ತಾಯಿ - ಮಗು ಆರೋಗ್ಯದಿಂದಿರಲು ಗರ್ಭಿಣಿಯರು ಸೇವಿಸಬೇಕಾದ ಆಹಾರಗಳಿವು
ಗರ್ಭಾವಸ್ಥೆಯು ಒಂದು ಜಾಗರೂಕತೆಯ ಹಂತವಾಗಿದ್ದು, ಮಗು ಹುಟ್ಟಿದಾಗ ಆರೋಗ್ಯಪೂರ್ಣವಾಗಿರಲು ಹೆಚ್ಚಿನ ಕಾಳಜಿ ಮತ್ತು ಮುನ್ನೆಚ್ಚರಿಕೆಗಳನ್ನು ಗರ್ಭಾವಸ್ಥೆಯಲ್ಲೇ ತೆಗೆದುಕೊಳ್ಳಬೇಕಾಗುತ್ತದೆ. ಮಗುವಿನ ಆರೋಗ್ಯವು ತಾಯಿಯ ಮೇಲೆ ಅವಲಂಬಿತವಾಗಿರುವುದರಿಂದ, ಸರಿಯಾದ ಪೌಷ್ಠಿಕಾಂಶವನ್ನು ಪಡೆಯಲು ಸರಿಯಾಗಿ ತಿನ್ನಬೇಕು ಮತ್ತು ಕುಡಿಯಬೇಕು.
ಚಳಿಗಾಲವು ಅನೇಕ ತಾಜಾ ಸೀಸನಲ್ ಹಣ್ಣುಗಳು ಮತ್ತು ತರಕಾರಿಗಳು ಮಾರುಕಟ್ಟೆಗೆ ಬರುವ ಸಮಯ. ಈ ಹಣ್ಣು ತರಕಾರಿಗಳು ಟೇಸ್ಟಿ ಆಗಿರುವುದರ ಹೊರತಾಗಿ, ಅವು ಗರ್ಭಿಣಿ ಮಹಿಳೆಯರಿಗೆ ಅತ್ಯಂತ ಆರೋಗ್ಯಕರ. ಅಲ್ಲದೆ, ಚಳಿಗಾಲದಲ್ಲಿ ಗರ್ಭಿಣಿ ಮಹಿಳೆಯರಿಗೆ ಹಲವು ಆಹಾರಗಳನ್ನು ಸೂಚಿಸಲಾಗುತ್ತದೆ. ಕೆಲವು ಚಳಿಗಾಲದ ಆಹಾರಗಳ ಮಾಹಿತಿ ಇಲ್ಲಿದೆ. ಅವುಗಳನ್ನು ಪ್ರತಿದಿನ ಸೇವನೆ ಮಾಡಿದರೆ ತಾಯಿ ಮತ್ತು ಮಗುವಿನ ಅರೋಗ್ಯ ಉತ್ತಮವಾಗಿರುತ್ತದೆ.
ಪಾಲಕ್ ಸೊಪ್ಪು
ಪಾಲಕ್ ಫೋಲೇಟ್‌ನಿಂದ ತುಂಬಿದ್ದು, ಇದು ಗರ್ಭಿಣಿಯಾಗಿದ್ದಾಗ ತಿನ್ನಲು ಉತ್ತಮ ಆಹಾರ. ಫೋಲೇಟ್ ಬಿ ವಿಟಮಿನ್ ಆಗಿದ್ದು, ಇದು ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ಅವಶ್ಯಕ. ಇದು ಬೆನ್ನು ಮತ್ತು ಮೆದುಳಿನ ಗಂಭೀರ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದು, ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಕಾಡುವ ಅನಿಮಿಯಾ ಸಮಸ್ಯೆ ನಿವಾರಣೆಗೆ ಉತ್ತಮವಾಗಿದೆ. ರಕ್ತಹೀನತೆ ಅಪಾಯವನ್ನು ಕಡಿಮೆ ಮಾಡುವ ರಕ್ತ ಕಣಗಳ ತಯಾರಿಕೆಯಲ್ಲಿ ಪಾಲಕ್ ಸಹಾಯ ಮಾಡುತ್ತದೆ.
ಬಜ್ರಾ
ಚಳಿಗಾಲದಲ್ಲಿ ಗರ್ಭಿಣಿ ಮಹಿಳೆಯರಿಗೆ ಪೋಷಕಾಂಶಗಳಿಂದ ಕೂಡಿದ ಅನೇಕ ಧಾನ್ಯಗಳಲ್ಲಿ ಒಂದು ಮುತ್ತು ರಾಗಿ, ಇದನ್ನು ಬಜ್ರಾ ಎಂದು ಕರೆಯಲಾಗುತ್ತದೆ. ಇದು ಕಬ್ಬಿಣದ ಅತ್ಯುತ್ತಮ ಮೂಲ.
ಬಜ್ರಾ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್, ಆಂಟಿಆಕ್ಸಿಡೆಂಟ್‌ಗಳು, ಕಬ್ಬಿಣ, ಸತು, ಮೆಗ್ನೀಸಿಯಮ್, ತಾಮ್ರ ಮತ್ತು ವಿಟಮಿನ್ ಬಿ ಕೂಡ ಸಮೃದ್ಧವಾಗಿದೆ.
ಆಮ್ಲಾ
ಆಮ್ಲಾ ನೀರಿನ ಅಂಶದಿಂದ ಸಮೃದ್ಧವಾಗಿದೆ ಮತ್ತು ದೇಹದಲ್ಲಿನ ಜಲಸಂಚಯನವನ್ನು ತುಂಬಲು ಸಹಾಯ ಮಾಡುತ್ತದೆ. ಇದರ ಸೇವನೆಯು ಗರ್ಭಿಣಿ ಮಹಿಳೆಯರಲ್ಲಿ ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳುತ್ತದೆ. ಅಲ್ಲದೇ, ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಲು ಮತ್ತು ಕೈಗಳ ಸುತ್ತಲೂ ಊತ ಸಮಸ್ಯೆಯನ್ನು ಆಮ್ಲಾವನ್ನು ಸೇವಿಸುವುದರಿಂದ ನಿಯಂತ್ರಿಸಬಹುದು.
ಬಾದಾಮಿ ಮತ್ತು ವಾಲ್ನಟ್
ಗರ್ಭಾವಸ್ಥೆಯಲ್ಲಿ ವಾಲ್ನಟ್ ತಿನ್ನುವುದು ಕೋಮಲ ಭ್ರೂಣದ ಮೆದುಳಿಗೆ ಅತ್ಯಂತ ಪ್ರಯೋಜನಕಾರಿ. ಅಲ್ಲದೆ, ಬಾದಾಮಿ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ ಮತ್ತು ತಾಯಿಯ ದೇಹದ ತೂಕವನ್ನು ಕಾಪಾಡಿಕೊಳ್ಳಲೂ ಸಹಾಯ ಮಾಡುತ್ತದೆ.
ಎಳ್ಳು
ಎಳ್ಳಿನಲ್ಲಿ ಅಗತ್ಯ ಪೋಷಕಾಂಶಗಳಾದ ಕಬ್ಬಿಣ, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ತುಂಬಿರುತ್ತವೆ, ಇದು ತಾಯಿ ಮತ್ತು ಮಗುವಿಗೆ ಒಳ್ಳೆಯದು. ಅವು ಭ್ರೂಣದ ಸರಿಯಾದ ಬೆಳವಣಿಗೆಗೆ ಅಗತ್ಯವಿರುವ ಪ್ರೋಟೀನ್ ಮತ್ತು ಅಮೈನೋ ಆಮ್ಲಗಳ ಅತ್ಯುತ್ತಮ ಮೂಲ.
ಸಿಹಿಗೆಣಸು
ಸಿಹಿಗೆಣಸು ಬೀಟಾ ಕ್ಯಾರೋಟಿನ್ ನ ಅತ್ಯುತ್ತಮ ಮೂಲ, ಇದು ದೇಹದಲ್ಲಿ ವಿಟಮಿನ್ ಎ ಆಗಿ ರೂಪಾಂತರಗೊಳ್ಳುತ್ತದೆ. ಬೆಳೆಯುತ್ತಿರುವ ಮಗುವಿನ ಜೀವಕೋಶಗಳ ಬೆಳವಣಿಗೆ ವಿಟಮಿನ್ ಎ ಮುಖ್ಯವಾಗಿದೆ.
ಕಿತ್ತಳೆ
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ, ಕಬ್ಬಿಣ, ಸತು ಮತ್ತು ಫೋಲಿಕ್ ಆಮ್ಲವಿದೆ. ಗರ್ಭಾವಸ್ಥೆಯಲ್ಲಿ ಕಿತ್ತಳೆ ತಿನ್ನುವುದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ, ಭ್ರೂಣದ ಮೆದುಳಿನ ಬೆಳವಣಿಗೆಯನ್ನು ಬಲಪಡಿಸುತ್ತದೆ ಮತ್ತು ಚರ್ಮದ ಟೋನ್ಗೆ ಪ್ರಯೋಜನಗಳನ್ನು ನೀಡುತ್ತದೆ.