ನವದೆಹಲಿ[ಜ.05]: ಕರ್ನಾಟಕದ ವಿಶ್ವದ ಪ್ರಸಿದ್ಧ ಆಕರ್ಷಣೆಗಳಾಗಿರುವ ಮೈಸೂರು ಅರಮನೆ, ಹಂಪಿ ಸ್ಮಾರಕ ಹಾಗೂ ಗೋಲ ಗುಂಬಜ್‌ ಮಾದರಿಗಳನ್ನು ಲೋಹದ ತ್ಯಾಜ್ಯ ಮತ್ತು ಗುಜರಿ ವಸ್ತುಗಳನ್ನು ಬಳಸಿ ನಿರ್ಮಾಣ ಮಾಡುವ ಕಾರ್ಯ ರಾಷ್ಟ್ರ ರಾಜಧಾನಿಯಲ್ಲಿ ಆರಂಭವಾಗಿದೆ.

ಪಂಜಾಬಿ ಬಾಗ್‌ನಲ್ಲಿ ‘ಭಾರತ ದರ್ಶನ ಪಾರ್ಕ್’ ಎಂಬ ತಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಗುಜರಿ ವಸ್ತುಗಳ ಮೂಲಕ ದೇಶದ ಪ್ರಸಿದ್ಧ ಸ್ಮಾರಕಗಳನ್ನು ನಿರ್ಮಿಸುವ ಯೋಜನೆ ಇದಾಗಿದ್ದು, ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಚಾಲನೆ ನೀಡಿದರು.

6 ಎಕರೆ ಪ್ರದೇಶದಲ್ಲಿ ಭಾರತ ದರ್ಶನ ಪಾರ್ಕ್ ನಿರ್ಮಾಣವಾಗಲಿದೆ. ಕೋನಾರ್ಕ ದೇಗುಲ, ಚಾರ್ಮಿನಾರ್‌, ವಿಕ್ಟೋರಿಯಾ ಮೆಮೋರಿ ಹಾಲ್‌, ಮೀನಾಕ್ಷಿ ದೇಗುಲ, ಗೋಲ್ಡನ್‌ ಟೆಂಪಲ್‌, ಸಂಚಿ ಸ್ತೂಪ, ಅಜಂತ ಎಲ್ಲರೋ ಗುಹೆಯಂತಹ ಪ್ರಸಿದ್ಧ ಸ್ಥಳಗಳ ಮಾದರಿಯನ್ನು ಇಲ್ಲಿ ಸೃಷ್ಟಿಸಲಾಗುತ್ತದೆ. ಇದು 18ರಿಂದ 20 ಕೋಟಿ ರು. ವೆಚ್ಚದ ಯೋಜನೆಯಾಗಿದೆ ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ಆಯುಕ್ತ ಜ್ಞಾನೇಶ ಭಾರತಿ ತಿಳಿಸಿದ್ದಾರೆ.

ಲೋಹ ಹಾಗೂ ಕೈಗಾರಿಕಾ ನಿರುಪಯುಕ್ತ ವಸ್ತುಗಳನ್ನು ಬಳಸಿ ಈಗಾಗಲೇ ವಿಶ್ವದ ಏಳು ಅದ್ಭುತಗಳನ್ನು ನಿರ್ಮಿಸಲಾಗಿದೆ. ಅದು ದೆಹಲಿಯ ಪ್ರಮುಖ ಪ್ರವಾಸಿ ತಾಣವಾಗಿದೆ. ಹೀಗಾಗಿ ವಾಹನ, ಫ್ಯಾನ್‌, ರಾಡ್‌, ಕಬ್ಬಿಣದ ಶೀಟ್‌, ನಟ್‌, ಬೋಲ್ಟ್‌ನಂತಹ ದೆಹಲಿ ನಗರಪಾಲಿಕೆಯಲ್ಲಿ ಧೂಳು ಹಿಡಿಯುತ್ತಿರುವ ವಸ್ತುಗಳನ್ನು ಬಳಸಿ ಪರಿಸರ ಸ್ನೇಹಿ ಭಾರತ ದರ್ಶನ ಪಾರ್ಕ್ ನಿರ್ಮಿಸಲಾಗುತ್ತದೆ ಎಂದು ವಿವರಿಸಿದ್ದಾರೆ.