13 ಬ್ರಿಡ್ಜ್ 17 ದಿನದಲ್ಲಿ ಢಮಾರ್: ಬಿಹಾರದಲ್ಲಿ ಒಂದಾದ ಮೇಲೊಂದರಂತೆ ಸೇತುವೆಗಳು ಕುಸಿಯುತ್ತಿರುವುದೇಕೆ?
ದೇಶದಲ್ಲೇ ಅತಿ ಹಿಂದುಳಿದ ರಾಜ್ಯಗಳಲ್ಲಿ ಒಂದು ಎಂದು ಹಣೆಪಟ್ಟಿ ಹೊಂದಿರುವ ಹಾಗೂ ಒಂದು ಕಾಲದಲ್ಲಿ ‘ಬೀಮಾರು ರಾಜ್ಯ’ ಎಂಬ ಅಪಖ್ಯಾತಿ ಪಡೆದಿದ್ದ ಬಿಹಾರದಲ್ಲಿ ಸರಣಿ ಸೇತುವೆ ದುರಂತ ಸಂಭವಿಸುತ್ತಿದೆ. ಹತ್ತಾರು ಸೇತುವೆಗಳು ಏಕಾಏಕಿ ಕುಸಿದಿವೆ.
ದೇಶದಲ್ಲೇ ಅತಿ ಹಿಂದುಳಿದ ರಾಜ್ಯಗಳಲ್ಲಿ ಒಂದು ಎಂದು ಹಣೆಪಟ್ಟಿ ಹೊಂದಿರುವ ಹಾಗೂ ಒಂದು ಕಾಲದಲ್ಲಿ ‘ಬೀಮಾರು ರಾಜ್ಯ’ ಎಂಬ ಅಪಖ್ಯಾತಿ ಪಡೆದಿದ್ದ ಬಿಹಾರದಲ್ಲಿ ಸರಣಿ ಸೇತುವೆ ದುರಂತ ಸಂಭವಿಸುತ್ತಿದೆ. ಹತ್ತಾರು ಸೇತುವೆಗಳು ಏಕಾಏಕಿ ಕುಸಿದಿವೆ. ಈ ರಾಜ್ಯದಲ್ಲಿ ಸುಮಾರು 17 ದಿನಗಳ ಅವಧಿಯಲ್ಲಿ 13 ಸೇತುವೆಗಳು ಧರಾಶಾಯಿ ಆಗಿವೆ. ಇದರ ಬೆನ್ನಲ್ಲೇ ಸೇತುವೆಗಳ ಗುಣಮಟ್ಟದ ಬಗ್ಗೆ ಅನುಮಾನ ಶುರುವಾಗಿದೆ. ಕಳಪೆ ಕಾಮಗಾರಿ, ಸರ್ಕಾರದ ಭ್ರಷ್ಟಾಚಾರ- ಹೀಗೆ ಅನೇಕ ಪ್ರಶ್ನೆಗಳು ಎದ್ದಿವೆ. ಹೀಗಾಗಿ ಸೇತುವೆ ಕುಸಿತಕ್ಕೆ ಕಾರಣ ಏನು? ಸೇತುವೆಗಳ ಇತಿಹಾಸವೇನು ಎಂಬ ವಿಶ್ಲೇಷಣೆ ಇಲ್ಲಿದೆ.
17 ದಿನ..13 ಸೇತುವೆ ಜೂ.27ರಿಂದ 30ರವರೆಗೆ 3 ಸೇತುವೆ
ಜೂನ್ 27 ಮತ್ತು ಜೂನ್ 30 ರ ನಡುವೆ ಕಿಶನ್‌ಗಂಜ್‌ನಲ್ಲಿ ಎರಡು ಸೇತುವೆಗಳು ಒಂದರ ಹಿಂದೆ ಒಂದರಂತೆ ಕುಸಿದವು. ಠಾಕೂರ್‌ಗಂಜ್‌ನ ಖೋಶಿ ಡಾಂಗಿ ಗ್ರಾಮದಲ್ಲಿ ಒಂದು ಸೇತುವೆ ಮುರಿದು ಬಿದ್ದಿತು. ಅಲ್ಲಿ 2007-2008 ರಲ್ಲಿ ಆಗಿನ ಸಂಸದ ತಸ್ಲಿಮುದ್ದೀನ್ ಅವರ ನಿಧಿಯಿಂದ ನಿರ್ಮಿಸಲಾದ ಸೇತುವೆಯ ಪಿಲ್ಲರ್ ಜೂನ್ 27 ರಂದು ಹಾನಿಗೊಳಗಾಯಿತು. ಭಾರೀ ಮಳೆ ಮತ್ತು ಆ ಬಳಿಕ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಸುಮಾರು 50,000 ಜನರು ಇದರಿಂದ ಬಾಧಿತರಾಗಿದ್ದಾರೆ ಎಂದು ಹೇಳಲಾಗಿದೆ.
ಬಹದ್ದೂರ್‌ಗಂಜ್ ಸೇತುವೆ
ಕಿಶನ್‌ಗಂಜ್‌ನ ಬಹದ್ದೂರ್‌ಗಂಜ್ ಪ್ರದೇಶದಲ್ಲಿ ಮರಿಯಾ ನದಿಗೆ ಮತ್ತೊಂದು ಸೇತುವೆ ಹಾನಿಯಾಗಿದೆ. ಈ ಸೇತುವೆಯನ್ನು 2011 ರಲ್ಲಿ ಬಿಹಾರದಲ್ಲಿ ಎನ್‌ಡಿಎ ಆಡಳಿತದಲ್ಲಿ ರಾಜ್ಯ ಗ್ರಾಮೀಣ ಕಾಮಗಾರಿ ಇಲಾಖೆಯು ಅಂದಾಜು 25 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಿತ್ತು.
ಚಂಪಾರಣ್ಯ ಸೇತುವೆ
ಜೂನ್ 23 ರಂದು ಪೂರ್ವ ಚಂಪಾರಣ್‌ನ ಘೋಡಸಾಹನ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದಿತ್ತು. ಧೀರೇಂದ್ರ ಕನ್‌ಸ್ಟ್ರಕ್ಷನ್ ಕಂಪನಿಯಿಂದ 1.5 ಕೋಟಿ ಅಂದಾಜು ವೆಚ್ಚದಲ್ಲಿ ಸೇತುವೆಯ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಸೇತುವೆ ಪೂರ್ಣಗೊಳ್ಳುವ ಮುನ್ನವೇ ಮುರಿದು ಬಿದ್ದಿರುವುದಕ್ಕೆ ಕಾಮಗಾರಿ ನಡೆಸುತ್ತಿದ್ದವರ ಬೇಜವಾಬ್ದಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮುಜಫ್ಫರಪುರ ಬಿದಿರಿನ ಸೇತುವೆ
ಜುಲೈ 1 ರಂದು ಮುಜಫ್ಫರ್‌ಪುರ ಜಿಲ್ಲೆಯ ಔರಾಯ್ ಬ್ಲಾಕ್‌ನಲ್ಲಿ ಬಾಗ್ಮತಿ ನದಿಗೆ ನಿರ್ಮಿಸಿದ್ದ ತಾತ್ಕಾಲಿಕ ಬಿದಿರಿನ ಸೇತುವೆ ಹಾನಿಗೊಳಗಾಗಿತ್ತು. ಸ್ಥಳೀಯರು ತಮ್ಮ ಸ್ವಂತ ವೆಚ್ಚದಲ್ಲಿ ಈ ಸೇತುವೆಯನ್ನ ನಿರ್ಮಿಸಿದ್ದರು. ಪ್ರತಿ ವರ್ಷ ಪ್ರಯಾಣಕ್ಕಾಗಿ ಜನರು ಇಲ್ಲಿ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸುತ್ತಾರೆ. ಆ ಸೇತುವೆ ಈ ಋತುವಿನಲ್ಲಿ ಮುರಿದು ಬಿದ್ದಿದೆ.
ಸಿವಾನ್‌ನಲ್ಲಿ 3 ಸೇತುವೆ
ಜುಲೈ 3 ರಂದು ಸಿವಾನ್ ಜಿಲ್ಲೆಯ ಮಹಾರಾಜ್‌ಗಂಜ್ ಬ್ಲಾಕ್‌ನಲ್ಲಿ 3 ಸೇತುವೆಗಳು ಒಂದರ ಬೆನ್ನಿಗೆ ಒಂದರಂತೆ ಕುಸಿದವು. ಒಂದು ಕುಸಿತವು ಸಿಕಂದರ್‌ಪುರ ಗ್ರಾಮದಲ್ಲಿ, ಇನ್ನೊಂದು ದೇವರಿಯಾ ಪಂಚಾಯತ್‌ನಲ್ಲಿ ಮತ್ತು ಮತ್ತೊಂದು ಭಿಖಾಬಂಧ್‌ನಲ್ಲಿ ನಡೆದಿವೆ ಎನ್ನುವ ವರದಿಯಾಗಿದೆ. ಈ ಎಲ್ಲಾ ನಿರ್ಮಾಣಗಳು ಆಗಿನ ಸಂಸದ ಪ್ರಭುನಾಥ್ ಸಿಂಗ್ ಅವರ ಅನುದಾನದಲ್ಲಿ ಆಗಿದ್ದವು ಮತ್ತು ಈ ಸೇತುವೆಗಳು 30 ವರ್ಷಗಳಷ್ಟು ಹಳೆಯದು.
ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ: 15 ದಿನಕ್ಕೆ 10ನೇ ಘಟನೆ
ಅರಾರಿಯಾ ಸೇತುವೆ
ಜೂನ್ 18 ರಂದು ಬಿಹಾರದ ಅರಾರಿಯಾದಲ್ಲಿ ಬಕ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಮತ್ತೊಂದು ನಿರ್ಮಾಣ ಹಂತದ ಸೇತುವೆ ಕುಸಿತಗೊಂಡಿತ್ತು. ಈ ಯೋಜನೆಯನ್ನು 2021 ರ ಮೇ ತಿಂಗಳಲ್ಲಿ ಸುಮಾರು 8 ಕೋಟಿ ರು.ಗಳ ಅಂದಾಜು ವೆಚ್ಚದಲ್ಲಿ ಪ್ರಾರಂಭಿಸಲಾಗಿತ್ತು. 2023 ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಲೋಕಾರ್ಪಣೆಗೂ ಮುನ್ನವೇ ಮುರಿದು ಬಿದ್ದಿದೆ.
ಗಂಡಕಿ ನದಿ ಸೇತುವೆ
ಜು.2ರಂದು, ಸಿವಾನ್‌ನ ದೇವರಿಯಾ ಗಂಡಕಿ ನದಿಯ ಮೇಲೆ ಒಂದು ಕಿರು ಸೇತುವೆ ಮತ್ತು ಜಿಲ್ಲೆಯ ತೆಗ್ರಾ ಬ್ಲಾಕ್‌ನಲ್ಲಿ ಮತ್ತೊಂದು ಕಿರು ಸೇತುವೆಗಳೂ ಧರಾಶಾಯಿಯಾದವು.
ಸಾರಣ್‌ನಲ್ಲಿ 2 ಸೇತುವೆ
ಸಾರಣ್ ಜಿಲ್ಲೆಯಲ್ಲಿ ಜುಲೈ ಮೊದಲ ವಾರದಲ್ಲಿ 3 ಸೇತುವೆಗಳು ಕುಸಿದಿವೆ. ಜಿಲ್ಲೆಯ 3 ಸೇತುವೆಗಳ ಪೈಕಿ ಗಂಡಕಿ ನದಿಯ ಎರಡು ಸೇತುವೆಗಳು ಕೇವಲ 1 ಕಿ.ಮೀ. ಅಂತರದಲ್ಲಿ ಕಳೆದ ಬುಧವಾರ 2 ಗಂಟೆಗಳಲ ಅವಧಿಯಲ್ಲಿ ಕುಸಿದವು. 2004ರಲ್ಲಿ ನಿರ್ಮಿಸಲಾದ 1 ಸೇತುವೆಯು ದೋಧ್ ನಾಥ್ ದೇವಾಲಯದ ಬಳಿ ಇತ್ತು. ಇನ್ನೊಂದು ಬ್ರಿಟಿಷರ ಕಾಲದ ರಚನೆಯಾಗಿತ್ತು. ಜು.4 ರಂದು ಮತ್ತೊಂದು ಸೇತುವೆ ಕುಸಿದಿತ್ತು. ಗಂಡಕಿ ಮೇಲಿನ 15 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಹಳೆಯ ಸೇತುವೆ ಕುಸಿದಿದೆ.
ಸೇತುವೆಗಳ ಕುಸಿತ ಸರಮಾಲೆಗೆ ಇಲ್ಲಿವೆ ಕಾರಣಗಳು
ಈ ರೀತಿ ಒಂದರ ಹಿಂದೊಂದರಂತೆ ಸೇತುವೆ ಕುಸಿಯುತ್ತಿರುವುದಕ್ಕೆ ಹಲವರು ಹಲವು ಕಾರಣಗಳನ್ನು ನೀಡಿದ್ದಾರೆ.ಪ್ರಮುಖವಾಗಿ ಸೇತುವೆ ಆಸುಪಾಸಿನಲ್ಲಿ ಹೂಳು ತೆಗೆಯುವುದರಿಂದ ಕಂಬಗಳು ಬುಡ ಸಡಿಲವಾಗಿ ಕುಸಿಯುತ್ತಿವೆ ಎಂದು ಸರ್ಕಾರ ಹೇಳಿದೆ. ಕೆಲ ಸಾರ್ವಜನಿಕರು ಕಳಪೆ ಗುಣಮಟ್ಟದ ವಸ್ತುಗಳ ಬಳಕೆ ಸೇತುವೆ ದುರಂತಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಹಾರದ ಬಳಿಕ ಜಾರ್ಖಂಡ್‌ನಲ್ಲಿ ಸೇತುವೆ ಕುಸಿತ ದುರಂತ!
ಹೂಳೆತ್ತುವಿಕೆ
ನದಿಗಳಲ್ಲಿನ ಹೂಳು ತೆಗೆಯುವಿಕೆ ಮತ್ತು ಭಾರಿ ಮಳೆಯು ಸೇತುವೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಬಿಹಾರ ಸರ್ಕಾರ ಹೇಳಿದೆ.ಮರಳು ಗಣಿಗಾರಿಕೆ
ಸೇತುವೆ ಬುಡದಲ್ಲಿನ ಮರಳು ಗಣಿಗಾರಿಕೆ ಮಾಡಿರುವ ಕಾರಣ ಮಳೆಗಾಲದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿ ಸೇತುವೆ ಬುಡ ಸಡಿಲಗೊಂಡಿದೆ. ಇದರಿಂದಾಗಿ ಸೇತುವೆ ಕುಸಿದಿದೆ ಎಂದು ಕೆಲ ವರದಿ ಹೇಳಿವೆ.
ಹೂಳಿನ ಜೊತೆ ಕಲ್ಲು ಮಣ್ಣು ತೆಗೆಯುವಿಕೆ
ಮುಂಗಾರು ಎದುರಿಸಲು ಸಿದ್ಧತೆಯ ಭಾಗವಾಗಿ ನದಿ ತಟದಲ್ಲಿ ಹೂಳು ತೆಗೆಯಲು ಬಿಹಾರ ಸರ್ಕಾರ ಸೂಚನೆ ನೀಡಿತ್ತು. ಆದರೆ ಈ ವೇಳೆ ಅವೈಜ್ಞಾನಿಕವಾಗಿ ಹೂಳು ತೆಗೆದಿರುವುದು ಜೊತೆಗೆ ಸೇತುವೆ ಬುಡದ ಕಲ್ಲು, ಮಣ್ಣು ಹಾಗೂ ಮರಳು ತೆಗೆದಿರುವುದು ಕುಸಿತ ದುರಂತಕ್ಕೆ ಪ್ರಮುಖ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳಪೆ ವಸ್ತುಗಳ ಬಳಕೆಯಿಂದ ಕುಸಿತ
ನಿಗದಿಗಿಂತ ಕಡಿಮೆ ಗುಣಮಟ್ಟದ ಕಬ್ಬಿಣದ ಸರಳು ಬಳಕೆ, ಸಿಮೆಂಟ್ ಪೂರೈಕೆಯಲ್ಲಿ ಗೋಲ್‌ಮಾಲ್, ನಕಲಿ ಮರಳು ಬಳಕೆ, ಮಿಶ್ರಣದಲ್ಲಿ ಲೋಪ, ಪರೀಕ್ಷೆ ಹಾಗೂ ಪರಿಶೀಲನೆಯಲ್ಲಿ ಭ್ರಷ್ಟಾಚಾರ ಇವುಗಳು ಸೇತುವೆ ಅಲ್ಪ ಅವಧಿಗೆ ಕುಸಿಯಲು ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅವೈಜ್ಞಾನಿಕ ನಿರ್ಮಾಣ
ಕುಸಿದಿರುವಂತಹ ಅಷ್ಟೂ ಸೇತುವೆಗಳ ನಿರ್ಮಾಣ ಅವೈಜ್ಞಾನಿಕವಾಗಿದೆ. ಇದರಿಂದಾಗಿ ನೀರಿನ ಮಟ್ಟ, ಎತ್ತರ, ಗಾಳಿ ತಡೆಯುವಿಕೆ ಸರಿಯಾದ ದಿಕ್ಕಿನಲ್ಲಿ ಆಗದ ಕಾರಣ ಸೇತುವೆ ಕುಸಿಯುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ನೇಪಾಳದಿಂದ ಭಾರಿ ನೀರು
ಈ ನಡುವೆ ಬಿಹಾರ ರಾಜ್ಯದಲ್ಲಿ ಅನೇಕ ನದಿಗಳು ನೇಪಾಳದಿಂದ ಹರಿದು ಬಿಹಾರ ಸೇರುತ್ತವೆ. ನೇಪಾಳದಲ್ಲಿ ಭಾರಿ ಮಳೆಯಾದ ಕಾರಣ ಅಲ್ಲಿನ ಸರ್ಕಾರ ಅಣೆಕಟ್ಟೆಗಳಿಂದ ಭಾರಿ ಪ್ರಮಾಣದ ನೀರನ್ನು ಏಕಾಏಕಿ ಹರಿಬಿಟ್ಟಿದೆ. ಹೀಗಾಗಿ ಬಿಹಾರದಲ್ಲಿ ಪ್ರವಾಹ ಉಕ್ಕೇರಿ ಅನೇಕ ಬ್ರಿಟಿಷ್ ಕಾಲದ ಅಥವಾ ಹಳೆಯ ಸೇತುವೆ ಕುಸಿಯುತ್ತಿವೆ ಎಂಬುದು ಕೆಲವರ ಅಭಿಪ್ರಾಯ.
16 ಎಂಜಿನಿಯರುಗಳು ಸಸ್ಪೆಂಡ್
ಬಿಹಾರದಲ್ಲಿ ಸೇತುವೆಗಳು ಕುಸಿಯುತ್ತಿರುವುದು ಈ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ದಿನ ಬಿಟ್ಟು ದಿನದಂತೆ ಪತನವಾಗುತ್ತಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ದೂಡಿದೆ. ಹೀಗಾಗಿ ಸರಣಿ ಸೇತುವೆ ಕುಸಿತ ಬೆನ್ನಲ್ಲೇ 16 ಎಂಜಿನಿಯರುಗಳನ್ನು ನಿತೀಶ್ ಕುಮಾರ್ ಸರ್ಕಾರ ವಜಾ ಮಾಡಿದೆ ಹಾಗೂ ಎಲ್ಲ ಸೇತುವೆಗಳ ಕೂಲಂಕಷ ಪರಿಶೀಲನೆಗೆ ಆದೇಶಿಸಿದೆ.