ಮುಂಬೈ(ಜು.23): 140ರಿಂದ ಪ್ರಾರಂಭವಾಗುವ ಸಂಖ್ಯೆಯಿಂದ ನಿಮ್ಮ ಮೊಬೈಲ್‌ಗೆ ಕರೆ ಬಂದರೆ ಸ್ವೀಕರಿಸಬೇಡಿ. ಒಂದು ವೇಳೆ ಕರೆ ಸ್ವೀಕರಿಸಿದರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಖದೀಮರು ದೋಚುತ್ತಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ವಿವಿಧ ಏರಿಯಾಗಳಲ್ಲಿ ಪೊಲೀಸರು ಮಾಸ್ಕ್‌ ಧರಿಸಿ ಏನನ್ನೋ ಘೋಷಣೆ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್‌ ಮಾಡಿ, ಮುಂಬೈ ಪೊಲೀಸರು ಸಾರ್ವಜನಿಕರಲ್ಲಿ ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋವೀಗ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

ಆದರೆ ಈ ವಿಡಿಯೋಗಳ ಹಿಂದಿನ ಸತ್ಯಾಸತ್ಯ ಏನೆಂದು ಬಯಲಾಗಿದ್ದು, ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆಯೇ ಮುಂಬೈ ಪೊಲೀಸರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ‘140ರಿಂದ ಆರಂಭವಾಗುವ ಕರೆಯು ಟೆಲಿಮಾರ್ಕೆಟಿಂಗ್‌ ಸಂಬಂಧಿಸಿದ ಕರೆಗಳಾಗಿರುತ್ತವೆ. ಈ ಕರೆನ್ನು ಸ್ವೀಕರಿಸಿದರೆ ಬ್ಯಾಂಕ್‌ ಖಾತೆಯಲ್ಲಿನ ಹಣ ದೋಚುತ್ತಾರೆ ಎಂಬುದು ಸುಳ್ಳುಸುದ್ದಿ.

ವ್ಯಕ್ತಿಯೊಬ್ಬರು ಪಿಐಎನ್‌ ನಂಬರ್‌ ಅಥವಾ ಒಟಿಪಿಯನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ಮಾತ್ರ ಬ್ಯಾಂಕ್‌ ಖಾತೆಯಲ್ಲಿರುವ ಹಣ ದೋಚಲ ಸಾಧ್ಯ’ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. ವೈರಲ್‌ ವಿಡಿಯೋಗಳಲ್ಲಿ ವಾಸ್ತವವಾಗಿ ಪೊಲೀಸರು ಇಂಥ ವದಂತಿಗಳನ್ನು ನಂಬದಿರುವಂತೆ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದರು. ಅದದೇ ವಿಡಿಯೋವನ್ನು ಇನ್ನೊಂದು ಅರ್ಥದಲ್ಲಿ ಬಿಂಬಿಸಿ ಸುಳ್ಳುಸುದ್ದಿ ಹರಡಲಾಗುತ್ತಿದೆ.