ಲಖನೌ(ಅ.06): ಹಾಥ್ರಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೃತಪಟ್ಟಸಂತ್ರಸ್ತೆಯ ಕುಟುಂಬಕ್ಕೆ ನೀಡಲಾಗಿರುವ ಭದ್ರತೆಯನ್ನು ಮತ್ತಷ್ಟುಬಿಗಿಗೊಳಿಸಲಾಗಿದೆ. ಸಂತ್ರಸ್ತೆ ಸೋದರನಿಗೆ ಇಬ್ಬರು ಗನ್‌ ಮ್ಯಾನ್‌ಗಳನ್ನು ನೀಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಸಂತ್ರಸ್ತೆ ಕುಟುಂಬಕ್ಕೆ 24 ಗಂಟೆಯೂ 12-15 ಸಿಬ್ಬಂದಿಗಳು ಭದ್ರತೆ ನೀಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಹಾಗೆಯೇ ಆ ಪ್ರದೇಶದ ಉದ್ವಿಗ್ನತೆ ಉಂಟಾಗದಿರಲೆಂದು ಕಾನ್‌ಸ್ಟೇಬಲ್‌ಗಳು ಮತ್ತು 3 ಎಸ್‌ಎಚ್‌ಒ, ಉಪ ವರಿಷ್ಠಾಧಿಕಾರಿ ದರ್ಜೆಯ ಅಧಿಕಾರಿಗಳು ಮತ್ತು ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಥ್ರಸ್‌ ಹೆಸರಲ್ಲಿ ಗಲಭೆ ಯತ್ನ: ಪೊಲೀಸರಿಂದ 19 ಎಫ್‌ಐಆರ್‌ ದಾಖಲು

ಹಾಥ್ರಸ್‌ ದಲಿತ ಯುವತಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ವಿವಾದದ ಬೆನ್ನಲ್ಲೇ, ಜಾತಿ ಗಲಭೆ ಸೃಷ್ಟಿಸಿ ಉತ್ತರಪ್ರದೇಶ ಸರ್ಕಾರದ ಇಮೇಜ್‌ ಹಾಳು ಮಾಡಲು ಯತ್ನಿಸಿದ ಆರೋಪದ ಮೇರೆಗೆ ಅನಾಮಧೇಯ ವ್ಯಕ್ತಿಗಳ ವಿರುದ್ಧ ಉತ್ತರಪ್ರದೇಶ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.

ಹಾಥ್ರಸ್‌ ಸೇರಿದಂತೆ ಉತ್ತರಪ್ರದೇಶದ ವಿವಿಧೆಡೆ 19 ಪ್ರಕರಣಗಳನ್ನು ದಾಖಲಿಸಲಾಗಿದೆ. ಹಾಥ್ರಸ್‌ ಜಿಲ್ಲೆಯೊಂದರಲ್ಲೇ 6, ಉಳಿದೆಡೆ 13 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.