Asianet Suvarna News Asianet Suvarna News

ಆಳ ಸಮುದ್ರ ಅಧ್ಯಯನಕ್ಕೆ ಗ್ರೀನ್‌ ಸಿಗ್ನಲ್‌!

* ಆಳ ಸಮುದ್ರ ಅಧ್ಯಯನಕ್ಕೆ ಗ್ರೀನ್‌ ಸಿಗ್ನಲ್‌

* ಸಮುದ್ರದ 21000 ಅಡಿ ಆಳದಲ್ಲಿ ಸಂಶೋಧನೆಗೆ ನಿರ್ಧಾರ

* 4077 ಕೋಟಿ ರು.ಮೊತ್ತದ ಯೋಜನೆಗೆ ಕೇಂದ್ರದ ಸಮ್ಮತಿ

* ಈ ತಂತ್ರಜ್ಞಾನ ಹೊಂದಿದ 6ನೇ ದೇಶವಾಗಲಿದೆ ಭಾರತ

Cabinet approves Deep Ocean Mission to study climate change explore resources pod
Author
Bangalore, First Published Jun 17, 2021, 7:48 AM IST

ನವದೆಹಲಿ(ಜೂ.17): ನೀಲಿ ಆರ್ಥಿಕತೆಯತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ಸರ್ಕಾರ, ಅಂದಾಜು 4077 ಕೋಟಿ ರು. ಮೊತ್ತದ ಆಳಸಮುದ್ರ ಅಧ್ಯಯನ, ಸಂಶೋಧನಾ ಯೋಜನೆಗೆ ತನ್ನ ಅನುಮೋದನೆ ನೀಡಿದೆ. ಈ ಮೂಲಕ ಇಂಥ ತಂತ್ರಜ್ಞಾನ ಸಿದ್ಧಿಸಿಕೊಂಡ ವಿಶ್ವದ ಕೇವಲ 6ನೇ ದೇಶವಾಗುವತ್ತ ದಾಪುಗಾಲಿಟ್ಟಿದೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಆಳ ಸಮುದ್ರ ಯೋಜನೆಗೆ ಅನುಮೋದನೆ ನೀಡಲಾಗಿದೆ. ‘ಮುಂದಿನ 5 ವರ್ಷಗಳಲ್ಲಿ ಯೋಜನೆ ಹಂತಹಂತವಾಗಿ ಜಾರಿಯಾಗಲಿದೆ. ಇದು ನೀಲಿ ಆರ್ಥಿಕತೆಗೆ ಬೆಂಬಲ ನೀಡುವುದರ ಜೊತೆಗೆ ಭಾರತವನ್ನು ಹೊಸ ಯುಗದತ್ತ ಕೊಂಡೊಯ್ಯಲಿದೆ’ ಎಂದು ಅನುಮೋದನೆ ಮಾಹಿತಿ ನೀಡಿದ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ಕಳೆದ ಬಜೆಟ್‌ನಲ್ಲೇ ಈ ಯೋಜನೆ ಘೋಷಿಸಿದ್ದ ಸರ್ಕಾರ, ಇದಕ್ಕೆ 4000 ಕೋಟಿ ರು. ನಿಗದಿಪಡಿಸಿತ್ತು.

ಏನಿದು ಯೋಜನೆ?:

ಆಳ ಸಮುದ್ರದಲ್ಲಿ ಸಂಪನ್ಮೂಲಗಳಿಗಾಗಿ ಶೋಧನೆ, ಆಳ ಸಮುದ್ರ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಮುದ್ರ ಸಂಪನ್ಮೂಲಗಳ ಸುಸ್ಥಿರ ಬಳಕೆಯ ಉದ್ದೇಶದಿಂದ ಕೇಂದ್ರ ಭೂವಿಜ್ಞಾನ ಸಚಿವಾಲಯವು ಈ ಆಳ ಸಮುದ್ರ ಯೋಜನೆ ರೂಪಿಸಿದೆ.

ಜೊತೆಗೆ ಹವಾಮಾನ ಬದಲಾವಣೆಯಿಂದ ಏನಾದರೂ ಬದಲಾವಣೆ ಆಗಿದ್ದರೆ ಆ ಬಗ್ಗೆ ಅಧ್ಯಯನ, ಆಳ ಸಮುದ್ರದಲ್ಲಿನ ಜೀವವೈವಿಧ್ಯತೆಯ ಬಗ್ಗೆಯೂ ಅಧ್ಯಯನ ನಡೆಸಲಿದೆ. ಸಮುದ್ರದಲ್ಲಿ 6000 ಮೀಟರ್‌ (21000 ಅಡಿ) ಆಳದಲ್ಲಿ ಈ ಸಂಶೋಧನೆ ನಡೆಯಲಿದೆ.

6ನೇ ದೇಶ:

ಹಾಲಿ ಅಮೆರಿಕ, ರಷ್ಯಾ, ಫ್ರಾನ್ಸ್‌, ಜಪಾನ್‌ ಮತ್ತು ಚೀನಾ ದೇಶಗಳು ಮಾತ್ರವೇ ಇಂಥ ತಂತ್ರಜ್ಞಾನ ಹೊಂದಿವೆ. ಈ ಸಾಲಿಗೆ ಈಗ ಭಾರತವೂ ಸೇರಲಿದೆ.

ಯೋಜನೆಯ ಮುಖ್ಯಾಂಶ

- ಆಳ ಸಮುದ್ರ ಗಣಿಗಾರಿಕೆ ಮತ್ತು ಇದಕ್ಕೆ ಬೇಕಾದ ವಾಹನ ಅಭಿವೃದ್ಧಿ

- ಸಮುದ್ರ ಹವಾಮಾನ ಬದಲಾವಣೆ ಸಲಹಾ ಸೇವೆಗಳ ಅಭಿವೃದ್ಧಿ

- ಆಳ ಸಮುದ್ರ ಜೀವವೈವಿಧ್ಯತೆಯ ಸಂಶೋಧನೆಗಾಗಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಂರಕ್ಷಣೆ

- ಆಳ ಸಮುದ್ರ ಸಮೀಕ್ಷೆ ಮತ್ತು ಸಂಶೋಧನೆ

- ಸಮುದ್ರದಿಂದ ಇಂಧನ ಮತ್ತು ಸಿಹಿನೀರು ಹೊರತೆಗೆಯುವ ತಂತ್ರಜ್ಞಾನ ಅಭಿವೃದ್ಧಿ

- ಸಮುದ್ರ ಜೀವಶಾಸ್ತ್ರ ಕುರಿತು ಅತ್ಯಾಧುನಿಕ ಸಮುದ್ರ ಕೇಂದ್ರ ಆರಂಭ

Follow Us:
Download App:
  • android
  • ios