ಸ್ಪಂದಿಸದ ಶಿಕ್ಷಣ ಇಲಾಖೆ, ದೂರು ಸ್ವೀಕರಿಸದ ಪೊಲೀಸರು, ವರ್ತೂರಿನ ಕ್ರಿಸಾಲಿಸ್ ಶಾಲೆಯ ಅಮಾನವೀಯ ನಡವಳಿಕೆ
ಬೆಂಗಳೂರು(ಅ.15): ಶುಲ್ಕ ಪಾವತಿಸದ ಕಾರಣಕ್ಕೆ ವಿದ್ಯಾರ್ಥಿಯೊಬ್ಬನನ್ನು ಖಾಸಗಿ ಶಾಲೆಯೊಂದು ಕೆಲ ತಿಂಗಳಿಂದ ತರಗತಿಯಿಂದ ಹೊರಗಿಟ್ಟಿರುವ ಘಟನೆ ನಗರದ ವರ್ತೂರು ವ್ಯಾಪ್ತಿಯಲ್ಲಿ ನಡೆದಿದೆ. ಸಮಸ್ಯೆ ಬಗೆಹರಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ವಿಫಲ ಯತ್ನ ನಡೆಸಿದ್ದು, ಪೊಲೀಸರ ಮೊರೆ ಹೋದರೂ ದೂರು ಸ್ವೀಕರಿಸದೆ ನಿರ್ಲಕ್ಷ್ಯ ತೋರಿದ್ದಾರೆ.
ಇಲ್ಲಿನ ಕ್ರಿಸಾಲಿಸ್ ಶಾಲೆಯ ವಿರುದ್ಧ ಇಂತಹದ್ದೊಂದು ಆರೋಪ ಕೇಳಿಬಂದಿದ್ದು. ವಿದ್ಯಾರ್ಥಿಯ ಪೋಷಕರು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಲೆ ವಿರುದ್ಧ ದೂರು ನೀಡಿದ್ದಾರೆ. ದೂರು ಆಧರಿಸಿ ಶಾಲಾ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ನಡೆಸಿದ ಯತ್ನ ವಿಫಲವಾಗಿದೆ. ಅಸಹಾಯಕರಾದ ಅಧಿಕಾರಿಗಳು ಪೊಲೀಸರ ಮೊರೆ ಹೋದರೂ ಪ್ರಯೋಜನವಾಗಿಲ್ಲ. ವರ್ತೂರು ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದೆ ನಿರ್ಲಕ್ಷ್ಯ ತೋರಿದ್ದಾರೆ.
5, 8ನೇ ತರಗತಿ ಮಕ್ಕಳಿಗೆ ಈ ವರ್ಷ ಹೊಸ ಪರೀಕ್ಷೆ: ಬಿ.ಸಿ.ನಾಗೇಶ್
ಈ ಸಂಬಂಧ ಸ್ಥಳೀಯ ಬಿಇಒ ಡಿ.ಆರ್.ರಾಮಮೂರ್ತಿ ಅವರನ್ನು ಸಂಪರ್ಕಿಸಿದಾಗ, ಪೋಷಕರಿಂದ ದೂರು ಬಂದ ಕೂಡಲೇ ಶಾಲೆಯವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದಾಗ ಶಾಲಾ ಆಡಳಿತ ಮಂಡಳಿಯವರು ನಾವು ಶುಲ್ಕ ವಿಚಾರ ಸಂಬಂಧ ಹೈಕೋರ್ಚ್‌ನಲ್ಲಿ ಪ್ರಕರಣ ದಾಖಲಿಸಿದ್ದೇವೆ. ಅದು ಇತ್ಯರ್ಥವಾಗದ ಹೊರತು ವಿದ್ಯಾರ್ಥಿಗೆ ಪ್ರವೇಶ ನೀಡುವುದಿಲ್ಲ ಎಂದಿದ್ದಾರೆ. ಇದನ್ನು ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಾಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶಾಲೆಯ ಪ್ರಾಂಶುಪಾಲರ ವಿರುದ್ಧ ದೂರು ದಾಖಲಿಸಲು ನಿರ್ದೇಶನ ನೀಡಿದರು.
ಅದರಂತೆ ವರ್ತೂರು ಠಾಣೆಯಲ್ಲಿ ದೂರು ನೀಡಲಾಗಿತ್ತು. 15 ದಿನ ಕಳೆದರೂ ಪೊಲೀಸರು ಎಫ್‌ಐಆರ್ ದಾಖಲಿಸಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಎಫ್‌ಐಆರ್ ದಾಖಲಿಸಲು ಬರುವುದಿಲ್ಲ. ಇಲಾಖಾ ಹಂತದಲ್ಲೇ ಶುಲ್ಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಅಲ್ಲಿನ ಠಾಣಾಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಮತ್ತೆ ಮಾಹಿತಿ ನೀಡಿದ್ದು, ಅವರು ವಲಯದ ಡಿವೈಎಸ್‌ಪಿ ಅವರಿಗೆ ದೂರು ನೀಡುವಂತೆ ತಿಳಿಸಿದ್ದಾರೆ. ಶನಿವಾರ ಅದರಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
