ಮುಜಫ್ಛರ್‌ಪುರ(ಅ.29): ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ತೇಜಸ್ವಿ ಯಾದವ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಅವರನ್ನು ‘ಜಂಗಲ್‌ ರಾಜ್‌ನ ಯುವರಾಜ’ ಎಂದು ಕರೆದಿದ್ದಾರೆ. ಅಲ್ಲದೆ, ಅವರ ಪಕ್ಷವು ಅಪಹರಣಗಳ ಮೇಲೆ ಕಾಪಿರೈಟ್‌ ಹೊಂದಿದೆ ಎಂದೂ ಛೇಡಿಸಿದ್ದಾರೆ.

ಬಿಹಾರದ ಚುನಾವಣೆ ಪ್ರಚಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಪರ ಬುಧವಾರ ರಾರ‍ಯಲಿಯಲ್ಲಿ ಮಾತನಾಡಿದ ಮೋದಿ, 15 ವರ್ಷಗಳ ಲಾಲುಪ್ರಸಾದ್‌ ಆಳ್ವಿಕೆಯಲ್ಲಿ ಬಿಹಾರಕ್ಕೆ ಪ್ರಾಪ್ತವಾಗಿದ್ದ ಜಂಗಲ್‌ ರಾಜ್‌ ಎಂಬ ಕುಖ್ಯಾತಿಯನ್ನು ನೆನಪಿಸಿ ತೀಕ್ಷ$್ಣ ವಾಗ್ದಾಳಿ ನಡೆಸಿದರು. ಈ ವೇಳೆ, ತೇಜಸ್ವಿ ಯಾದವ್‌ ಅವರ ಹೆಸರು ಹೇಳದೆಯೇ ಅವರನ್ನು ಜಂಗಲ್‌ ರಾಜ್‌ನ ಯುವರಾಜ ಎಂದು ಕರೆದರು. ಜೊತೆಗೆ, ಕೊರೋನಾದಿಂದ ಜನರು ಸಂಕಷ್ಟಕ್ಕೆ ಸಿಲುಕಿರುವ ಈ ಹೊತ್ತಿನಲ್ಲಿ ಜಂಗಲ್‌ ರಾಜ್‌ ಕೂಡ ಬಂದರೆ ಬಿಹಾರಕ್ಕೆ ದುಪ್ಪಟ್ಟು ಆಘಾತವಾಗಲಿದೆ ಎಂದೂ ಹೇಳಿದರು.

ಇದೇ ವೇಳೆ, ತಾನು ಅಧಿಕಾರಕ್ಕೆ ಬಂದರೆ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಉದ್ಯೋಗ ಸೃಷ್ಟಿಸುವುದಾಗಿ ಆರ್‌ಜೆಡಿ ನೀಡಿರುವ ಭರವಸೆಯನ್ನು ತರಾಟೆ ತೆಗೆದುಕೊಂಡ ಅವರು, ‘ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಸೃಷ್ಟಿಸುವುದು ಹಾಗಿರಲಿ. ಅವರು ಅಧಿಕಾರಕ್ಕೆ ಬಂದರೆ ಖಾಸಗಿ ಕಂಪನಿಗಳೂ ಬಿಹಾರ ಬಿಟ್ಟು ಓಡಿಹೋಗುತ್ತವೆ. ಏಕೆಂದರೆ ಇವರು ಒತ್ತೆಹಣಕ್ಕಾಗಿ ಫೋನ್‌ ಮಾಡತೊಡಗುತ್ತಾರೆ. ಆಗ ಜನರಿಗೆ ಖಾಸಗಿ ಕಂಪನಿಗಳಲ್ಲೂ ಕೆಲಸ ಇರುವುದಿಲ್ಲ. ಜಂಗಲ್‌ ರಾಜ್‌ನ ಯುವರಾಜನಿಂದ ಜನರು ಏನನ್ನಾದರೂ ನಿರೀಕ್ಷಿಸಲು ಸಾಧ್ಯವೇ? ಅವರ ಹಿನ್ನೆಲೆಯನ್ನು ನೋಡಿ ಮೌಲ್ಯಮಾಪನ ಮಾಡಬೇಕೆಂಬುದು ನನಗಿಂತ ಚೆನ್ನಾಗಿ ಬಿಹಾರದ ಜನರಿಗೆ ಗೊತ್ತು’ ಎಂದು ತಿಳಿಸಿದರು.