ್ಯರ್ಥಿಗಳೇ ಪಾವತಿಸಬೇಕಿದೆ.

ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣ ಪತ್ರ ಹಾಗೂ ಇನ್ನಿತರೆ ದಾಖಲಾತಿಗಳ ಜತೆಗೆ ಅಭ್ಯರ್ಥಿಗಳು ಸಲ್ಲಿಸುವ ಅಂಕಪಟ್ಟಿ, ಶೈಕ್ಷಣಿಕ ಪ್ರಮಾಣ ಪತ್ರಗಳ ನೈಜತೆಯನ್ನು ಅಂಕಪಟ್ಟಿವಿತರಿಸಿದ ವಿವಿ, ಪರೀಕ್ಷಾ ಮಂಡಳಿಗಳೊಂದಿಗೆ ಪರಿಶೀಲನೆ ನಡೆಸಬೇಕು. ಇದು ಖಾತರಿಯಾದ ಬಳಿಕವೇ ನೇಮಕಾತಿ ಆದೇಶ ನೀಡಲಾಗುತ್ತದೆ.

ಡಾಟಾ ಎಂಟ್ರಿ ಆಪರೇಟರ್‌ಗಳ ನೇಮಕಕ್ಕೆ ಅರ್ಜಿ ಆಹ್ವಾನ..! ...

ಈ ಸೂಚನೆಯನ್ನು ಎಲ್ಲ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಆಡಳಿತಕ್ಕೆ ಒಳಪಡುವ ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕ ಉದ್ದಿಮೆಗಳು, ಸಾರ್ವಜನಿಕ ಉದ್ದಿಮೆಗಳು, ಆಯೋಗ, ನಿಗಮ, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ತಿಳಿಸಿದೆ.

ಸದ್ಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಮಂಡಳಿಗಳು ಆನ್‌ಲೈನ್‌ ಮೂಲಕವೇ ಪರಿಶೀಲನೆ ಪ್ರಕ್ರಿಯೆ ನಡೆಸಲಿವೆ. ಪ್ರತಿ ಪರಿಶೀಲನೆಗೆ 200 ರು.ನಿಂದ 500 ರು.ಗಳವರೆಗೆ ಶುಲ್ಕ ನಿಗದಿಪಡಿಸಿವೆ. ಬೆಂಗಳೂರು ವಿವಿ 700 ರು. ನಿಗದಿ ಮಾಡಿದೆ.