Yuvraj Singh: ವಿರಾಟ್ ಕೊಹ್ಲಿಗೆ ವಿಶೇಷ ಗಿಫ್ಟ್ ನೀಡಿದ ಯುವರಾಜ್ ಸಿಂಗ್..!
ಬೆಂಗಳೂರು: ಸಿಕ್ಸರ್ ಕಿಂಗ್ ಖ್ಯಾತಿಯ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಯುಜರಾಜ್ ಸಿಂಗ್ (Yuvraj Singh), ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ (Virat Kohli) ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಏನದು ಗಿಫ್ಟ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ಬ್ಯಾಟರ್‌ಗಳ ಪೈಕಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಹಲವು ದಿಗ್ಗಜರ ಜತೆ ಕ್ರಿಕೆಟ್ ಆಡಿದ್ದಾರೆ. ಇದೀಗ ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಜತೆಗಾರನಾಗಿದ್ದ ವಿರಾಟ್ ಕೊಹ್ಲಿಗೆ ವಿಶೇಷವಾದ ಗಿಫ್ಟ್ ನೀಡಿದ್ದಾರೆ.
ಪೂಮಾ ಸಂಸ್ಥೆಯು ವಿಶೇಷವಾಗಿ ಡಿಸೈನ್ ಮಾಡಿದ ಶೂವೊಂದನ್ನು ವಿರಾಟ್ ಕೊಹ್ಲಿಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಗಿಫ್ಟ್ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಇದರ ಜತೆಗೆ ದೀರ್ಘವಾದ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಸಾಧನೆಯನ್ನು ಗುಣಗಾನ ಮಾಡಿದ್ದಾರೆ.
ಇದೇ ಪತ್ರದಲ್ಲಿ ಯುವರಾಜ್ ಸಿಂಗ್, ಮಾಜಿ ನಾಯಕ ವಿರಾಟ್ ಕೊಹ್ಲಿ ಇನ್ನೂ ಹೆಚ್ಚು ಕಾಲ ಇದೇ ಛಲದಲ್ಲಿ ಕ್ರಿಕೆಟ್ ಆಡಿ ಎಂದು ಶುಭಹಾರೈಸಿದ್ದಾರೆ. ಯುವರಾಜ್ ಸಿಂಗ್ ಅವರ ಈ ಪತ್ರಕ್ಕೆ ವಿರಾಟ್ ಕೊಹ್ಲಿ ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ವಿರಾಟ್, ನಿಮ್ಮನ್ನು ನಾನು ಓರ್ವ ಕ್ರಿಕೆಟಿಗನಾಗಿ ಹಾಗೂ ಆಟಗಾರನಾಗಿ ಬೆಳೆದ ರೀತಿಯನ್ನು ತುಂಬಾ ಹತ್ತಿರದಿಂದ ಗಮನಿಸಿದ್ದೇನೆ. ಸಣ್ಣ ಹುಡುಗನಾಗಿದ್ದಾಗ ನೆಟ್ಸ್‌ನಲ್ಲಿ ದಿಗ್ಗಜ ಆಟಗಾರರ ಜತೆಗೆ ಭುಜಕ್ಕೆ ಭುಜ ಕೊಟ್ಟು ನಡೆಯುತ್ತಿದ್ದಿರಿ. ಆದರೆ ಇದೀಗ ಹೊಸ ತಲೆಮಾರಿನ ಯುವಕರ ಪಾಲಿಗೆ ನೀವೇ ಓರ್ವ ಲೆಜೆಂಡ್ ಎನಿಸಿದ್ದೀರ. ನಿಮ್ಮ ಶಿಸ್ತು ಹಾಗೂ ಕ್ರಿಕೆಟ್ ಕುರಿತಾದ ಅಭಿಮಾನ ದೇಶದ ಪ್ರತಿಯೊಬ್ಬ ಯುವ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿದ್ದೀರ ಎಂದು ಬರೆದುಕೊಂಡಿದ್ದಾರೆ.
ನೀವು ಪ್ರತಿ ವರ್ಷವೂ ಅತ್ಯುತ್ತಮ ಸಾಧನೆ ತೋರಿದ್ದೀರ. ನೀವು ಈಗಾಗಲೇ ಹಲವಾರು ಸಾಧನೆಗಳನ್ನು ಮಾಡಿದ್ದೀರ. ಹೊಸ ಅಧ್ಯಾಯದಲ್ಲಿ ನೀವು ಮತ್ತಷ್ಟು ಸಾಧನೆಗಳನ್ನು ಮಾಡುವುದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದೇನೆ. ನೀವೊಬ್ಬ ದಿಗ್ಗಜ ನಾಯಕ ಹಾಗೂ ಅದ್ಭುತ ಕ್ಯಾಪ್ಟನ್. ನಾನು ನಿಮ್ಮಿಂದ ಇನ್ನಷ್ಟು ರನ್ ಚೇಸ್ ಮಾಡುವುದನ್ನು ನೋಡಲು ಬಯಸುತ್ತೇನೆ ಎಂದು ಯುವಿ ಬರೆದಿದ್ದಾರೆ.
Kohli captained Yuvraj at the international level and also at IPL (Indian Premier League). Yuvraj played under Kohli's captaincy for Royal Challengers Bangalore (RCB).
ನಿಮ್ಮಂತಹ ಆಟಗಾರರನ್ನು ಸಹ ಆಟಗಾರನಾಗಿ ಹಾಗೂ ಸ್ನೇಹಿತನಾಗಿ ಹೊಂದಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಭಾರತ ಪರ ರನ್ ಗಳಿಸುವುದು, ಜನರ ಕಾಲೆಳೆಯುವುದು, ಪಂಜಾಬಿ ಹಾಡು ಕೇಳುವುದು, ಕಪ್ ಗೆಲ್ಲುವುದು ಹೀಗೆ ಎಲ್ಲವನ್ನೂ ಒಟ್ಟಾಗಿಯೇ ಮಾಡಿದ್ದೇವೆ. ಜಗತ್ತಿನ ಪಾಲಿಗೆ ನೀವು ಕಿಂಗ್ ಕೊಹ್ಲಿಯಾಗಿದ್ದರೂ ಸಹಾ ನನ್ನ ಪಾಲಿಗೆ ನೀವು ಎಂದೆಂದಿಗೂ ಚೀಕೂ ಆಗಿಯೇ ಇರುತ್ತೀರ. ನೀವೊಬ್ಬ ಸೂಪರ್‌ಸ್ಟಾರ್. ಇಲ್ಲಿದೆ ನೋಡಿ ನಿಮಗಿದೋ ಗೋಲ್ಡನ್ ಬೂಟ್, ಇಡೀ ದೇಶವೇ ಹೆಮ್ಮೆಪಡುವಂತಹ ಕೆಲಸವನ್ನು ಮಾಡುತ್ತಿರಿ ಎಂದು ಯುವಿ ಶುಭ ಹಾರೈಸಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ ಫಾರ್ಮ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ಪರದಾಡುತ್ತಿದ್ದಾರೆ. ಟೀಂ ಇಂಡಿಯಾದ ಎಲ್ಲಾ ಮಾದರಿಯ ನಾಯಕತ್ವಕ್ಕೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ, ಮುಂಬರುವ ದಿನಗಳಲ್ಲಾದರೂ ಶತಕ ಬಾರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.