ಇಸ್ಲಾಮಾಬಾದ್(ಆ.10): ತಮ್ಮ ಹಾಡುಗಾರಿಕೆಯಿಂದ ಭಾರತೀಯರ ಹೃದಯ ಗೆದ್ದ ಆತೀಫ್, ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ಹಾಡಿದ್ದಾರೆ. ಇವರ ಕಂಠದಿಂದ ಹೊರಬಂದ ಅಸಂಖ್ಯಾತ ಹಾಡುಗಳು ಜನಪ್ರಿಯವಾಗಿವೆ. ಬಾಲಿವುಡ್ ನಟರಾದ ರಣಬೀರ್ ಕಪೂರ್, ಸಲ್ಮಾನ್ ಖಾನ್ ಸೇರಿದಂತೆ ಹಲವು ಜನಪ್ರಿಯ ನಟರಿಗೆ ಆತೀಫ್ ತಮ್ಮ ಕಂಠದಾನ ಮಾಡಿದ್ದಾರೆ.

ಆದರೆ ಇದೀಗ ಆತೀಫ್ ಅಸ್ಲಮ್ ತಮ್ಮ ಸ್ವಂತ ದೇಶ ಪಾಕಿಸ್ತಾನದಲ್ಲೇ ಜನರ ತಿರಸ್ಕಾರಕ್ಕೆ ಪಾತ್ರರಾಗಿದ್ದಾರೆ. ನ್ಯೂಯಾರ್ಕ್ ನ ಮ್ಯಾಡಿಸನ್ ಸ್ಕ್ವೆರ್ ನಲ್ಲಿ ಇತ್ತೀಚಿಗೆ ನಡೆದ ಪಾಕಿಸ್ತಾನ ಸ್ವಾಂತ್ರಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಆತೀಫ್ ಭಾರತೀಯ ಚಿತ್ರವೊಂದರ ಹಾಡು ಹಾಡಿದ್ದು ಪಾಕಿಸ್ತಾನಿಯರನ್ನು ಕೆರೆಳಿಸಿದೆ.

ನ್ಯೂಯಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಪಾಕಿಸ್ತಾನ ಸ್ವಾಂತ್ರಂತ್ರ್ಯ ದಿನಾಚರಣೆ ಸಮಾರಂಭಕ್ಕೆ ಆತೀಫ್ ಅಸ್ಲಮ್ ಅವರನ್ನು ಆಹ್ವಾನಿಸಲಾಗಿತ್ತು. ಸಮಾರಂಭದಲ್ಲಿ ಅನೇಕ ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದ ಆತೀಫ್, ಒಂದು ಹಂತದಲ್ಲಿ ರಣಬೀರ್ ಅಭಿನಯದ ಚಿತ್ರವೊಂದರ ತಮ್ಮ ಜನಪ್ರಿಯ ಹಾಡು 'ತೇರಾ ಹೋನೆ ಲಗಾ ಹೂ..' ಹಾಡನ್ನು ಹಾಡಿದ್ದಾರೆ.

ಇದಕ್ಕೆ ಪಾಕಿಸ್ತಾನದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾರತೀಯ ಚಲನಚಿತ್ರದ ಹಾಡು ಹಾಡಿದ ಆತೀಫ್ ಗೆ ನಾಚಿಕೆಯಾಗಬೇಕು ಎಂದು ಹಲವರು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆತೀಫ್ ಅಸ್ಲಮ್, ಈ ವಿರೋಧವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ಗೌರವ ಕೊಡುವುದು, ಕಸಿದುಕೊಳ್ಳುವುದು ಅಲ್ಲಾಹ್ ಕೈಯಲ್ಲಿದೆ ಎಂದು ಆತೀಫ್ ಟ್ವೀಟ್ ಮಾಡಿದ್ದಾರೆ.