ಕರಾವಳಿಯಲ್ಲಿ ಮಾಘ ಚೌತಿ ಹಬ್ಬ: ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ಸಂಭ್ರಮ
ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣಪತಿ ಮೂರ್ತಿಗಳನ್ನಿಟ್ಟು ಪೂಜೆ ಮಾಡುವುದು ಸಾಮಾನ್ಯ. ಈಗಾಗಲೇ ಚೌತಿ ಹಬ್ಬ ಮುಗಿದು ಐದಾರು ತಿಂಗಳುಗಳೇ ಕಳೆದಿವೆ. ಮತ್ತೆ ಹಬ್ಬ ಬರಬೇಕು ಅಂದ್ರೆ ಸಾಕಷ್ಟು ತಿಂಗಳುಗಳು ಕಳೆಯಬೇಕು.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ (ಜ.25): ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣಪತಿ ಮೂರ್ತಿಗಳನ್ನಿಟ್ಟು ಪೂಜೆ ಮಾಡುವುದು ಸಾಮಾನ್ಯ. ಈಗಾಗಲೇ ಚೌತಿ ಹಬ್ಬ ಮುಗಿದು ಐದಾರು ತಿಂಗಳುಗಳೇ ಕಳೆದಿವೆ. ಮತ್ತೆ ಹಬ್ಬ ಬರಬೇಕು ಅಂದ್ರೆ ಸಾಕಷ್ಟು ತಿಂಗಳುಗಳು ಕಳೆಯಬೇಕು. ಆದ್ರೆ ಕರಾವಳಿ ನಗರಿ ಕಾರವಾರದಲ್ಲಿ ಇಂದು ಮನೆಗಳಲ್ಲಿ ಗಣಪತಿ ಮೂರ್ತಿಯನ್ನು ಸ್ಥಾಪಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ಅಷ್ಟಕ್ಕೂ ಇಂದು ಯಾಕೆ ಜನರು ಗಣೇಶ ಚತುರ್ಥಿ ಆಚರಣೆ ಮಾಡುತ್ತಿದ್ದಾರೆ ಅಂತಾ ಆಶ್ಚರ್ಯ ಆಗ್ತಿದ್ಯಾ? ಈ ಸ್ಟೋರಿ ನೋಡಿ. ಒಂದೆಡೆ ವಿಧ ವಿಧದ ಹೂವುಗಳು, ಗರಿಕೆ ಹುಲ್ಲಿನಿಂದ ಅಲಂಕಾರಗೊಂಡು ಮನೆಯಲ್ಲಿ ಕಂಗೊಳಿಸುತ್ತಿರುವ ಗಣೇಶನ ಮೂರ್ತಿ.
ಇನ್ನೊಂದೆಡೆ ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸಿ, ಭಕ್ತಿಯಿಂದ ಬೇಡಿಕೊಳ್ಳುತ್ತಿರುವ ಜನರು. ಮತ್ತೊಂದೆಡೆ ವಿಘ್ನನಿವಾರಕನ ಭಜನೆ ಮಾಡುತ್ತಾ ಆರತಿ ಬೆಳಗುತ್ತಿರುವ ಮಹಿಳೆಯರು. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ. ಮಾಘ ಚತುರ್ಥಿ ಹಿನ್ನೆಲೆ ಕಾರವಾರಿಗರು ಇಂದು ಗಣೇಶ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಗಣಪತಿ ಹುಟ್ಟಿದ ದಿನ ಎಂದೇ ಹೇಳಲಾಗುವ ಮಾಘ ಚೌತಿಯಂದು ಗಣೇಶ ಚತುರ್ಥಿ ಮಾದರಿಯಲ್ಲೇ ಗಣಪತಿ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುವ ಸಂಪ್ರದಾಯ ಕಾರವಾರ ತಾಲ್ಲೂಕಿನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಾಘ ಚೌತಿಯಂದು ಪ್ರತಿಷ್ಠಾಪಿಸುವ ಮೂರ್ತಿಯನ್ನು ಹರಕೆ ಗಣಪತಿ ಎಂದೇ ಹೇಳಲಾಗುತ್ತದೆ.
Uttara Kannada: ಹಾಲಕ್ಕಿ ಸಮುದಾಯದ ಬೇಡಿಕೆ ಈಡೇರದಿದ್ದರೆ ಚುನಾವಣೆಯಲ್ಲಿ ನೋಟಾ ಹಾಕುವುದಾಗಿ ಎಚ್ಚರಿಕೆ!
ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆ ಹೊತ್ತುಕೊಂಡವರು ಹಾಗೂ ಗಣೇಶ ಚತುರ್ಥಿಯ ಸಮಯದಲ್ಲಿ ವಿವಿಧ ಕಾರಣಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಸಾಧ್ಯವಾಗದಿರುವವರೂ ಸಹ ಮಾಘ ಚೌತಿಯಂದು ಒಂದು ದಿನದ ಮಟ್ಟಿಗೆ ಗಣಪನ ಮೂರ್ತಿಯನ್ನಿಟ್ಟು ಪೂಜೆ ಮಾಡುತ್ತಾರೆ. ಜತೆಗೆ ಚತುರ್ಥಿ ವೇಳೆ ಪ್ರತಿವರ್ಷ ಸತತವಾಗಿ ಮೂರ್ತಿಯನ್ನಿಟ್ಟು ಪೂಜೆ ಮಾಡಲು ಸಾಧ್ಯವಾಗದವರು ಈ ದಿನ ಮನೆ ಮನೆಗಳಲ್ಲಿ ಗಣಪತಿ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ಒಂದೇ ದಿನ ಇರಿಸಿ ರಾತ್ರಿ ವೇಳೆಗೆ ವಿಸರ್ಜನೆ ಮಾಡಲಾಗುತ್ತದೆ. ಈ ಮೂಲಕ ಮಾಘ ಚತುರ್ಥಿಯನ್ನೂ ಸಹ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ.
ಇನ್ನು ಮಾಘ ಚೌತಿಯಂದು ಗಣಪತಿ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಹೆಚ್ಚಾಗಿ ಮಹಾರಾಷ್ಟ್ರ, ಗೋವಾದಲ್ಲಿ ಆಚರಣೆಯಲ್ಲಿದೆ. ಕಾರವಾರ, ಗೋವಾ ಗಡಿಯಾಗಿರುವುದರ ಜತೆ ಮಹಾರಾಷ್ಟ್ರ ಸಂಸ್ಕೃತಿ ಸಹ ಇರುವ ಹಿನ್ನೆಲೆ ಮಾಘ ಚೌತಿಯನ್ನು ಕಾರವಾರದಲ್ಲೂ ಸಹ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಬೇರೆ ಯಾವ ತಾಲೂಕಿನಲ್ಲೂ ಅಷ್ಟಾಗಿ ಈ ಹಬ್ಬವನ್ನು ಆಚರಿಸುವುದಿಲ್ಲ. ಹಲವರು ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಮಾಘ ಚೌತಿಯಂದು ಗಣಪನ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಹರಕೆ ಹೊತ್ತುಕೊಳ್ಳುತ್ತಾರೆ.
ಯಾವುದೇ ಅಮಿಷೆಗಳಿಗೆ ಒಳಗಾಗಿ ಬಿಜೆಪಿಗೆ ಹೋಗಿಲ್ಲ: ಸಿದ್ದು ವಿರುದ್ಧ ಸಚಿವ ಬೈರತಿ ಗರಂ
ಅದು ಈಡೇರಿದ ವೇಳೆ ಮಾಘ ಚೌತಿಯಂದು ಗಣಪತಿ ಮೂರ್ತಿಯನ್ನು ತಂದು ಮನೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಹರಕೆಯನ್ನು ತೀರಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಅಲ್ಲದೇ, ಕೆಲವರು ಮಾಘ ಚತುರ್ಥಿಯಂದು ಸಾರ್ವಜನಿಕ ಮೂರ್ತಿಯನ್ನೂ ಸಹ ಪ್ರತಿಷ್ಠಾಪಿಸಿ, ಪೂಜಿಸಿ, ಸಂಜೆಯ ವೇಳೆಗೆ ವಿಸರ್ಜನೆ ಮಾಡುತ್ತಾರೆ. ಒಟ್ಟಿನಲ್ಲಿ ಮಾಘ ಚೌತಿ ಹಬ್ಬದ ಹಿನ್ನಲೆ ಕಡಲನಗರಿ ಕಾರವಾರದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಜನರು ಪೂಜೆ ಸಲ್ಲಿಸುವ ಮೂಲಕ ವಿಘ್ನನಿವಾರಕನನ್ನು ಆರಾಧಿಸಿದ್ದು ವಿಶೇಷ. ಎರಡನೇ ಗಣಪತಿ ಹಬ್ಬ ಎಂದೇ ಕರೆಯುವ ಮಾಘ ಚೌತಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸಿದ್ದಲ್ಲದೇ, ಪಾರ್ವತಿ ಕಂದನ ಕೃಪೆ ಪಾತ್ರರಾಗಿ ಪುನೀತರಾಗಿದ್ದೂ ಕೂಡಾ ಅಷ್ಟೇ ಸತ್ಯ.