ಪಟನಾ[ಡಿ.01]: ದೇಶಾದ್ಯಂತ ಈರುಳ್ಳಿ ದರವು ಸೇಬಿಗಿಂತಲೂ ದುಬಾರಿಯಾಗಿ ಜನ ಸಾಮಾನ್ಯರು ಸಂಕಷ್ಟಕ್ಕೀಡಾಗಿರುವಾಗಲೇ, ಬಿಹಾರ ಸರ್ಕಾರ ಕೇವಲ 35 ರು.ಗೆ ಕೇಜಿ ಈರುಳ್ಳಿಯನ್ನು ಗ್ರಾಹಕರಿಗೆ ಪೂರೈಸುವ ಮಹತ್ಕಾರ್ಯಕ್ಕೆ ಮುಂದಾಗಿದೆ. ಈರುಳ್ಳಿ ಖರೀದಿಗಾಗಿ ಗಂಟೆಗಟ್ಟಲೇ ಸಾಲುಗಟ್ಟಿನಿಂತಿರುವ ಗ್ರಾಹಕರು ತಾಳ್ಮೆ ಕಳೆದುಕೊಂಡು ತಮ್ಮ ಮೇಲೆ ದಾಳಿ ಮಾಡುತ್ತಾರೆ ಎಂಬ ಭೀತಿಯಿಂದ ಬಿಹಾರ ರಾಜ್ಯ ಸಹಕಾರ ಮಾರುಕಟ್ಟೆಒಕ್ಕೂಟದ ನೌಕರರು ತಮ್ಮ ತಲೆಗೆ ಹೆಲ್ಮೆಟ್‌ ಧರಿಸಿ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ.

ಜನಸಾಮಾನ್ಯರ ಅನುಕೂಲಕ್ಕಾಗಿ ಕಡಿಮೆ ಬೆಲೆಗೆ ಬಿಹಾರ ಸಹಕಾರ ಮಾರುಕಟ್ಟೆಒಕ್ಕೂಟ ಮೂಲಕ ಜನರ ಕಾಲೋನಿಗಳಿಗೆ ಹೋಗಿ ಈರುಳ್ಳಿ ಪೂರೈಸುತ್ತಿರುವ ಸರ್ಕಾರ, ನೌಕರರ ಭದ್ರತೆಗೆ ಪೊಲೀಸ್‌ ನಿಯೋಜನೆ ಸೇರಿದಂತೆ ಇನ್ಯಾವುದೇ ಭದ್ರತಾ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಈರುಳ್ಳಿ ಖರೀದಿದಾರರಿಂದ ತಮ್ಮ ಪ್ರಾಣಕ್ಕೆ ಸಂಚಕಾರವಿದೆ ಎಂದು ನೌಕರರು ಹೆಲ್ಮೆಟ್‌ ಧರಿಸುತ್ತಿದ್ದಾರೆ.

ಬಿಹಾರದ ಅರಾದಲ್ಲಿ ಇತ್ತೀಚೆಗೆ ಅಗ್ಗದ ಈರುಳ್ಳಿ ಸಿಗಲಿಲ್ಲವೆಂಬ ಕಾರಣಕ್ಕೆ ಗ್ರಾಹಕರು ಕಲ್ಲು ತೂರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಹಕಾರ ಮಾರುಕಟ್ಟೆಮಳಿಗೆಯಲ್ಲಿ ಈರುಳ್ಳಿ ದಾಸ್ತಾನು ಕೊರತೆಯಿಲ್ಲದ ಹೊರತಾಗಿಯೂ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂದಾಲೋಚನಾ ಕ್ರಮವಾಗಿ ಮುಖಕ್ಕೆ ಹೆಲ್ಮೆಟ್‌ ಧರಿಸಿ ಈರುಳ್ಳಿ ಮಾರುತ್ತಿದ್ದೇವೆ ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಸಾಮಾನ್ಯ ಮಾರುಕಟ್ಟೆಯಲ್ಲಿ ಪ್ರತೀ ಕೇಜಿ ಈರುಳ್ಳಿ 80 ರು.ನಿಂದ 100 ರು.ವರೆಗೂ ಮಾರಾಟವಾಗುತ್ತಿದೆ. ಆದರೆ, ಸಹಕಾರ ಮಾರುಕಟ್ಟೆಒಕ್ಕೂಟ ಪ್ರತೀ ಕೇಜಿಗೆ 35 ರು. ಮಾರಾಟವಾಗುತ್ತಿದೆ.