ಆರ್. ಕೇಶವಮೂರ್ತಿ

ಎರಡು ಭಾಷೆಯಲ್ಲಿ ಬಾಕ್ಸ್‌ ಅಫೀಸ್‌ನಲ್ಲಿ ಸಿನಿಮಾ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ತಮಿಳಿನಲ್ಲಿ ಇದೇ ಶುಕ್ರವಾರದಿಂದ ತೆರೆಗೆ ಬರುತ್ತಿದೆ. ಇನ್ನೊಂದಡೆ ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆ ಸಜ್ಜಾಗುತ್ತಿದೆ. ಹೀಗಾಗಿ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ಕನ್ನಡ ಚಿತ್ರದ್ದೇ ಹವಾ. ಹಾಗಾದರೆ ಈ ಚಿತ್ರದ ಗಳಿಕೆ ಎಷ್ಟುಎನ್ನುವ ಕುತೂಹಲ ಸಹಜವಾಗಿ ಎಲ್ಲರಿಗೂ ಇದೆ. ಈಗಲೂ ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ವಾಗುತ್ತಿದೆ.

ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ 300 ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಅಷ್ಟೂಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಮೂರು ರಾಜ್ಯಗಳಲ್ಲೂ ಮೊದಲ ವಾರದ ಶೋಗಳ ಸಂಖ್ಯೆ 1500ಕ್ಕೂ ಹೆಚ್ಚು. ಇಷ್ಟುದೊಡ್ಡ ಪ್ರಮಾಣದಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರದ ಮೊದಲ ವಾರದ ಗಳಿಕೆಯೇ 30 ಕೋಟಿಯ ಗಡಿ ಮುಟ್ಟಿದೆ ಎಂಬುದು ಚಿತ್ರತಂಡದಿಂದ ಸಿಗುವ ಮಾಹಿತಿ.

ಕೆನಡಾದಲ್ಲಿ ಕನ್ನಡದ ಅಬ್ಬರ! ಅಭಿಮಾನಿಗಳಿಗೆ ಸಿಕ್ತು ಕುರುಕ್ಷೇತ್ರ ದರ್ಶನ!

ಕುರುಕ್ಷೇತ್ರದ ಚಿತ್ರದ ಶೋಗಳ ಸಂಖ್ಯೆ, ಮೊದಲ ವಾರದ ಗಳಿಕೆ ನೋಡಿದರೆ ಎರಡಲ್ಲೂ ದಾಖಲೆ ನಿರ್ಮಿಸಿ ಯಶಸ್ಸಿನತ್ತ ಮುಖ ಮಾಡಿದೆ. ಅಲ್ಲದೆ ಕನ್ನಡ ಚಿತ್ರರಂಗದ ಮಾರುಕಟ್ಟೆತೀರಾ ಸೀಮಿತ ಎನ್ನುವವರಿಗೆ ಒಂದು ಪೌರಾಣಿಕ ಸಿನಿಮಾ ಗಟ್ಟಿಯಾಗಿಯೇ ಉತ್ತರ ಕೊಟ್ಟಿದೆ. ಸದ್ಯ ಚಿತ್ರದ ವಿತರಕ ರಾಕ್‌ಲೈನ್‌ ವೆಂಕಟೇಶ್‌ ಖುಷಿಯಾಗಿದ್ದಾರೆ.

‘ರಾಜ್ಯದಲ್ಲಿ ಈಗ ಪ್ರವಾಹದ ಸಂಕಷ್ಟ. ಇಂಥ ಸಂದರ್ಭದಲ್ಲೂ ನಮ್ಮ ಸಿನಿಮಾ ನಿರೀಕ್ಷೆಯಂತೆ ಗಳಿಕೆ ಮಾಡಿದೆ. ಕನ್ನಡ ಸಿನಿಮಾ ಇಷ್ಟುದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದ್ದರೂ ಅದರ ಸಂಭ್ರಮ ಆಚರಣೆ ಮಾಡದಿರುವುದಕ್ಕೆ ಕಾರಣ ಇದೇ ಪ್ರವಾಹ. ಆದರೂ ಸಿನಿಮಾ ಇದೇ ರೀತಿ ಗಳಿಕೆ ಮುಂದುವರಿಸಿದರೆ ಅಂದುಕೊಂಡಗಿಂತ ಹೆಚ್ಚೇ ಲಾಭ ಬರಲಿದೆ. 60 ಕೋಟಿ ಗಳಿಕೆಯ ನಿರೀಕ್ಷೆಯೊಂದಿಗೆ ಎಲ್ಲ ಭಾಷೆಗಳಲ್ಲೂ ಚಿತ್ರವನ್ನು ವಿತರಣೆ ಮಾಡುತ್ತಿದ್ದೇನೆ. ಇದೇ ಆಗಸ್ಟ್‌ 15 ರಿಂದ ತಮಿಳುನಾಡಿನಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಕಬಾಲಿ ಚಿತ್ರದ ನಿರ್ಮಾಪಕ ಕಲೈಪುಲಿ ಎಸ್‌ ತಾನು ಅವರ ಜತೆ ಒಪ್ಪಂದ ಮಾಡಿಕೊಂಡು ತಮಿಳುನಾಡಿನಲ್ಲಿ 200 ಚಿತ್ರಮಂದಿರಗಳಲ್ಲಿ ‘ಮುನಿರತ್ನ ಕುರುಕ್ಷೇತ್ರ’ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇನ್ನೂ ಮಲಯಾಳಂ ಹಾಗೂ ಹಿಂದಿಯಲ್ಲಿ ಯಾವಾಗ ಬಿಡುಗಡೆ ಎಂಬುದು ಮುಂದೆ ಹೇಳುತ್ತೇನೆ. ಯಾಕೆಂದರೆ ಅಲ್ಲೂ ಪ್ರವಾಹದ ಸಂಕಷ್ಟಎದುರಾಗಿದೆ’ ಎಂಬುದು ರಾಕ್‌ಲೈನ್‌ ವೆಂಕಟೇಶ್‌ ಅವರು ಕೊಡುವ ಮಾಹಿತಿ.

ಡಿ-ಬಾಸ್‌ಗೆ Young ಫ್ಯಾನ್! ಚಿತ್ರಮಂದಿರ ಮುಂದೆ ಕುಣಿದ ಅಜ್ಜಿ ವೈರಲ್!

ಮಳೆ, ಪ್ರವಾಹದಲ್ಲೂ ಜನ ಸಿನಿಮಾ ನೋಡುತ್ತಿದ್ದಾರೆ. ಆ ಮೂಲಕ ದರ್ಶನ್‌, ಅಂಬರೀಶ್‌, ನಿಖಿಲ್‌, ಅರ್ಜುನ್‌ ಸರ್ಜಾ, ಶಶಿಕುಮಾರ್‌, ರವಿಶಂಕರ್‌, ಸ್ನೇಹ, ಹರಿಪ್ರಿಯಾ, ಮೇಘನಾ ರಾಜ್‌ ಹೀಗೆ ಬಹು ತಾರಾಗಣ ಒಳಗೊಂಡಿರುವ ‘ಮುನಿರತ್ನ ಕುರುಕ್ಷೇತ್ರ’ ಚಿತ್ರಕ್ಕೆ ಟಾಲಿವುಡ್‌ನಲ್ಲಂತೂ ದೊಡ್ಡ ಮಟ್ಟದಲ್ಲಿ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಅಲ್ಲಿ ಮಾಧ್ಯಮಗಳಲ್ಲಿ ದರ್ಶನ್‌, ಅರ್ಜುನ್‌ ಸರ್ಜಾ ಹಾಗೂ ನಿಖಿಲ್‌ ಕುಮಾರ್‌ ಅವರ ಅಭಿನಯವನ್ನು ಮೆಚ್ಚಿ ಬರೆದಿದ್ದಾರೆ. ಕೆಲವು ಮಾಧ್ಯಮಗಳಲ್ಲಂತೂ ಈ ಚಿತ್ರವನ್ನು ‘ಬಾಹುಬಲಿ’ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ. ಆ ಮಟ್ಟಿಗೆ ಕನ್ನಡಿಗರ ಚಿತ್ರವೊಂದು ಪರಭಾಷಿಗರ ಗಮನ ಸೆಳೆದಿದೆ.

ಚಿತ್ರ ವಿಮರ್ಶೆ: ಕುರುಕ್ಷೇತ್ರ

ಆದರೆ, ಕರ್ನಾಟಕದಲ್ಲೇ ಕೆಲವು ಕಡೆ ಚಿತ್ರವನ್ನು ಏಕಾಏಕಿ ತೆಗೆಯುತ್ತಿದ್ದಾರಂತೆ. ಬೆಂಗಳೂರಿನ ಊರ್ವಶಿ, ಕಾವೇರಿ ಚಿತ್ರಮಂದಿರಗಳಲ್ಲಿ ಬೇರೆ ಭಾಷೆಯ ಚಿತ್ರಗಳನ್ನು ಹಾಕುವುದಕ್ಕೆ ಹೊರಟಿದ್ದಾರೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಪರಭಾಷೆ ಚಿತ್ರಗಳಿಗೆ ಟಿಕೆಟ್‌ ಬೆಲೆ ಜಾಸ್ತಿ ಮಾಡುತ್ತಾರೆ. ಕನ್ನಡ ಚಿತ್ರಗಳಿಗೆ ಕಡಿಮೆ ಮಾಡುತ್ತಾರೆ. ಸಿಂಗಲ್‌ ಸ್ಕ್ರೀನ್‌ಗಳಲ್ಲಿ ನಮ್ಮ ಚಿತ್ರಗಳಿಗೆ ಗೌರವ ಕೊಡುತ್ತಿಲ್ಲ. ಒಳ್ಳೆಯ ಕಲೆಕ್ಷನ್‌ ಇದ್ದಾಗಲೂ ವಿತರಕರ ಗಮನಕ್ಕೇ ತಾರದೆ ಸಿನಿಮಾ ತೆಗೆದರೆ ಹೇಗೆ? ಈ ಬಗ್ಗೆ ಕೇಳಿದರೆ ಉತ್ತರ ಕೊಡಲ್ಲ ಎಂದು ರಾಕ್‌ಲೈನ್‌ ವೆಂಕಟೇಶ್‌ ಬೇಸರ ತೋಡಿಕೊಂಡಿದ್ದಾರೆ. ಈ ಎಲ್ಲ ಸಮಸ್ಯೆಗಳ ನಡುವೆಯೂ ‘ಮುನಿರತ್ನ ಕುರುಕ್ಷೇತ್ರ’ ಯಶಸ್ಸು ಕಂಡಿದೆ. ನಿರ್ಮಾಪಕ ಮುನಿರತ್ನ ಹಾಗೂ ನಿರ್ದೇಶಕ ನಾಗಣ್ಣ ಅವರ ಮುಖದಲ್ಲಿ ಈಗ ಗೆಲುವಿನ ಸಂಭ್ರಮ.