ಅಕ್ಟೋಬರ್‌ 2 ಲಾಲ್‌ ಬಹದ್ದೂರ್‌ ಶಾಸ್ತಿ್ರ ಅವರ ಜನ್ಮದಿನವೂ ಹೌದು. ದೇಶದ ಇಬ್ಬರು ಅತ್ಯಂತ ಗೌರವಾನ್ವಿತರ ಜನ್ಮ ದಿನಾಚರಣೆ ಎಂಬ ಸಡಗರ ನಮ್ಮದು. ದೇಶ ಕಂಡ ಪ್ರಾಮಾಣಿಕ ಮತ್ತು ಸರಳ ರಾಜಕಾರಣಿಗಳಲ್ಲಿ ಶಾಸ್ತ್ರೀಜಿ ಪ್ರಮುಖರು. ಪ್ರಧಾನಿ ಪಟ್ಟಕ್ಕೇರಿದರೂ ತಮ್ಮ ಪ್ರಾಮಾಣಿಕತೆಯನ್ನು ಮೆರೆದವರು.

ಸರಳತೆ ಮತ್ತು ಪ್ರಾಮಾಣಿಕತೆಗೆ ಅನ್ವರ್ಥದಂತೆ ಬದುಕಿ ಮಾದರಿಯಾದವರು. ಶಾಸ್ತ್ರೀಜಿಯವರು ಬದುಕಿರುವವರೆಗೂ ಅವರ ಬಳಿ ಒಂದು ಮನೆಯಿರಲಿಲ್ಲ, ಆಸ್ತಿ ಅಂತಸ್ತುಗಳಿರಲಿಲ್ಲ. ಆದರೆ ಅಂತಹ ವ್ಯಕ್ತಿ ಸಾಯುವುದಕ್ಕೂ ಮುನ್ನ ಭಾರತ ದೇಶಕ್ಕೆ ಭದ್ರವಾದ ಬುನಾದಿಯೊಂದನ್ನು ಹಾಕಿಕೊಟ್ಟಿದ್ದರು. ದೇಶದ ಜನರಲ್ಲಿ ಸ್ಫೂರ್ತಿಯ ಚಿಲುಮೆಯನ್ನು ಚಿಮ್ಮಿಸಿದ್ದರು. ಭವಿಷ್ಯದ ಭವ್ಯ ಭಾರತದ ಬಗ್ಗೆ ಅದ್ಭುತವಾದ ಕನಸುಗಳನ್ನು ಚಿಗುರಿಸಿದ್ದರು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಓಲೈಕೆಯ ರಾಜಕಾರಣವನ್ನು ಮೀರಿ ಭಾರತೀಯರಲ್ಲಿ ದೇಶಭಕ್ತಿ ಮತ್ತು ಪ್ರಾಮಾಣಿಕತೆಯ ಬೀಜವನ್ನು ಬಿತ್ತಿ ಹೋಗಿದ್ದರು ಶಾಸ್ತ್ರೀಜಿ.

ವೇತನ ಕಡಿಮೆ ಮಾಡಲು ಪತ್ರ!

ಗೆಳೆಯರೊಬ್ಬರು ಶಾಸ್ತ್ರೀಜಿ ಅವರ ಬಳಿ ಸಾಲ ಕೇಳಲು ಬಂದಿರುತ್ತಾರೆ. ನೆರವು ನೀಡಲಾಗದ ತಮ್ಮ ಅಸಹಾಯಕತೆಯನ್ನು ಶಾಸ್ತ್ರಿಗಳು ತೋಡಿಕೊಳ್ಳುತ್ತಾರೆ. ಆದರೆ ಅವರ ಶ್ರೀಮತಿ ಮನೆಯ ಖರ್ಚಿಗೆ ಕೊಟ್ಟಹಣ ಉಳಿಸಿ ಕೂಡಿಟ್ಟಿರುವ ಹಣವನ್ನು ಕೊಡುತ್ತಾರೆ. ಆಗ ಗೆಳೆಯನಿಗೆ ಸಹಾಯ ಮಾಡಲು ಹೆಂಡತಿಯ ಕೂಡಿಟ್ಟಹಣ ನೆರವಾಯಿತು ಎಂದು ಖುಷಿಯಾದರೂ ತಾನು ಅಗತ್ಯಕ್ಕಿಂತ ಹೆಚ್ಚು ವೇತನ ಪಡೆಯುತ್ತಿದ್ದೇನೆ ಎಂಬ ಅಳುಕು ಶಾಸ್ತ್ರೀಜಿಯನ್ನು ಕಾಡಲಾರಂಭಿಸಿತು. ನಂತರ ಅವರು ಕಾಂಗ್ರೆಸ್‌ ಕಚೇರಿಗೆ ಪತ್ರ ಬರೆದು ವೇತನ ಕಡಿಮೆ ಮಾಡಲು ನಿವೇದಿಸಿಕೊಂಡಾಗ ಇಡೀ ದೇಶವೇ ಬೆರಗಾಗುತ್ತದೆ.

ಶಾಸ್ತ್ರಿ ಸಾವಿನ ಬಗ್ಗೆ ಹೊಸ ಪುಸ್ತಕ: ಎಸ್‌ ಎಲ್ ಭೈರಪ್ಪಗೆ ಮೊದಲ ಪ್ರತಿ!

ಆಹಾರ ಉಳಿಸಲು ಉಪವಾಸ

ಯುದ್ಧದ ಸಂದರ್ಭದಲ್ಲಿ ಆಹಾರ ಕೊರತೆ ಎದುರಿಸುವ ಭೀತಿ ಕಾಡುವಾಗ ವಾರಕ್ಕೆ ಒಂದು ಹೊತ್ತು ಉಪವಾಸ ಇರಲು ದೇಶದ ಜನತೆಗೆ ಕರೆ ಕೊಡುತ್ತಾರೆ. ಶಾಸ್ತ್ರೀಜಿಯವರ ಸರಳ ಮತ್ತು ಪ್ರಾಮಾಣಿಕ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದ ಜನ ಅವರ ಮಾತನ್ನು ನಿಷ್ಠೆಯಿಂದ ಪಾಲಿಸುತ್ತಾರೆ. ಭಾರತ ಕೃಷಿ ಪ್ರಧಾನ ರಾಷ್ಟ್ರ, ಇಲ್ಲಿ ರೈತರೇ ದೇಶದ ಬೆನ್ನೆಲುಬು ಎಂಬುದನ್ನು ಅವರು ಅರಿತಿದ್ದರು. ನೆಹರು ವಿದೇಶಿ ನೀತಿಗಳು ನಮ್ಮ ನೆಲದ ಸಂಸ್ಕೃತಿಗೆ ಸರಿ ಹೊಂದುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ವಿಶೇಷ ಕೃಷಿ ನೀತಿ ಜಾರಿಗೊಳಿಸಲು ಉತ್ಸುಕರಾಗಿದ್ದರು. ಅವರ ಜೈ ಕಿಸಾನ್‌ ಘೋಷಣೆ ದೇಶದ ರೈತರನ್ನು ಉತ್ತೇಜಿಸಿತು.

ಹೊಸದಾಗಿ ಸ್ವಾತಂತ್ರ್ಯ ಪಡೆದ ದೇಶಕ್ಕೆ ಗಡಿ ವಿವಾದ ಕಾಡುತ್ತಿತ್ತು. ಇಂತಹ ಸಂದರ್ಭದಲ್ಲಿ ಯೋಧರ ತ್ಯಾಗ ಬಲಿದಾನದ ಮಹತ್ವವನ್ನು ಅವರು ಅರ್ಥ ಮಾಡಿಕೊಂಡಿದ್ದರು. ದೇಶದ ಗಡಿ ಕಾಯುವ ಯೋಧ ಮತ್ತು ಹೊಟ್ಟೆತುಂಬಿಸುವ ರೈತ ನಮ್ಮ ಬದುಕಿನ ಅವಿಭಾಜ್ಯ ಅಂಗ ಎಂದು ಮನದಟ್ಟು ಮಾಡಲು ‘ಜೈ ಜವಾನ್‌ ಜೈ ಕಿಸಾನ್‌’ ಘೋಷಣೆ ಮೊಳಗಿಸಿದರು. ಇಂದಿಗೂ ಈ ಘೋಷಣೆ ಅರ್ಥಪೂರ್ಣ ಎನಿಸಿ ರಾಷ್ಟ್ರ ಪ್ರೇಮ ನೂರ್ಮಡಿಸುತ್ತದೆ.

ನಿಗೂಢ ಸಾವಿಗೆ ಇನ್ನೂ ಉತ್ತರವಿಲ್ಲ

ಸೀಮಿತ ಕಾಲಾವಧಿಯಲ್ಲಿ ಅತ್ಯುತ್ತಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಶಾಸ್ತ್ರೀಜಿ ಪಾತ್ರರಾದರು. ಇವರ ಪ್ರಾಮಾಣಿಕತೆ ಮತ್ತು ಸರಳತೆ ಜಗತ್ತಿನ ಗಮನ ಸೆಳೆಯಿತು. ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ಮಾತಿಗೆ ಅವರು ನಿದರ್ಶನರಾದರು. ಅವರ ಸಾವು ಅನೇಕ ನಿಗೂಢಗಳನ್ನು ಉಳಿಸಿ ಹೋಯಿತು. ಅವರ ಸಾವಿನ ನಂತರ ಅವರ ಕುಟುಂಬದ ಸದಸ್ಯರೂ ಶಾಸ್ತ್ರೀಜಿಗಿದ್ದ ಅದೇ ಬದ್ಧತೆಯನ್ನು ತೋರಿದರು. ಶಾಸ್ತ್ರೀಜಿ ಬದುಕಿದ್ದಾಗ ಬ್ಯಾಂಕ್‌ ಸಾಲ ಪಡೆದು ಕಾರು ತೆಗೆದುಕೊಂಡಿದ್ದರು. ಅವರ ಪ್ರಾಮಾಣಿಕತೆಗೆ ಮನಸೋತ ಬ್ಯಾಂಕ್‌ ಆಡಳಿತ ಮಂಡಳಿ ಸಾವಿನ ನಂತರ ಸಾಲ ಮನ್ನಾ ಮಾಡಲು ನಿರ್ಧಾರ ಮಾಡಿತು. ಆದರೆ ಶಾಸ್ತಿ್ರಯವರ ಪತ್ನಿ ಪತಿಯ ಪೆನ್ಷನ್‌ ಹಣದಲ್ಲಿ ಸಾಲ ತೀರಿಸುವೆ ಎಂದು ಬ್ಯಾಂಕ್‌ ನಿರ್ಧಾರವನ್ನು ಸೌಜನ್ಯದಿಂದ ನಿರಾಕರಿಸಿದರು.

ಇಂದು ಹಳ್ಳಿಯಿಂದ ದಿಲ್ಲಿಯವರೆಗೆ ಯಾವುದಾದರೂ ಸಣ್ಣ ಅಧಿಕಾರ ಸಿಕ್ಕರೆ ಸಾಕು ಹಣ ಬಾಚುವ ಭ್ರಷ್ಟರಾಜಕಾರಣಿಗಳನ್ನು ನೋಡುವ ನಮಗೆ ಶಾಸ್ತ್ರೀಯವರ ಬದುಕಿನ ಘಟನೆಗಳು ದಂತಕತೆ ಎನಿಸುವುದು ಸಹಜ. ಆದರೂ ‘ಹೀಗಿದ್ದರು ನೋಡಿ ನಮ್ಮ ಶಾಸ್ತ್ರೀಜಿ’ ಎಂದು ಸ್ಮರಿಸುವುದು ಭಾರತೀಯರ ಅಭಿಮಾನ, ಗೌರವ ಮತ್ತು ಹೆಮ್ಮೆ. ಅವರ ಬದುಕಿನ ಬದ್ಧತೆಗೆ ಸಾವಿರದ ನಮನಗಳು.

- ಪ್ರೊ.ಸಿದ್ದು ಯಾಪಲಪರವಿ, ಕಾರಟಗಿ