ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 11,739 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. 

ನವದೆಹಲಿ (ಜೂ.27): ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 11,739 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಶನಿವಾರ 15,940 ಕೇಸುಗಳು ದಾಖಲಾಗಿದ್ದವು. ಇದೇ ವೇಳೆಯಲ್ಲಿ 25 ಸೋಂಕಿತರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು 92,576ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶನಿವಾರದ ಶೇ.4.39ರಿಂದ ಭಾನುವಾರ ಶೇ.2.59ಕ್ಕೆ ಇಳಿಕೆಯಾಗಿದೆ. ವಾರದ ಪಾಸಿಟಿವಿಟಿ ದರವು ಶೇ.3.25 ರಷ್ಟಿದೆ. ಕೋವಿಡ್‌ ಚೇತರಿಕೆ ದರವು ಶೇ.98.58ರಷ್ಟಿದೆ. ದೇಶದಲ್ಲಿ ಈವರೆಗೆ 197.08 ಕೋಟಿ ಡೋಸು ಲಸಿಕೆ ವಿತರಿಸಲಾಗಿದೆ.

ಹೆಚ್ಚಿನ ನಿಗಾ: ‘ಒಮಿಕ್ರೋನ್‌ ಉಪತಳಿಗಳಾದ ಬಿಎ4, ಬಿಎ5 ಅಮೆರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಹೆಚ್ಚು ಪತ್ತೆಯಾಗಿದ್ದು, ಅಲ್ಲಿನ ಸರ್ಕಾರಗಳು ಈ ಉಪತಳಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿವೆ. ಒಮಿಕ್ರೋನ್‌ನ ಬಿಎ1.1.529, ಬಿಎ1, ಬಿಎ2 ಉಪತಳಿಗಳು ಶ್ವಾಸಕೋಶಕ್ಕೆ ನುಗ್ಗುವ ಸಾಮರ್ಥ್ಯ ಹೊಂದಿರಲಿಲ್ಲ. ಬಾಯಿ ಮತ್ತು ಮೂಗಿಗೆ ಸೀಮಿತವಾಗಿ ಕೆಮ್ಮು, ನೆಗಡಿಗೆ ಮಾತ್ರ ಉಂಟು ಮಾಡಿತು. ಹೀಗಾಗಿಯೇ ಮೂರನೇ ಅಲೆಯಲ್ಲಿ ಆಸ್ಪತ್ರೆ ದಾಖಲಾತಿ ಸಾವು, ನೋವು ಹೆಚ್ಚಿನ ಹಾನಿಯಾಗಲಿಲ್ಲ. ಆದರೆ, ಸದ್ಯ ಕಾಣಿಸಿಕೊಂಡಿರುವ ಉಪತಳಿಗಳಾದ ಬಿಎ4, ಬಿಎ5 ಸಾಕಷ್ಟು ತೀವ್ರವಾಗಿದ್ದು, ಶ್ವಾಸಕೋಶಕ್ಕೆ ದಾಳಿ ಮಾಡಬಹುದು. ಇವುಗಳಿಂದಲೇ ನಾಲ್ಕನೇ ಅಲೆಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ’ ಎಂದು ರಾಜ್ಯ ಕೊರೋನಾ ವಂಶವಾಹಿ ಪರೀಕ್ಷೆಗಳ ಸಮಿತಿ ಸದಸ್ಯ ಡಾ.ವಿಶಾಲ್‌ ರಾವ್‌ ತಿಳಿಸಿದ್ದಾರೆ.

Covid Crisis: ಟೆಸ್ಟಿಂಗ್‌, ಜಿನೋಮ್‌ ಸೀಕ್ವೆನ್ಸಿಂಗ್‌ ಹೆಚ್ಚಿಸಿ: ಕೇಂದ್ರ

ಮಾತನಾಡುವವನಿಗಿಂತ ಮೌನಿಗೆ ಕೋವಿಡ್‌ ಸಾಧ್ಯತೆ: ಇಬ್ಬರು ವ್ಯಕ್ತಿಗಳು ಮಾಸ್ಕ್‌ ಇಲ್ಲದೆ ಮಾತುಕತೆಯಲ್ಲಿ ತೊಡಗಿದ್ದಾಗ ಒಬ್ಬ ವ್ಯಕ್ತಿ ಮಾತ್ರ ಮಾತನಾಡುತ್ತಿದ್ದು, ಮತ್ತೊಬ್ಬ ವ್ಯಕ್ತಿ ಮೌನವಾಗಿದ್ದರೆ ಮೌನವಾಗಿರುವ ವ್ಯಕ್ತಿಗೆ ಕೊರೋನಾ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇಬ್ಬರೂ ವ್ಯಕ್ತಿಗಳು ಮಾತನಾಡುತ್ತಿದ್ದರೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂಬ ಹೊಸ ವಿಷಯವನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ.

ನಾಲ್ಕು ಅಡಿ ಅಂತರದಲ್ಲಿ ನಿಂತು ವ್ಯಕ್ತಿಗಳು ಪರಸ್ಪರ ಮಾತನಾಡುತ್ತಿದ್ದಾಗ ಎಂಜಲಿನ ಸಣ್ಣ ಹನಿ (ಡ್ರಾಪ್‌ಲೆಟ್‌) ಹರಡುವ ರೀತಿ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದ ಪ್ರಕಾರ ಇಬ್ಬರು ವ್ಯಕ್ತಿಗಳು ಮಾತನಾಡುವಾಗ ಪರಸ್ಪರ ಕಣ್ಣಿನ ಸಂಪರ್ಕ ಇಟ್ಟುಕೊಂಡೆ ತಲೆಯನ್ನು ಪರಸ್ಪರ ವಿರುದ್ಧ ದಿಕ್ಕಿಗೆ 9 ಡಿಗ್ರಿ ವಾಲಿಸಿ ಮಾತನಾಡಿದರೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

15940 ಕೋವಿಡ್‌ ಕೇಸು, 20 ಸಾವು: ಪಾಸಿಟಿವಿಟಿ ಶೇ.4.39ಕ್ಕೆ ಏರಿಕೆ

ಕೊರೋನಾ ಸೋಂಕು ಗಾಳಿಯ ಮೂಲಕ ಹರಡುತ್ತದೆ ಎಂಬ ಕಾರಣಕ್ಕೆ ಮಾಸ್ಕ್‌ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡುವಾಗ ಬಾಯಿಂದ ಚಿಮ್ಮುವ ಡ್ರಾಪ್‌ಲೆಟ್ಸ್‌ನಿಂದ ಯಾವ ರೀತಿ ಸೋಂಕು ಹರಡುತ್ತದೆ ಎಂಬ ಬಗ್ಗೆ ಐಐಎಸ್‌ಸಿ ಬಾಹ್ಯಾಕಾಶ ಎಂಜಿನಿಯರಿಂಗ್‌ ವಿಭಾಗವು ಸ್ಟಾಕ್‌ಹೋಮ್‌ನ ನಾರ್ಡಿಕ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಥಿಯೋರಿಟಿಕಲ್‌ ಫಿಸಿಕ್ಸ್‌ ಮತ್ತು ಇಂಟರ್‌ ನ್ಯಾಷನಲ್‌ ಸೆಂಟರ್‌ ಫಾರ್‌ ಥಿಯೋರಿಟಿಕಲ್‌ ಸೈನ್ಸಸ್‌ನ ವಿಜ್ಞಾನಿಗಳ ಸಹಯೋಗದಲ್ಲಿ ಸಂಶೋಧನೆ ನಡೆಸಿದೆ. ಇದು ಜರ್ನಲ್‌ನಲ್ಲಿ ಪ್ರಕಟವಾಗಿದೆ.