Asianet Suvarna News Asianet Suvarna News

ಐಎನ್‌ಎಸ್ ಅರಿಹಂತ್: ರಕ್ಷಣಾ ಕ್ಷೇತ್ರದ ಸ್ವಾವಲಂಬನೆಯ ದೃಢ ಭವಿಷ್ಯದ ಹಂತ

ಭಾರತದ ಜಲ ಗಡಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ನೌಕಾ ಸೇನೆಗೆ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಯುದ್ಧ ನೌಕೆಗಳು ಮಾತು ಜಲಾಂತರ್ಗಾಮಿಗಳನ್ನು ಒದಗಿಸುವ ದಿಸೆಯಲ್ಲಿ ಕಾರ್ಯ ಮಗ್ನವಾಗಿದೆ. ನೌಕಾ ಸೇನೆಗೆ ಆಧುನಿಕ ಯುದ್ಧೋಪಕರಣಗಳು ಮತ್ತು ಯುದ್ಧ ನೌಕೆಗಳನ್ನು ನಿರಂತರವಾಗಿ ಪೂರೈಸಲಾಗುತ್ತಿದೆ. 

Robust Future Phase of Defense Sector Self Reliance in India grg
Author
First Published Jun 1, 2024, 12:45 PM IST | Last Updated Jun 1, 2024, 12:45 PM IST

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಬೆಂಗಳೂರು(ಜೂ.01):  ತನ್ನ ಭೂ, ಜಲ ಮತ್ತು ವಾಯುಗಡಿಯ ರಕ್ಷಣೆ ಜಗತ್ತಿನ ಯಾವುದೇ ಸಾರ್ವಭೌಮ ರಾಷ್ಟ್ರದ ಮೂಲಭೂತ ಹಕ್ಕಾಗಿರುತ್ತದೆ. ಅದರಲ್ಲೂ ತನ್ನ ನೆರೆಹೊರೆ ರಾಷ್ಟ್ರಗಳಿಂದ ನಿರಂತರವಾಗಿ ಉಪಟಳ ಅನುಭವಿಯುವ ರಾಷ್ಟ್ರವೊಂದು, ತನ್ನ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವುದು ಸಹಜ. ಇದಕ್ಕೆ ಭಾರತ ತಾಜಾ ಉದಾಹರಣೆ. ರಕ್ಷಣಾ ಕ್ಷೇತ್ರದ ಅಭಿವೃದ್ಧಿ ಮತ್ತು ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಭಾರತ ದಿಟ್ಟ ಹೆಜ್ಜೆ ಇಟ್ಟು ದಶಕಗಳೇ ಉರುಳಿವೆ. ರಕ್ಷಣಾ ಕ್ಷೇತ್ರವನ್ನು ಮತ್ತಷ್ಟು ಸಬಲ ಮತ್ತು ಸ್ವಾವಲಂಬಿಯನ್ನಾಗಿ ಮಾಡುವುದು ನಮ್ಮ ಆದ್ಯ ಕರ್ತ್ಯವ್ಯ ಕೂಡ ಆಗಿದೆ.  

ಅದರಲ್ಲೂ ಭಾರತದ ಜಲ ಗಡಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ನೌಕಾ ಸೇನೆಗೆ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಯುದ್ಧ ನೌಕೆಗಳು ಮಾತು ಜಲಾಂತರ್ಗಾಮಿಗಳನ್ನು ಒದಗಿಸುವ ದಿಸೆಯಲ್ಲಿ ಕಾರ್ಯ ಮಗ್ನವಾಗಿದೆ. ನೌಕಾ ಸೇನೆಗೆ ಆಧುನಿಕ ಯುದ್ಧೋಪಕರಣಗಳು ಮತ್ತು ಯುದ್ಧ ನೌಕೆಗಳನ್ನು ನಿರಂತರವಾಗಿ ಪೂರೈಸಲಾಗುತ್ತಿದೆ. ಹಾಗೆಯೆ ನೌಕಾ ಸೇನೆಗೆ ಬಲ ತುಂಬುವ ಕಾರ್ಯ ಇಂದು ನಿನ್ನೆಯದಲ್ಲ. ಸ್ವದೇಶಿ ತಂತ್ರಜ್ಞಾನ ಬೆಳೆದಂತೆಲ್ಲಾ ಕಾಲಕಾಲಕ್ಕೆ ನೌಕಾ ಸೇನೆಯ ಬಲವನ್ನು ಹೆಚ್ಚಿಸುತ್ತಲೇ ಬರಲಾಗುತ್ತಿದೆ. ಈ ಪೈಕಿ ಐಎನ್‌ಎಸ್ ಪರಮಾಣು ಜಲಾಂತರ್ಗಾಮಿ ಅತ್ಯಂತ ಪ್ರಮುಖವಾದುದು. 

ಐಎನ್‌ಎಸ್ ವಿಕ್ರಾಂತ್ ಹೆಗಲೇರಲಿದೆ ರಫೇಲ್ ಫೈಟರ್: ಭಾರತ-ಫ್ರಾನ್ಸ್ ಒಪ್ಪಂದಕ್ಕೆ ಹೊಸ ಖದರ್..!

ಐಎನ್‌ಎಸ್ ಅರಿಹಂತ್ ಭಾರತದಲ್ಲಿ ನಿರ್ಮಾಣವಾದ ಮೊದಲ ಸ್ವದೇಶಿ ನಿರ್ಮಿತ ಪರಮಾಣು ಜಲಾಂತರ್ಗಾಮಿ. 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧದ ತನ್ನ ವಿಜಯದ ಹತ್ತನೇ ವಾರ್ಷಿಕೋತ್ಸವವನ್ನು ಆಚರಿಸುವ ಸುಸಂದರ್ಭದಲ್ಲಿ, ಈ ಪರಮಾಣು ಜಲಾಂತರ್ಗಾಮಿಯನ್ನು ನೌಕಾಸೇನೆಯ ಬತ್ತಳಿಕೆಗೆ ಅಧಿಕೃತವಾಗಿ ಸೇರಿಸಲಾಯಿತು. 1984ರಲ್ಲೇ ಈ ಜಲಾಂತರ್ಗಾಮಿಯ ನಿರ್ಮಾಣ ಪ್ರಸ್ತಾವನೆ ಮಾಡಲಾಗಿತ್ತಾದರೂ, 1998ರಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿತ್ತು.

ಇದೀಗ ಭಾರಿ ಸದ್ದು ಮಾಡುತ್ತಿರುವ 'ಮೇಕ್-ಇನ್-ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ' ಉಪಕ್ರಮಗಳ ಅಡಿಯಲ್ಲಿ ಭಾರತದ ರಕ್ಷಣಾ ಕ್ಷೇತ್ರವನ್ನು ಹೆಚ್ಚು ಶಕ್ತಿಶಾಲಿಯಾಗಿ ಕಟ್ಟಲಾಗುತ್ತಿದೆ. ಆದರೆ ಈ ಉಪಕ್ರಮಗಳಿಗೂ ಮೊದಲೇ ಭಾರತದಲ್ಲಿ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿರುವುದು ಸ್ಪಷ್ಟವಾಗಿದೆ. 

ಐಎನ್‌ಎಸ್ ಅರಿಹಂತ್ ರಾಷ್ಟ್ರದ ಕೈಗಾರಿಕಾ ಪರಾಕ್ರಮಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ನಡುವಿನ ಗಟ್ಟಿ ಸಂಬಂಧಕ್ಕೂ ಈ ಜಲಾಂತರ್ಗಾಮಿ ತಾಜಾ ಉದಾಹರಣೆಯಾಗಿದೆ.  ದೇಶದ ಸುಪ್ರಸಿದ್ಧ ಎಲ್&ಟಿ ಸಂಸ್ಥೆಯು ಐಎನ್‌ಎಸ್ ಅರಿಹಂತ್ ಜಲಾಂತರ್ಗಾಮಿಯ  ಹಲ್ ಅನ್ನು ನಿರ್ಮಾಣ ಮಾಡಿತ್ತು. ಅದೇ ರೀತಿ ಟಾಟಾ ಪವರ್ ಸ್ಟ್ರಾಟೆಜಿಕ್ ಇಂಜಿನಿಯರಿಂಗ್ ವಿಭಾಗವು ನಿಯಂತ್ರಣ ವ್ಯವಸ್ಥೆಯನ್ನು ಒದಗಿಸಿತು. ಇನ್ನು ವಾಲ್ಚಂದನಗರ ಇಂಡಸ್ಟ್ರೀಸ್ ಸ್ಟೀಮ್ ಟರ್ಬೈನ್ ವ್ಯವಸ್ಥೆಯನ್ನು ಪೂರೈಸಿದರೆ, ಬಾಬಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಜಲಾಂತರ್ಗಾಮಿಯ ಹಲ್‌ನೊಳಗೆ ಹೊಂದಿಕೊಳ್ಳಲು ರಿಯಾಕ್ಟರ್ ನ ಗಾತ್ರವನ್ನು ಕುಗ್ಗಿಸಲು ಸಹಾಯ ಮಾಡಿದರು. ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಮತ್ತು ಚಲಾಯಿಸಲು ತಾಂತ್ರಿಕ ಸಾಮರ್ಥ್ಯವನ್ನು ಹೊಂದಿರುವ ಕೆಲವೇ ದೇಶಗಳ ಪಟ್ಟಿಗೆ ಭಾರತ ಸೇರುವಲ್ಲಿ, ಐಎನ್‌ಎಸ್ ಅರಿಹಂತ್ ನಿರ್ಮಾಣ ಅತ್ಯಂತ ಮುಖ್ಯ ಪಾತ್ರವಹಿಸಿದೆ.

ಐಎನ್‌ಎಸ್ ಅರಿಹಂತ್ ತನ್ನ ಕಾರ್ಯ ಆರಂಭಿಸಿದ ಕೆಲವೇ ದಿನಗಳಲ್ಲಿ, ಭಾರತವು ಪೃಥ್ವಿ ಕ್ಷಿಪಣಿಯ ನೌಕಾ ಆವೃತ್ತಿಯಾದ ಧನುಷ್ ಕ್ಷಿಪಣಿಯ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ ನಡೆಸಿತು. ಇದು 350 ಕಿಲೋಮೀಟರ್ ವ್ಯಾಪ್ತಿಯ, ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ.  ಧನುಷ್‌ ಒಟ್ಟು 500 ಕಿಲೋಗ್ರಾಂ ಪೇಲೋಡ್ ಸಾಮರ್ಥ್ಯ ಹೊಂದಿದ್ದು, ಸಾಂಪ್ರದಾಯಿಕ ಮತ್ತು ಪರಮಾಣು ಬಾಂಬ್‌ಗಳನ್ನು ಬಳಸಿಕೊಂಡು ಭೂಮಿ ಮತ್ತು ನೀರಿನಲ್ಲಿ ನಿರ್ಧಿಷ್ಟ ಗುರಿಗಳನ್ನು ನಾಶಮಾಡಲು ಅನುವು ಮಾಡಿಕೊಡುತ್ತದೆ.

ಕಳೆದ 15 ವರ್ಷಗಳಲ್ಲಿ ಭಾರತದ ರಕ್ಷಣಾ ಕ್ಷೇತ್ರವು ಗಣನೀಯ ಪರಿವರ್ತನೆಯನ್ನು ಕಂಡಿದೆ. ಈ ವಲಯದ ಸ್ವದೇಶೀಕರಣವು ಅತ್ಯಂತ ಅವಶ್ಯಕವಾಗಿದೆ. ಮೇಕ್-ಇನ್-ಇಂಡಿಯಾ ಉಪಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಲವಾದ ಬೆಂಬಲವು, ರಕ್ಷಣಾ ಕ್ಷೇತ್ರದ ಗಮನಾರ್ಹ ಅಭಿವೃದ್ಧಿಗೆ ಕಾರಣವಾಗಿದೆ. ಭಾರತದ ರಕ್ಷಣಾ ರಫ್ತು ದಾಖಲೆಯ 21,083 ಕೋಟಿ ರೂ.ಗೆ ಏರಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ.30ರಷ್ಟು ಹೆಚ್ಚು ಎಂಬುದು ಇಲ್ಲಿ ಉಲ್ಲೇಖನೀಯ.

ಆಮದು ಪರ್ಯಾಯಕ್ಕೆ ಆದ್ಯತೆ ನೀಡುವ ಸ್ವದೇಶೀಕರಣ ನೀತಿಯ ಪರಿಣಾಮವಾಗಿ, ಭಾರತೀಯ ತಯಾರಕರು ರಕ್ಷಣಾ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಭೂಸೇನೆಗೆ ಅವಶ್ಯವಾದ ಅತ್ಯಾಧುನಿಕ ಯುದ್ಧ ವಾಹನಗಳು, ಆರ್ಟಿಕ್ಯುಲೇಟೆಡ್ ಆಲ್-ಟೆರೈನ್ ವೆಹಿಕಲ್ಸ್, ರಿಮೋಟ್‌ ಕಂಟ್ರೋಲ್ ಪೈಲಟ್ ಏರ್‌ಬೋರ್ನ್ ವೆಹಿಕಲ್‌ಗಳು ಮತ್ತು ನೌಕಾ ಶಿಪ್‌ಬೋರ್ನ್ ಮಾನವರಹಿತ ವೈಮಾನಿಕ ವ್ಯವಸ್ಥೆಗಳು ಇತ್ಯಾದಿಗಳು ಸ್ಥಾನ ಪಡೆದಿವೆ.
ರಕ್ಷಣಾ ಕ್ಷೇತ್ರದ ಬಲವರ್ಧನೆಯಲ್ಲಿ ಸ್ಥಳೀಯ ಉದ್ಯಮಗಳ ಮಹತ್ವವನ್ನು ಅರಿತಿರುವ ಕೇಂದ್ರ ಸರ್ಕಾರ, ಬಂಡವಾಳ ಸ್ವಾಧೀನವನ್ನು ಒಟ್ಟು ಬಜೆಟ್‌ನ ಶೇ.75ರಷ್ಟು ನಿಗದಿಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮತ್ತು ಮಜಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ನಂತಹ ಕಂಪನಿಗಳಲ್ಲಿ ಹೂಡಿಕೆ ಮಾಡಲು, ಭಾರತೀಯ ಹೂಡಿಕೆದಾರರು ಗಮನಾರ್ಹ ಆಸಕ್ತಿಯನ್ನು ತೋರಿಸಲು ಇದು ಕಾರಣವಾಗಿದೆ. 

ಟರ್ಬ್ಯುಲೆನ್ಸ್ ದುರಂತ: ಸಿಂಗಾಪುರ್ ಏರ್‌ಲೈನ್ಸ್ ಘಟನೆ ಮತ್ತು ವಿಮಾನಯಾನದ ಭವಿಷ್ಯ

HAL ನಂತಹ ಕಂಪನಿಗಳಿಂದ ಭಾರತದ ರಫ್ತುಗಳಲ್ಲಿ ಡೋರ್ನಿಯರ್ ವಿಮಾನಗಳು, ಸುಧಾರಿತ ಲಘು ಹೆಲಿಕಾಪ್ಟರ್‌ಗಳು ಸೇರಿವೆ. ಹೆಚ್ಚುವರಿಯಾಗಿ ಪಟ್ಟಿಯಲ್ಲಿ ಬ್ರಹ್ಮೋಸ್ ಕ್ಷಿಪಣಿಗಳು, ಫಿರಂಗಿ ಬಂದೂಕುಗಳು, ರಾಡಾರ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ಕೂಡ ಸೇರಿವೆ. ಫೋರ್ಬ್ಸ್ ಉಲ್ಲೇಖಿಸಿದಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ಅವುಗಳ ಪೂರೈಕೆದಾರರು ರಕ್ಷಣಾ ಯೋಜನೆಯ ಮಾತುಕತೆಗಳಲ್ಲಿ ಮುಂದಾಳತ್ವ ವಹಿಸಬೇಕಿರುವುದು ಕೂಡ ಅಗತ್ಯವಾಗಿದೆ.

ಮೇ7 ರ ಹೊತ್ತಿಗೆ ಬೆಂಗಳೂರು ಮೂಲದ ಸಾರ್ವಜನಿಕ ವಲಯದ ಕಂಪನಿ HAL ನ ಮಾರುಕಟ್ಟೆ ಮೌಲ್ಯವು 2.48 ಲಕ್ಷ ಕೋಟಿ ರೂ. ಗೆ ಏರಿಕೆ ಕಂಡಿದೆ. ಇದು ಆಗಸ್ಟ್ 2022ರಲ್ಲಿ 67,000 ಕೋಟಿ ರೂ. ನಷ್ಟಿತ್ತು. ಇದು ಮಾರುಕಟ್ಟೆ ಬಂಡವಾಳೀಕರಣದ ಮೂಲಕ ಬೆಳೆಯುತ್ತಿರುವ ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ರಕ್ಷಣಾ ಕಂಪನಿಯಾಗಿದೆ. ಅದೇ ರೀತಿ ಮತ್ತೊಂದು ಸಾರ್ವಜನಿಕ ರಕ್ಷಣಾ ತಯಾರಕ ಸಂಸ್ಥೆ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 1.66 ಲಕ್ಷ ಕೋಟಿ ರೂ. ಮೌಲ್ಯದ ಸಂಸ್ಥೆಯಾಗಿ ಬೆಳೆದಿದೆ. ಇನ್ನು ಮಜಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಮೌಲ್ಯ 43,000 ಕೋಟಿ ರೂ. ಆಗಿದ್ದು, ಭಾರತದ ರಕ್ಷಣಾ ವಲಯದಲ್ಲಿ ಹೂಡಿಕೆದಾರರ ಬಲವಾದ ವಿಶ್ವಾಸಕ್ಕೆ  ಈ ಅಂಕಿಅಂಶಗಳು ಸಾಕ್ಷಿಯಾಗಿವೆ.

ಒಟ್ಟಿನಲ್ಲಿ ರಕ್ಷಣಾ ಕ್ಷೇತ್ರದ ಬಲವರ್ಧನೆ ಭಾರತದ ಪ್ರಮುಖ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಭಾರತವು ಇಡುತ್ತಿರುವ ದಿಟ್ಟ ಹೆಜ್ಜೆಗಳನ್ನು ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬಲಾಢ್ಯ ಭಾರತದ ಧ್ವನಿ ಮಾರ್ದನಿಸುತ್ತಿದ್ದು, ಭಾರತ ಏನು ಹೇಳಲು ಬಯಸುತ್ತಿದೆ ಎಂಬುದನ್ನು ಇಡೀ ವಿಶ್ವ ಕಿವಿಗೊಟ್ಟು ಆಲಿಸುತ್ತಿದೆ ಎಂಬುದು ಸುಳ್ಳಲ್ಲ.

Latest Videos
Follow Us:
Download App:
  • android
  • ios